ರಾಮನಗರ: ಕನಕಪುರದಲ್ಲಿ (Kanakapura) ಇಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾ ಮೂರ್ತಿ (Sudha Murty) ಅವರ ಸಹಕಾರದೊಂದಿಗೆ ನಿರ್ಮಿಸಲಾಗಿರುವ ಸುಸಜ್ಜಿತ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr. K Sudhakar) ಲೋಕಾರ್ಪಣೆ ಮಾಡಿದರು. ಈ ವೇಳೆ ಮಾಜಿ ಸಚಿವ ಡಿಕೆ ಶಿವಕುಮಾರ್ (DK Shivakumar), ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ (DK Suresh) ಹಾಜರಿದ್ದರು. ಈ ವೇಳೆ ಕಾರ್ಯಕ್ರಮ ವೇದಿಕೆಯಲ್ಲಿ ಮಾತನಾಡಿದ ಡಿಕೆ ಸಹೋದರರು ಆರೋಗ್ಯ ಸಚಿವ ಸುಧಾಕರ್ ಅವರನ್ನು ಕಿಚಾಯಿಸಿ ಕಾಲೆಳೆದರು. ಆ ಬಳಿಕ ಮಾತನಾಡಿದ ಸುಧಾಕರ್ ಅವರು, ಡಿಕೆ ಸುರೇಶ್ ಅವರನ್ನು ಹಾಡಿಹೊಗಳಿದರು.
ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋದರು
ಆಸ್ಪತ್ರೆಯ ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ಸಚಿವ ಸುಧಾಕರ್ ಅವರು ಮೊದಲು ನಮ್ಮ ಜೊತೆಯಲ್ಲೇ ಇದ್ದರು. ಆ ಬಳಿಕ ಕಿತ್ತಾಡಿಕೊಂಡು ಹೋದರು. ನಮ್ಮ ಜಿಲ್ಲೆಗೆ ಬಂದಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋದರು. ನನಗೊಂದು ಆಸೆ ಇದೆ. ಮುಂದೆ ಅವರನ್ನೇ ಕರೆದು ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಬೇಕು ಅಂದುಕೊಂಡಿದ್ದೇನೆ.
ಅವರು ಕಿತ್ತುಕೊಂಡು ಹೋಗಿರುವುದನ್ನು ಅವರ ಕೈಯಿಂದಲೇ ಶಂಕುಸ್ಥಾಪನೆ ಮಾಡಿಸಬೇಕು. ಮುಂದುವರೆದು ಅವರದ್ದು ಇದರಲ್ಲಿ ತಪ್ಪಿಲ್ಲ, ಅವರು ಕೂಡ ಜನಪ್ರತಿನಿಧಿ. ಆದರೆ ನಮ್ಮದನ್ನು ಕಿತ್ತುಕೊಂಡು ಹೋದರು ಎನ್ನುವ ಬೇಸರ ಇದೆ ಅಷ್ಟೇ. ಅದಕ್ಕೆ ಮುಂದೆ ಅವರ ಕೈಯಿಂದಲೇ ಶಂಕುಸ್ಥಾಪನೆ ಮಾಡಿಸಬೇಕು ಎಂದು ಕಿಚಾಯಿಸಿದರು.
ಜಿಲ್ಲಾಡಳಿತದ ವಿರುದ್ಧ ಡಿಕೆ ಸುರೇಶ್ ಗರಂ
ಇನ್ನು, ಸುಧಾಮೂರ್ತಿ ಅವರ ಸಹಕಾರದಿಂದ ನಿರ್ಮಾಣ ಮಾಡಿರುವ ಆಸ್ಪತ್ರೆಯ ಉದ್ಘಾಟನೆಗೆ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನೇ ಹಾಕಿರಲಿಲ್ಲ. ಇದರಿಂದ ಜಿಲ್ಲಾಡಳಿತ ವಿರುದ್ಧ ಗರಂ ಆದ ಸಂಸದರು, ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಮಾನ-ಮರ್ಯಾದೆ ಇದೆಯಾ ಎಂದು ಪ್ರಶ್ನೆ ಮಾಡಿದರು. ಆಸ್ಪತ್ರೆ ಕೊಡುಗೆ ನೀಡಿದ ಸುಧಾಮೂರ್ತಿಯವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಕ್ಷಣ ಕಾಲ ತಬ್ಬಿಬ್ಬಾದರು.
ಇಲ್ಲಿ ಯಾರೂ ಕೂಡ ಶಾಶ್ವತ ಅಲ್ಲ
ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಮೆಡಿಕಲ್ ಕಾಲೇಜು ಬಗ್ಗೆ ಮಾತನಾಡಿದರು. ಪಾಪಾ ಸುಧಾಕರ್ ಅವರು ಅವರ ಕ್ಷೇತ್ರದ ಕೆಲಸ ಮಾಡಿದ್ದಾರೆ. ಹಿಂದೆ ರಾಮನಗರಕ್ಕೆ ಮೆಡಿಕಲ್ ಕಾಲೇಜು ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಬಳಿಕ ಅವರು ಮಾತು ತಪ್ಪಿದ್ದರು. ಇಲ್ಲಿ ಯಾರೂ ಕೂಡ ಶಾಶ್ವತ ಅಲ್ಲ. ಬಿಎಸ್ವೈ, ಬೊಮ್ಮಾಯಿ ಕೂಡ ಶಾಶ್ವತ ಅಲ್ಲ. ನಿಮ್ಮ ಕೈಯಲ್ಲಿ ಪೆನ್ ಆಗಲಿ, ಅಧಿಕಾರಿ ಆಗಲಿ ಹೆಚ್ಚು ದಿನ ಇರಲ್ಲ. ಇನ್ನು 50 ದಿನ ಅಥವಾ 90 ದಿನ ಇರುತ್ತಿರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಸುಧಾಕರ್ಗೆ ಡಿಕೆ ಶಿವಕುಮಾರ್ ಮನವಿ
ಇವತ್ತು ನಾನು ಆರೋಗ್ಯ ಸಚಿವ ಸುಧಾಕರ್ ಜೊತೆ ವೇದಿಕೆ ಶೇರ್ ಮಾಡಿದ್ದೇನೆ. ಹಿಂದೆ ಬಿಎಸ್ವೈ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೆ. ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಾಗ 5 ಸಾವಿರ ಜನ ಪೊಲೀಸರು ಇದ್ದರು. ನನ್ನ ಕ್ಷೇತ್ರದಲ್ಲಿ ರಾಜಕಾರಣಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಅಪರೂಪ. ಇಂದು ಅರೋಗ್ಯ ಸಚಿವರ ಜೊತೆ ವೇದಿಕೆ ಹಂಚಿಕೊಂಡಿದ್ದೇನೆ ಅಂದರೆ ಅದು ನಿಮ್ಮ ಮೇಲಿನ ವಿಶ್ವಾಸ. ದಯವಿಟ್ಟು ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡಿ ಎಂದು ಮನವಿ ಮಾಡಿದರು.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಿಸಿರುವ 'ತಾಯಿ ಮತ್ತು ಮಕ್ಕಳ ಆಸ್ಪತ್ರೆ'ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಿಸಿರುವ 'ತಾಯಿ ಮತ್ತು ಮಕ್ಕಳ ಆಸ್ಪತ್ರೆ'ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
1/3 pic.twitter.com/bsI8s6KzOQ
— Dr Sudhakar K (@mla_sudhakar) February 12, 2023
ನಮ್ಮ ಕ್ಲಿನಿಕ್ ಎಂಬ ಹೊಸ ಪರಿಕಲ್ಪನೆ
ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ತಾಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅಗತ್ಯವಿದೆ. ಆರೋಗ್ಯದ ಸೂಚ್ಯಂಕದಲ್ಲಿ ಬಹಳಷ್ಟು ಸುಧಾರಣೆ ಆಗುತ್ತಿದೆ. ಆದರೆ ಇನ್ನೂ ಅಭಿವೃದ್ಧಿ ಆಗಬೇಕು. ಹಿಂದೆ ಹೋಲಿಕೆ ಮಾಡಿದರೆ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಆಗಿದೆ. ಆದರೆ ನವಜಾತ ಶಿಶುವಿನ ಮರಣದ ಪ್ರಮಾಣ ತಗ್ಗಿಸಬಹುದು. ದೇಶದಲ್ಲಿ ಕರ್ನಾಟಕ ಉತ್ತಮವಾಗಿದೆ.
ಉತ್ತರ ಕರ್ನಾಟಕದ ಕೆಲವು ಕಡೆ ಬದಲಾವಣೆ ಆಗಬೇಕು. ನಮ್ಮ ಸರ್ಕಾರ ಬಂದ ಮೇಲೆ ಬಹಳ ಸೂಕ್ಷ್ಮವಾಗಿ ಗಮನಿಸಿ ಕಾರ್ಯಕ್ರಮ ನೀಡುತ್ತಿದ್ದೇವೆ. ಸಿಎಂ ಬೊಮ್ಮಾಯಿ, ಬಿಎಸ್ವೈ ನೇತೃತ್ವದಲ್ಲಿ ಅನೇಕ ಆಸ್ಪತ್ರೆಗಳ ನಿರ್ಮಾಣ ಆಗಿದೆ. ನಮ್ಮ ಕ್ಲಿನಿಕ್ ಎಂಬ ಹೊಸ ಪರಿಕಲ್ಪನೆ ತಂದಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಇಡೀ ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ತೆರೆದಿದ್ದೇವೆ ಎಂದರು.
ಕನಕಪುರ ಮೆಡಿಕಲ್ ಕಾಲೇಜು ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ
ಕನಕಪುರಕ್ಕೆ ಮೊದಲನೇ ಬಾರಿ ಬಂದಿದ್ದೇನೆ. ಆದ್ದರಿಂದ ಏನಾದರೂ ಕೊಡಲೇಬೇಕು ಅಂದುಕೊಂಡಿದ್ದೇನೆ. ಸಂಸದರು ಮೆಡಿಕಲ್ ಕಾಲೇಜು ಕಿತ್ತುಕೊಂಡು ಹೋದರು ಅಂತ ಪದೇ ಪದೇ ಹೇಳಿದರು. ಆದರೆ ನಾನು ರಾಮನಗರ ಜಿಲ್ಲೆಗೆ ಕೊಟ್ಟಿದ್ದ ಮೆಡಿಕಲ್ ಕಾಲೇಜು ಕೊಡಿ ಎಂದು ಎಂದು ಯಾವತ್ತು ಕೇಳಿರಲಿಲ್ಲ. ಈ ಹಿಂದೆಯೇ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಅನುಮೋದನೆ ಆಗಿತ್ತು. ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರು ಆಗ ನಮಗೆ ಕಾಲೇಜು ಕೊಟ್ಟರು. ಕನಕಪುರದ ಕಾಲೇಜನ್ನು ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ಗುಣಗಾನ ಮಾಡಿದ ಸುಧಾಕರ್, ಡಿಕೆ ಯಾಕೆ ಗೆಲ್ಲುತ್ತಾರೆ ಅಂತ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೊದಲು ಕಡಿಮೆ ಮಾರ್ಜಿನ್ನಲ್ಲಿ ಗೆಲ್ಲುತ್ತಿದ್ದರು. ಬರಬರುತ್ತಾ 75 ಸಾವಿರ ಲೀಡ್ಗೆ ಹೋಯಿತು. ಡಿಕೆ ಶಿವಕುಮಾರ್ ನರೇಗಾದಲ್ಲಿ ಕ್ರಾಂತಿಯನ್ನೇ ಮಾಡಿದ್ದರು.
ಯಾವತ್ತು ಆರೋಗ್ಯಕರ ಪ್ರಜಾಪ್ರಭುತ್ವ ಇರ್ಬೇಕು. ಒಳ್ಳೆದು ಮಾಡಿದಾಗ ಹೊಗಳಬೇಕು. ಆಡಳಿತ, ವಿರೋಧ ಪಕ್ಷಗಳು ಇದೇ ರೀತಿ ಇರಬೇಕು. ಸಂಸದರು ಯಾವಾಗ ನಿದ್ದೆ ಮಾಡುತ್ತಾರೆ ಗೊತ್ತಿಲ್ಲ, ಕನಕಪುರಕ್ಕೆ ಮೂರು ಕಣ್ಣು ಇದೆ ಅಂತ ಕೆಲವರು ಹೇಳ್ತಾರೆ. ಅದು ಸುರೇಶ್, ಶಿವಕುಮಾರ್ ಹಾಗೂ ಎಂಎಲ್ಸಿ ರವಿ. ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ರಾಜಿ ಇಲ್ಲದೆ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ