ಹೇಳಿದ ಕೆಲಸ ಮಾಡಿಕೊಡುತ್ತಿಲ್ಲ; ಕೋರ್ಟ್​ನಲ್ಲೂ ಇತ್ಯರ್ಥವಾಗುತ್ತಿಲ್ಲ: ಸಿಎಂ ಬಗ್ಗೆ ಅಸಮಾಧಾನಗೊಂಡಿರುವ ಅನರ್ಹ ಶಾಸಕರಿಂದ ಸಭೆ

ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥಕ್ಕೆ ಆಗುತ್ತಿರುವ ವಿಳಂಬ; ತಮ್ಮ ಮಾತುಗಳಿಗೆ ರಾಜ್ಯ ಸರ್ಕಾರ ಬೆಲೆ ಕೊಡದಿರುವುದು; ಜೆಡಿಎಸ್ ಪಾಳಯದಿಂದ ಇನ್ನಷ್ಟು ಶಾಸರು ಬಿಜೆಪಿಗೆ ಬರುವ ಸಾಧ್ಯತೆ ಇತ್ಯಾದಿ ವಿಚಾರಗಳು ಅನರ್ಹ ಶಾಸಕರನ್ನು ಬಾಧಿಸುತ್ತಿದೆ.

news18-kannada
Updated:September 13, 2019, 1:14 PM IST
ಹೇಳಿದ ಕೆಲಸ ಮಾಡಿಕೊಡುತ್ತಿಲ್ಲ; ಕೋರ್ಟ್​ನಲ್ಲೂ ಇತ್ಯರ್ಥವಾಗುತ್ತಿಲ್ಲ: ಸಿಎಂ ಬಗ್ಗೆ ಅಸಮಾಧಾನಗೊಂಡಿರುವ ಅನರ್ಹ ಶಾಸಕರಿಂದ ಸಭೆ
ಕಾರೊಳಗಿರುವ ಎಂಟಿಬಿ ನಾಗರಾಜ್
  • Share this:
ಬೆಂಗಳೂರು(ಸೆ. 13): ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಕೆಡವಿದ್ದ ಅನರ್ಹ ಶಾಸಕರು ಇದೀಗ ಬಿಎಸ್​ವೈ ಸರ್ಕಾರದ ಬಗ್ಗೆಯೂ ಅಸಮಾಧಾನಗೊಂಡಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ತಮ್ಮ ಪ್ರಕರನ ಇತ್ಯರ್ಥವಾಗುತ್ತಿಲ್ಲವೆಂಬ ಹತಾಶೆ ಒಂದೆಡೆಯಾದರೆ, ತಮ್ಮ ಮಾತುಗಳನ್ನ ಹಾಲಿ ಸರ್ಕಾರದಲ್ಲಿ ಕೇಳುವವರಿಲ್ಲ ಎಂಬ ಆಕ್ರೋಶ ಇನ್ನೊಂದೆಡೆ ಇದೆ. ಸಿಎಂ ಆಗುವ ಮುನ್ನ ಯಡಿಯೂರಪ್ಪ ಅವರಲ್ಲಿ ಇದ್ದ ವರ್ತನೆಗೂ ಈಗಿನ ವರ್ತನೆಗೂ ವ್ಯತ್ಯಾಸವಾಗಿದೆ ಎಂದು ಅನರ್ಹ ಶಾಸಕರು ಒಳಗೊಳಗೆ ಮುಲುಗುತ್ತಿದ್ದಾರೆ. ಇವತ್ತು ಸಭೆ ನಡೆಸಿರುವ ಈ ಅನರ್ಹ ಶಾಸಕರು ತಮ್ಮ ಮುಂದಿನ ಕಾರ್ಯಯೋಜನೆಯನ್ನು ಚರ್ಚಿಸುತ್ತಿದ್ದಾರೆನ್ನಲಾಗಿದೆ.

ಪ್ಯಾಲೇಸ್ ರಸ್ತೆಯಲ್ಲಿರುವ ಡಾ| ಸುಧಾಕರ್ ಅವರಿಗೆ ಸೇರಿದ ದೇವಪ್ರಿಯ ಬ್ರಿಗೇಡ್ ಅಪಾರ್ಟ್​ಮೆಂಟ್​ನಲ್ಲಿ ಅನರ್ಹ ಶಾಸಕರು ಸಭೆ ನಡೆಸಿದ್ದಾರೆ. ಡಾ. ಸುಧಾಕರ್, ಬಿ.ಸಿ. ಪಾಟೀಲ್, ಮುನಿರತ್ನ, ಪ್ರತಾಪ್ ಗೌಡ ಪಾಟೀಲ್, ಎಂಟಿಬಿ ನಾಗರಾಜು, ಭೈರತಿ ಬಸವರಾಜು, ರೋಷನ್ ಬೇಗ್ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಹಿಂದಿ ದಿವಸ್​​ ವಿರುದ್ಧ ಸೆ.14ಕ್ಕೆ ಕರಾಳ ದಿನಾಚರಣೆ; ಕನ್ನಡಿಗರ ಬೃಹತ್​​ ಹಕ್ಕೊತ್ತಾಯ ಮೆರವಣಿಗೆ

ಕ್ಷೇತ್ರಕ್ಕೆ ಸಂಬಂಧಿಸಿ ತಾವು ಹೇಳಿದ ಕೆಲಸವನ್ನು ಸರ್ಕಾರದಲ್ಲಿ ಮಾಡಿಕೊಡಲಾಗುತ್ತಿಲ್ಲ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಖುದ್ದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರೂ ಕೆಲಸಗಳಾಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳೂ ಆಗುತ್ತಿಲ್ಲ. ತಮ್ಮ ಮನವಿಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ ಎಂಬುದು ಈ ಅನರ್ಹ ಶಾಸಕರ ಅಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಇದೇ ವಿಚಾರಕ್ಕೆ ಸಂಬಂಧಿಸಿ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಮೂರ್ನಾಲ್ಕು ಅನರ್ಹ ಶಾಸಕರು, ಬಿಎಸ್​ವೈ ಸರ್ಕಾರದ ಮೇಲೆ ತಮಗ್ಯಾವ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾಗಲು ವಿಳಂಬವಾಗುತ್ತಿರುವುದಕ್ಕೆ ಯಾರೇನು ಮಾಡಲು ಸಾಧ್ಯ? ನ್ಯಾಯಾಲಯ ತನ್ನದೇ ಹಾದಿಯಲ್ಲಿ ವಿಚಾರಣೆ ನಡೆಸುತ್ತದೆ. ಇದಕ್ಕೂ ಬಿಎಸ್​ವೈ ಸರ್ಕಾರಕ್ಕೂ ಏನೂ ಸಂಬಂಧ ಇಲ್ಲ ಎಂದು ಬಿ.ಸಿ. ಪಾಟೀಲ್, ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರು ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಲು ಸಿದ್ದರಾಮಯ್ಯ ರಣತಂತ್ರ; ಒತ್ತಡಕ್ಕೆ ಮಣಿಯುವರಾ ಸೋನಿಯಾ ಗಾಂಧಿ?

ಹಾಗೆಯೇ, ತಾವು ಅನರ್ಹ ಶಾಸಕರೆಲ್ಲರೂ ಸಭೆ ನಡೆಸುವುದರಲ್ಲಿ ವಿಶೇಷವೇನಿಲ್ಲ. ಕೋರ್ಟ್ ವ್ಯವಹಾರದ ಬಗ್ಗೆ ಚರ್ಚೆ ನಡೆಸಲು ಆಗಾಗ ಸೇರುತ್ತೇವೆ. ಬೆಂಗಳೂರಿನಲ್ಲಿ ಎಲ್ಲರೂ ಬಂದಾಗ ಮೀಟ್ ಮಾಡುತ್ತೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.ಈಗಿನ ಸರ್ಕಾರದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ನಾವು ಹೇಳಿದ ಕೆಲಸಗಳಿಗೆ ಪೂರಕವಾಗಿ ಸ್ಪಂದನೆ ಸಿಗುತ್ತಿದೆ. ಸರ್ಕಾರದ ಆದೇಶದ ನಂತರ ಟೆಂಡರ್ ಪ್ರಕ್ರಿಯೆ ಇತ್ಯಾದಿಗಳಿಂದಾಗಿ ಆ ಕೆಲಸಗಳು ಚಾಲನೆಗೆ ಬರಲು 3 ತಿಂಗಳಾದರೂ ಬೇಕಾಗುತ್ತದೆ ಎಂದು ಬಿ.ಸಿ. ಪಾಟೀಲ್ ನ್ಯೂಸ್18 ಕನ್ನಡಕ್ಕೆ ಹೇಳಿದ್ದಾರೆ.

ಇದನ್ನೂ ಓದಿ: ಬ್ಯಾಂಕಿಂಗ್ ಪರೀಕ್ಷೆ; ಕನ್ನಡಕ್ಕೆ ಕಿಮ್ಮತ್ತು ನೀಡದ ಕೇಂದ್ರ ಸರ್ಕಾರ; ಹಿಂದಿ-ಇಂಗ್ಲೀಷ್​​ಗೆ ಮಾತ್ರ ಅವಕಾಶ

ಇನ್ನು, ಮುನಿರತ್ನ ಅವರು ಅನರ್ಹ ಶಾಸಕರಿಗೆ ಅಸಮಾಧಾನವಾಗಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಸುದ್ದಿಯಲ್ಲಿ ಅಸಮಾಧಾನ ಎಂಬ ಪದವನ್ನು ತೆಗೆದುಹಾಕಿ ಎಂದು ತಾಕೀತು ಮಾಡಿದ ಅವರು, ತಮಗೆ ಸರ್ಕಾರದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ತಾವು ಕಾಫಿ ಕುಡಿಯಲು ಹೀಗೆ ಸಭೆ ಸೇರುತ್ತೇವೆಯೇ ಹೊರತು ಅಸಮಾಧಾ ಹೊರಹಾಕಲು ಸಭೆ ನಡೆಸುತ್ತಿಲ್ಲ ಎಂದಿದ್ದಾರೆ.

ಆದರೆ, ಮೂಲಗಳ ಪ್ರಕಾರ ಅನರ್ಹ ಶಾಸಕರಲ್ಲಿ ಬಿಎಸ್​ವೈ ಸರ್ಕಾರದ ಧೋರಣೆ ಬಗ್ಗೆ ಈಗಲೇ ಅಸಮಾಧಾನ ಭುಗಿಲೆದ್ದಿದೆ. ಮೈತ್ರಿ ಸರ್ಕಾರ ಬೀಳುವವರೆಗೂ ನೀಡುತ್ತಿದ್ದ ಆಶ್ವಾಸನೆಗಳು ಈಗ ಇತಿಹಾಸದ ಪುಟಕ್ಕೆ ಸೇರಿವೆ. ತಮ್ಮನ್ನು ದಾಳಗಳನ್ನಾಗಿ ಬಿಜೆಪಿಯವರು ಬಳಸಿಕೊಂಡರೆಂಬ ನೋವು ಇವರಲ್ಲಿ ಮಡುಗಟ್ಟಿದೆ ಎನ್ನಲಾಗುತ್ತಿದೆ. ಹಾಗೆಯೇ, ಜೆಡಿಎಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೂ ಅನರ್ಹ ಶಾಸಕರ ಕಂಗೆಡಿಸಿವೆ. ಜೆಡಿಎಸ್​ನಿಂದ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ತಮಗೆ ಬೆಲೆ ಇಲ್ಲದಂತಾಗುತ್ತದೆ ಎಂಬ ಆತಂಕ ಇವರನ್ನು ಕಾಡುತ್ತಿದೆ. ಹಾಗೆಯೇ, ಸುಪ್ರೀಂ ಕೋರ್ಟ್​ನಲ್ಲಿ ತಮ್ಮ ಪ್ರಕರಣವು ವಿಚಾರಣೆಯ ಹಂತಕ್ಕೆ ಬರಲು ವಿಳಂಬವಾಗುತ್ತಿರುವುದು ಯಾಕೆ ಎಂಬ ಪ್ರಶ್ನೆಯೂ ಇವರನ್ನು ಬಾಧಿಸುತ್ತಿದೆ. ಇವೆಲ್ಲವನ್ನೂ ಚರ್ಚಿಸಲು ಇವತ್ತು ಇವರು ಸಭೆ ನಡೆಸಿರುವುದು ತಿಳಿದುಬಂದಿದೆ.

(ವರದಿ: ಶ್ರೀನಿವಾಸ ಹಳಕಟ್ಟಿ / ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading