ಬಾಗಲಕೋಟೆ (ಮಾ.12): "ಆ ಅನಿಷ್ಟ ಪದ್ಧತಿಯಿಂದ ದೂರಾದರೂ ಸಮಾಜ ಮಾತ್ರ ನಮ್ಮ ಮಕ್ಕಳನ್ನು ನೋಡುವ ರೀತಿ ಬೇರೆ. ಸಮಾಜದ ಯಾವುದೋ ಕಟ್ಟುಪಾಡಿಗೆ ಬಿದ್ದು, ನಾವು ಈ ಉದ್ಯೋಗದಲ್ಲಿ ತೊಡಗಿದ್ದೆವು. ಆದರೆ, ನಮ್ಮ ಮಕ್ಕಳ ಬದುಕು ಹೀಗಾಗದೇ, ಸಮಾಜದಲ್ಲಿ ತಲೆ ಎತ್ತಿ ಬದುಕಬೇಕು ಎಂಬ ಆಶಯ ನಮಗಿತ್ತು. ನಮ್ಮ ಆಸೆಯನ್ನು ಜಿಲ್ಲಾಡಳಿತ ನೆರವೇರಿಸಿದೆ. ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಸರ್ಕಾರ ನಮ್ಮ ಮಕ್ಕಳಿಗೆ ಹೊಸ ಬದುಕು ಕಟ್ಟಿಕೊಟ್ಟಿದೆ" ಇದು ವಿಮುಕ್ತ ದೇವದಾಸಿಯರ ಮಾತು.
ನಗರದ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಜಿಲ್ಲೆಯ ಸುಮಾರು 10 ದೇವದಾಸಿ ಮಕ್ಕಳಿಗೆ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಗಟ್ಟಿಮೇಳದ ಸದ್ದಿಲ್ಲದ್ದಿದ್ದರೂ ಮನತುಂಬಿ ಹಾರೈಸುವ ಜನರ ಎದುರು ದೇವದಾಸಿಯರ ಮಕ್ಕಳು ಹೊಸ ಬಾಳು ಆರಂಭಿಸಿದರು.
ನವನಗರದಲ್ಲಿರುವ ಕಲಾಭವನದಲ್ಲಿ ನಡೆದ ಈ ಸರಳ ವಿವಾಹದಲ್ಲಿ 10 ಜೋಡಿಗಳು ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದರು. ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನ ಪ್ರಭಾ, ಬಾಗಲಕೋಟೆ ಜಿಪಂ ಸಿಇಒ ಗಂಗೂಬಾಯಿ ಮಾನಕರ್ ನವವಧುವರರಿಗೆ ಅರಿಶಿನ ಹಚ್ಚಿ, ತಾಳಿ, ಹೂ ಕೊಟ್ಟು ಹರಿಸಿದರು.
ಈ ವೇಳೆ ಮಾತನಾಡಿದ ಕೆ ರತ್ನಪ್ರಭಾ, ದೇವದಾಸಿಯರಿಗೆ ಒಂದೇ ಸೂರಿನಡಿ ಯೋಜನೆ ದೊರೆಯಬೇಕು. ಅವರಿಗೆ ಭೂಮಿ ಕೊಟ್ಟರೆ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ಇದನ್ನು ಓದಿ: ನಾನು ಪೂರ್ಣಾವಧಿ ವಕೀಲಿಕೆ ಮಾಡಿದವನಲ್ಲ, ಸಂಡೇ ಮಂಡೇ ಲಾಯರ್ ಆಗಿದ್ದವನು; ಸಿದ್ದರಾಮಯ್ಯ
ಇನ್ನು ದೇವದಾಸಿ ಹೆಣ್ಣು ಮಕ್ಕಳಿಗೆ, ದೇವದಾಸಿ ಗಂಡು ಮಕ್ಕಳನ್ನು ಕೊಟ್ಟು ವಿವಾಹ ಮಾಡಲಾಗಿದೆ. ಇದರಲ್ಲಿ ಇಬ್ಬರು ಮಾತ್ರ ಬ್ರಾಹ್ಮಣ ವರರು ಸ್ವ ಇಚ್ಛೆ ಯಿಂದ ದೇವದಾಸಿ ಮಕ್ಕಳ ಮದುವೆಯಾಗಿದ್ದಾರೆ. ಅಂತರ್ಜಾತಿ ವಿವಾಹವಾದ ಹಿನ್ನೆಲೆ ಅವರಿಗೆ ಸರ್ಕಾರ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
(ವರದಿ: ರಾಚಪ್ಪ ಬನ್ನಿದಿನ್ನಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ