ತುಮಕೂರು (ಅ.31): ಶಿರಾ ಉಪಚುನಾವಣಾ ಕಣದಲ್ಲಿ ಅಭಿವೃದ್ಧಿ ಅಸ್ತ್ರವನ್ನು ಪ್ರಯೋಗಿಸುವ ಮೂಲಕ ರಾಜಕೀಯ ನಾಯಕರು ಮತಸೆಳೆಯುವ ತಂತ್ರಕ್ಕೆ ಮೊರೆಹೋಗಿದ್ದಾರೆ. ನಿನ್ನೆಯಷ್ಟೇ ಶಿರಾದಲ್ಲಿ ಪ್ರಚಾರ ನಡೆಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಕ್ಷೇತ್ರವನ್ನು ಶಿಕಾರಿಪುರದಂತೆ ಅಭಿವೃದ್ಧಿ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು. ಇಂದು ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಂದಾಗಿರುವ ಜೆಡಿಎಸ್ ವರಿಷ್ಠ ದೇವೇಗೌಡರು, ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಗೆ ಬದ್ದ ಎನ್ನುವ ಮೂಲಕ ಮುಖ್ಯಮಂತ್ರಿಗಳಿಗೆ ಟಾಂಗ್ ನೀಡಿದ್ದಾರೆ. ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದ ಅವರು, ನನ್ನ 60 ವರ್ಷದ ರಾಜಕೀಯದ ಇತಿಹಾಸದಲ್ಲಿ ಯಾವುದೇ ಗ್ರಾಮವನ್ನು ದತ್ತು ಪಡೆದಿಲ್ಲ. ಆದರೆ ಈಗ ಶಿರಾ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನನಗೆ ಇದು ಕೊನೆಘಟ್ಟ. ಹೀಗಾಗಿ ಶಿರಾ ಅಭಿವೃದ್ಧಿ ಮಾಡಲು ಕ್ಷೇತ್ರ ದತ್ತು ತೆಗೆದು ಕೊಳ್ಳುತ್ತೇನೆ. ಈ ಕ್ಷೇತ್ರದ ಸರ್ವೋತ್ತಮ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು.
ಇದೇ ವೇಳೆ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದ ಅವರು, ಯಡಿಯೂರಪ್ಪ ಆರು ತಿಂಗಳ ಒಳಗೆ ಮಾದಲೂರು ಕೆರೆಗೆ ನೀರು ತುಂಬಿಸುತ್ತೇನೆ ಎನ್ನುತ್ತಾರೆ. ಅವರು ಕೆರೆಗೆ ನೀರು ಎಲ್ಲಿಂದ ತರುತ್ತಾರೆ. ಇಷ್ಟು ದಿನಗಳ ಕಾಲ ಬಿಜೆಪಿ ಕಾಂಗ್ರೆಸ್ ಆಡಳಿತ ನಡೆಸಿವೆ, ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಇದೇ ವೇಳೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಅವರು, ನಾನು ಬೇರೆಯವರ ರೀತಿ ಮಾತಾಡಲ್ಲ. ಕ್ಷೇತ್ರದ ಜನರು ಯಾವ ಅಭ್ಯರ್ಥಿ ಪರ ಎಂಬ ಮತದಾರರ ಮನಸ್ಸಿನ ಭಾವನೆ ಹೇಳಲು ಸಾಧ್ಯವುಲ್ಲ. ಅದು ಏನಿದ್ದರೂ ಚುನಾವಣೆ ದಿನವೇ ಗೊತ್ತಾಗಬೇಕು. ಇದು ನನ್ನ ರಾಜಕಾರಣದ ಅನುಭವ. ಸತ್ಯನಾರಾಯಣ ಕೆಲಸ ದಿಂದ ಅಮ್ಮಜಮ್ಮಗೆ ಗೆಲುವ ಶತ ಸಿದ್ದ. ಈ ವಾತವರಣದಲ್ಲಿ ನೋಡಿದರೆ ನಾವೇ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನು ಓದಿ: ಶಿಕಾರಿಪುರದ ರೀತಿ ಶಿರಾ ಕ್ಷೇತ್ರದ ಅಭಿವೃದ್ಧಿ; ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ
ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಹಣ, ಅಧಿಕಾರದ ಶಕ್ತಿ ಇದೆ. ರಾಜ್ಯದಲ್ಲಿ ಆಗುವ ಅನಾಹುತ ತಪ್ಪಿಸಲು ಪ್ರಾದೇಶಿಕ ಪಕ್ಷದ ಗೆಲುವು ಮುಖ್ಯ. ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಒಗ್ಗಟ್ಟು ಇದೆ. ಆದರೆ, ಇಲ್ಲಿ ಜಾತಿರಾಜಕಾರಣ ದಿಂದ ಆ ಒಗ್ಗಟ್ಟು ಇಲ್ಲ. ಪ್ರಾದೇಶಿಕ ಪಕ್ಷ ಗಟ್ಟಿಗೊಳಿಸಲು ಈ ಚುನಾವಣೆ ಗೆಲುತ್ತೇವೆ ಎಂದರು
ದೇವೇಗೌಡರಿಗಾಗಿ ಕಾದು ಕುಳಿತ ಹಿರಿಯರು
ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಜಮ್ಮ ಪರ ಇಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಪ್ರಚಾರ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಗ್ರಾಮದ ಹಿರಿಯರೆಲ್ಲಾ ಅವರಿಗಾಗಿ ಕಾದು ಕುಳಿತ ದೃಶ್ಯಕೂಡ ಕಂಡುಬಂದಿದೆ. ಶಿರಾದ ಮೂಗನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಗ್ರಾಮದ ಹಿರಿಯರು ಅವರಿಗಾಗಿ ಊರ ಕಟ್ಟೆ, ಮನೆ ಮುಂದೆ ಜಗಲಿ ಮೇಲೆ ಕುಳಿತಿದ್ದರು.
ದೇವೇಗೌಡರ ಪ್ರಚಾರ ಕಂಡು ಮಾರ್ಗ ಬದಲಿಸಿದ ಜಮೀರ್
ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಕೈ ನಾಯಕ ಜಮೀರ್ ಅಹಮದ್ ಕೂಡ ಪ್ರಚಾರ ನಡೆಸಿದ್ದರು. ಮುಸ್ಲಿಂ ಬೀದಿಗಳಲ್ಲಿ ಕಾಂಗ್ರೆಸ್ ಟಿ ಬಿ ಜಯಚಂದ್ರ ಪರ ಮತಯಾಚಿಸಿ ಜಮೀರ್ ಅಹಮದ್ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ದೇವೇಗೌಡರು ಪ್ರಚಾರ ನಡೆಸುತ್ತಿದ್ದ ಮಾರ್ಗದ ಕಡೆ ಸಾಗಲು ಮುಂದಾದರು. ನಂತರ ಅಲ್ಲಿ ದೇವೇಗೌಡರು ಪ್ರಚಾರ ಎಂಬುದು ಗೊತ್ತಾಗುತ್ತಿದ್ದಂತೆ ಪಕ್ಕದ ರಸ್ತೆ ಕಡೆ ಮುಖ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ