DK Shivakumar: ಡಿಕೆ ಶಿವಕುಮಾರ್ಗೆ ಸಂಬಂಧಿಸಿದ 14 ಕಡೆ ಸಿಬಿಐ ದಾಳಿ; ಬೆಂಗಳೂರಲ್ಲಿ ಡಿಕೆಶಿ ಬೆಂಬಲಿಗರ ಪ್ರತಿಭಟನೆ
CBI Raids on DK Shivakumar: ಡಿಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದ ಕರ್ನಾಟಕದ 9 ಕಡೆ, ದೆಹಲಿಯ 4 ಕಡೆ ಹಾಗೂ ಮುಂಬೈನ 1 ಕಡೆ ಇಂದು ಸಿಬಿಐ ದಾಳಿ ನಡೆದಿದ್ದು, ದಾಖಲೆಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಬೆಂಗಳೂರು (ಅ. 5): ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ಮನೆ ಮೇಲೆ ಮಾತ್ರವಲ್ಲದೆ ಅವರಿಗೆ ಸೇರಿರುವ ಒಟ್ಟು 14 ಕಡೆ ಸಿಬಿಐ ದಾಳಿ ನಡೆಸಲಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದ ಕರ್ನಾಟಕದ 9 ಕಡೆ, ದೆಹಲಿಯ 4 ಕಡೆ ಹಾಗೂ ಮುಂಬೈನ 1 ಕಡೆ ಇಂದು ಸಿಬಿಐ ದಾಳಿ ನಡೆದಿದ್ದು, ದಾಖಲೆಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆ ಶಿವಕುಮಾರ್ ಬೆಂಬಲಿಗರು ಡಿಕೆಶಿ ಮನೆ ಬಳಿ ಹಾಗೂ ಕಾಂಗ್ರೆಸ್ ಭವನದ ಎದುರು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದಿಂದ ಹಣ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆ ಐಟಿ ಮತ್ತು ಇಡಿ ಅಧಿಕಾರಿಗಳು ಕೂಡ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿಕೆ ಶಿವಕುಮಾರ್ ಜೈಲು ಸೇರಿದ್ದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು.
ಡಿ.ಕೆ. ಶಿವಕುಮಾರ್ ಮನೆ ಜೊತೆಗೆ ಸಂಸದ ಡಿ.ಕೆ. ಸುರೇಶ್ ಮನೆ ಮೇಲೂ ದಾಳಿ ನಡೆಸಲಾಗಿದೆ. ಈಗಾಗಲೇ ಐಟಿ ಮತ್ತು ಇಡಿ ಎರಡೂ ತನಿಖಾ ಸಂಸ್ಥೆಗಳಿಂದ ಡಿಕೆಶಿ ವಿಚಾರಣೆ ನಡೆಸಲಾಗಿತ್ತು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಂಡು, ಬಹುಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕಿದ್ದ ಐಟಿ ಮತ್ತು ಇಡಿ ಇಲಾಖೆ ಆ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಇದೇ ಕಾರಣಕ್ಕೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಮನೆ ಮೇಲೆ ನಡೆದ ಸಿಬಿಐ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರು ನಗರ ಘಟಕದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಭವನದ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಡಿಕೆಶಿ ಮನೆ ಮೇಲೆ ಸಿಬಿಐ, ಐಡಿ, ಇಡಿ ದಾಳಿ ನಡೆಸಲಾಗಿದೆ. ಉಪಚುನಾವಣೆ ವೇಳೆ ಪ್ರಧಾನಿ ಮೋದಿ ದುಷ್ಟ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಈ ದಾಳಿಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದು, ಬಿಜೆಪಿ ಪಕ್ಷ ದ್ವೇಷ ರಾಜಕಾರಣ ಮಾಡುವುದು ಹೊಸತೇನಲ್ಲ. ಈ ಮೂಲಕ ಸಾರ್ವಜನಿಕರ ಗಮನ ಸೆಳೆಯುವುದನ್ನು ಆಗಾಗ ಮಾಡುತ್ತಲೇ ಇರುತ್ತದೆ. ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿ ಅದಕ್ಕೆ ತಾಜಾ ಉದಾಹರಣೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸುವ ಮೂಲಕ ಆರ್ಆರ್ ನಗರ ಮತ್ತು ಶಿರಾ ಉಪಚುನಾವಣೆಯ ವೇಳೆ ಮತದಾರರ ಗಮನವನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಚುನಾವಣೆ ಸಂದರ್ಭದಲ್ಲೇ ಈ ರೀತಿಯ ದಾಳಗಳನ್ನು ಉರುಳಿಸುವ ಬಿಜೆಪಿಯ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ