ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ; ಇಂದು ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿ ಹಲವು ಬಿಜೆಪಿ ಮುಖಂಡರ ನಿಯೋಗ ಏಸು ಪ್ರತಿಮೆ ನಿರ್ಮಾಣದ ಕುರಿತು ಪರಿಶೀಲನೆ ನಡೆಸಲು ಇಂದು ಕಪಾಲ ಬೆಟ್ಟಕ್ಕೆ ತೆರಳಲಿದೆ.

Sushma Chakre | news18-kannada
Updated:January 2, 2020, 8:14 AM IST
ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ; ಇಂದು ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್
  • Share this:
ರಾಮನಗರ (ಜ. 2): ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶಗಳು ಕೇಳಿಬಂದ ನಂತರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಈ ಸ್ಥಳಕ್ಕೆ ರಾಜ್ಯ ಬಿಜೆಪಿ ನಿಯೋಗ ಭೇಟಿ ನೀಡಲಿದೆ.

ಸದ್ಯಕ್ಕೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಕಾಮಗಾರಿ ಸ್ಥಗಿತಗೊಂಡಿದ್ದು, ಎಲ್ಲ ಕೆಲಸಗಾರರು ಅಲ್ಲಿಂದ ಬೇರೆಡೆ ಹೋಗಿದ್ದಾರೆ. ಅಲ್ಲದೆ, ಈ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವ ಬಗ್ಗೆ ವಿವಾದ ಉಂಟಾದ ಕಾರಣ ಸುತ್ತಲೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ವಿಚಾರವಾಗಿ ಪರಿಶೀಲನೆ ನಡೆಸಲು ಇಂದು ರಾಜ್ಯ ಬಿಜೆಪಿ ನಿಯೋಗ ಕಪಾಲ ಬೆಟ್ಟಕ್ಕೆ ಭೇಟಿ ನೀಡಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿ ಹಲವು ಬಿಜೆಪಿ ಮುಖಂಡರು ಕನಕಪುರಕ್ಕೆ ಭೇಟಿ ನೀಡಿ ಏಸು ಪ್ರತಿಮೆ ನಿರ್ಮಾಣದ ಸ್ಥಳವನ್ನು ಪರಿಶೀಲಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ನಿಯೋಗ ಕಪಾಲ ಬೆಟ್ಟಕ್ಕೆ ತೆರಳಲಿದೆ.

ಇದನ್ನೂ ಓದಿ: ಕನಕಪುರದಲ್ಲಿ ಡಿಕೆಶಿ ಆಪ್ತ ತಹಶೀಲ್ದಾರ್ ವರ್ಗಾವಣೆ; ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ

ಕಪಾಲಬೆಟ್ಟ ಅಭಿವೃದ್ಧಿ ಸಮಿತಿಗೆ ಮಂಜೂರಾಗಿದ್ದ 10 ಎಕರೆ ಜಾಗದಲ್ಲಿ ಒಂದು ಧರ್ಮದ ದೇವರ ಪ್ರತಿಮೆ ನಿರ್ಮಾಣ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಸ್​ಮಸ್ ವೇಳೆ ಅದರ ಶಂಕುಸ್ಥಾಪನೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿತ್ತು.

ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಏಸು ಪ್ರತಿಮೆಯ ಶಂಕುಸ್ಥಾಪನೆ ಮಾಡುವ ಮೂಲಕ ಆಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ವೇಳೆ ಕನಕಪುರದಲ್ಲಿ ಕ್ಲೀನಿಂಗ್ ಶುರು ಮಾಡುವುದಾಗಿ ಡಿಸಿಎಂ ಅಶ್ವಥ್​ ನಾರಾಯಣ ಸೂಚನೆ ನೀಡಿದ್ದರು. ಅದರಂತೆ ಡಿಕೆಶಿಗೆ ಆಪ್ತರಾಗಿದ್ದ ಕನಕಪುರದ ತಹಶೀಲ್ದಾರ್ ಆನಂದಯ್ಯ ಅವರನ್ನು ದಿಢೀರ್ ಎತ್ತಂಗಡಿ ಮಾಡಿ ಸೋಮವಾರ ರಾತ್ರಿ ಆದೇಶ ಹೊರಡಿಸಲಾಗಿತ್ತು. ಆನಂದಯ್ಯ ಅವರ ಜಾಗಕ್ಕೆ ಯಳಂದೂರು ತಹಶೀಲ್ದಾರ್ ಆಗಿದ್ದ ವರ್ಷಾ ಅವರನ್ನು ನೇಮಕ ಮಾಡಲಾಗಿತ್ತು.

(ವರದಿ: ಎ.ಟಿ. ವೆಂಕಟೇಶ್)
Published by: Sushma Chakre
First published: January 2, 2020, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading