ದಕ್ಷಿಣ ಕನ್ನಡ(ಜೂ.08): ಇಂದಿನಿಂದ ರಾಜ್ಯಾದ್ಯಂತ ಧಾರ್ಮಿಕ ಕ್ಷೇತ್ರಗಳು ಓಪನ್ ಹಿನ್ನೆಲೆಯಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಸಾವಿರಾರು ಮಂದಿ ಭಕ್ತರ ದಂಡು ಹರಿದು ಬಂದಿದೆ. ಎರಡು ತಿಂಗಳ ಬಳಿಕ ಭಕ್ತರಿಗೆ ಮಂಜುನಾಥ ಸ್ವಾಮಿ ದರ್ಶನ ನೀಡಿದ್ದಾರೆ. ಬೆಳಗ್ಗೆ 6.30ರಿಂದ ಮಂಜುನಾಥ ಸ್ವಾಮಿ ದರ್ಶನ ಆರಂಭವಾಗಿದ್ದು,ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ.
ದೇವಸ್ಥಾನ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಝೇಷನ್ ಮಾಡಲಾಗಿದೆ. ಕ್ಷೇತ್ರದ ಸಿಬ್ಬಂದಿ ಮತ್ತು ಅರ್ಚಕರ ಥರ್ಮಲ್ ಸ್ಕ್ಯಾನ್ ಕಡ್ಡಾಯವಾಗಿದ್ದು,ಕೈಗಳಿಗೆ ಸ್ಯಾನಿಟೈಝರ್ ಮಾಡಿ ಅರ್ಚಕರು,ಸಿಬ್ಬಂದಿ ದೇವಸ್ಥಾನ ಪ್ರವೇಶ ಮಾಡಿದ್ದಾರೆ. ಕ್ಷೇತ್ರದ ಭದ್ರತಾ ಸಿಬ್ಬಂದಿ ಸೇರಿ ಎಲ್ಲರಿಗೂ ಮಾಸ್ಕ್, ಗ್ಲೌಸ್ ಮತ್ತು ಫೇಸ್ ಶೀಲ್ಡ್ ಕಡ್ಡಾಯವಾಗಿದೆ. ಜ್ವರ, ಕೆಮ್ಮು ಮುಂತಾದ ಅನಾರೋಗ್ಯ ಸ್ಥಿತಿಯಲ್ಲಿ ದರ್ಶನಕ್ಕೆ ಅವಕಾಶ ನೀಡಿಲ್ಲ. ಜೊತೆಗೆ ಕ್ಷೇತ್ರದಲ್ಲಿ ತೀರ್ಥ ಪ್ರಸಾದದ ಬದಲು ಗಂಧ ಪ್ರಸಾದವಷ್ಟೇ ನೀಡಲು ನಿರ್ಧಾರ ಮಾಡಲಾಗಿದೆ.
ಇಂದು ಸಾವಿರಾರು ಭಕ್ತರ ನಡುವೆ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಲು ಡಾ.ಡಿ.ವೀರೇಂದ್ರ ಹೆಗ್ಗಡೆ ಕ್ಷೇತ್ರಕ್ಕೆ ಆಗಮಿಸಿದರು. ಸುಮಾರು8 ಗಂಟೆಗೆ ಮನೆಯಿಂದ ದೇವಸ್ಥಾನಕ್ಕೆ ಆಗಮಿಸಿದ ಧರ್ಮಾಧಿಕಾರಿಗಳು, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸೇವೆಗಳು ಇಂದಿನಿಂದ ಆರಂಭವಾಗಿದೆ. ಹಲವು ತಿಂಗಳ ಬಳಿಕ ಧರ್ಮಸ್ಥಳದಲ್ಲಿ ಭಕ್ತರು ಮುಡಿ ಹರಕೆ ಒಪ್ಪಿಸಿದ್ದಾರೆ. ಸಾವಿರಾರು ಭಕ್ತರಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮುಡಿ ಹರಕೆ ಸಲ್ಲಿಕೆಯಾಗಿದೆ. ಶ್ರೀ ಮುಡಿ ಭವನದಲ್ಲಿ ಸ್ಯಾನಿಟೈಝರ್ ಬಳಸಿ ಮಾಸ್ಕ್ ಧರಿಸಿ ಕ್ಷೌರಿಕರು ಮುಡಿ ತೆಗೆದಿದ್ದಾರೆ. ಮಕ್ಕಳು ಮತ್ತು ಹಲವು ಭಕ್ತರಿಂದ ಮುಡಿ ಹರಕೆ ಸಲ್ಲಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು ಹರಕೆ ಸಲ್ಲಿಕೆ ಮಾಡಿದ್ದು, ಸುಮಾರು 110 ಕ್ಷೌರಿಕರು ಭಕ್ತರ ಮುಡಿ ತೆಗೆಯುವ ಕಾರ್ಯ ಮಾಡಿದ್ದಾರೆ. ಇನ್ನು ಮುಡಿ ತೆಗೆಯುವ ಜಾಗಕ್ಕೆ ಕೇವಲ ಒಬ್ಬರಿಗಷ್ಟೇ ಪ್ರವೇಶ ನೀಡಲಾಗಿದ್ದು, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ.
ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾಸೋಹವೂ ಆರಂಭವಾಗಿದೆ. ಅನ್ನಪೂರ್ಣ ಅನ್ನಛತ್ರದಲ್ಲಿ ಅನ್ನದಾನ ನಡೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೂತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಎರಡು ಹೊತ್ತು ಅನ್ನದಾನ ನಡೆಯಲಿದ್ದು, ಪ್ರಥಮ ದಿನ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ತಸಾದ ಸ್ವೀಕರಿಸಿದ್ದಾರೆ. ಬೆಳಗ್ಗೆ 10:30 ರಿಂದ ಮಧ್ಯಾಹ್ನ 3ರವರೆಗೆ,ರಾತ್ರಿ 7ರಿಂದ 10 ಗಂಟೆಯವರೆಗೆ ನಿರಂತರ ಅನ್ನದಾನ ನಡೆಯಲಿದೆ .ಅನ್ನಛತ್ರದಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಸಿಬ್ಬಂದಿಗಳಿಂದ ಹ್ಯಾಂಡ್ ಗ್ಲೌಸ್, ಮಾಸ್ಕ್ ಬಳಕೆ ಮಾಡಿದ್ದಾರೆ.
ಇನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿಗೂ ಸಾವಿರಾರು ಜನರು ಆಗಮಿಸಿದ್ದಾರೆ. ಎರಡು ತಿಂಗಳ ಬಳಿಕ ಜನರಿಗೆ ಹೆಗ್ಗಡೆಯವರ ಭೇಟಿಗೆ ಅವಕಾಶ ನೀಡಲಾಗಿದೆ. ಕೊರೋನಾ ಆತಂಕದ ಹಿನ್ನೆಲೆ ಧರ್ಮಸ್ಥಳದಲ್ಲಿ ಹೆಗ್ಗಡೆ ಭೇಟಿಗೆ ಹಲವು ನಿಯಮ ಮಾಡಲಾಗಿದೆ. ನೇರವಾಗಿ ಭೇಟಿಗೆ ತೆರಳದೇ ಪ್ರವಚನ ಮಂಟಪದಲ್ಲಿ ಭಕ್ತರು ರಿಜಿಸ್ಟರ್ ಮಾಡಿಕೊಳ್ಳಬೇಕು. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದು, ಹೆಗ್ಗಡೆಯವರ ಭೇಟಿಯ ವೇಳೆ ಯಾವುದೇ ವಸ್ತು ಕೈಯ್ಯಲ್ಲಿಟ್ಟುಕೊಳ್ಳಲು ಅವಕಾಶವಿಲ್ಲ. ಭೇಟಿ ವೇಳೆ ಮಾಲೆ, ಶಾಲು, ಹೂವು ನೀಡುವುದಕ್ಕೆ ನಿರ್ಬಂಧ ಹಾಕಲಾಗಿದೆ. ಸಾಮಾಜಿಕ ಅಂತರ ನಾಲ್ಕು ಅಡಿ ಕಡ್ಡಾಯವಾಗಿದ್ದು, ಮಾಸ್ಕ್ ಮೂಗು ಮತ್ತು ಬಾಯಿ ಮುಚ್ಚಿರಬೇಕು ಎಂಬ ನಿಯಮವನ್ನು ಭಕ್ತರಿಗೆ ಹಾಕಲಾಗಿದೆ.
ಹುಬ್ಬಳ್ಳಿಯ ಶಿರಡಿ ಸಾಯಿ ಮಂದಿರದಲ್ಲಿ ಅವ್ಯವಹಾರ ಆರೋಪ
ಶ್ರೀಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಬಳಿ ತಪಾಸಣೆ ಕಟ್ಟುನಿಟ್ಟು ಮಾಡಲಾಗಿದೆ .ದೇವರ ದರ್ಶನಕ್ಕೆ ತೆರಳುವ ಪ್ರತೀ ಭಕ್ತರಿಗೆ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಕ್ಷೇತ್ರದ ಮೂರು ಮಂದಿ ಸಿಬ್ಬಂದಿಯಿಂದ ಎಂಟ್ರಿ ಪಾಯಿಂಟ್ ನಲ್ಲಿ ತಪಾಸಣೆ ನಡೆಯುತ್ತಿದ್ದು, ಪ್ರತೀ ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕೈಗಳಿಗೆ ಸ್ಯಾನಿಟೈಝರ್ ಮಾಡಿದ ಬಳಿಕವೇ ಸಾಲು ನಿಲ್ಲಲು ಅವಕಾಶ ನೀಡಲಾಗಿದೆ. ಮಾಸ್ಕ್ ಹಾಕದೇ ಬಂದವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಪುಣ್ಯನದಿ ನೇತ್ರಾವತಿ ಯಲ್ಲಿ ಭಕ್ತರಿಗೆ ಪುಣ್ಯ ಸ್ನಾನಕ್ಕೂ ಅವಕಾಶ ನೀಡಲಾಗಿದೆ.ನೇತ್ರಾವತಿ ಸ್ನಾನಘಟ್ಟದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇಲ್ಲಿಯೂ ಹಲವು ನಿಯಮ ಮಾಡಲಾಗಿದ್ದು,ಕೇವಲ ಮೂರು ಮುಳುಗು ಮಾತ್ರ ಹಾಕುವುದಕ್ಕೆ ಅವಕಾಶ ನೀಡಲಾಗಿದೆ. ನದಿಯಲ್ಲಿ ಸಾಬೂನು ಹಾಕಿ ಸ್ನಾನ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಭಕ್ತರು ಹಲ್ಲು ಉಜ್ಜುವುದು,ಬಟ್ಟೆ ಒಗೆಯುವುದೂ ನಿಷಿದ್ಧವಾಗಿದೆ. ಭಕ್ತರು ಎಲ್ಲಾ ಕಡೆಯಲ್ಲೂ ಶುಚಿತ್ವ ಕಾಪಾಡುವಂತೆ ಸೂಚಿಸಲಾಗಿದೆ.
ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ 8.30ರ ಮಹಾಪೂಜೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಒಳ ಅಂಗಳದಲ್ಲಿ ಬಾಕ್ಸ್ ನಲ್ಲಿ ಭಕ್ತರು ಸಾಲುಗಟ್ಟಿ ನಿಂತ ಬಳಿಕ ಕೈಗೆ ಸ್ಯಾನಿಟೈಝರ್ ಹಾಕಿ ಥರ್ಮಲ್ ಸ್ಕ್ಯಾನ್ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
ಜೊತೆಗೆ ಮಂಗಳೂರಿನಾದ್ಯಂತ ದೇವಸ್ಥಾನಗಳು ತೆರೆದಿವೆ. ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಶರವು ಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ದೇವಸ್ಥಾನಗಳಲ್ಲಿ ದರ್ಶನ ಆರಂಭವಾಗಿದ್ದು, ಮುಂಜಾನೆಯಿಂದಲೂಕ್ಷೇತ್ರ ಕ್ಕೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದಿದ್ದಾರೆ.
ಕದ್ರಿ ಮಂಜುನಾಥಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಂಜುನಾಥಸ್ವಾಮಿಯ ದರ್ಶನ ಪಡೆದಿದ್ದಾರೆ.ಕದ್ರಿ ಮಂಜುನಾಥಸ್ವಾಮಿ, ಮಹಾಗಣಪತಿ, ದುರ್ಗಪರಮೇಶ್ವರಿ, ಗೋಮುಖ ಗಣಪತಿ, ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದಾರೆ. ಒಟ್ಟಿನ್ನಲ್ಲಿ ಕಳೆದ 60 ದಿನಗಳಿಂದ ಬಾಗಿಲು ಹಾಕಿದ್ದ ದೇವಸ್ಥಾನಗಳು ಇಂದು ತೆರೆದಿದೆ.ಈ ಮೂಲಕ ಭಕ್ತರ ಭಾವನೆಗಳಿಗೆ ಸರ್ಕಾರ ಬೆಲೆ ನೀಡಿದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ