HOME » NEWS » State » DK SHIVAKUMAR ASKS PERMISSION FROM BJP GOVERNMENT TO BUY COVID 19 VACCINE FROM CONGRESS 100 CRORE RS FUND IN KARNATAKA SCT

Karnataka Congress: ಕೊರೋನಾ ಲಸಿಕೆ ಖರೀದಿಗೆ ಕಾಂಗ್ರೆಸ್​ನಿಂದ 100 ಕೋಟಿ ರೂ. ಅನುದಾನ; ಬಿಜೆಪಿ ವೈಫಲ್ಯಕ್ಕೆ ಡಿಕೆ ಶಿವಕುಮಾರ್ ಕಿಡಿ

DK Shivakumar: ಕಾಂಗ್ರೆಸ್​ ಶಾಸಕರು ಮತ್ತು ಎಂಎಲ್​ಸಿಗಳ ಅನುದಾನದಿಂದ 90 ಕೋಟಿ ರೂ. ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಫಂಡ್​ನಿಂದ 10 ಕೋಟಿ ರೂ. ಹಣ ಸೇರಿಸಿ ಕೊರೋನಾ ಲಸಿಕೆಗಳ ಖರೀದಿಗೆ ನಿರ್ಧರಿಸಿದ್ದೇವೆ. ಅದಕ್ಕೆ ಅನುಮತಿ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

news18-kannada
Updated:May 14, 2021, 2:13 PM IST
Karnataka Congress: ಕೊರೋನಾ ಲಸಿಕೆ ಖರೀದಿಗೆ ಕಾಂಗ್ರೆಸ್​ನಿಂದ 100 ಕೋಟಿ ರೂ. ಅನುದಾನ; ಬಿಜೆಪಿ ವೈಫಲ್ಯಕ್ಕೆ ಡಿಕೆ ಶಿವಕುಮಾರ್ ಕಿಡಿ
ಡಿ.ಕೆ. ಶಿವಕುಮಾರ್​.
  • Share this:
ಬೆಂಗಳೂರು (ಮೇ 14): ಕರ್ನಾಟಕದಲ್ಲಿ ಕೊರೋನಾ ಲಸಿಕೆ ಕೊರತೆ ಉಂಟಾಗಿದ್ದು, ಇಂದಿನಿಂದ 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ನೀಡದಿರಲು ನಿರ್ಧರಿಸಲಾಗಿದೆ. ಈಗಾಗಲೇ ಮೊದಲ ಡೋಸ್ ತೆಗೆದುಕೊಂಡವರಿಗೆ ಎರಡನೇ ಡೋಸ್ ನೀಡಲು ಮಾತ್ರ ಉಳಿದ ಲಸಿಕೆಗಳನ್ನು ಬಳಸಿಕೆ ಮಾಡಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್​ನಿಂದ 100 ಕೋಟಿ ರೂ. ಹಣವನ್ನು ಕೊರೋನಾ ಲಸಿಕೆ ಖರೀದಿಗೆ ನೀಡುವುದಾಗಿ ಘೋಷಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಕುರಿತು ಸರಣಿ ಟ್ವೀಟ್​ಗಳನ್ನು ಮಾಡಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಕಿಡಿ ಕಾರಿದ್ದಾರೆ.

ಕೊರೋನಾ ಲಸಿಕೆಯ ಉತ್ಪಾದನೆ ಆರಂಭವಾಗಿ ಇನ್ನು ಕೆಲವು ತಿಂಗಳಷ್ಟೇ ಕಳೆದಿದೆ. ಅಷ್ಟರಲ್ಲಾಗಲೇ ಲಸಿಕೆಗಳ ಕೊರತೆ ಕಂಡುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಕರ್ನಾಟಕದ ಜನರಿಗೆ ಕೊರೋನಾ ಲಸಿಕೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಕರ್ನಾಟಕ ಕಾಂಗ್ರೆಸ್ ವತಿಯಿಂದ ಜನರಿಗೆ ಕೊರೋನಾ ಲಸಿಕೆಗಳನ್ನು ಪೂರೈಸಲು ಮುಂದಾಗಿದ್ದೇವೆ. ಕೊರೋನಾ ಲಸಿಕೆಗಳನ್ನು ವಿತರಿಸಲು ನಮಗೆ ಕೂಡಲೇ ಅನುಮತಿ ನೀಡಬೇಕು ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್​ನ ಎಂಎಲ್​ಎ/ ಎಂಎಲ್​ಸಿ ಡೆವಲಪ್​ಮೆಂಟ್​ ಫಂಡ್ ಅನ್ನು ಕೊರೋನಾ ಖರೀದಿಗೆ ಬಳಸಲು ಅನುಮತಿ ನೀಡಬೇಕೆಂದು ನಾವು ವಿನಂತಿಸುತ್ತೇವೆ. ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ವಿಫಲರಾಗಿರುವುದರಿಂದ ಆಡಳಿತ ಪಕ್ಷದಿಂದ ಆಗದಿದ್ದನ್ನು ವಿರೋಧ ಪಕ್ಷವಾಗಿ ನಾವು ಮಾಡಲು ಮುಂದಾಗಿದ್ದೇವೆ. ನಾವು ಕೊರೋನಾ ಲಸಿಕೆ ಖರೀದಿಗಾಗಿ 100 ಕೋಟಿ ರೂ. ವಿನಿಯೋಗಿಸಲು ನಿರ್ಧರಿಸಿದ್ದೇವೆ. ಕಾಂಗ್ರೆಸ್​ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನದಿಂದ 90 ಕೋಟಿ ರೂ. ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಫಂಡ್​ನಿಂದ 10 ಕೋಟಿ ರೂ. ಹಣ ಸೇರಿಸಿ ಕೊರೋನಾ ಲಸಿಕೆಗಳ ಖರೀದಿಗೆ ನಿರ್ಧರಿಸಿದ್ದೇವೆ. ಸಾರ್ವಜನಿಕರು ದೇಣಿಗೆ ನೀಡಿದರೆ ಇನ್ನಷ್ಟು ಹಣ ಸಂಗ್ರಹವಾಗಲಿದೆ. ಹಾಗೇ, ಕೆಲವು ಆಸ್ಪತ್ರೆಗಳ ಜೊತೆಗೂ ಸಹಭಾಗಿತ್ವ ಹೊಂದಲಿದ್ದೇವೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.



ವಿಶ್ವಾದ್ಯಂತ ಇರುವ ಕೊರೋನಾ ಲಸಿಕೆ ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಖರೀದಿಸಲು ಕಾಂಗ್ರೆಸ್ ಪಕ್ಷಕ್ಕೆ ಅನುಮತಿ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರಿಗಿಂತ ವೇಗವಾಗಿ ಮತ್ತು ಸಮರ್ಪಕವಾಗಿ ನಾವು ಕೊರೋನಾ ಲಸಿಕಾ ಅಭಿಯಾನವನ್ನು ನಡೆಸಬಲ್ಲೆವು ಎಂಬುದನ್ನು ಸಾಬೀತುಪಡಿಸುತ್ತೇವೆ. ಕರ್ನಾಟಕ ಸರ್ಕಾರದ ಬೇಜವಾಬ್ದಾರಿತನದಿಂದ ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ಟ್ವೀಟ್ ದಾಳಿ ನಡೆಸಿದ್ದಾರೆ.



ರಾಜಕೀಯವನ್ನು ಪಕ್ಕಕ್ಕಿಟ್ಟು ನಮಗೆ ಲಸಿಕಾ ಉತ್ಪಾದಕರಿಂದ ನೇರವಾಗಿ ಕೊರೋನಾ ಲಸಿಕೆಗಳನ್ನು ಖರೀದಿಸಿ, ವಿತರಿಸಲು ಅನುಮತಿ ನೀಡಬೇಕೆಂದು ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರಲ್ಲಿ ಮನವಿ ಮಾಡುತ್ತೇವೆ. ಲಸಿಕೆಗಳು ಬೇಗ ಸಿಕ್ಕಿದರೆ ಇನ್ನಷ್ಟು ಜೀವಗಳು ಉಳಿಯುತ್ತವೆ. ಹೀಗಾಗಿ, ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.





ಇಂದು ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಕಾಂಗ್ರೆಸ್​ನ ಕೊರೋನಾ ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ 100 ಜನಪ್ರತಿನಿಧಿಗಳು ಪ್ರತಿಯೊಬ್ಬರೂ 1 ಕೋಟಿಯನ್ನ ವ್ಯಾಕ್ಸಿನ್ ಗೆ ನೀಡ್ತೇವೆ. 100 ಕೋಟಿಗಳನ್ನು ಲಸಿಕೆ ಖರೀದಿಗೆ ಕೊಡ್ತೇವೆ. ಈ ಬಗ್ಗೆ ನಮ್ಮ ಪಕ್ಷದ ಜನಪ್ರತಿನಿಧಿಗಳಿಗೆ ನಾವು ಸೂಚಿಸಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ನಿರ್ಧಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Published by: Sushma Chakre
First published: May 14, 2021, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories