ಇತ್ತ ಚುನಾವಣೆ, ಅತ್ತ ಸುಪ್ರೀಂ ತೀರ್ಪು ಅನಿಶ್ಚಿತ: ಅತಂತ್ರಗೊಂಡ ಅನರ್ಹ ಶಾಸಕರಿಗೆ ಮುಂದಿನ ದಾರಿಗಳೇನು?

ಚುನಾವಣಾ ಆಯೋಗ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಡಿ. 15ಕ್ಕೆ ದಿನ ನಿಗದಿ ಮಾಡಿದೆ. ಅದರಂತೆ, ನ. 11ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗುತ್ತದೆ. ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರುತ್ತದೆ. ನ. 18ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಅಷ್ಟರೊಳಗೆ ಸುಪ್ರೀಂ ಕೋರ್ಟ್ ಏನಾದರೊಂದು ತೀರ್ಪು ಕೊಟ್ಟರೆ ಸಾಕು ಎಂಬ ಪರಿಸ್ಥಿತಿಗೆ ಜಾರಕಿಹೊಳಿ ಅಂಡ್ ರೆಬೆಲ್ಸ್ ಟೀಮ್ ತಲುಪಿಬಿಟ್ಟಿದೆ.

news18
Updated:November 8, 2019, 5:49 PM IST
ಇತ್ತ ಚುನಾವಣೆ, ಅತ್ತ ಸುಪ್ರೀಂ ತೀರ್ಪು ಅನಿಶ್ಚಿತ: ಅತಂತ್ರಗೊಂಡ ಅನರ್ಹ ಶಾಸಕರಿಗೆ ಮುಂದಿನ ದಾರಿಗಳೇನು?
ಅನರ್ಹ ಶಾಸಕರು
  • News18
  • Last Updated: November 8, 2019, 5:49 PM IST
  • Share this:
ಬೆಂಗಳೂರು(ನ. 08): ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡಿದಂದಿನಿಂದಲೂ ಅನರ್ಹ ಶಾಸಕರದ್ದು ಹೆಚ್ಚೂಕಡಿಮೆ ಅತಂತ್ರ ಸ್ಥಿತಿ. ತಮ್ಮ ಕ್ಷೇತ್ರಗಳಿಗೆ ಭರ್ಜರಿ ಅನುದಾನಗಳನ್ನ ಪಡೆಯುವಲ್ಲಿ ಯಶಸ್ವಿಯಾದರೂ ಅವರ ರಾಜಕೀಯ ಭವಿಷ್ಯ ಇನ್ನೂ ಕತ್ತಲಲ್ಲೇ ಇದೆ. ಇವತ್ತು ಅನರ್ಹ ಶಾಸಕರ ಪ್ರಕರಣದ ತೀರ್ಪು ಬರದೇ ಹೋಗಿದ್ದು ಅವರನ್ನು ಇನ್ನಷ್ಟು ಹತಾಶೆಗೆ ನೂಕಿದೆ. ರಾಜೀನಾಮೆ ಕೊಟ್ಟ ಬಳಿಕ ಎದೆಯುಬ್ಬಿಸಿ ಆರ್ಭಟಿಸುತ್ತಿದ್ದ ಅನರ್ಹ ಶಾಸಕರು ಈಗ ಒಂದಷ್ಟು ಮಟ್ಟಕ್ಕೆ ಮೆತ್ತಗಾಗಿದ್ಧಾರೆ. ಇಂದು ಸಂಜೆ 7 ಗಂಟೆಗೆ ಅವರು ಖಾಸಗಿ ಹೋಟೆಲ್​ನಲ್ಲಿ ಸಭೆ ಸೇರಿ ಮುಂದಿನ ದಾರಿಗಳನ್ನು ಅವಲೋಕಿಸಲಿದ್ದಾರೆ.

ಚುನಾವಣಾ ಆಯೋಗ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಡಿ. 15ಕ್ಕೆ ದಿನ ನಿಗದಿ ಮಾಡಿದೆ. ಅದರಂತೆ, ನ. 11ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗುತ್ತದೆ. ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರುತ್ತದೆ. ನ. 18ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಅಷ್ಟರೊಳಗೆ ಸುಪ್ರೀಂ ಕೋರ್ಟ್ ಏನಾದರೊಂದು ತೀರ್ಪು ಕೊಟ್ಟರೆ ಸಾಕು ಎಂಬ ಪರಿಸ್ಥಿತಿಗೆ ಜಾರಕಿಹೊಳಿ ಅಂಡ್ ರೆಬೆಲ್ಸ್ ಟೀಮ್ ತಲುಪಿಬಿಟ್ಟಿದೆ.

ಇದನ್ನೂ ಓದಿ: ಜೆಡಿಎಸ್​ನ ಜಾತ್ಯತೀತತೆ ಮತ್ತು ವಾಸ್ತವದ ಬಗ್ಗೆ ಕೆಪಿಸಿಸಿಯಿಂದ ಹೈಕಮಾಂಡ್​ಗೆ ವರದಿ

ನ. 13ಕ್ಕೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್​ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಿದ್ದಾರೆ. ಅನರ್ಹತೆಯ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಯ ಹಂತದಲ್ಲಿದ್ದರೂ ಚುನಾವಣಾ ಆಯೋಗವು ಉಪಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದನ್ನು ಅವರು ಪ್ರಶ್ನಿಸಲಿದ್ದಾರೆ. ಪ್ರಕರಣದಲ್ಲಿ ತೀರ್ಪು ಬರಬೇಕು ಅಥವಾ ಉಪಚುನಾವಣೆ ಮುಂದೂಡಬೇಕು ಎಂಬುದು ಅವರ ವಾದವಾಗಿದೆ. ನ. 18ರೊಳಗೆ ಏನಾದರೊಂದು ಇತ್ಯರ್ಥ ಆಗಬೇಕು. ಇಲ್ಲವಾದಲ್ಲಿ ಅನರ್ಹ ಶಾಸಕರು ಅನರ್ಹರಾಗಿಯೇ ಚುನಾವಣೆಯನ್ನು ನೋಡಿಕೊಂಡಿರಬೇಕಾಗುತ್ತದೆ. ಅಕ್ಷರಶಃ ತ್ರಿಶಂಕು ಸ್ವರ್ಗದ ಸ್ಥಿತಿ ಅವರದ್ದಾಗುತ್ತದೆ.

2011ರಲ್ಲಿ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ 11 ಶಾಸಕರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈಗ ಅನರ್ಹ ಶಾಸಕರಿಗೆ ಒಂದು ಪ್ರಮುಖ ಆಶಾಕಿರಣವಾಗಿದೆ. ಅಂದು 11 ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ ಸ್ಪೀಕರ್ ತೀರ್ಪನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿತ್ತು. ಯಡಿಯೂರಪ್ಪಗೆ ನಿಷ್ಠೆ ತೋರಲಿಲ್ಲವೆಂಬ ಒಂದೇ ಕಾರಣಕ್ಕೆ ಅವರನ್ನ ಅನರ್ಹತೆಗೊಳಿಸಿದ್ದು ಸ್ಪೀಕರ್ ಬೋಪಯ್ಯ ಅವರ ತಪ್ಪು ನಿರ್ಧಾರವಾಗಿದೆ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದರು. ಈಗ ಇದೇ ತೀರ್ಪನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ತಮಗೆ ನ್ಯಾಯ ಕೊಡಬಹುದು ಎಂಬ ವಿಶ್ವಾಸದಲ್ಲಿ 15 ಅನರ್ಹ ಶಾಸಕರಿದ್ದಾರೆ.

ಇನ್ನು, ಸುಪ್ರೀಂಕೋರ್ಟ್ ತೀರ್ಪು ಬರದೇ ಇದ್ದರೆ ಅಥವಾ ತಮಗೆ ವಿರುದ್ಧವಾಗಿ ತೀರ್ಪು ಬಂದರೆ ಏನು ಮಾಡಬೇಕೆಂದು ಅನರ್ಹ ಶಾಸಕರು ಬಹಳ ದಿನಗಳ ಹಿಂದೆಯೇ ಪ್ಲಾನ್ ಬಿ ಮಾಡಿಕೊಂಡಿದ್ದಾರೆ. ಅದರಂತೆ, ಇವರು ಸೂಚಿಸಿದ ಅಭ್ಯರ್ಥಿಗಳಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬ ಬೇಡಿಕೆಗೆ ಸಿಎಂ ಯಡಿಯೂರಪ್ಪ ಪೂರಕವಾಗಿ ಸ್ಪಂದಿಸಿದ್ದಾರೆ. ಆದರೆ, ಅನರ್ಹ ಶಾಸಕರಿಗೆ ಭಯ ಇರುವುದು ಬಿಜೆಪಿಯಲ್ಲಿರುವ ಬಿಎಸ್​ವೈ ವಿರೋಧಿ ಬಣಗಳ ಬಗ್ಗೆ. ಇವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಟಿಕೆಟ್ ವಿಚಾರದಲ್ಲಿ ಅತೀವ ವಿರೋಧ ವ್ಯಕ್ತಪಡಿಸುತ್ತಿದ್ಧಾರೆ. ತಮಗೆ ಟಿಕೆಟ್ ನೀಡಲೇ ಇಷ್ಟು ವಿರೋಧವಿರುವಾಗ, ತಾವು ಸೂಚಿಸಿದ ಅಭ್ಯರ್ಥಿಯನ್ನು ಲೋಕಲ್ ಲೀಡರ್ಸ್ ಒಪ್ಪುತ್ತಾರಾ ಎಂಬುದು ದೊಡ್ಡ ಪ್ರಶ್ನೆ. ಹಾಗೆಯೇ, ಬಿಜೆಪಿ ಹೈಕಮಾಂಡ್ ಬಗ್ಗೆಯೂ ಅವರಿಗೆ ಬೇಕಷ್ಟುಮಟ್ಟಿಗೆ ವಿಶ್ವಾಸ ಇಲ್ಲ. ಅಮಿತ್ ಶಾ ಏನು ಬೇಕಾದರೂ ತಂತ್ರ ರೂಪಿಸಬಲ್ಲ ರಾಜಕಾರಣಿ ಎಂಬುದು ಅನರ್ಹ ಶಾಸಕರಿಗೆ ತಿಳಿದಿದೆ. ಒಂದು ವೇಳೆ, ಜಾತ್ಯತೀತ ಜನತಾ ದಳ ಬೇಷರತ್ ಬೆಂಬಲ ನೀಡಲು ಮುಂದಾದರೆ ಅಮಿತ್ ಶಾ ತಮ್ಮನ್ನು ಕೈಬಿಟ್ಟರೂ ಅಚ್ಚರಿ ಇಲ್ಲ ಎಂಬುದು ಇವರ ಭಾವನೆ.

ಇದನ್ನೂ ಓದಿ: ವರ್ಗಾವಣೆಗಾಗಿ ಸಿಎಂ ಬಿಎಸ್​ವೈ ಕಚೇರಿ ಹೆಸರಿನಲ್ಲಿ ನಕಲಿ ಕರೆ; ತನಿಖೆಗೆ ಆದೇಶಇನ್ನು, ಸುಪ್ರೀಂ ಕೋರ್ಟ್ ತೀರ್ಪು ಅನರ್ಹ ಶಾಸಕರ ಪರವಾಗಿ ಬಂದರೂ ಬಿಕ್ಕಟ್ಟು ಶಮನವಾಗುತ್ತೆ ಎಂಬಂತಿಲ್ಲ. ಆಗಲೇ ಹೇಳಿದಂತೆ, ಬಹುತೇಕ ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯೊಳಗೆ ವಿರೋಧ ಇದೆ. ಯಡಿಯೂರಪ್ಪ ಅವರು ಹೈಕಮಾಂಡ್ ಮನವೊಲಿಸಿ ಇವರಿಗೆ ಟಿಕೆಟ್ ನೀಡಿದರೆ ಒಳಗೊಳಗೆ ಭಿನ್ನಮತ ಏಳಬಹುದು. ಗೆಲುವಿನ ಸಾಧ್ಯತೆ ಕ್ಷೀಣಿಸಬಹುದು ಎಂಬ ಭಯವಂತೂ ಇದ್ದೇ ಇದೆ. ಎಲ್ಲವೂ ಒಳ್ಳೆಯದಾಗುತ್ತೆ ಎಂದು ನಂಬಿಕೊಂಡು ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಹೊರ ಬಂದ ರಮೇಶ್ ಜಾರಕಿಹೊಳಿ ಮೊದಲಾದವರು ಈಗ ಬಹುತೇಕ ಎಲ್ಲಾ ಭರವಸೆಗಳನ್ನ ಕಳೆದುಕೊಂಡಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಸಂಜೆ 7ಕ್ಕೆ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸುತ್ತಿದ್ದಾರೆ. ತಮ್ಮ ಮುಂದಿನ ದಾರಿ ಏನು? ಕಾನೂನು ಹೋರಾಟ ಎಲ್ಲಿಯವರೆಗೆ ನಡೆಸಬಹುದು? ಕ್ಷೇತ್ರದಲ್ಲಿ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದೋ ಬೇಡವೋ? ಇವೇ ಮುಂತಾದವುಗಳನ್ನು ಇವರು ಚರ್ಚೆ ನಡೆಸಲಿದ್ದಾರೆ.

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 8, 2019, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading