ಕಾಫಿನಾಡಲ್ಲಿ ನೆರೆಯ ಅವಾಂತರ; ಒಟ್ಟು 240 ಕೋಟಿ ನಷ್ಟ, 9 ಬಲಿ, 1631 ನಿರಾಶ್ರಿತರು

ಪ್ರವಾಹಕ್ಕೆ ಜಿಲ್ಲೆಯಲ್ಲಿ ರಸ್ತೆ ಹಾಗೂ ಸೇತುವೆಗಳು ಸಹ ಹಾಳಾಗಿವೆ ಎಂದು ಡಿಸಿ ಮಾಹಿತಿ ನೀಡಿದರು. ಜಿಲ್ಲಾದ್ಯಂತ 950 ಕಿ.ಮೀ. ರಸ್ತೆ ಹಾಳಾಗಿದೆ. 2065 ವಿದ್ಯುತ್ ಕಂಬಗಳು ಧರೆಗುರುಳಿವೆ. 

Latha CG | news18
Updated:August 15, 2019, 4:43 PM IST
ಕಾಫಿನಾಡಲ್ಲಿ ನೆರೆಯ ಅವಾಂತರ; ಒಟ್ಟು 240 ಕೋಟಿ ನಷ್ಟ, 9 ಬಲಿ, 1631 ನಿರಾಶ್ರಿತರು
ಕೊಡಗು- ಚಿಕ್ಕಮಗಳೂರು ಪ್ರವಾಹ
  • News18
  • Last Updated: August 15, 2019, 4:43 PM IST
  • Share this:
 ಚಿಕ್ಕಮಗಳೂರು,(ಆ.15): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭೀಕರ ಪ್ರವಾಹ ಉಂಟಾಗಿ ಮನೆ-ಮಠ, ಆಸ್ತಿ-ಪಾಸ್ತಿ ಕೊಚ್ಚಿ ಹೋಗಿದೆ. ಹಲವಾರು ಮಂದಿ ನೆರೆಗೆ ಬಲಿಯಾಗಿದ್ದಾರೆ. ಪ್ರಾಣಿಗಳು ಪ್ರವಾಹದ ಸುಳಿಯಲ್ಲಿ ಸಿಕ್ಕಿ ಅಸುನೀಗಿವೆ. ನೆರೆ ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ಮಲೆನಾಡಿನ ಜನ ಚೇತರಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕಿದೆ. ಚಿಕ್ಕಮಗಳೂರಿನಲ್ಲಿ ಪ್ರವಾಹದಿಂದ ಆಗಿರುವ ಅನಾಹುತಗಳ ಬಗ್ಗೆ ಜಿಲ್ಲಾಧಿಕಾರಿ ಗೌತಮ್ ಬಗಾದಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ಧಾರೆ. 

ಜಿಲ್ಲೆಯಲ್ಲಿ ಆಗಸ್ಟ್​ ತಿಂಗಳಲ್ಲಿ ಬೀಳಬೇಕಾದ ವಾಡಿಕೆ ಮಳೆ 199 ಮಿ.ಮೀ.  14 ದಿನಗಳಲ್ಲಿ ಬಿದ್ದ ಮಳೆ 631 ಮಿಮೀ. ಮಲೆನಾಡಿನಲ್ಲಿ ಮಳೆಗೆ ಒಟ್ಟು 9 ಮಂದಿ ಬಲಿಯಾಗಿದ್ದಾರೆ. 7 ಜನಕ್ಕೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಓರ್ವನ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾದ್ಯಂತ 26 ನಿರಾಶ್ರಿತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರವಾಹದಿಂದ 1631 ಜನ ನಿರಾಶ್ರಿತರಾಗಿದ್ದಾರೆ. ಮಳೆಯಿಂದಾಗಿ ಒಟ್ಟು 1454 ಮನೆಗಳಿಗೆ ಹಾನಿಯಾಗಿದೆ. ಅವುಗಳಲ್ಲಿ 319 ಮನೆಗಳು ಸಂಪೂರ್ಣ ಹಾಳಾಗಿದ್ದರೆ,  820 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೂಡಿಗೆರೆ ತಾಲೂಕು ಒಂದರಲ್ಲೇ 917 ಮನೆಗೆ ಹಾನಿಯಾಗಿದೆ ಎಂದು ಅನಾಹುತಗಳ ಬಗ್ಗೆ ತಿಳಿಸಿದರು.

ಇನ್ನು, ಪ್ರವಾಹಕ್ಕೆ ಜಿಲ್ಲೆಯಲ್ಲಿ ರಸ್ತೆ ಹಾಗೂ ಸೇತುವೆಗಳು ಸಹ ಹಾಳಾಗಿವೆ ಎಂದು ಡಿಸಿ ಮಾಹಿತಿ ನೀಡಿದರು. ಜಿಲ್ಲಾದ್ಯಂತ 950 ಕಿ.ಮೀ. ರಸ್ತೆ ಹಾಳಾಗಿದೆ. 2065 ವಿದ್ಯುತ್ ಕಂಬಗಳು ಧರೆಗುರುಳಿವೆ. 45 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. 159 ಸೇತುವೆಗಳು ಹಾಗೂ 34 ಕೆರೆಗಳಿಗೆ ಹಾನಿಯಾಗಿದೆ. ಜಿಲ್ಲಾದ್ಯಂತ 1565 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ ಎಂದು ಹೇಳಿದರು.

ಜಿಲ್ಲಾದ್ಯಂತ 240 ಕೋಟಿ ನಷ್ಟವಾಗಿದೆ. ಮೂಡಿಗೆರೆಯೊಂದರಲ್ಲೇ 140 ಕೋಟಿ ನಷ್ಟವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಮಾಧ್ಯಮಗಳಿಗೆ ಮಾಹಿತಿ ಕೊಟ್ಟರು.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...