ಮಡಿಕೇರಿ ಜನರ ಗಮನಸೆಳೆಯುತ್ತಿರುವ ದೀಕ್ಷಾ; ಸಮಾಜ ಸೇವೆಗಾಗಿ ರಾಜಕಾರಣಕ್ಕೆ ಇಳಿದ ತೃತೀಯ ಲಿಂಗಿ

ಕಳೆದ ಮೂರು ವರ್ಷಗಳ ಕಾಲ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿ, ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಆ ಮೂಲಕ ಸಾಕಷ್ಟು ಜನರ ವಿಶ್ವಾಸ ಗಳಿಸಿದ್ದಾರೆ ದೀಕ್ಷಾ

ದೀಕ್ಷಾ

ದೀಕ್ಷಾ

  • Share this:
ಕೊಡಗು (ಏ. 15): ತೃತೀಯ ಲಿಂಗಿಗಳು ಎಂದರೆ ಜನರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ. ಈ ದೃಷ್ಟಿಕೋನ ಬದಲಾಗಬೇಕೆಂಬ ಉದ್ದೇಶದಿಂದಲೇ ಮಂಗಳಮುಖಿ ದೀಕ್ಷಾ ಅವರು ಮಡಿಕೇರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಡಿಕೇರಿ ನಗರದ ಸಾಮಾನ್ಯ ಕ್ಷೇತ್ರವಾಗಿರುವ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರದ 21 ನೇ ವಾರ್ಡಿನಿಂದ ಸ್ಪರ್ಧಿಸಿದ್ದು, ಗುರುವಾರ ನಾಮಪತ್ರ ಸಲ್ಲಿಸಿದರು. ಸತೀಶ್ ಪೈ ಅವರು ದೀಕ್ಷಾ ಅವರ ಚುನಾವಣೆಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ಮಡಿಕೇರಿ ನಗರ ಸಭೆಗೆ ಆಗಮಿಸಿದ ದೀಕ್ಷಾ ಅವರು ಎಲ್ಲಾ ದಾಖಲಾತಿಗಳೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಯಾವುದೇ ಪಕ್ಷಗಳು ಇವರಿಗೆ ಟಿಕೆಟ್ ನೀಡುವುದಕ್ಕೆ ಮುಂದೆ ಬಂದಿಲ್ಲ. ಹೀಗಾಗಿ ದೀಕ್ಷಾ ಸ್ವತಂತ್ರ ಅಭ್ಯರ್ಥಿಯಾಗಿಯೇ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ತಾವು ಭೇಟಿಯಾಗುತ್ತಿರುವ ಮತದಾರರಲ್ಲಿ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡುತಿದ್ದಾರೆ.

ಈ ಸಂದರ್ಭ ಮಾತನಾಡಿದ ದೀಕ್ಷಾ ಅವರು ಕೊಡಗು ಜಿಲ್ಲೆಯ ಚುನಾವಣಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಂಗಳಮುಖಿ ಒಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿರುವುದು. ಇದುವರೆಗೆ ಮಂಗಳ ಮುಖಿಯರೆಂದರೆ, ಕೇವಲ ಭಿಕ್ಷೆ ಬೇಡಿಕೊಂಡು ಜೀವನ ಮಾಡೋದು, ಇಲ್ಲವೇ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುವವರು ಎನ್ನುವ ತಪ್ಪು ಮನೋಭಾವನೆ ಜನರಲ್ಲಿ ಇದೆ. ಆದರೆ ನಮಗೂ ಒಂದು ಸ್ವಾಭಿಮಾನದ ಬದುಕು ನಡೆಸಲು ಅವಕಾಶವಿದೆ ಎನ್ನೋದನ್ನು ತೋರಿಸಬೇಕಾಗಿದೆ ಎನ್ನುತ್ತಾರೆ ಚುನಾವಣೆಗೆ ಸ್ವರ್ಧಿಸಿರುವ ಅಭ್ಯರ್ಥಿ ದೀಕ್ಷಾ.

ಇದನ್ನು ಓದಿ: ಭಕ್ತಿಗೆ ಧರ್ಮದ ಹಂಗಿಲ್ಲ; ಕಾಳಿಕಾಂಬೆ ಸ್ತುತಿಸಿ ಹಿಂದೂಗಳ ಹೃದಯ ಗೆದ್ದ ಮುಸ್ಲಿಂ ಯುವಕ

ಇನ್ನು ನನ್ನನ್ನು ಮತದಾರರು ಗೆಲ್ಲಿಸಿದರೆ, ಸರ್ಕಾರದಿಂದ  ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ದೀಕ್ಷಾ ಇದ್ದಕ್ಕಿದ್ದಂತೆ ಚುನಾವಣೆಗೆ ಸ್ಪರ್ಧಿಸಿದ್ದಲ್ಲ. ಬದಲಾಗಿ ಕಳೆದ ಮೂರು ವರ್ಷಗಳ ಕಾಲ  ಇದೇ ವಾರ್ಡಿನಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದಾರೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಆ ಮೂಲಕ ಸಾಕಷ್ಟು ಜನರ ವಿಶ್ವಾಸ ಗಳಿಸಿದ್ದೇನೆ. ಜೊತೆಗೆ ಕಳೆದ ಒಂದು ವರ್ಷದಿಂದ ಸ್ವಸಹಾಯ ಸಂಘಗಳಲ್ಲೂ ಕೆಲಸ ಮಾಡಿ ಗುರತ್ತಿಸಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಜನ ಪರಿಚಯವಿದ್ದು, ಮತದಾರರು ನನಗೆ ಮತ ನೀಡಿ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ  ಎನ್ನುತ್ತಾರೆ.

ನನ್ನನ್ನು ಗುರುತಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಸತೀಶ್ ಪೈ ಅವರು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಜೊತೆಗೆ ಚುನಾವಣೆಗೆ ಬೇಕಾಗಿರುವ ಹಣಕಾಸಿನ ನೆರವನ್ನು ನೀಡಿದ್ದಾರೆ ಎಂದಿದ್ದಾರೆ. ಇನ್ನು ದೀಕ್ಷಾ ಅವರಿಗೆ ಬೆಂಬಲವಾಗಿ ನಿಂತಿರುವ ಸತೀಶ್ ಪೈ ಅವರು ಮಂಗಳ ಮುಖಿಯರೆಂದರೆ ಈ ಸಮಾಜದಲ್ಲಿ ಅವರನ್ನು ಕೀಳಾಗಿಯೇ ನೋಡುವವರು ಜಾಸ್ತಿ. ಆದರೆ ತುಳಿತಕ್ಕೆ ಒಳಗಾದವರು ಸಮಾಜದಲ್ಲಿ ಬೆಳೆದು ಸ್ವಾಲಂಬಿಗಳಾಗಬೇಕೆಂಬ ಮಹತ್ವಕಾಂಕ್ಷೆ ನನ್ನದು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿರುವ ದೀಕ್ಷಾ ಅವರಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದೇನೆ ಎನ್ನುತ್ತಾರೆ ಸತೀಶ್ ಪೈ. ಒಟ್ಟಿನಲ್ಲಿ ನಾನು ಕೂಡ ಇತರರಂತೆ ರಾಜಕಾರಣದ ಮೂಲಕ ಬೆಳೆದು ಜನರ ಸೇವೆಯನ್ನು ಮಾಡುತ್ತೇನೆ ಎಂದು ಸ್ಪರ್ಧಿಸಿರುವ ದೀಕ್ಷಾ ಅವರಿಗೆ 21 ನೇ ವಾರ್ಡಿನ ಮತದಾರರು ಗೆಲ್ಲಿಸುತ್ತಾರೆಯೆ ಕಾದು ನೋಡಬೇಕಾಗಿದೆ.
Published by:Seema R
First published: