HOME » NEWS » State » DHARME GOWDA TO BE CREMATED BY EVENING 5PM AT HIS FARM HOUSE VCTV SNVS

ಕಡೂರಿನ ಸರಪನಹಳ್ಳಿಯ ತೋಟದ ಮನೆಯಲ್ಲಿ ಸಂಜೆ 5 ಕ್ಕೆ ಧರ್ಮೇಗೌಡರ ಅಂತ್ಯಕ್ರಿಯೆ

ಚಿಕ್ಕಮಗಳೂರಿನ ಕಡೂರು ತಾಲೂಕಿನ ಸರಪನಹಳ್ಳಿಯಲ್ಲಿರುವ ಅವರ ತೋಟದ ಮನೆಯಲ್ಲಿ ಸಂಜೆ 5ಗಂಟೆಯೊಳಗೆ ಧರ್ಮೇಗೌಡರ ಅಂತ್ಯಕ್ರಿಯೆ (Last Rites) ನಡೆಯಲಿದೆ. ಅದಕ್ಕೂ ಮುನ್ನ ಸಖರಾಯಪಟ್ಟಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

news18-kannada
Updated:December 29, 2020, 11:25 AM IST
ಕಡೂರಿನ ಸರಪನಹಳ್ಳಿಯ ತೋಟದ ಮನೆಯಲ್ಲಿ ಸಂಜೆ 5 ಕ್ಕೆ ಧರ್ಮೇಗೌಡರ ಅಂತ್ಯಕ್ರಿಯೆ
ಧರ್ಮೇಗೌಡ
  • Share this:
ಚಿಕ್ಕಮಗಳೂರು(ಡಿ. 29): ನಿನ್ನೆ ಸಂಜೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ಅಂತ್ಯಕ್ರಿಯೆಯನ್ನು ಸಂಜೆ 5 ಗಂಟೆಯೊಳಗೆ ಮುಗಿಸಲು ಅವರ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಕಡೂರು ತಾಲೂಕಿನ ಸರಪನಹಳ್ಳಿಯಲ್ಲಿರುವ ಅವರ ನೆಚ್ಚಿನ ತೋಟದ ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ಮುನ್ನ ಸಖರಾಯಪಟ್ಟಣದ ಜೂನಿಯರ್ ಕಾಲೇಜಿನ ಆವರಣದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2:30ಕ್ಕೆ ಅವರ ಮೃತದೇಹವನ್ನು ಕಾಲೇಜು ಆವರಣಕ್ಕೆ ಕರೆಯಲಾಗುತ್ತದೆ ಎಂದು ಧರ್ಮೇಗೌಡ ಅವರ ಕಿರಿಯ ಸಹೋದರ ಎಸ್ ಎಲ್ ಬೋಜೇಗೌಡ ತಿಳಿಸಿದ್ದಾರೆ.

ಸಖರಾಯಪಟ್ಟಣದಲ್ಲಿ ಅಂತಿಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ವಿಐಪಿಗಳು ಮತ್ತು ಸಾರ್ವಜನಿಕರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಸಿಎಂ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರ ಕಾರ್ಯಕ್ಕೆ ಆಗಮಿಸುತ್ತಾರೆ. ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಹಾಸನ, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂತ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳುತ್ತಿದ್ದೇವೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ಗಾರ್ಡ್ ಆಫ್ ಆನರ್ ಗೌರವ ನಮನ ಸಲ್ಲಿಸಲಾಗುವುದು ಎಂದು ಚಿಕ್ಕಮಗಳೂರಿನ ಎಸ್​ಪಿ ಅಕ್ಷಯ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಮ್ಮಂಥ ರಾಜಕಾರಣಿಗಳ ತೆವಲುಗಳಿಗೆ ಧರ್ಮೇಗೌಡರು ಬಲಿ: ಕುಮಾರಸ್ವಾಮಿ ವಿಷಾದ

ಇದೇ ವೇಳೆ, ಧರ್ಮೇಗೌಡರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸರ್ಕರದಿಂದ ಅಧಿಸೂಚನೆ ಹೊರಟಿದೆ. ಇನ್ನು, ಸಖರಾಯಪಟ್ಟಣದಲ್ಲಿರುವ ಧರ್ಮೇಗೌಡರ ಎವರ್​ಗ್ರೀನ್ ಫಾರಂ ಮನೆಯಲ್ಲಿ ನೀರವ ಮೌನ ಆವರಿಸಿದೆ. ಅವರ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಮನೆಯ ಆವರಣಕ್ಕೆ ಆಗಮಿಸಿ ದುಃಖಪಡುತ್ತಿದ್ದಾರೆ. ತಮ್ಮ ನೆಚ್ಚಿನ ಜನನಾಯಕನ ನಿಧನದ ಹಿನ್ನೆಲೆಯಲ್ಲಿ ಸಖರಾಯಪಟ್ಟಣದ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತರಾಗಿ ಬಾಗಿಲು ಬಂದ್ ಮಾಡಿವೆ.

ವರದಿ: ವೀರೇಶ್ ಎಚ್.ಜಿ. 
Published by: Vijayasarthy SN
First published: December 29, 2020, 11:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories