ರೈತರಿಗೆ ಸಮಸ್ಯೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಭೆಯಲ್ಲಿ ಡಿ.ಸಿ.ಗಳಿಗೆ ಸಿಎಂ ಕುಮಾರಸ್ವಾಮಿ ಖಡಕ್​ ಎಚ್ಚರಿಕೆ

ಮುಂಗಾರಿನಲ್ಲಿ ರೈತರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಿ. ಮುಂಗಾರು ಪ್ರಾರಂಭ ಆಗುತ್ತಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆ ಆಗಬಾರದು. ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಆಗಬೇಕು

Latha CG | news18
Updated:June 12, 2019, 5:32 PM IST
ರೈತರಿಗೆ ಸಮಸ್ಯೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಭೆಯಲ್ಲಿ ಡಿ.ಸಿ.ಗಳಿಗೆ ಸಿಎಂ ಕುಮಾರಸ್ವಾಮಿ ಖಡಕ್​ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Latha CG | news18
Updated: June 12, 2019, 5:32 PM IST
ಬೆಂಗಳೂರು,(ಜೂ.12): ಸಿಎಂ ಕುಮಾರಸ್ವಾಮಿ ಇಂದು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಬರ ನಿರ್ವಹಣೆಗೆ ಮೊದಲ ಆದ್ಯತೆ ಕೊಡಿ ಎಂದು ಖಡಕ್​ ಎಚ್ಚರಿಕೆ ನೀಡಿದರು.

"ಜನರಿಗೆ ಕುಡಿಯುವ ನೀರಿ‌ನ ಸಮಸ್ಯೆ ಆಗಬಾರದು. ನೀರಿನ ಸಮಸ್ಯೆಯಿದ್ದರೆ ಖಾಸಗಿಯಿಂದ ಪಡೆದು ಕೊಡಿ. ಅದಕ್ಕೆ ಎಷ್ಟೇ ಹಣ ಬೇಕಾದರೂ ಸರ್ಕಾರ ಕೊಡುತ್ತದೆ. ಯಾವ ಕಾರಣಕ್ಕೂ ನೀರಿನ ಸಮಸ್ಯೆ ಆಗಬಾರದು. ಏನಾದರೂ ನೀರಿನ ಸಮಸ್ಯೆ ಎದುರಾದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ. ಪಿಡಿ ಅಕೌಂಟ್​​ನಲ್ಲಿ ಸಾಕಷ್ಟು ಹಣ ಇಡಲಾಗಿದೆ. ಆ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿ. ಖಾಲಿಯಾದರೆ 24 ಗಂಟೆಯೊಳಗೆ ಹಣ ಹಾಕಲು ಸಿದ್ದ. ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವಹಿಸಿ" ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು.

ರೈತರಿಗೆ ಸಮಸ್ಯೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ:

ಈಗ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ರೈತರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿ ಎಂದು ಸಿಎಂ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. "ಮುಂಗಾರಿನಲ್ಲಿ ರೈತರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಿ. ಮುಂಗಾರು ಪ್ರಾರಂಭ ಆಗುತ್ತಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆ ಆಗಬಾರದು. ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಆಗಬೇಕು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಗೊಬ್ಬರ, ಬಿತ್ತನೆ ಬೀಜ ಸಂಗ್ರಹ ಮಾಡಿ ಇಟ್ಟುಕೊಳ್ಳಬೇಕು. ರೈತರಿಗೆ ಸಮಸ್ಯೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ. ಮುಂಗಾರಿನ ಬಿತ್ತನೆಗೆ ಸಮಸ್ಯೆ ಆಗಲೇಬಾರದು" ಎಂದು ಖಡಕ್​ ಸೂಚನೆ ಕೊಟ್ಟರು.

ಕೂಡಲೇ ಶೌಚಾಲಯ ನಿರ್ಮಾಣ ಮಾಡಿ:

ಕರ್ನಾಟಕ 100% ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಆಗಿದೆ. ಆದರೆ ಕೆಲ ಜಿಲ್ಲೆಯಲ್ಲಿ ಇನ್ನೂ ಶೌಚಾಲಯ ನಿರ್ಮಾಣ ಆಗದಿರುವ ಬಗ್ಗೆ ವರದಿ ಆಗಿದೆ. ಕೂಡಲೇ ಶೌಚಾಲಯ ನಿರ್ಮಾಣ ಮಾಡುವುದು ಆಯಾ ಡಿಸಿಗಳ ಹೊಣೆ. ಶೇ. 100 ರಷ್ಟು ಗುರಿ ಸಾಧಿಸುವುದು ಜಿಲ್ಲಾಧಿಕಾರಿಗಳ ಹೊಣೆ ಎಂದರು.

ಗೊಂದಲಗಳಿಗೆ ಎಡೆ ಮಾಡಿಕೊಡಬೇಡಿ:

ಇದೇ ವೇಳೆ ಯಾದಗಿರಿ‌ ಸಾಲಮನ್ನಾ ಹಣ ವಾಪಸ್​ ವಿಚಾರವನ್ನು ಸಿಎಂ ಸಭೆಯಲ್ಲಿ ಪ್ರಸ್ತಾಪಿಸಿದರು. ಯಾವುದೇ ಕಾರಣಕ್ಕೂ ಇಂತಹ ಗೊಂದಲಕ್ಕೆ ಡಿಸಿಗಳು ಎಡೆ ಮಾಡಿಕೊಡಬೇಡಿ. ಬ್ಯಾಂಕ್​​ನವರಿಗೂ ಇದರ ಬಗ್ಗೆ ಸೂಚನೆ ಕೊಡುತ್ತೇವೆ. ಹಣ ಬಿಡುಗಡೆ ಆದಂತೆ ರೈತರ ಸಾಲಮನ್ನಾ ಹಣ ಅವರ ಅಕೌಂಟ್​ಗೆ ಹೋಗಬೇಕು. ಇದನ್ನು ಡಿಸಿಗಳು, ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಮಾಡಬೇಕು ಎಂದು ಖಡಕ್​ ಎಚ್ಚರಿಕೆ ಕೊಟ್ಟರು. ಈ ಸಂಬಂಧ ಶುಕ್ರವಾರದ ಸಭೆಯಲ್ಲಿ ಬ್ಯಾಂಕ್​​ನವರಿಗೂ ಎಚ್ಚರಿಕೆ ಕೊಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ನಾಲ್ಕನೇ ಶನಿವಾರ ರಜೆ; ಈ ತಿಂಗಳನಿಂದಲೇ ಜಾರಿಗೆ ಸರ್ಕಾರದಿಂದ ಅಧಿಕೃತ ಆದೇಶ

ಪಬ್ಲಿಕ್ ಶಾಲೆಗಳಿಗೆ ಜಾಗ ನಿಗದಿ ಮಾಡಿ:

ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಜಾಗ ಹುಡುಕಲು ಸಿಎಂ ಸೂಚನೆ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಉ‌ನ್ನತೀಕರಣ ಮಾಡುವ ನಿಟ್ಟಿನಲ್ಲಿ ಪಬ್ಲಿಕ್ ಸ್ಕೂಲ್ ಪ್ರಾರಂಭ ಮಾಡುತ್ತಿದ್ದೇವೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಕ್ಕೆ ಸೂಕ್ತ ಜಾಗ ಗುರುತಿಸುವುದು ಡಿಸಿಗಳ ಜವಾಬ್ದಾರಿ. ಶೀಘ್ರವೇ ಶಾಲೆಗಳಿಗೆ ಜಾಗ ನಿಗದಿ‌ ಮಾಡಲು ಸಭೆಯಲ್ಲಿ ಸೂಚನೆ‌ ನೀಡಿದರು.

ಪೋಡಿ ಪ್ರಕರಣ ಇತ್ಯರ್ಥ ಮಾಡಿ:

ಪೋಡಿ ಪ್ರಕರಣದ ಶೀಘ್ರ ಕ್ರಮಕ್ಕೆ ಸಿಎಂ ಎಚ್​ಡಿಕೆ ಖಡಕ್ ಎಚ್ಚರಿಕೆ ನೀಡಿದರು. ಪೋಡಿ ಪ್ರಕರಣದಲ್ಲಿ ರೈತರಿಗೆ ಸಮಸ್ಯೆ ಆಗುತ್ತಿದೆ. ರೈತರು ಅಲೆದಾಡುವ ಪರಿಸ್ಥಿತಿ‌ ನನ್ನ ಗಮನಕ್ಕೆ ಬಂದಿದೆ. ಇದನ್ನು ಶೀಘ್ರವಾಗಿ ವಿಲೇವಾರಿ ಮಾಡಿ. ರೈತರಿಗೆ ಸಮಸ್ಯೆ ಕೊಟ್ಟರೆ ಸರಿ ಹೋಗಲ್ಲ. ನನ್ನ ಗ್ರಾಮ ವಾಸ್ತವ್ಯದಲ್ಲಿ ಪೋಡಿ ಪ್ರಕರಣವೇ ಪ್ರಮುಖವಾದದ್ದು. ಪೋಡಿ ಪ್ರಕರಣವನ್ನು ಶೀಘ್ರ ಇತ್ಯರ್ಥ ಮಾಡಿ ಎಂದು ಸೂಚನೆ ನೀಡಿದರು.

ಬಿಪಿಎಲ್ ಕಾರ್ಡ್ ಬಗ್ಗೆ ಮರುಪರಿಶೀಲನೆ ಮಾಡಿ:

ಬಿಪಿಎಲ್ ಕಾರ್ಡ್ ಬಗ್ಗೆ ಮರುಪರಿಶೀಲನೆ ಮಾಡಿ. ರಾಜ್ಯದಲ್ಲಿ ಹೆಚ್ಚು ಬಿಪಿಎಲ್ ಕಾರ್ಡ್ ಇವೆ. ಇದರ ಬಗ್ಗೆ ಸರಿಯಾದ ಅಂಕಿ-ಅಂಶ ಸಂಗ್ರಹ ಮಾಡಿ. ನಮ್ಮ ರಾಜ್ಯದಲ್ಲಿ 90% ಬಿಪಿಎಲ್ ಕಾರ್ಡ್ ಇವೆ. ಇದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಪರಿಶೀಲನೆ ಮಾಡಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು. ಸಿಎಂ ಮಾತಿಗೆ ಸಚಿವ ದೇಶಪಾಂಡೆ ಕೂಡ ಧ್ವನಿಗೂಡಿಸಿದರು.

ಬಗರ್ ಹುಕುಂ ಸಮಿತಿ ರಚನೆ ಮಾಡಿ. 224 ಕ್ಷೇತ್ರಗಳಲ್ಲಿ ಕೇವಲ 15 ಕಮಿಟಿ ಮಾತ್ರ ಮಾಡಲಾಗಿದೆ. ಈ ಕಮಿಟಿ ಹೆಚ್ಚು ಮಾಡಲು ಅಗತ್ಯ ಕ್ರಮ ವಹಿಸಿ, ಸಮಸ್ಯೆಗೆ ಪರಿಹಾರ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...