ಧನ-ಕನಕಾದಿಗಳು ಈ ದೇವನಿಗೆ ನಗಣ್ಯ, ಮಣ್ಣೇ ಇಲ್ಲಿ ಪ್ರಧಾನ; ದಕ್ಷಿಣಕನ್ನಡ ಜಿಲ್ಲೆಯಲ್ಲೊಂದು‌ ಮಣ್ಣಿನ ಹರಕೆಯ ಕ್ಷೇತ್ರ

ಪಶ್ಟಿಮಘಟ್ಟಗಳ ಹಚ್ಚಹಸಿರಿನ ಸಾಲಿನ ಅಂಚಿನಲ್ಲಿರುವಂತಹ ಬೆಳ್ತಂಗಡಿ ತಾಲೂಕಿನ ಸುರ್ಯ ಎನ್ನುವ ಗ್ರಾಮದಲ್ಲಿದೆ ಮಣ್ಣಿನ ಹರಕೆಯ ಕ್ಷೇತ್ರವೆಂದೇ ಹೆಸರುವಾಸಿಯಾಗಿದೆ

ಪಶ್ಟಿಮಘಟ್ಟಗಳ ಹಚ್ಚಹಸಿರಿನ ಸಾಲಿನ ಅಂಚಿನಲ್ಲಿರುವಂತಹ ಬೆಳ್ತಂಗಡಿ ತಾಲೂಕಿನ ಸುರ್ಯ ಎನ್ನುವ ಗ್ರಾಮದಲ್ಲಿದೆ ಮಣ್ಣಿನ ಹರಕೆಯ ಕ್ಷೇತ್ರವೆಂದೇ ಹೆಸರುವಾಸಿಯಾಗಿದೆ

ಪಶ್ಟಿಮಘಟ್ಟಗಳ ಹಚ್ಚಹಸಿರಿನ ಸಾಲಿನ ಅಂಚಿನಲ್ಲಿರುವಂತಹ ಬೆಳ್ತಂಗಡಿ ತಾಲೂಕಿನ ಸುರ್ಯ ಎನ್ನುವ ಗ್ರಾಮದಲ್ಲಿದೆ ಮಣ್ಣಿನ ಹರಕೆಯ ಕ್ಷೇತ್ರವೆಂದೇ ಹೆಸರುವಾಸಿಯಾಗಿದೆ

  • Share this:
ಪ್ರಕೃತಿಯನ್ನೇ ದೇವರೆಂದು ಪೂಜಿಸುವ ತುಳುನಾಡಿಗರು ಪ್ರಕೃತಿಯಲ್ಲೇ ದೇವರು ಲೀನವಾಗಿದ್ದಾನೆ ಎಂದು ತಿಳಿದವರು. ಇದೇ ಕಾರಣಕ್ಕಾಗಿಯೋ ಏನೋ ಇಲ್ಲಿನ ಜನ ತನ್ನ ನೆಚ್ಚಿನ ದೇವನಿಗೆ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ನೀಡಿ ಕೃತಾರ್ಥರಾಗುತ್ತಿದ್ದಾರೆ. ಇಂಥಹುದೇ ಒಂದು ಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದು, ಇಲ್ಲಿ ಬೆಳ್ಳಿ-ಬಂಗಾರದ, ಹಣ-ವೈಡೂರ್ಯದ ಹರಕೆಯ ಅಗತ್ಯವಿಲ್ಲ. ಇಲ್ಲಿ ಏನಿದ್ದರೂ ಮಣ್ಣಿನದೇ ಹರಕೆ. ತಾವು ಬೇಡಿದ ಹರಕೆ ಈಡೇರಿದ್ದಲ್ಲಿ ಯಾವ ಕಾರ್ಯಕ್ಕಾಗಿ ಹರಕೆ ಮಾಡಲಾಗಿದೆಯೋ ಅದೇ ಆಕಾರದ ಮಣ್ಣಿನ ಪ್ರತಿರೂಪವನ್ನು ನೀಡಿದ್ದಲ್ಲಿ ಈ ದೇವನಿಗೆ ಎಲ್ಲಿಲ್ಲದ ಸಂತೋಷ. ಪಶ್ಟಿಮಘಟ್ಟಗಳ ಹಚ್ಚಹಸಿರಿನ ಸಾಲಿನ ಅಂಚಿನಲ್ಲಿರುವಂತಹ ಬೆಳ್ತಂಗಡಿ ತಾಲೂಕಿನ ಸುರ್ಯ ಎನ್ನುವ ಗ್ರಾಮದಲ್ಲಿದೆ ಮಣ್ಣಿನ ಹರಕೆಯ ಕ್ಷೇತ್ರವೆಂದೇ ಹೆಸರುವಾಸಿಯಾದ  ಸುರ್ಯ ಸದಾಶಿವರುದ್ರ ದೇವಸ್ಥಾನ. ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ-ಸಿದ್ಧಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯವೂ ಆಗಿದೆ. 

ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ಇವ್ಯಾವುದನ್ನೂ ದೇವರಿಗೆ ಅರ್ಪಿಸಲಾಗದ ಭಕ್ತನಿಗೆ ಈ ದೇವ ಬಹಳ ಅಚ್ಚುಮೆಚ್ಚು.  ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು ಹಾಗೂ ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸಿದಲ್ಲಿ ತನ್ನ ಎಲ್ಲಾ ಕಷ್ಟಗಳು ಈಡೇರಿಸುವ ರುದ್ರ ಇಲ್ಲಿ ಆರಾಧಿಸಲ್ಪಡುತ್ತಾನೆ.  ಈ  ಸರಳ ಹರಕೆ ಪದ್ಧತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಆರಂಭವಾಯಿತು ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಮಣ್ಣಿನ ಹರಕೆ ಅರ್ಪಿಸಿರುವ ಭಕ್ತಾದಿಗಳು


ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ಧಿರಬಹುದು ಎನ್ನುವ ಐತಿಹ್ಯವೂ ಇಲ್ಲಿನದ್ದಾಗಿದೆ. ಸುರ್ಯ ಕ್ಷೇತ್ರವು ಹಸಿರು ಪ್ರಕೃತಿಯ ಅಂಚಿನಲ್ಲಿರುವಂತಹ ಕ್ಷೇತ್ರವಾಗಿದ್ದು, ಈ ಕ್ಷೇತ್ರಕ್ಕೆ ಸುರ್ಯ ಎಂಬ ಹೆಸರು ಬರಲು ಕಾರಣವಾದಂತಹ ಒಂದು ದಂತಕಥೆಯೂ ಇಲ್ಲಿದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನ ಜೊತೆ ಈ ಪ್ರದೇಶದಲ್ಲಿದ್ದ ಕಾಡಿಗೆ ಸೊಪ್ಪು ಕಡಿಯಲೆಂದು ಹೋಗಿದ್ದಳಂತೆ. ಸೊಪ್ಪು ಕಡಿಯುವಾಗ ಸೊಪ್ಪಿನೆಡೆಯಲ್ಲಿ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ. ಈಗ ಗಾಬರಿಗೊಂಡಂತಹ ಆಕೆ ತನ್ನ ಮಗನನ್ನು ಸುರೆಯ ಎಂದು ಕರೆದಿದ್ದು, ಬಳಿಕ ಇಲ್ಲಿಗೆ ಸುರಿಯ, ಸುರ್ಯ ಎಂದು ಹೆಸರು ಬಂತು. ಈ ಬಳಿಕ ಆ ಲಿಂಗ-ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು ಎನ್ನುವ ಇತಿಹಾಸ ಈ ಕ್ಷೇತ್ರದ್ದಾಗಿದೆ.

ಈಗಿರುವ ದೇವಸ್ಥಾನದ ಉತ್ತರಕ್ಕೆ ಸುಮಾರು 100 ಮೀಟರ್ ದೂರದ ಪ್ರಶಾಂತವಾದ ವನರಾಶಿಯ ಮಧ್ಯೆ ಈ ಘಟನೆ ನಡೆದಿತ್ತು ಎಂದು ಹೇಳಲಾಗುತ್ತಿದ್ದು, ಇದೇ ಜಾಗದಲ್ಲಿ  ಭಕ್ತರು ದೇವಸ್ಥಾನಕ್ಕೆ ಸಲ್ಲಿಸಿದಂತಹ ಮಣ್ಣಿನ ಹರಕೆಗಳನ್ನು ಇಡುತ್ತಿದ್ದಾರೆ. ಈ ಸ್ಥಳ ಹರಕೆ ಬನ ಎನ್ನುವ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಇದೇ ಜಾಗದಲ್ಲಿ ಹಿಂದೆ ಬೃಗು ಮಹರ್ಷಿಯ ಶಿಷ್ಯರೊಬ್ಬರು ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ಲಿಂಗರೂಪದಲ್ಲಿ ಇಲ್ಲಿ ನೆಲೆಯಾದರು ಎನ್ನಲಾಗುತ್ತಿದ್ದು, ಇದರ ಕುರುಹು ಎಂಬಂತೆ ಈ ಪ್ರದೇಶದಲ್ಲಿ ಎರಡು ಲಿಂಗರೂಪಿ ಶಿಲೆಗಳು ಇಂದಿಗೂ ಇಲ್ಲಿವೆ.

ಇಂದಿಗೂ ಈ ಲಿಂಗರೂಪಿ ಶಿಲೆಗಳಿಗೆ ನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತಿದ್ದು, ಭಕ್ತರಿಂದ ಸಮರ್ಪಿತವಾದಂತಹ ಹರಕೆ ಗೊಂಬೆಗಳನ್ನು ಇಲ್ಲಿಯೇ ಇಡಲಾಗುತ್ತಿದೆ.     ಈ ಕ್ಷೇತ್ರಕ್ಕೆ ಬರುವ ಭಕ್ತರದು ಒಂದೊಂದು ರೀತಿಯ ಕಥೆಯಾಗಿದ್ದು, ತಮ್ಮ ಪ್ರಾರ್ಥನೆಯನ್ನು ಮನ್ನಿಸಿದ ಬಳಿಕವೇ ಹರಕೆಯನ್ನು ತೀರಿಸಲು ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಮದುವೆಯಾಗಿ ಮಕ್ಕಳಾಗದೇ ಇದ್ದ ಸಮಯದಲ್ಲಿ ಇಲ್ಲಿ ಬಂದು ಹರಕೆ ನೀಡುತ್ತೇವೆಂದು ಪ್ರಾರ್ಥಿಸಿದವರಿಗೆ ಇಲ್ಲಿ ಮಕ್ಕಳಾಗಿದೆ. ಹುಟ್ಟಿದಂದಿನಿಂದ ಮಾತನಾಡದೇ ಇದ್ದ ಪುಟ್ಟ ಬಾಲಕಿಯು ಮಾತನಾಡಬೇಕೆಂದು ಹರಕೆ ಸಲ್ಲಿಸಿದ ತಾಯಿಯೊಬ್ಬಳ ಪ್ರಾರ್ಥನೆಯೂ ಫಲಿಸಿದ್ದು, ದೇವರಿಗೆ ಮಣ್ಣಿನ ನಾಲಗೆಯ ಪ್ರತಿರೂಪವನ್ನು ಅರ್ಪಿಸುವ ಮೂಲಕ ತನ್ನ ಹರಕೆಯನ್ನು ಸಲ್ಲಿಸಿದ್ದಾರೆ.

ಇದನ್ನು ಓದಿ: ಕೇರಳದಲ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್​ಗೆ ಆಘಾತ; ಪಕ್ಷ ತೊರೆದ ಹಿರಿಯ ನಾಯಕ ಚಾಕೊ

ಇದೇ ಪ್ರಕಾರ ಮನೆ ಕಟ್ಟಿಸಲು ಹೊರಟ ಕುಟುಂಬಗಳು ಮನೆಯ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿದ್ದಲ್ಲಿ ಮಣ್ಣಿನ ಮನೆಯ ಪ್ರತಿರೂಪವನ್ನೂ, ಸೈಟ್ ನ ಬೇಡಿಕೆ ಇಟ್ಟವರು ಮಣ್ಣಿನ ಸೈಟ್ ನ ಪ್ರತಿರೂಪವನ್ನೂ ನೀಡುತ್ತಾರೆ.

ಕೇವಲ ಭೋಗ್ಯ ವಸ್ತುಗಳ ಬೇಡಿಕೆ ಮಾತ್ರವಲ್ಲದೆ , ಕೃಷಿ, ವಿಧ್ಯೆ ಸೇರಿದಂತೆ ಎಲ್ಲಾ ರೀತಿಯ ಬೇಡಿಕೆಗೂ ಕ್ಷೇತ್ರದ ಅಧಿದೇವನಾದ ಸದಾಶಿವನು ಸ್ಪಂದಿಸುತ್ತಿದ್ದು, ಇದೇ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ದೇಶದೆಲ್ಲೆಡೆಯಿಂದ ಭಕ್ತಾಧಿಗಳ ದಂಡೇ ಹರಿದುಬರುತ್ತಿದೆ.  ಕ್ಷೇತ್ರದಲ್ಲಿ ಸದಾಶಿವರುದ್ರ ದೇವರ ಜೊತೆಗೆ ಮಹಾಗಣಪತಿ, ನಾಗಬನ, ದೈವ ಸಾನಿಧ್ಯಗಳೂ ಇದ್ದು, ಪ್ರತಿವರ್ಷವೂ ಇಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆದುಕೊಂಡು ಬರುತ್ತದೆ. ಈ ದೇವಸ್ಥಾನವನ್ನು ಯಾವಾಗ ನಿರ್ಮಾ ಮಾಡಲಾಯಿತು ಎನ್ನುವುದಕ್ಕೆ ನಿಖರ ಮಾಹಿತಿ ಪುರಾವೆಗಳು ಇಂದಿಗೂ ದೊರಕಿಲ್ಲ. ದೇವಸ್ಥಾನದ ಒಳಾಂಗಣದಲ್ಲಿರುವ ಮಂಟಪದಲ್ಲಿರುವ ನಂದಿಯ ವಿಗ್ರಹದ ಪೀಠದಲ್ಲಿ ಮಾಹಿತಿಯ ಪ್ರಕಾರ ಇದು ಬಂಗರಾಜ ಒಡೆಯರ ಕಾಲದಲ್ಲಿ ನೂಜಿಯ ಸಂಕು ಅಧಿಕಾರಿಯ ಮಗ ನಾರಾಯಣ ಸೇನ ಭೋವನು ಸುರಾಯದ ದೇವರ ಸನ್ನಿಧಿಯಲ್ಲಿ ಪ್ರತಿಷ್ಟೆ ಮಾಡಿದ ಎಂದಿದೆ.

ಅನುವಂಶಿಕವಾಗಿ ಸೂರ್ಯಗುತ್ತು ಮನೆತನದ ಆಡಳಿತಕ್ಕೆ ಈ ದೇವಸ್ಥಾನವು ಇದೀಗ ಒಳಪಟ್ಟಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನೂ ಇಲ್ಲಿ ಕಲ್ಪಿಸಲಾಗಿದೆ. ಬಡವರ ಕ್ಷೇತ್ರವೆಂದೇ ಬಿಂಬಿಸಲ್ಪಡುವ ಈ ದೇವಸ್ಥಾನಕ್ಕೆ ಊರು ಹಾಗೂ ದೂರದೂರುಗಳಿಂದಲೂ ಭಕ್ತಾಧಿಗಳು ಬರುತ್ತಿದ್ದು, ಶಿವ ಇಲ್ಲಿ ಬಂದವರೆಲ್ಲರನ್ನೂ ಹರಸುತ್ತಿದ್ದಾನೆ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮುಕ್ತೇಸರಾದ ಸುಭಾಶ್ಚಂದ್ರ ಸುರ್ಯಗುತ್ತು.
Published by:Seema R
First published: