ಲೇವಡಿ ಮಾಡಿದ ಪ್ರಶಾಂತ್ ಸಂಬರಗಿಗೆ ಫೇಸ್ಬುಕ್ನಲ್ಲೇ ಉತ್ತರ ಕೊಟ್ಟ ಡಿಕೆ ರವಿ ಪತ್ನಿ ಕುಸುಮಾ
ಕುಸುಮಾ ಬಗ್ಗೆ ವ್ಯಂಗ್ಯ ಮಾಡಿದ್ದ ಪ್ರಶಾಂತ ಸಂಬರಗಿ, ಕುಸುಮಾ ಅವರ ದುರಾದೃಷ್ಟ ಡಿ.ಕೆ. ರವಿಯಿಂದ ಈಗ ಡಿ.ಕೆ. ಶಿವಕುಮಾರ್ಗೆ ವರ್ಗಾವಣೆ ಆಗಿದೆ ಎಂದು ಲೇವಡಿ ಮಾಡಿದ್ದರು. ಅದಕ್ಕೆ ಕುಸುಮಾ ಫೇಸ್ಬುಕ್ನಲ್ಲೇ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಅ. 6): ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಹೆಂಡತಿ ಕುಸುಮಾ ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆರ್.ಆರ್. ನಗರ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರುವ ಕುಸುಮಾ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಫೇಸ್ಬುಕ್ನಲ್ಲಿ ವ್ಯಂಗ್ಯವಾಡಿದ್ದರು. ಕಾಂಗ್ರೆಸ್ ಸೇರಿದ ವೇಳೆ ಡಿಕೆ ಶಿವಕುಮಾರ್ ಅವರಿಂದ ಆಶೀರ್ವಾದ ಪಡೆಯುತ್ತಿರುವ ಕುಸುಮಾ ಬಗ್ಗೆ ವ್ಯಂಗ್ಯ ಮಾಡಿದ್ದ ಪ್ರಶಾಂತ ಸಂಬರಗಿ, ಕುಸುಮಾ ಅವರ ದುರಾದೃಷ್ಟ ಡಿ.ಕೆ. ರವಿಯಿಂದ ಈಗ ಡಿ.ಕೆ. ಶಿವಕುಮಾರ್ಗೆ ವರ್ಗಾವಣೆ ಆಗಿದೆ ಎಂದು ಲೇವಡಿ ಮಾಡಿದ್ದರು.
ಇದಕ್ಕೆ ಫೇಸ್ ಬುಕ್ ಮೂಲಕವೇ ತಿರುಗೇಟು ನೀಡಿರುವ ಕುಸುಮಾ, ವೈಯಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ. ಕೆಲ ತಿಂಗಳುಗಳಿಂದ ನೀವು ಡ್ರಗ್ಸ್ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ದ ನಡೆಸುತ್ತಿರುವ ಹೋರಾಟ ಪ್ರಶಂಸನೀಯ. ಯುವಸಮೂಹಕ್ಕೆ ಡ್ರಗ್ಸ್ ವಿರುದ್ದವಾಗಿ ಜಾಗ್ರತೆ ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು. ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟದ (Luck) ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.
ಸಹೋದರ ಪ್ರಶಾಂತ್ ಸಂಬರಗಿಯವರಿಗೆ,
ವೈಯುಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ, ಕೆಲ ತಿಂಗಳುಗಳಿಂದ ನೀವು ಡ್ರಗ್ಸ್ ಹಾಗೂ ಇನ್ನಿತರ ಸಾಮಾಜಿಕ...
ಹಾಗೇ, ಪ್ರತಿಯೊಬ್ಬರ ಬದುಕಿನಲ್ಲೂ ಏಳು-ಬೀಳುಗಳಿರುತ್ತವೆ, ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ? ಹೆಣ್ಣು ಎಂಬ ಮಾತ್ರಕ್ಕೆ ಇಂತಹ ವಿಡಂಬನೆ ಮತ್ತು ಅಪಪ್ರಚಾರಗಳಿಗೆ ಒಳಗಾಗಬೇಕೆ? ಬೇರೆಯವರ ಮನೆಯ ಹೆಣ್ಣುಮಗಳ luck ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹತ್ರಾಸ್ ನ ಮನೀಷಾ ಅತ್ಯಾಚಾರ-ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇಕೆ? ಸಹೋದರ ಪ್ರಶಾಂತ್ ಸಂಬರಗಿ ಅವರೇ, ಇದರಿಂದ ಹೆಣ್ಣುಮಕ್ಕಳ ಕುರಿತ ನಿಮ್ಮ ಬುದ್ಧಿಮಟ್ಟ ತಿಳಿಯುತ್ತದೆ. ಈ ಆಲೋಚನೆಗಳನ್ನು ಮುಂದುವರಿಸಿ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಕುಸುಮಾ ಫೇಸ್ಬುಕ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಪ್ರಶಾಂತ್ ಸಂಬರಗಿ ಅವರಿಗೆ ಕುಸುಮಾ ನೀಡಿರುವ ಉತ್ತರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಕುಸುಮಾ ಅವರು ತಮ್ಮ ತಂದೆ ಹನುಮಂತರಾಯಪ್ಪನವರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕುಸುಮಾ ಅವರಿಗೆ ಆರ್ಆರ್ ನಗರ ಉಪಚುನಾವಣೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ