ಅಕ್ರಮ ಹಣ ಸಂಪಾದನೆ ಮತ್ತು ವರ್ಗಾವಣೆ ಪ್ರಕರಣ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಸೇರಿದಂತೆ ಐವರು ಜಾರಿ ನಿರ್ದೇಶನಾಲಯದ (Enforcement Directorate) ವಿಶೇಷ ನ್ಯಾಯಾಲಯದ (Court) ಮುಂದೆ ಹಾಜರಾಗಿದ್ದರು. ವಿಚಾರಣೆಗೆ ಹಾಜರಾಗಲು ಐವರಿಗೂ ಸಮನ್ಸ್ (Summons) ನೀಡಲಾಗಿತ್ತು. ಡಿ.ಕೆ. ಶಿವಕುಮಾರ್, ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ನ್ಯಾಯಾಧೀಶ ವಿಕಾಸ್ ದುಲ್ ಅವರ ಮುಂದೆ ಹಾಜರಾಗಿದ್ದರು. ಪ್ರಕರಣದ ಮೊದಲ ಆರೋಪಿ ಡಿಕೆ ಶಿವಕುಮಾರ್ ಗೆ ಜಾಮೀನು (Bail) ಸಿಕ್ಕಿದೆ. ಉಳಿದವರಿಗೆ ಜಾಮೀನು ಮಂಜೂರು ಮಾಡಿ ಎಂದು ಡಿಕೆ ಶಿವಕುಮಾರ್ ಪರ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ನೀಡಿದ ಜಾಮೀನು ಆದೇಶವನ್ನು ವಕೀಲರು ಓದಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಇಡಿ ವಕೀಲರು ಜಾಮೀನು ನವೀಕರಿಸಲು ವಿರೋಧ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಅವರಿಗೆ ಹಿಂದೆ ಜಾಮೀನು ನೀಡಿರುವುದು ದೆಹಲಿ ಹೈಕೋರ್ಟ್. ಇಡಿ ವಿಶೇಷ ನ್ಯಾಯಾಲಯದಲ್ಲಿ ಅಲ್ಲ. ಈ ನ್ಯಾಯಾಲಯ ಜಾಮೀನನ್ನು ನಿರಾಕರಿಸಬೇಕು ಎಂದು ತಮ್ಮ ವಾದ ಮಂಡಿಸಿದರು.
ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ
ಇಡಿ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆಶಿ ಪರ ವಕೀಲರು, ಇದೇ ಕೋರ್ಟ್ ಕಾರ್ತಿ ಚಿದಂಬರಂಗೆ ಜಾಮೀನು ನೀಡಿದೆ. ಹಾಗಾಗಿ ನಮ್ಮ ಕಕ್ಷಿದಾರರಿಗೂ ಜಾಮೀನು ನೀಡಬಹುದು ಎಂದು ಅರ್ಜಿ ಸಲ್ಲಿಕೆ ಮಾಡಿದರು. ಇತ್ತ ಜಾಮೀನು ಅರ್ಜಿಗೆ ಅಕ್ಷೇಪ ಸಲ್ಲಿಸಲು ಇಡಿ ವಕೀಲರು ಸಮಯಾವಕಾಶ ಬೇಕೆಂದು ನ್ಯಾಯಾಧೀಶರ ಬಳಿ ಮನವಿ ಮಾಡಿದರು. ಈ ಹಿನ್ನೆಲೆ ನ್ಯಾಯಾಲಯ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.
ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್ ದುಲ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ಕಳೆದ ಬಾರಿ ಡಿ.ಕೆ. ಶಿವಕುಮಾರ್ ಒಡೆತನದ ದೆಹಲಿಯ ಸಬ್ದರಜಂಗ್ ಎನ್ಕ್ಲೇವ್ ಪ್ಲ್ಯಾಟ್ ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದರು ಎನ್ನಲಾದ 8.5 ಕೋಟಿ ರೂಪಾಯಿ ಹಣದ ಬಗ್ಗೆ ವಿಚಾರಣೆ ನಡೆಸಲಾಯಿತು.
ಆಗ ಜಾರಿ ನಿರ್ದೇಶನಾಲಯದ ಪರ ವಕೀಲರು ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ ಜೊತೆಗೆ 120B ಸೆಕ್ಷನ್ ಅಡಿಯಲ್ಲೂ ವಿಚಾರಣೆಗೆ ನಡೆಸುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪಿದ ಕೋರ್ಟ್ ಡಿ.ಕೆ. ಶಿವಕುಮಾರ್ ಸೇರಿ ಇತರೆ ಆರೋಪಿಗಳಾದ ಸಚಿನ್ ನಾರಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಗೆ ಸಮನ್ಸ್ ನೀಡಿತ್ತು.
ಪ್ರಕರಣ ಏನು?
ಡಿ.ಕೆ. ಶಿವಕುಮಾರ್ ಮತ್ತಿತರರ ವಿರುದ್ಧ ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿ ಆಧರಿಸಿ ಇಡಿ ಅಧಿಕಾರಿಗಳು 2018ರಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ನಂತರ 2019ರ ಸೆಪ್ಟೆಂಬರ್ 3ರಂದು ಇಡಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದರು. ಡಿ.ಕೆ. ಶಿವಕುಮಾರ್ 45 ದಿನಗಳ ಕಾಲ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಇರಬೇಕಾಯಿತು. ಬಳಿಕ ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಡಿ.ಕೆ. ಶಿವಕುಮಾರ್ 800 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆ. ಕುಟುಂಬದ ಸದಸ್ಯರ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಷ್ಟು ಹಣವನ್ನು ವಿವಿಧ ಬ್ಯಾಂಕ್ಗಳಲ್ಲಿ ಇಟ್ಟಿದ್ದಾರೆ. 20ಕ್ಕೂ ಹೆಚ್ಚು ಬ್ಯಾಂಕ್ಗಳಲ್ಲಿ 317 ಖಾತೆಗಳು ಪತ್ತೆಯಾಗಿವೆ. ಅವರ ಪುತ್ರಿ ಐಶ್ವರ್ಯ ಹೆಸರಿನಲ್ಲಿ 108 ಕೋಟಿ ರೂಪಾಯಿಯಷ್ಟು ಅಕ್ರಮ ಹಣ ವರ್ಗಾವಣೆ ಆಗಿದೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ