ಹುಬ್ಬಳ್ಳಿ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿಯ ಭೈರಿದೇವರಕೊಪ್ಪದ (Byridevarakoppa, Hubballi) ದರ್ಗಾ ತೆರವು ಕಾರ್ಯ ಕೊನೆಗೂ ನಡೆದಿದೆ. ಹಜರತ್ ಸೈಯ್ಯದ್ ಮಹಮ್ಮೂದ್ ಶಾ ಖಾದ್ರಿ ದರ್ಗಾ (Hazrath Sayed Mahmood Shah Quadri Dargah) ತೆರವುಗೊಳಿಸವಲ್ಲಿ ಕೊನೆಗೂ ಧಾರವಾಡ (Dharwad) ಜಿಲ್ಲಾಡಳಿತ ಯಶಸ್ವಿಯಾಗಿದೆ. ಬುಧವಾರ ಬೆಳ್ಳಂ ಬೆಳಗ್ಗೆ ಆರಂಭಗೊಂಡ ಜೆಸಿಬಿಗಳ ಘರ್ಜನೆ ಸಂಜೆಯವರೆಗೂ ನಡೆಯಿತು. ಇದುವರೆಗೂ 13 ಧಾರ್ಮಿಕ ಕೇಂದ್ರಗಳನ್ನು (Religious Centre) ತೆರವುಗೊಳಿಸಲಾಗಿದೆ. ಉಳಿದ ಕೇಂದ್ರಗಳನ್ನೂ ತೆರವುಗೊಳಿಸಿ, ಬಿ.ಆರ್.ಟಿ.ಎಸ್. ಕಾರಿಡಾರ್ (BRTS Corridor Project) ಸುಲಲಿತಗೊಳಿಸಲಾಗುವುದು ಎಂದು ಡಿಸಿ ಗುರುದತ್ ಹೆಗಡೆ (DC Gurudat Hegde) ತಿಳಿಸಿದ್ದಾರೆ. ದರ್ಗಾ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಹುಬ್ಬಳ್ಳಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಜೆಸಿಬಿ ಗಳು ಘರ್ಜಿಸಿವೆ. ಬೈರಿದೇವರಕೊಪ್ಪ ಬಳಿಯ ಹಜರತ್ ಸೈಯದ್ ಮಹಮ್ಮೂದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ತಾರ್ಕಿಕ ಅಂತ್ಯ ಕಂಡಿದೆ.
ಮೌಲ್ವಿಗಳ ನೇತೃತ್ವದಲ್ಲಿ ಘೋರಿ ತೆರವು
ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದ ಡಿಸಿ ಗುರುದತ್ ಹೆಗಡೆ, ಪೊಲೀಸ್ ಆಯುಕ್ತ ಲಾಭೂ ರಾಮ್ ಮತ್ತಿತರರ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಒಂದು ಕಡೆ ದರ್ಗಾ ಕಟ್ಟಡದ ತೆರವು ಕಾರ್ಯ ನಡೆದಿದ್ದರೆ, ಮತ್ತೊಂದು ಕಡೆ ಮೌಲ್ವಿಗಳ ನೇತೃತ್ವದಲ್ಲಿ ದರ್ಗಾದಲ್ಲಿನ ಘೋರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ.
ಧಾರ್ಮಿಕ ಕಟ್ಟಡಗಳ ತೆರವಿಗೆ ಹೈಕೋರ್ಟ್ ಸೂಚನೆ
ಬಿಆರ್ಟಿಎಸ್ ಕಾರಿಡಾರ್ಗೆ ರಸ್ತೆ ಅಗಲೀಕರಣ ಕೈಗೊಂಡ ಸಂದರ್ಭದಲ್ಲಿ ಕೆಲ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವುಗೊಳಿಸಬೇಕಾಗುವ ಅನಿವಾರ್ಯತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ಧಾರ್ಮಿಕ ಕೇಂದ್ರ ತೆರವಿಗೆ ಜಿಲ್ಲಾಡಳಿತ ತೀರ್ಮಾನಿಸಿತ್ತು. ಇದಕ್ಕೆ ಹೈಕೋರ್ಟ್ ಸಹ ಹಸಿರು ನಿಶಾನೆ ತೋರಿತ್ತು.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದರ್ಗಾ ತೆರವು ಕಾರ್ಯ ನಡೆಯಿತು. ಆದರೆ ಇದಕ್ಕೆ ಕಾಂಗ್ರೆಸ್ ನಾಯಕರು, ಮುಸ್ಲಿಂ ಸಮಾಜದ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ನಿಂದ ವಿರೋಧ
ಚುನಾವಣೆ ಹತ್ತಿರ ಬಂದಿರೋದ್ರಿಂದ ಬಿಜೆಪಿ ದರ್ಗಾ ತೆರವಿನ ನಾಟಕ ಮಾಡುತ್ತಿದೆ. ರಸ್ತೆಗೆ ಅಡ್ಡವಾಗಿಲ್ಲವಾಗಿದ್ದರೂ ದುರುದ್ದೇಶದಿಂದ ತೆರವು ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್ ಪಾಟೀಲ್ ಕಿಡಿಕಾರಿದರು.
ಕೋರ್ಟ್ ಮೊರೆ ಹೋಗಿದ್ದ ದರ್ಗಾ ಸಮಿತಿ
ಈ ವೇಳೆ ಪ್ರತಿಕ್ರಿಯಿಸಿದ ಧಾರವಾಡ ಡಿಸಿ ಗುರುದತ್ ಹೆಗಡೆ, ಬಿಆರ್ಟಿಎಸ್ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅದರ ವಿರುದ್ಧ ದರ್ಗಾ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಆದರೆ ಹೈಕೋರ್ಟ್ ದರ್ಗಾ ತೆರವಿಗೆ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆ ನಡೆಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದ ಹಾಗೆ ತೆರವು ಕಾರ್ಯಾಚರಣೆ ಮಾಡಿದ್ದೇವೆ. ಅವರ ಧಾರ್ಮಿಕ ವಿಧಿ ವಿಧಾನ ಪೂರೈಸಿ ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ. ಎಲ್ಲರನ್ನು ಮನವೊಲಿಕೆ ಮಾಡಿ ತೆರವು ಕಾರ್ಯಾಚರಣೆ ಮಾಡ್ತಿದ್ದೇವೆ. ಬಿಆರ್ಟಿಎಸ್ ಯೋಜನೆ ವ್ಯಾಪ್ತಿಯಲ್ಲಿ ಇದುವರೆಗೆ 13 ಧಾರ್ಮಿಕ ಕೇಂದ್ರಗಳನ್ನು ತೆರೆಗೊಳಿಸಿದ್ದೇವೆ. ಇನ್ನೂ ಎರಡು - ಮೂರು ಧಾರ್ಮಿಕ ಕೇಂದ್ರಗಳ ತೆರವು ಬಾಕಿ ಇದೆ ಎಂದರು.
ಹಂತ ಹಂತವಾಗಿ ತೆರವು ಕಾರ್ಯಾಚರಣೆ
ಉಣಕಲ್ ಬಳಿಯ ದೇವಸ್ಥಾನ ಸೇರಿ ವಿವಿಧ ಕೇಂದ್ರಗಳನ್ನು ಹಂತ ಹಂತವಾಗಿ ತೆರೆವು ಮಾಡುತ್ತೇವೆ. ಸಂಚಾರ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ತೆರವು ಕಾರ್ಯ ಮಾಡ್ತೇವೆ. ನಾವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಹೈಕೋರ್ಟ್ ಸೂಚನೆಯಂತೆ ನಮ್ಮ ಕರ್ತವ್ಯವನ್ನು ಮಾಡ್ತಿದ್ದೇವೆ. ಹಂತ ಹಂತವಾಗಿ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡುತ್ತೇವೆ ಎಂದು ಡಿಸಿ ಗುರುದತ್ ಹೆಗಡೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Hubballi Dargah Row: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿಷೇಧಾಜ್ಞೆ; ದರ್ಗಾ ತೆರವಿಗೆ ಶಾಸಕರ ಖಂಡನೆ
ಮುನ್ನೆಚ್ಚರಿಕಾ ಕ್ರಮವಾಗಿ ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದರ್ಗಾ ತೆರವಿಗೆ ಬೆಳ್ಳಂ ಬೆಳಗ್ಗೆ ಜಿಲ್ಲಾಡಳಿತ ಮುಂದಾಗಿದ್ರೂ, ಘೋರಿ ತೆರವಿಗೂ ಮುನ್ನ ಮುಸ್ಲಿಂ ಧರ್ಮದ ವಿಧಿ ವಿಧಾನವನ್ನ ಪಾಲಿಸಲು ಐವರು ಮೌಲ್ವಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಇನ್ನು ದರ್ಗಾ ತೆರವು ಕಾರ್ಯಾಚರಣೆಗೂ ಹಲವು ವರ್ಷಗಳ ಮೊದಲೇ ಅದಕ್ಕೆ ಸೂಕ್ತ ಪರಿಹಾರದ ಮೊತ್ತ ಮತ್ತು ಜಾಗೆಯನ್ನ ಸರ್ಕಾರ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ