ಡಿಕೆ ಶಿವಕುಮಾರ್ ಮಗಳ ಮದುವೆ; ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ- ಅಮರ್ಥ್ಯ

Aishwarya-Amartya Wedding: ಡಿ.ಕೆ. ಶಿವಕುಮಾರ್ ಮಗಳು ಐಶ್ವರ್ಯ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಹಾಗೂ ಎಸ್​.ಎಂ. ಕೃಷ್ಣನವರ ಮೊಮ್ಮಗ ಅಮರ್ಥ್ಯ ಪ್ರೇಮಿಗಳ ದಿನವಾದ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಐಶ್ವರ್ಯ- ಅಮರ್ಥ್ಯ ಮದುವೆ ಶಾಸ್ತ್ರದಲ್ಲಿ ಡಿಕೆ ಶಿವಕುಮಾರ್

ಐಶ್ವರ್ಯ- ಅಮರ್ಥ್ಯ ಮದುವೆ ಶಾಸ್ತ್ರದಲ್ಲಿ ಡಿಕೆ ಶಿವಕುಮಾರ್

  • Share this:
ಬೆಂಗಳೂರು (ಫೆ. 14): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ಪ್ರೇಮಿಗಳ ದಿನವಾದ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಎಸ್.ಎಂ. ಕೃಷ್ಣ ಅವರ ಮೊಮ್ಮಗನಾಗಿರುವ ಅಮರ್ಥ್ಯ ಹೆಗ್ಡೆ ಹಾಗೂ ಡಿಕೆ ಶಿವಕುಮಾರ್ ಮಗಳ ಮದುವೆಯಲ್ಲಿ ಇಂದು ಕಾಂಗ್ರೆಸ್, ಬಿಜೆಪಿ ರಾಜಕೀಯ ನಾಯಕರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಂದಿನ ಮದುವೆಗೆ ಒಟ್ಟು 800 ಗಣ್ಯರಿಗೆ ಆಹ್ವಾನ ನೀಡಲಾಗಿದೆ. 

ಇಂದು ತಮ್ಮ ಮಗಳಿಗೆ ಅಮರ್ಥ್ಯ ತಾಳಿ ಕಟ್ಟುತ್ತಿದ್ದಂತೆ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸಂಗೀತ್ ಕಾರ್ಯಕ್ರಮದಲ್ಲಿ ಕೂಡ ಅಪ್ಪಾ ಐ ಲವ್ ಯೂ ಎಂದು ನೃತ್ಯ ಮಾಡಿದ ಐಶ್ವರ್ಯಳನ್ನು ಕಂಡು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದರು. ಇಂದು ಮದುವೆಯಲ್ಲಿ ಕೂಡ ಕಣ್ಣೀರು ಸುರಿಸುತ್ತಲೇ ಅವರು ವಧು-ವರರಿಗೆ ಅಕ್ಷತೆ ಹಾಕಿ, ಹಾರೈಸಿದ್ದಾರೆ. ಈ ವೇಳೆ ಭಾವುಕರಾದ ಐಶ್ವರ್ಯ ಕೂಡ ಕಣ್ತುಂಬಿಕೊಂಡಿದ್ದಾರೆ. ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ವಜ್ರಾಭರಣಗಳನ್ನು ತೊಟ್ಟಿದ್ದ ಐಶ್ವರ್ಯ ಮದುಮಗಳಾಗಿ ಮಿಂಚುತ್ತಿದ್ದರು.
ಕಳೆದೊಂದು ವಾರದಿಂದ ಡಿಕೆ ಶಿವಕುಮಾರ್ ಮನೆಯಲ್ಲಿ ಐಶ್ವರ್ಯಾಳ ಮದುವೆ ಸಂಭ್ರಮ ಜೋರಾಗಿದ್ದು, ಮೆಹಂದಿ, ಅರಿಶಿಣ ಶಾಸ್ತ್ರ, ಸಂಗೀತ್ ಕಾರ್ಯಕ್ರಮಗಳು ನಡೆದಿವೆ. ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಇಂದು ಅದ್ದೂರಿಯ ಮದುವೆ ನಡೆದಿದೆ. ಎಸ್​ಎಂ ಕೃಷ್ಣ ಹಾಗೂ ಡಿಕೆ ಶಿವಕುಮಾರ್ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಂಡಿದ್ದು, ಆಪ್ತ ಸಂಬಂಧಿಕರಿಗಷ್ಟೇ ಆಮಂತ್ರಣ ನೀಡಲಾಗಿದೆ. ರಿಸೆಪ್ಷನ್​ನಲ್ಲಿ ಪ್ರಭಾವಿ ರಾಜಕೀಯ ನಾಯಕರು, ಉದ್ಯಮಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ವೈಟ್​ಫೀಲ್ಡ್​ನ ಶೆರಟಾನ್ ಹೋಟೆಲ್​ನಲ್ಲಿ ಇಂದು ಬೆಳಗ್ಗೆ ಮದುವೆ ನಡೆದಿದ್ದು, ಫೆ. 17ರಂದು ಪ್ರೆಸ್ಟೀಜ್ ಗಾಲ್ಫ್​​ಶೈರ್ ರೆಸಾರ್ಟ್​ನಲ್ಲಿ ರಿಸೆಪ್ಷನ್ ನಡೆಯಲಿದೆ. ಫೆ. 28ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೀಗರ ಊಟ ನಡೆಯಲಿದ್ದು, ಡಿಕೆ ಶಿವಕುಮಾರ್ ಕಾಂಗ್ರೆಸ್​ನ ಕಾರ್ಯಕರ್ತರು, ತಮ್ಮ ಬೆಂಬಲಿಗರಿಗೂ ಊಟ ಹಾಕಿಸಲಿದ್ದಾರೆ ಎನ್ನಲಾಗಿದೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಬಳಿಕ ಅಮರ್ಥ್ಯ ಮತ್ತು ಐಶ್ವರ್ಯಾಳ ಮದುವೆ ವಿಷಯ ಮುನ್ನೆಲೆಗೆ ಬಂದಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಡಿಕೆ ಶಿವಕುಮಾರ್ ಕುಟುಂಬಸ್ಥರು ಎಸ್ಎಂ ಕೃಷ್ಣ ಅವರ ಮನೆಗೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು. ಬಳಿಕ ಲಾಕ್​ಡೌನ್ ಸಮಯದಲ್ಲಿ ಅವರಿಬ್ಬರ ನಿಶ್ಚಿತಾರ್ಥವೂ ನೆರವೇರಿತ್ತು.
Published by:Sushma Chakre
First published: