ಬೆಂಗಳೂರು (ಡಿಸೆಂಬರ್ 31); ಕರ್ನಾಟದಲ್ಲಿ ಎರಡು ಹಂತದಲ್ಲಿ ನಡೆದಿದ್ದ 5728 ಗ್ರಾಮ ಪಂಚಾಯತ್ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಖಚಿತವಾಗಿ ಶೇ. 85 ರಿಂದ 90 ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದರು. ಆದರೆ, ಮತದಾರ ಈ ಭವಿಷ್ಯವನ್ನು ಸುಳ್ಳಾಗಿಸಿದ್ದ. ಪರಿಣಾಮ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ 27075, ಕಾಂಗ್ರೆಸ್ 25869 ಜೆಡಿಎಸ್ 15917 ಮತ್ತು ಇತರರು 10473 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಪಕ್ಷ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಸಹ ಅದು ಸ್ಥಳೀಯ ಚುನಾವಣೆಗಳ ಮೇಲೆ ಅಷ್ಟಾಗಿ ಪ್ರಭಾವ ಬೀರಿಲ್ಲ ಎಂದೇ ಹೇಳಲಾಗುತ್ತಿದೆ. ಈ ನಡುವೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಜೆಡಿಎಸ್ ಸಾಧನೆ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯನ್ನೇ ಮಾಡಿದೆ. ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಮೇಲೆ ವಿಶ್ವಾಸವಿಟ್ಟ ಮತದಾರರಿಗೆ ಕೃತಜ್ಞತೆಗಳು. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಸೋತರೂ, ಹೋರಾಟ ನಡೆಸಿದ ಅಭ್ಯರ್ಥಿಗಳಿಗೆ ನನ್ನ ಬೆಂಬಲ ಸದಾ ಇರಲಿದೆ.
1/3
— H D Kumaraswamy (@hd_kumaraswamy) December 31, 2020
ಚುನಾವಣೆಯಲ್ಲಿ ಈ ಹಂತದ ಸಾಧನೆ ಮಾಡಲು ನೆರವಾದವರು ಪಕ್ಷದ ತಳಮಟ್ಟದ ಕಾರ್ಯಕರ್ತರು. ರಾಜಕೀಯದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕಾರ್ಯಕರ್ತರು ಕೆಚ್ಚೆದೆಯ ಹೋರಾಟ ತೋರಿದ್ದರ ಫಲವಾಗಿಯೇ ನಮ್ಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಿಸಿದ್ದಾರೆ. ಪಕ್ಷ ತಳ ಮಟ್ಟದಲ್ಲಿಯೂ ಸ್ಥಿರ, ದೃಢವಾಗಿದೆ ಎಂದು ತೋರಿಸಿದ ಕಾರ್ಯಕರ್ತ ಸೋದರರಿಗೆ ನಾನು ಸದಾ ಋಣಿ.
2/3
— H D Kumaraswamy (@hd_kumaraswamy) December 31, 2020
ಚುನಾವಣೆಯಲ್ಲಿ ಗೆದ್ದಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗ್ರಾಮಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಿ. ಸ್ವಾವಲಂಬಿ ಗ್ರಾಮೀಣ ಭಾರತದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ. ಜೆಡಿಎಸ್ ಬೆಂಬಲಿತ ಮತ್ತು ಇತರ ಸದಸ್ಯರು ತಮ್ಮ ಗ್ರಾಮ ಪಂಚಾಯಿತಿಯನ್ನು ಮಾದರಿಯಾಗಿ ರೂಪಿಸಬೇಕು ಎಂದು ನಾನು ಹೇಳಲು ಇಚ್ಛಿಸುತ್ತೇನೆ.
3/3
— H D Kumaraswamy (@hd_kumaraswamy) December 31, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ