ಮೈಸೂರು: ಸಿದ್ದರಾಮಯ್ಯ (Siddaramaiah) ಜೆಡಿಎಸ್ ಪಕ್ಷದಿಂದ ಹೊರಬಂದು ಕಾಂಗ್ರೆಸ್ ಸೇರಿ 16 ವರ್ಷಗಳು ಉರುಳಿವೆ. ಜೆಡಿಎಸ್ನಿಂದ ಹೊರಬಂದು ಕಾಂಗ್ರೆಸ್ನಲ್ಲಿ ಇಂದು ಪ್ರಬಲ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಯೂ ಐದು ವರ್ಷ ಅಧಿಕಾರ ನಡೆಸಿದವರು. ಆದರೆ ತಮ್ಮನ್ನು ದೇವೇಗೌಡರು ಏಕೆ 2006ರಲ್ಲಿ ಜೆಡಿಎಸ್ನಿಂದ ಹೊರ ಹಾಕಿದರೆಂದು ಬಹಿರಂಗ ಪಡಿಸಿದ್ದಾರೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬರದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಧರ್ಮಸಿಂಗ್ ಮುಖ್ಯಮಂತ್ರಿಯಾದರೆ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಜೆಡಿಎಸ್ನಲ್ಲಿ ದೇವೇಗೌಡರನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಪ್ರಬಲನಾಯಕನಾಗಿದ್ದರು. ಆದರೆ 2006ರಲ್ಲಿ ದೇವೇಗೌಡರು ತಮ್ಮನ್ನು ಹೊರ ಹಾಕಿದ್ದಲ್ಲದೆ, ಧರ್ಮಸಿಂಗ್ರಿಗೆ ಹೇಳಿ ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು ಎಂದು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಮೈಸೂರಿನ ಲಿಂಗದೇವರಕೊಪ್ಪಲು ಗ್ರಾಮದಲ್ಲಿ 'ಸ್ವಾಭಿಮಾನಿ ಪಡೆ ಕಾಂಗ್ರೆಸ್ ಸೇರ್ಪಡೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2006ರಲ್ಲಿ ನಾನು ಕಾಂಗ್ರೆಸ್ ಸೇರಿದೆ. ಇದಕ್ಕೆ ಕಾರಣ ದೇವೇಗೌಡರು ನನ್ನನ್ನು ಪಕ್ಷದಿಂದ ಹೊರ ಹಾಕಿದರು. ನಾನು ಅಹಿಂದಾ ಸಮಾವೇಶ ಮಾಡಿದೆ ಎಂಬ ಒಂದೇ ಒಂದು ಕಾರಣಕ್ಕೆ ನನ್ನನ್ನು ದೇವೇಗೌಡರು ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು. ಅಷ್ಟೇ ಅಲ್ಲದೇ ಸಿಎಂ ಆಗಿದ್ದ ಧರ್ಮಸಿಂಗ್ಗೆ ಹೇಳಿ ಉಪ ಮುಖ್ಯಮಂತ್ರಿಸ್ಥಾನದಿಂದಲೂ ಕೆಳಗೆ ಇಳಿಸಿದರು ಎಂದು ನೆನೆದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ಕಾರಣ ಬಿಜೆಪಿ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಜನ 5 ಬಾರಿ ಗೆಲ್ಲಿಸಿದ್ದಾರೆ ಹಾಗೂ 3 ಬಾರಿ ಸೋಲು ಕಂಡಿದ್ದೇನೆ. ಒಟ್ಟು ರಾಜಕೀಯದಲ್ಲಿ 8 ಬಾರಿ ಗೆಲುವು ಸಾಧಿಸಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಶಕ್ತಿ ನೀಡಿದ ಕ್ಷೇತ್ರ. ಈ ಕ್ಷೇತ್ರವನ್ನು ನಾನು ಮರೆಯಲು ಸಾಧ್ಯವಿಲ್ಲ. ಆದರೆ 2019ರ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ನನ್ನನ್ನು ಸೋಲಿಸಲು ಒಂದಾದರು. ಬಿಜೆಪಿ ವೀಕ್ ಸ್ಪರ್ಧಿಯನ್ನು ಕಣಕ್ಕಿಳಿಸಿದರು. ಬಿಜೆಪಿಯವರೆಲ್ಲಾ ಜೆಡಿಎಸ್ಗೆ ಮತ ನೀಡಿ ನನ್ನನ್ನು ಸೋಲಿಸಿದರು ಎಂದರು.
ಈ ಬಾರಿಯೂ ಒಳ ಒಪ್ಪಂದ ಸಾಧ್ಯತೆ
2018ರ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್-ಬಿಜೆಪಿ ನನ್ನನ್ನು ಸೋಲಿಸಿದ್ದರು. ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಸೋಲಿಸಬೇಕೆಂದು ನಿರ್ಧಾರ ಮಾಡಿದ್ದಾರೆ. ಈ ಸಾರಿಯೂ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. ಅವರು ಏನೇ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ
ಜೆಡಿಎಸ್ ಪಕ್ಷ ಯಾವತ್ತೂ ಕೂಡ ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಿಲ್ಲ, 1999ರಲ್ಲಿ 10 ಸ್ಥಾನ ಗೆದ್ದಿದ್ದೆವು, 2004ರಲ್ಲಿ 59, 2008ರಲ್ಲಿ 29, 2013ರಲ್ಲಿ 40 ಕಳೆದ ಸಾರಿ 39 ಸ್ಥಾನ ಗೆದ್ದಿದ್ದಾರೆ. ಆದರೆ ಕುಮಾರಸ್ವಾಮಿ ಜೆಡಿಎಸ್ 120 ಸ್ಥಾನಗಳಲ್ಲಿ ಗೆದ್ದು ಸ್ವಂತ ಬಲದಿಂದ ಸರ್ಕಾರ ರಚಿಸುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ನನ್ನ ಪ್ರಕಾರ ಈ ಬಾರಿ 20ರಿಂದ 22 ಸ್ಥಾನಗಳಲ್ಲಿ ಗೆಲ್ಲಬಹುದು ಎಂದರು.
ಗೆದ್ದೆತ್ತಿನ ಬಾಲ ಹಿಡಿತಾರೆ
ಜೆಡಿಎಸ್ ಪಕ್ಷದ ಬಲ ಮೈಸೂರು ಭಾಗದ ಕೇವಲ ಏಳೆಂಟು ಜಿಲ್ಲೆಗಳಲ್ಲಿದೆ, ಉತ್ತರ ಕರ್ನಾಟಕದಲ್ಲಿ ಅವರ ಶಕ್ತಿಯಿಲ್ಲ. ಅವರು ಅಧಿಕಾರಕ್ಕೆ ಬರುವ ಪಕ್ಷವಲ್ಲ, ಬಿಜೆಪಿ ಗೆದ್ರೆ ಬಿಜೆಪಿ ಬಾಲ ಹಿಡಿತಾರೆ, ಕಾಂಗ್ರೆಸ್ ಗೆದ್ರೆ ಕಾಂಗ್ರೆಸ್ ಬಾಲ ಹಿಡಿತಾರೆ. ನನ್ನನ್ನು ಮುಖ್ಯಮಂತ್ರಿ ಮಾಡಿದರೆ ನಿಮಗೆ ಬೆಂಬಲ ನೀಡುತ್ತೇವೆ ಎನ್ನುತ್ತಾರೆ. ಅವರಿಗೆ ಯಾವ ಸಿದ್ಧಾಂತವಿಲ್ಲ ಎಂದು ವ್ಯಂಗ್ಯವಾಡಿದರು.
ನಮ್ಮನ್ನು ಕಸಕ್ಕಿಂತ ಕಡೆಯಾಗಿ ಕಂಡರು
ಜೆಡಿಎಸ್ನಲ್ಲಿ ಕಳೆದ ಚುನಾವಣೆಯಲ್ಲಿ 37 ಶಾಸಕರಷ್ಟೇ ಇದ್ದರೂ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು. ಅವರು, ನಮ್ಮನ್ನು ಕಸಕ್ಕಿಂತ ಕಡೆಯಾಗಿ ಕಂಡರು. ಯಾವ ನೇಮಕಾತಿ ಸಂದರ್ಭದಲ್ಲೂ ಕೇಳುತ್ತಿರಲಿಲ್ಲ. ಆಪರೇಷನ್ ಕಮಲ ನಡೆಯುತ್ತಿದ್ದರೂ ಅಮೆರಿಕಕ್ಕೆ ಹೋಗಿ ಕುಳಿತರು. ಇಲ್ಲಿಯೇ ಇದ್ದಿದ್ದರೆ, ಇನ್ನೊಂದು ವರ್ಷವಾದರೂ ಮುಖ್ಯಮಂತ್ರಿಯಾಗಿರಬಹುದಾಗಿತ್ತು. ಆದರೆ ಈ ಬಾರಿ ಹಾಗಾಗಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ