ಬೆಂಗಳೂರು (ಆಗಸ್ಟ್ 15); ಮಂಗಳವಾರ ತಡರಾತ್ರಿ ಬೆಂಗಳೂರಿನ ಡಿ.ಜಿ. ಹಳ್ಳಿಯಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ಗೋಲಿಬಾರ್‌ನಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರು. ಆದರೆ, ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕನೇ ವ್ಯಕ್ತಿಯೂ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿಯನ್ನು ಸಯ್ಯದ್ ನದೀಮ್ ಎಂದು ಗುರುತಿಸಲಾಗಿದೆ. ಮೊದಲು ಗುಂಡೇಟು ತಿಂದಿದ್ದ ನದೀಮ್‌ನನ್ನು ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ, ವೈದ್ಯರ ಸತತ ಪ್ರಯತ್ನ ವಿಫಲವಾಗಿದ್ದ ಇಂದು ಆತ ಮೃತಪಟ್ಟಿದ್ದಾನೆ.
ಅಲ್ಲದೆ, ಮೃತ ವ್ಯಕ್ತಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈತನಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಮೃತ ದೇಹವನ್ನು ಕುಟುಂಬಸ್ಥರಿಗೆ ಸರ್ಕಾರ ಹಸ್ತಾಂತರ ಮಾಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರೊಬ್ಬರು ಮುಸ್ಲಿಂ ವಿರೋಧಿ ಪೋಸ್ಟ್ ಮಾಡಿದ್ದರು ಎಂಬ ಕಾರಣಕ್ಕೆ ಮಂಗಳವಾರ ರಾತ್ರಿ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮತ್ತು ಕಾವಲ್ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸಾವಿರಾರು ಜನರು ಆಕ್ರೋಶ ಹೊರಹಾಕಿದ್ದರು.
ರಾತ್ರಿ ಅಖಂಡ ಶ್ರೀನಿವಾಸ್ ಮನೆ ಎದುರಿನ ರಸ್ತೆ, ಮನೆಗೆ ಬೆಂಕಿ ಹಚ್ಚಲಾಗಿತ್ತು. ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಪೊಲೀಸರು ಜನರ ಗುಂಪಿನ ಮೇಲೆ ಫೈರಿಂಗ್ ನಡೆಸಿದ್ದರು. ಈ ವೇಳೆ ಮೂವರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು. ಈ ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ಪೈಕಿ ಇಂದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ