• Home
  • »
  • News
  • »
  • state
  • »
  • ವಿವಿಧ-ವಿಶಿಷ್ಟ ಭತ್ತದ ಸಂರಕ್ಷಣೆಗೆ ಪಣತೊಟ್ಟ ಕುಟುಂಬ; ಬರೋಬ್ಬರಿ 154 ತಳಿಗಳಿವೆ ಇವರ ಗದ್ದೆಯಲ್ಲಿ

ವಿವಿಧ-ವಿಶಿಷ್ಟ ಭತ್ತದ ಸಂರಕ್ಷಣೆಗೆ ಪಣತೊಟ್ಟ ಕುಟುಂಬ; ಬರೋಬ್ಬರಿ 154 ತಳಿಗಳಿವೆ ಇವರ ಗದ್ದೆಯಲ್ಲಿ

ಭತ್ತದ ತಳಿ ಸಂರಕ್ಷಕ ದೇವರಾಯ

ಭತ್ತದ ತಳಿ ಸಂರಕ್ಷಕ ದೇವರಾಯ

ಕುಟುಂಬದ ಈ ಸಾಧನೆ ಗಮನಿಸಿದ ಸರ್ಕಾರ, ದೇವರಾಯರಿಗೆ  ರಾಷ್ಟ್ರಪತಿ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದೆ. 

  • Share this:

ಕೃಷಿಯಲ್ಲಿಯೂ ಈಗ ಲಾಭಾ ನೋಡಲು ಮುಂದಾಗಿರುವ ಅನೇಕರ ರೈತರು ವಾಣಿಜ್ಯಬೆಳೆಗಳತ್ತ ಮುಖಮಾಡುತ್ತಿದ್ದಾರೆ. ಇದೇ ಕಾರಣದಿಂದ ಇಂದು ಭತ್ತದ ಕೃಷಿ  ಹಲವು ಕಾರಣಗಳಿಂದಾಗ ಅನೇಕ ರೈತರಿಂದ ದೂರವಾಗುತ್ತಿದೆ. ಅನ್ನದ ಬಟ್ಟಲುಗಳಂತಿದ್ದ ಗದ್ದೆಗಳು ಇಂದು ವಾಣಿಜ್ಯ ಬೆಳೆಗಳತ್ತ ವಾಲುತ್ತಿದೆ. ಇದು ಆಹಾರ ಪದಾರ್ಥಗಳ ಉತ್ಪಾದನೆಯ ಮೇಲೂ ಭಾರೀ ಪರಿಣಾಮವನ್ನು ಬೀರುತ್ತಿದೆ. ಆದರೆ, ಇಲ್ಲೊಂದು  ಕುಟುಂಬ ಶತಮಾನಗಳಿಂದ ಭತ್ತದ ಕೃಷಿಯನ್ನೇ ತನ್ನ ಮೂಲಾಧಾರವನ್ನಾಗಿ ನೆಚ್ಚಿಕೊಂಡು ಬಂದಿದೆ. ಕೇವಲ ದೇಶಿ ತಳಿಗಳನ್ನು ಮಾತ್ರವಲ್ಲದೇ, ವಿದೇಶದ ನೂರಕ್ಕೂ ಮಿಕ್ಕಿದ ಭತ್ತದ ತಳಿಗಳನ್ನು ತಮ್ಮ ಗದ್ದೆಗಳಲ್ಲಿ ಬೆಳೆಯುವ ಮೂಲಕ ಈ ಕುಟುಂಬ ತಳಿಯ ಸಂರಕ್ಷಣೆಯ ಜೊತೆಗೆ ಅನ್ನದ ಉಳಿವಿಗಾಗಿಯೂ ನಿರಂತರ ಶ್ರಮ ವಹಿಸುತ್ತಿದೆ.


ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಕುಕ್ಕಾವಿನ ನಿವಾಸಿ ದೇವರಾಯರ ಕುಟುಂಬ ಭತ್ತದ ಕೃಷಿಗೆ ಹೆಸರುವಾಸಿಯಾಗಿದೆ. ಭತ್ತದ ಕೃಷಿಯ ಬಗ್ಗೆ ಅಗಾಧ ಅನುಭವವನ್ನು ಹೊಂದಿರುವ ದೇವರಾಯರು ಇದೀಗ ತನ್ನ ಕುಟುಂಬದ ಇತರ ಸದಸ್ಯರನ್ನೂ ತರಹೇವಾರಿ ಭತ್ತ ಬೆಳೆಯವತ್ತ ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ. ಈ ಕುಟುಂಬ ಕಳೆದ ಹಲವು ವರ್ಷಗಳಿಂದ ಭತ್ತದ ಬೆಳೆಯನ್ನೇ ತನ್ನ ಜೀವನಾಧಾರಾವಾಗಿ ಮಾಡಿಕೊಂಡಿದೆ. ಇದನ್ನು ಹವ್ಯಾಸ ಹಾಗೂ ಸಂಶೋಧನೆಯ ಮೂಲಧಾತುವನ್ನಾಗಿ ನೆಚ್ಚಿಕೊಂಡು ಬಂದಿರುವ ಕಾರಣ ಹಲವು ವಿಭಿನ್ನ ತಳಿಗಳನ್ನು ಇವರ ಗದ್ದೆಗಳಲ್ಲಿ ಕಾಣಬಹುದು.


ಕೇವಲ ಒಂದು ತಳಿಯ ಭತ್ತ ಬೆಳೆದು ಅನ್ನ ತಿಂದರೆ ಸಾಲದು. ವಿವಿಧ ತಳಿಗಳಲ್ಲಿಯೂ ವಿವಿಧ ರೀತಿಯ ಪೋಷಕಾಂಶಗಳು ಇರುತ್ತವೆ. ಜೊತೆಗೆ  ವೈಶಿಷ್ಟ್ಯವಾದ ಹಾಗೂ ವಿಭಿನ್ನವಾದ ಭತ್ತದ ರುಚಿ ಕಾಣಬೇಕು ಎಂಬುದು ದೇವರಾಯರ ಮಾತು.  ಜೊತೆಗೆ ಈ ರೀತಿಯ ಸಾಂಪ್ರದಾಯಿಕ ಕೃಷಿಯನ್ನು ಪ್ರೇರೇಪಿಸುವುದು ಈ ಕುಟುಂಬದ ಮುಖ್ಯ ಧ್ಯೇಯವೂ ಆಗಿದೆ ಎನ್ನುತ್ತಾರೆ.


ಸಾಂಪ್ರಾದಾಯಿಕ ಕೃಷಿ ಜೊತೆ ಪಾರಂಪರಿಕ ತಳಿಗಳ ಸಂರಕ್ಷಣೆಗೆ ಆಸಕ್ತಿ ಜೊತೆಗೆ ಸಾಕಷ್ಟು ಪರಿಶ್ರಮ ಕೂಡ ಅವಶ್ಯಕ. ಇದಕ್ಕಾಗಿ ಕಳೆದ ಏಳು ದಶಕಗಳಿಂದ ಈ ಕಾಯಕಕ್ಕೆ ದೇವರಾಯರ ಕುಟುಂಬ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಈ ಮೂಲಕ ಮರೆಯಾದ ಅನೇಕ ತಳಿಯ ಭತ್ತದ ಸಂರಕ್ಷಣೆಯ ಜವಾಬ್ದಾರಿಯ ಹೊಣೆಯನ್ನು ಹೊತ್ತಿದ್ದಾರೆ.


Different types of  paddy breeds forming in dakshina kannada


ವರ್ಷದಲ್ಲಿ ಎರಡು ಬೆಳೆಯಂತೆ ದೇವರಾಯರ ಕುಟುಂಬ ತಮ್ಮ ಐದು ಎಕರೆ ಗದ್ದೆಯಲ್ಲಿ 154 ತಳಿಯ ಭತ್ತಗಳಲ್ಲಿ ಬೆಳೆಸುತ್ತಿದ್ದಾರೆ. ಕರಾವಳಿ ಪ್ರದೇಶದ ಮೂಲ ತಳಿಗಳ ಜೊತೆ ಜೊತೆಗೆ  ಪಶ್ಚಿಮ ಬಂಗಾಳ, ,ಆಂಧ್ರ, ಕೇರಳ, ಒರಿಸ್ಸಾ, ಈಶಾನ್ಯ ಭಾರತ ಹಾಗೂ ವಿದೇಶಿ ತಳಿಗಳೂ ಇವರ ಭತ್ತದ ಗದ್ದೆಯಲ್ಲಿ ಕಾಣಬಹುದು.


ದಶಕಗಳ ಹಿಂದೆ ತಮ್ಮ 25 ಎಕರೆ ಭೂ ಪ್ರದೇಶದಲ್ಲಿ ವರ್ಷದಲ್ಲಿ ನಾಲ್ಕು ಬೆಳೆಗಳನ್ನು ಬೆಳೆಯುತ್ತಿದ್ದ ಈ ಕುಟುಂಬ ಇದೀಗ 6 ಎಕರೆ ಪ್ರದೇಶದಲ್ಲಿ ವರ್ಷಕ್ಕೆ  ಎರಡು ಕೂಯ್ಲು ಮಾಡುತ್ತಾರೆ.  ಮೊದಲ ಕೊಯ್ಲಿನಲ್ಲಿ  ಮೂಲತಳಿಯಾದ ಕಾಯಿಮೆ, ರಾಜ ಕಾಯಿಮೆ, ಗಂಧಸಾಲೆ, ಜೀರಿಗೆ ಸಣ್ಣ, ಕುಂದಪುಲ್ಲನ್, ಕುರುವ ನವರ ಸೇರಿದಂತೆ 120 ತಳಿ ಬೆಳೆಯುತ್ತಾರೆ.


ಇನ್ನು ಸುಗ್ಗಿ ಬೆಳೆಯಲ್ಲಿ  ಸುಗ್ಗಿ ಕಾಯಿಮೆ, ಕುಟ್ಟಿ ಕಾಯಿಮೆ, ಅತಿಕರೆಯ, ಮಸ್ಕತಿ, ಚಿನ್ನಪೊನ್ನ ಸೇರಿದಂತೆ 40 ವಿಧದ ತಳಿಗಳನ್ನು ಬೆಳೆಯುತ್ತಾರೆ. ಸಂಪೂರ್ಣ ಸಾಂಪ್ರದಾಯಿಕ ಸಾವಯವದ ಮೂಲಕ ಈ ತಳಿಗಳನ್ನು ಬೆಳೆಯಲಾಗುತ್ತಿದ್ದು, ಇದರ ಹಿಂದೆ ಇವರ ಶ್ರಮ ಅಪಾರ.


Different types of  paddy breeds forming in dakshina kannada
ಭತ್ತದ ತಳಿ


ಇನ್ನು ಈ ಕುಟುಂಬದ ಈ ಸಾಧನೆ ಗಮನಿಸಿದ ಸರ್ಕಾರ, ದೇವರಾಯರಿಗೆ  ರಾಷ್ಟ್ರಪತಿ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದೆ.


ವಿಶೇಷವೆಂದತೆ ಈ ಕುಟುಂಬ ಈ  ತರಹೇವಾರಿ ತಳಿಗಳ ಅಕ್ಕಿಗಳನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿಲ್ಲ. ಕಾರಣ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದಿರುವುದು ಎಂಬ ಬೇಸರ ಇವರಲ್ಲಿದೆ. ಆದರೆ, ಇವರ ಪರಿಶ್ರಮ ಗಮನಿಸಿದ ಅನೇಕರು ವಿಭಿನ್ನ ರೀತಿಯ ಅಕ್ಕಿಕೊಳ್ಳಲು ಇವರನ್ನು ಅರಸಿ ಬರುತ್ತಾರೆ. ಅವರಿಗೆ ಮಾತ್ರ ವ್ಯಾಪಾರ ಮಾಡುತ್ತಾರೆ.


ವಿಶಿಷ್ಟ ತಳಿಗಳ ಸಂರಕ್ಷಣೆಗೆ ಬದ್ಧರಾಗಿರುವ ಈ ಕುಟುಂಬದ ಇಚ್ಛೆ ಇಡೀ ದೇಶವನ್ನು ಅನ್ನದ ಬಟ್ಟಲಾಗಿಸಬೇಕು ಎಂಬುದು. ಈ ನಿಟ್ಟಿನಲ್ಲಿ ಸರ್ಕಾರ ಕೂಡ ರೈತರಿಗೆ ಉತ್ತಮ ಬೆಲೆ ನೀಡುವ ಮೂಲಕ  ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ದೇವರಾಯರು.

Published by:Seema R
First published: