news18-kannada Updated:February 23, 2021, 7:24 PM IST
ತರಹೇವಾರಿ ಬೀಡಾಗಳು.
ಊಟ ಆದ್ಮೇಲೆ ತಿನ್ನೋ ಪಾನ್ ಬೀಡಾ ನಿಮಗಿಷ್ಟವಾ?ಅದೆಷ್ಟು ವೆರೈಟಿ ಪಾನ್ ಗಳನ್ನ ಸವಿಯಬಹುದು ಎನ್ನುವ ಅಂದಾಜು ನಿಮಗಿದೆಯಾ? ಪಾನ್ ಅಂದ್ರೆ ಸಾದಾ ಪಾನ್, ಗುಲ್ಕನ್ ಹಾಕಿರೋ ಸ್ವೀಟ್ ಬೀಡಾ, ಜರ್ದಾ ಇಂಥಾ ಒಂದೈದಾರು ವೆರೈಟಿ ಪರಿಚಯ ಇರ್ಬಹುದು.. ಆದ್ರೆ ಇಲ್ಲೊಂದು ಕಡೆ ಬರೋಬ್ಬರಿ 150ಕ್ಕೂ ಹೆಚ್ಚು ವೆರೈಟಿ ಪಾನ್ ಗಳ ದೊಡ್ಡ ಭಂಡಾರವೇ ತೆರೆದಿದೆ... ಯಾವ್ದಪ್ಪಾ ಇದು ಅಂದ್ಕೊತಿದೀರಾ? ಇಲ್ಲಿದೆ ಫುಲ್ ಡೀಟೆಲ್ಸ್...!
ಪಿಸ್ತಾ ಪಾನ್, ಹೇಜಲ್ ನಟ್ ಪಾನ್, ಫೆರೆರೊ ರೋಶರ್ ಪಾನ್, ಆರೆಂಜ್ ಕೋಟೆಡ್ ಪಾನ್, ಮ್ಯಾಂಗೋ ಪಾನ್, ಲಿಚಿ ಪಾನ್...ಕಂಡು ಕೇಳರಿಯದ ಬಗೆಬಗೆಯ ಪಾನ್ ಗಳ ವಿಶಿಷ್ಟ ಮಳಿಗೆಯೊಂದು ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿ ಗಮನ ಸೆಳೆಯುತ್ತಿದೆ. 150ಕ್ಕೂ ಹೆಚ್ಚು ಬಗೆಯ ಪಾನ್ ಗಳು ಸಿಗೋ ಈ ಸ್ಥಳದ ಹೆಸರು ದಿ ಪಾನ್ ಸ್ಟುಡಿಯೋ.
ಅಂದ್ಹಾಗೆ ಇದೆಲ್ಲಾ ಶುರುವಾಗಿದ್ದು ಲಾಕ್ ಡೌನ್ ಸಂದರ್ಭದಲ್ಲಿ. ಮೂಲತಃ ಈವೆಂಟ್ ಆರ್ಗನೈಸರ್ ಆದ ಸಯ್ಯದ್ ಖಲೀಲ್ ಹೊಸದೇನಾದ್ರೂ ವ್ಯವಹಾರ ಆರಂಭಿಸಬಹುದಾ ಎಂದು ಯೋಚನೆ ಮಾಡ್ತಾ ಇದ್ರಂತೆ. ಆಗ ಅವ್ರಿಗೆ ಹೊಳೆದದ್ದೇ ಪಾನ್ ಸ್ಟುಡಿಯೋ. ವಿಶ್ವದ ಮೊಟ್ಟಮೊದಲ ಪಾನ್ ಸ್ಟುಡಿಯೋ ಇದು.
ಕಾಫಿ ಶಾಪ್ ಗಳಲ್ಲಿ ಆರಾಮಾಗಿ ಕುಳಿತು ಕಾಫಿ ಕುಡಿದು ಒಂದಷ್ಟು ಹೊತ್ತು ಹರಟಿ ಹೋಗೋ ರೀತಿಯಲ್ಲೇ ಇಲ್ಲಿ ಪಾನ್ ತಿನ್ನುತ್ತಾ, ಕಾಶ್ಮೀರಿ ಚಹಾ ಸವಿದು ಒಂದಷ್ಟು ಸಮಯ ಕಳೆಯೋಕೆ ಅವಕಾಶ ಇದೆ. ಜೊತೆಗೆ ಪಾನ್ ಗೆ ಸಂಬಂಧಿಸಿದ ನಾನಾ ವಸ್ತುಗಳೂ ಇಲ್ಲಿ ಮಾರಾಟಕ್ಕಿದೆ. 40 ರೂಪಾಯಿಯಿಂದ ಶುರುವಾಗೋ ಪಾನ್ ಗಳ ಬೆಲೆ 200 ರೂಪಾಯಿವರಗೆ ಇದೆ.
ಪ್ರತಿದಿನ ಹೊಸಾ ಫ್ಲೇವರ್ ಸೇರುತ್ತಲೇ ಇರೋ ಈ ವಿಭಿನ್ನ ವಹಿವಾಟು ಈಗಾಗಲೇ ಸಾಕಷ್ಟು ಜನರನ್ನು ಸೆಳೀತಾ ಇದೆ. ಅಷ್ಟೇ ಯಾಕೆ ಇತ್ತೀಚೆಗೆ ನಡೆದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮಗಳ ಮದುವೆಗೂ ಇವೇ ಪಾನ್ ಗಳು ಅತಿಥಿಗಳಿಗೆ ಅಚ್ಚರಿ ಉಂಟುಮಾಡಿದ್ದವು.
ಇದನ್ನೂ ಓದಿ: ಪತಂಜಲಿಯ ಕೊರೋನಿಲ್ಗೆ ಪ್ರಮಾಣ ಪತ್ರವಿಲ್ಲದೆ ಅನುಮತಿ ಇಲ್ಲ; ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಸ್ಪಷ್ಟನೆ
ಇವರ ಈ ವೆರೈಟಿ ಪಾನ್ ಗಳಿಗೆ ಜನ ಅದೆಷ್ಟು ಮಾರು ಹೋಗಿದ್ದಾರೆ ಅಂದ್ರೆ ಈಗೀಗಂತೂ ಕಾಫಿಗೆ ಹೋಗೋಣ್ವಾ ಅಂತ ಪ್ಲಾನ್ ಮಾಡೋ ರೀತಿಯಲ್ಲಿ ಪಾನ್ ತಿನ್ನೋಕೆ ಹೋಗೋಣ್ವಾ? ಅಂತ ಪ್ಲಾನ್ ಮಾಡ್ಕೊಂಡು ಇಲ್ಲಿಗೆ ಬರ್ತಿದ್ದಾರೆ. ಇನ್ನು ಒಂದೆರಡು ತಿಂಗಳಲ್ಲಿ ಪಾನ್ ಸ್ಟುಡಿಯೋ ಬೆಂಗಳೂರಿನ ಬೇರೆ ಭಾಗಗಳಿಗೂ ವ್ಯಾಪಿಸೋಕೆ ಸಜ್ಜಾಗಿದೆ.
ಜನವರಿಯಲ್ಲಿ ಆರಂಭವಾದ ಪಾನ್ ಸ್ಟುಡಿಯೋ ಈಗಾಗಲೇ ಎಷ್ಟು ಫೇಮಸ್ ಅಂದ್ರೆ ಅಷ್ಟೂ ವೆರೈಟಿಯ ಪಾನ್ ಗಳನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಮಾಡುತ್ತಾರೆ. ಮಧುಮೇಹಿಗಳಿಗೆ ಶುಗರ್ ಲೆಸ್ ಪಾನ್, ಹೆಲ್ತ್ ಕಾನ್ಶಿಯಸ್ ಇರುವವರಿಗೆ ಡ್ರೈ ಫ್ರೂಟ್ ಪಾನ್ ಹೀಗೆ ನಾನಾ ವೆರೈಟಿ ಪಾನ್ ಗಳು ಇಲ್ಲಿವೆ. ಪಾನ್ ಗಾಗಿ ಕೊಲ್ಲತ್ತಾದಿಂದ ವೀಳ್ಯಎಲೆ, ಕಾಶ್ಮೀರದಿಂದ ಕೇಸರಿ, ಮಹಾರಾಷ್ಟ್ರದಿಂದ ಮಾವು ತರಿಸುತ್ತಾರೆ. ಈ ವಿಭಿನ್ನ ರುಚಿಗೆ ಬೆಂಗಳೂರಿನ ಮಂದಿ ಮಾರುಹೋಗಿದ್ದಾರೆ.
Published by:
MAshok Kumar
First published:
February 23, 2021, 7:24 PM IST