ಬೆಂಗಳೂರು (ಅ.22): ವಿವಾದಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಡಿಜೆ ಹಳ್ಳಿ ಗಲಭೆಗೆ ಪ್ರೇರಣೆ ನೀಡಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್ಗೆ ರಾಜ್ಯ ಹೈ ಕೋರ್ಟ್ ಜಾಮೀನು ನೀಡಿದೆ. ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಪೋಸ್ಟ್ ಅನ್ನು ಈತ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದರಿಂದ ಉದ್ರಿಕ್ತರಾದ ಗುಂಪೊಂದು ಪುಲಿಕೇಶಿ ನಗರ ಶಾಸಕರ ಮನೆ ಹಾಗೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆ ಧ್ವಂಸಕ್ಕೆ ಕಾರಣವಾಗಿತ್ತು. ವಾದ-ವಿವಾದ ಆಲಿಸಿದ ನ್ಯಾಯಾಲಯ ಎರಡು ಲಕ್ಷ ಬಾಂಡ್ ನೊಂದಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಇದೇ ವೇಳೆ ಸಾಕ್ಷ್ಯನಾಶ ಮಾಡದಂತೆ ಹಾಗೂ ವಿವಾದಾತ್ಮಕ ಸಂದೇಶ ಹಂಚಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ನವೀನ್ ಹಂಚಿಕೊಂಡಿದ್ದ ವಿವಾದಾತ್ಮಕ ಸಂದೇಶದಿಂದ ನಗರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಸಿಕ್ಕಿತ್ತು. ಇದರಿಂದ ಎರಡು ಪೊಲೀಸ್ ಠಾಣೆ, ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಲಾಗಿತ್ತು. ಅಷ್ಟೇ ಅಲ್ಲದೇ ಪೊಲೀಸರ 57 ವಾಹಗಳನ್ನು ಸುಟ್ಟು ಕರಕಲಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಯಾಗಿದೆ. ಘಟನೆಯ ಗಂಭೀರ ಅಪರಾಧಕ್ಕೆ ಕಾರಣವಾದ ಈತನಿಗೆ ಜಾಮೀನು ನೀಡಿದರೆ ಸಮಾಜದ ಶಾಂತಿ ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನಲೆ ಈತನಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ವಾದಿಸಿತು.
ಇದಲ್ಲದೇ ನವೀನ್ ಅವರ ಜೀವನಕ್ಕೆ ಬೆದರಿಕೆ ಇದೆ. ಅಲ್ಲದೇ ಆತನ ವಿರುದ್ಧ ಈಗಾಗಲೇ ಏಳು ಅಪರಾಧ ಪ್ರಕರಣಗಳಿದ್ದು ಆತನ ಜಾಮೀನಿಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿತು.
ನವೀನ್ ವಿರುದ್ಧ ಐಪಿಸಿ ಸೆಕ್ಷನ್ 153 (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), 295ಎ (ಉದ್ದೇಶ ಪೂರ್ವಕವಾಗಿ ಮತ್ತು ದುರುದ್ದೇಶದಿಂದ ಧಾರ್ಮಿಕ ಭಾವನೆ ಕೆರಳಿಸುವುದು) ಅಡಿ ಎಫ್ಐಆರ್ ದಾಖಲಾಗಿದೆ.
ಇದನ್ನು ಓದಿ: ಮಂಜಿನ ನಗರಿಯಾದ ಬೆಂಗಳೂರು; ಮೈದುಂಬಿದ ಸ್ಯಾಂಕಿ ಕೆರೆಗೆ ಡಿಸಿಎಂ ಬಾಗಿನ ಅರ್ಪಣೆ
ನವೀನ್ ವಿರುದ್ಧ ಈ ಹಿಂದೆ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಆತನನ್ನು ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಈ ಹಿನ್ನಲೆ ಜಾಮೀನು ನೀಡುತ್ತಿರುವ ಬಗ್ಗೆ ನ್ಯಾಯಾಲಯ ತಿಳಿಸಿದೆ.
ನವೀನ್ ಪರ ವಾದ ಮಾಡಿದ ವಕೀಲರು, ನವೀನ್ ಕೇವಲ ಸಂದೇಶವನ್ನು ಪೋಸ್ಟ್ ಮಾಡಿದ್ದು, ಬಳಿಕ ಅದನ್ನು ತೆಗೆದು ಹಾಕಿದ್ದಾರೆ. ಅವರು ನಿರಾಪರಾಧಿಯಾಗಿದ್ದು, ಅವರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಇದೊಂದು ರಾಜಕೀಯ ಪ್ರೇರಿತ ಗಲಭೆಯಾಗಿದೆ. ಈ ಪ್ರಕರಣದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಒಂದೇ ಒಂದು ಕಾರಣಕ್ಕೆ ಜಾಮೀನು ನಿರಾಕರಿಸಬಾರದು ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ