news18-kannada Updated:February 15, 2021, 9:01 PM IST
ಬಂಧಿತ ವಿದ್ಯಾರ್ಥಿನಿ ದಿಶಾ ರವಿ.
ಬೆಂಗಳೂರು (ಫೆಬ್ರವರಿ 15); ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಇಡೀ ದೇಶದ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ತಲೆ ಕೆಡಿಕೊಳ್ಳದಿದ್ದರೂ, ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸೆಲೆಬ್ರಿಟಿಗಳು ಈ ಹೋರಾಟದ ಪರವಾಗಿ ಈಗಾಗಲೇ ಧ್ವನಿ ಎತ್ತಿದ್ದಾರೆ. ಅಮೆರಿಕ ಪಾಪ್ ಹಾಡುಗಾರ್ತಿ ರೆಹಾನಾ ಮತ್ತು ವಿಶ್ವ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಭಾರತದ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಆದರೆ, ದೆಹಲಿ ಪೊಲೀಸರು ರೈತ ಪ್ರತಿಭಟನೆ ಕುರಿತು ಜಾಗತಿಕ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ‘ಟೂಲ್ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದರು. ಇದೀಗ ಗ್ರೇಟಾ ಥನ್ಬರ್ಗ್ ಅವರನ್ನು ಬೆಂಬಲಿಸಿದ್ದ ಕಾರಣಕ್ಕೆ ಬೆಂಗಳೂರಿನ 21 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಬಂಧನವನ್ನು ವಿರೋಧಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ಇದು ಮಹಿಳೆಯರ ಮೇಲಿನ ದೌರ್ಜನ್ಯ" ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಿತ ಹೆಣ್ಣು ಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ. #DishaRavi ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ,
ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ: ನಾರಿ ಮುನಿದರೆ ಮಾರಿ" ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಟೂಲ್ಕಿಟ್ ಹಗರಣ; ದಿಶಾ ರವಿ ಬೆನ್ನಿಗೆ ಬಾಂಬೆ ಹೈಕೋರ್ಟ್ ವಕೀಲೆ ನಿಕಿತಾ ಜಾಕೋಬ್ ಬಂಧನಕ್ಕೆ ವಾರೆಂಟ್!
ಟೂಲ್ಕಿಟ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರು ವಿದ್ಯಾರ್ಥಿನಿ ದಿಶಾ ರವಿ ಅವರನ್ನು ಬಂಧಿಸಿರುವ ದೆಹಲಿ ಪೊಲೀಸರು, ಟೂಲ್ಕಿಟ್ ರಚಿಸುವಲ್ಲಿ ಭಾಗವಹಿಸಿದ್ದರು ಮತ್ತು ಪ್ರಮುಖ ಪಾತ್ರವಹಿಸಿದ್ದರು ಎಂಬ ಆರೋಪದ ಮೇಲೆ ಬಾಂಬೆ ಹೈಕೋರ್ಟ್ ವಕೀಲೆ ನಿಕಿತಾ ಜಾಕೋಬ್ ವಿರುದ್ಧವೂ ದೆಹಲಿ ಪೊಲೀಸರು ವಾರಂಟ್ ಹೊರಡಿಸಿದ್ದಾರೆ.
ದಿಶಾ ರವಿ ಅವರ ಬಂಧನವನ್ನು ವಿರೋಧಿಸಿ ಇಂದು ಅನೇಕ ಸಮಾಜ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ದಾಖಲಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Published by:
MAshok Kumar
First published:
February 15, 2021, 8:58 PM IST