ಧಾರವಾಡ ಮತಕ್ಷೇತ್ರ: ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಾಂಗ್ರೆಸ್ ಯತ್ನ; ಲಿಂಗಾಯತ ಮತಗಳೇ ನಿರ್ಣಾಯಕವಾಗುವ ಸಾಧ್ಯತೆ

ಪ್ರಲ್ಹಾದ್ ಜೋಶಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ನಾಲ್ಕನೇ ಬಾರಿಗೆ ಗೆಲ್ಲಲು ಎಲ್ಲ ರೀತಿಯ ರಣತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಪ್ರತಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಬ್ರಾಹ್ಮಣ ಸಮಾಜದ ಪ್ರಲ್ಹಾದ್ ಜೋಶಿ ಮತ್ತು ಲಿಂಗಾಯತ ಸಮಾಜದ ವಿನಯ್ ಕುಲಕರ್ಣಿ ತಮ್ಮದೇ ಆದ ಜಾತಿ ಲೆಕ್ಕಾಚಾರಗಳನ್ನು ಇಟ್ಟುಕೊಂಡು ಚುನಾವಣಾ ಗೆಲುವಿಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

G Hareeshkumar | news18
Updated:April 16, 2019, 3:49 PM IST
ಧಾರವಾಡ ಮತಕ್ಷೇತ್ರ: ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಾಂಗ್ರೆಸ್ ಯತ್ನ; ಲಿಂಗಾಯತ ಮತಗಳೇ ನಿರ್ಣಾಯಕವಾಗುವ ಸಾಧ್ಯತೆ
ಪ್ರಲ್ಹಾದ್​ ಜೋಶಿ ಹಾಗೂ ವಿನಯ್​​ ಕುಲಕರ್ಣಿ
G Hareeshkumar | news18
Updated: April 16, 2019, 3:49 PM IST
ಹುಬ್ಬಳ್ಳಿ(ಏ. 16) : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರ ಮತಗಳನ್ನು ಸೆಳೆಯಲು ಪೈಪೋಟಿ ಶುರುವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಲಿಂಗಾಯತರ ಮನವೊಲಿಕೆಗೆ ಪರಸ್ಪರ ಹಗ್ಗ ಜಗ್ಗಾಟದಲ್ಲಿ ತೊಡಗಿದ್ದಾರೆ. ನಿರ್ಣಾಯಕರಾಗಿರುವ ಲಿಂಗಾಯತರನ್ನು ಬುಟ್ಟಿಗೆ ಹಾಕಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ ಸದ್ಯಕ್ಕೆ ಬಿಜೆಪಿಯ ಭದ್ರಕೋಟೆಯಾಗಿದೆ. ಕಳೆದ ಆರು ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿ ಗೆಲುವು ಸಾಧಿಸಿದೆ. ಪ್ರಲ್ಹಾದ್ ಜೋಶಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ನಾಲ್ಕನೇ ಬಾರಿಗೆ ಗೆಲ್ಲಲು ಎಲ್ಲ ರೀತಿಯ ರಣತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಪ್ರತಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಬ್ರಾಹ್ಮಣ ಸಮಾಜದ ಪ್ರಲ್ಹಾದ್ ಜೋಶಿ ಮತ್ತು ಲಿಂಗಾಯತ ಸಮಾಜದ ವಿನಯ್ ಕುಲಕರ್ಣಿ ತಮ್ಮದೇ ಆದ ಜಾತಿ ಲೆಕ್ಕಾಚಾರಗಳನ್ನು ಇಟ್ಟುಕೊಂಡು ಚುನಾವಣಾ ಗೆಲುವಿಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಮತದಾರರ ಸಂಖ್ಯೆ  16,88,067

ಪುರುಷ ಮತದಾರರು- 8,58,370, ಮಹಿಳಾ ಮತದಾರರು- 8,29,697

ಜಾತಿವಾರು ಮತದಾರರು 

ಲಿಂಗಾಯತರು- 5,75,000, ಪರಿಶಿಷ್ಟ ಜಾತಿ- 1,84,000, ಪರಿಶಿಷ್ಟ ಪಂಗಡ- 72,000, ಮುಸ್ಲೀಂ- 2,55,000, ಕ್ರಿಶ್ಚಿಯನ್‌- 42,000, ಕುರುಬರು- 1,68,000

ಮರಾಠರು 1,22,000; ಬ್ರಾಹ್ಮಣ- 76,000; ಕ್ಷತ್ರೀಯರು- 45000
Loading...

ಜೈನರು 14,000;  ಒಕ್ಕಲಿಗರು- 13,000; ಈಡಿಗರು- 12,000

ಕಳೆದ ಬಾರಿಯ ಚುನಾವಣೆಯಲ್ಲಿ ಬಹುತೇಕ ಲಿಂಗಾಯತರು ಬಿಜೆಪಿ ಪರವಾಗಿ ನಿಂತಿದ್ದರು. ಮರಾಠರು, ಕ್ಷತ್ರಿಯರು, ಜೈನರು, ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತಹಾಕಿದ್ದರು. ಹೀಗಾಗಿ ಬಿಜೆಪಿ ದೊಡ್ಡಮಟ್ಟದ ಗೆಲುವು ಸಾಧಿಸಲು ಸಾಧ್ಯವಾಗಿತ್ತು.

ಹಿಂದುಳಿದ ವರ್ಗದವರು ಕಾಂಗ್ರೆಸ್​ನತ್ತ ಒಲವು: 

ಮುಸ್ಲಿಮರು, ಕ್ರಿಶ್ಚಿಯನ್ನರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಹಿಂದುಳಿದ ವರ್ಗಗಳ ಬಹುತೇಕ ಮತದಾರರು ಕಾಂಗ್ರೆಸ್‌ನತ್ತ ಒಲವು ಹೊಂದಿದ್ದಾರೆ. ಲಿಂಗಾಯತರು ಒಂದಷ್ಟು ಆಶೀರ್ವದಿಸಿದರೆ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿನ ಹಾದಿ ಸುಗಮವಾಗಲಿದೆ. ಹೀಗಾಗಿ ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಿಂದ ಹಿನ್ನಡೆ ಅನುಭವಿಸಿದ್ದ ವಿನಯ ಕುಲಕರ್ಣಿ ಈಗ ಎಚ್ಚೆತ್ತುಕೊಂಡಿದ್ದಾರೆ. ಹೋರಾಟವೀಗ ಅಪ್ರಸ್ತುತ, ವೀರಶೈವರು ಮತ್ತು ಲಿಂಗಾಯತರು ಒಂದೇ ಎನ್ನುತ್ತಿದ್ದಾರೆ. ಪಂಚಪೀಠಾಧೀಶರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಲಿಂಗಾಯತರು ತನ್ನನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

 ಲಿಂಗಾಯತ ಮತದಾರರ ಮನವೊಲಿಕೆಗೆ ಬಿಜೆಪಿ ಅಭ್ಯರ್ಥಿ ಪ್ರಯತ್ನ

ಧಾರವಾಡ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಲಿಂಗಾಯತ ಮತದಾರರ ಮನವೊಲಿಕೆಗೆ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿಯವರು ಕೂಡ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಪ್ರಭಾವಿ ಲಿಂಗಾಯತ ಮುಖಂಡರನ್ನು ಕ್ಷೇತ್ರಕ್ಕೆ ಕರೆಸಿ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಕ್ಷೇತ್ರಕ್ಕೆ ಆಗಮಿಸಿ ಪ್ರಲ್ಹಾದ್ ಜೋಶಿ ಪರ ಮತಯಾಚನೆ ಮಾಡಿದ್ದಾರೆ.

ಇದನ್ನೂ ಓದಿ :  ವಿಪಕ್ಷಗಳನ್ನು ಮುಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ: ಮಾರ್ಗರೇಟ್​​ ಆಳ್ವಾ

ಲಿಂಗಾಯತ ಸಮಾಜದ ಪ್ರಭಾವಿ ಮುಖಂಡರಾದ ಪ್ರಭಾಕರ್‌ ಕೋರೆ, ಜಗದೀಶ್ ಶೆಟ್ಟರ್, ಅರವಿಂದ್ ಬೆಲ್ಲದ್ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿಯ ಜಾತಿ ನೋಡಬೇಡಿ, ಅಭಿವೃದ್ಧಿ ಕೆಲಸಗಳನ್ನು ನೋಡಿ ಮತಹಾಕಿ. ರಾಷ್ಟ್ರದ ಭದ್ರತೆಗಾಗಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಲಿಂಗಾಯತ ಮತದಾರರು ತಮ್ಮೊಂದಿಗೆ ಇದ್ದಾರೆ ಎನ್ನುತ್ತಿದ್ದಾರೆ.

ಧಾರವಾಡ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಒಳಪಂಗಡಗಳಾದ ಪಂಚಮಸಾಲಿ, ಬಣಜಿಗ, ಗಾಣಿಗ, ಕೂಡುಒಕ್ಕಲಿಗ ಸೇರಿದಂತೆ ವೀರಶೈವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲ ಒಂದೇ ಪಕ್ಷಕ್ಕೆ ಅಂಟಿಕೊಂಡಿಲ್ಲ. ಹೀಗಾಗಿ ಅವರ ಮನವೊಲಿಸಲು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಜಟಾಪಟಿ ನಡೆಯುತ್ತಿದೆ.

ಇದನ್ನೂ ಓದಿ :    ತಾಕತ್ತಿದ್ದರೆ ರಾಹುಲ್​​ ಗಾಂಧಿ ಹೆಸರು ಹೇಳಿ ಗೆದ್ದು ತೋರಿಸಲಿ; ಕುಲಕರ್ಣಿಗೆ ಜೋಶಿ ಸವಾಲ್​​​

ಕಾಂಗ್ರೆಸ್‌ನವರು ಅಹಿಂದ ಮತಗಳ ಜೊತೆಗೆ ಲಿಂಗಾಯತ ಮತಗಳು ಕೈಹಿಡಿದರೆ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪ್ರಭಲರಾಗಿ ಕಂಡುಬರುತ್ತಿದ್ದಾರೆ. ಒಂದುವೇಳೆ ಲಿಂಗಾಯತರು ವಿನಯ ಕುಲಕರ್ಣಿ ಬಗ್ಗೆ ಒಲವು ತೋರಿಸಿದ್ರೆ ಕಾಂಗ್ರೆಸ್‌ ಗೆಲುವಿನ ಹಾದಿ ಸುಗಮವಾಗಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

(ವರದಿ-ಪರಶುರಾಮ್ ತಹಶೀಲ್ದಾರ್)

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...