ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸಿ, ಇಲ್ಲವಾದರೆ ಪ್ರತಿಭಟನೆ ಎದುರಿಸಲು ಸಜ್ಜಾಗಿ; ಸರ್ಕಾರಕ್ಕೆ ಹೋರಾಟಗಾರರ ಎಚ್ಚರಿಕೆ

ಚಿಕ್ಕೋಡಿ ಜಿಲ್ಲೆಯಾಗಬೇಕು, ಜೊತೆಗೆ ಚಿಕ್ಕೋಡಿಗೆ ಒಂದು ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜ್ ಬರಬೇಕು ಎಂದು ಸಂಘಪ್ಪಗೋಳ ಒತ್ತಾಯಿಸಿದ್ದಾರೆ.

ಚಿಕ್ಕೋಡಿ

ಚಿಕ್ಕೋಡಿ

  • Share this:
ಚಿಕ್ಕೋಡಿ(ನ.04): ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಮತ್ತೊಮ್ಮೆ ಪ್ರತಿಭಟನೆ ನಡೆಸಲು ಜಿಲ್ಲಾ ಹೋರಾಟ ಸಮಿತಿ ಸಜ್ಜಾಗಿದೆ.  ಕೂಡಲೇ ಜಿಲ್ಲೆಯ ನಾಯಕರು ಎಚ್ಚೆತ್ತುಕೊಂಡು ಚಿಕ್ಕೋಡಿಯನ್ನ ಜಿಲ್ಲೆಯನ್ನು ರಚನೆ ಮಾಡಲು ಮುಂದಾಗಬೇಕು, ಇಲ್ಲವಾದಲ್ಲಿ ಜನ ಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಘಪ್ಪಗೋಳ ನೀಡಿದ್ದಾರೆ‌. ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಅನ್ನುವ ಹೆಗ್ಗಳಿಕೆ ಹೊಂದಿದಂತಹ ಜಿಲ್ಲೆ. 18 ವಿಧಾನಸಭಾ ಎರಡು ಲೋಕಸಭಾ ಕ್ಷೇತ್ರ ಹೊಂದಿರುವ ಜಿಲ್ಲೆ. 200 ಕಿಲೋ ಮೀಟರ್‌ ವ್ಯಾಪ್ತಿಯನ್ನ ಹೊಂದಿದೆ.  ಆಡಳಿತ ದೃಷ್ಟಿಯಿಂದ ಜಿಲ್ಲೆ ವಿಭಜನೆ ಮಾಡಬೇಕು ಎನ್ನುವ ಕೂಗು ಕಳೆದ 20 ವರ್ಷಗಳಿಂದ ಕೇಳುತ್ತಲೇ ಬಂದಿದೆ. ಇದಕ್ಕಾಗಿ ಹಲವು ಬಾರಿ ಹೋರಾಟಗಳು ನಡೆದಿವೆ. ಹಲವು ರಾಜಕೀಯ ನಾಯಕರು ಸಹ ತಮ್ಮ ಹಿತಾಸಕ್ತಿಗಾಗಿ ಚುನಾವಣೆ ಬಂದತಂಹ ಸಂದರ್ಭದಲ್ಲಿ ಜಿಲ್ಲೆ ಮಾಡುವ ಭರವಸೆ ನೀಡಿ ಚುನಾವಣೆ ಬಳಿಕ ಮರೆತು ಬಿಡುತ್ತಾರೆ. ಆದ್ರೆ ಜಿಲ್ಲೆಯ ಕನಸು ಮಾತ್ರ 20 ವರ್ಷಗಳಿಂದಲೂ ಕನಸಾಗಿಯೇ ಉಳಿದಿದೆ.

ಈಗಾಗಲೇ ಚಿಕ್ಕೋಡಿ ಜಿಲ್ಲೆ ಆಗಲು ಎಲ್ಲಾ ಅರ್ಹತೆಯನ್ನು ಹೊಂದಿದ ಕ್ಷೇತ್ರವಾಗಿದೆ. ಎಲ್ಲಾ ಜಿಲ್ಲಾ ಮಟ್ಟದ ಕಾರ್ಯಾಲಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲಾ ಕನಸು ನನಸಾಗುತ್ತಿಲ್ಲ. ಹಾಗಾಗಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಮತ್ತೊಮ್ಮೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಚಿಕ್ಕೋಡಿ ಜಿಲ್ಲೆ ಶೈಕ್ಷಣಿಕವಾಗಿ ಸಾಕಷ್ಟು ಹಿಂದೆ ಉಳಿದಿದೆ. ಹುಬ್ಬಳ್ಳಿ- ಧಾರವಾಡದಂತಹ ಮಹಾನಗರದ ನಾಯಕರು ಒಗ್ಗಟ್ಟಾಗಿ, ಸಾಕಷ್ಟು ಸರ್ಕಾರದ ಅನುದಾನ ಪಡೆದು ಕೆಲಸಗಳನ್ನ ಮಾಡುತ್ತಿದ್ದಾರೆ. ಆದ್ರೆ  ನಮ್ಮ ಜಿಲ್ಲೆಯ ರಾಜಕೀಯ ನಾಯಕರು ಮಾತ್ರ ಸುಮ್ಮನಿದ್ದಾರೆ. ಚಿಕ್ಕೋಡಿ ಜಿಲ್ಲೆಯಾಗಬೇಕು, ಜೊತೆಗೆ ಚಿಕ್ಕೋಡಿಗೆ ಒಂದು ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜ್ ಬರಬೇಕು ಎಂದು ಸಂಘಪ್ಪಗೋಳ ಒತ್ತಾಯಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಶಿಕ್ಷಕರ ವರ್ಗಾವಣೆ ಆರಂಭ; ಸಚಿವ ಸುರೇಶ್ ಕುಮಾರ್

ಇನ್ನು ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ಬಂದಾಗ ಜಿಲ್ಲೆಯ ಎಲ್ಲಾ ನಾಯಕರು ತಮ್ಮ ಒಳ ಜಗಳವನ್ನ ಬಿಟ್ಟು ತಮ್ಮ ಅಧಿಕಾರಕ್ಕಾಗಿ ಒಪ್ಪಂದಗಳನ್ನ ಮಾಡುವ ಮೂಲಕ ಅವಿರೋಧವಾಗಿ ಆಯ್ಕೆ ಮಾಡುವ ಮಾತುಗಳನ್ನ ಜನ ಪ್ರತಿನಿಧಿಗಳ ಹೇಳುತ್ತಾರೆ. ಆದ್ರೆ ಚಿಕ್ಕೋಡಿ ಜಿಲ್ಲೆ ರಚನೆ ಮಾಡುವ ವಿಚಾರ ಬಂದಾಗ ಮಾತ್ರ ಜಿಲ್ಲೆಯ ಬೇರೆ ಬೇರೆ ನಾಯಕರು ಒಪ್ಪುತ್ತಿಲ್ಲ, ವಿರೋಧ ಮಾಡುತ್ತಾರೆ ಎಂದು ಹೇಳಿ ನಮಗೆ ಮೋಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಚಿಕ್ಕೋಡಿ ವ್ಯಾಪ್ತಿಯಲ್ಲಿ 6 ಜನ ಬಿಜೆಪಿ ಶಾಸಕರು, ಇಬ್ಬರು ಮಾತ್ರ ಕಾಂಗ್ರೆಸ್​​ ಶಾಸಕರು ಇದ್ದಾರೆ.  ಸಂಸದರು ಕೂಡ ಬಿಜೆಪಿಯವರೇ ಓರ್ವ ಡಿಸಿಎಂ, ಇಬ್ಬರು ಸಚಿವರು ಇರುವಂತಹ ಕ್ಷೇತ್ರ ಇದು. ಆದರೂ ಯಾರು ಕೂಡ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ಕಳೆದ 20 ವರ್ಷಗಳಿಂದಲೂ ಚಿಕ್ಕೋಡಿ ಜಿಲ್ಲೆಗಾಗಿ ಜನ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಪ್ರಯೋಜನ ಮಾತ್ರ ಆಗಿಲ್ಲ. ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಜಿಲ್ಲಾ ಹೋರಾಟ ಸಮಿತಿ ಮುಂದಾಗಿದ್ದು, ಜನ ಪ್ರತಿನಿಧಿಗಳ ಮನೆಗಳ ಮುಂದೆಯೇ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
Published by:Latha CG
First published: