ಅನಾಥೆ, ಅಂಗವಿಕಲೆಯಾದರೂ ವಿಜಯಪುರದ ಈ ಯುವತಿಯ ಮಾನವೀಯತೆಗೆ ಒಂದು ದೊಡ್ಡ ಸಲಾಂ

ತನಗೊಂದು ಸ್ವಂತ ಸೂರಿಲ್ಲದಿದ್ದರೂ, ತನ್ನಂತೆ ವಾರಸುದಾರರಿಲ್ಲದ ಬೀದಿಬದಿಯ ನಾಯಿ ಮರಿಗಳಿಗೆ ಹಾಲುಣಿಸುವ ಮೂಲಕ ಮಾತೃ ಹೃದಯಿಯಾಗಿದ್ದಾಳೆ.

ಬೀದಿನಾಯಿಗಳಿಗೆ ಹಾಲು ಒದಗಿಸುತ್ತಿರುವ ಯುವತಿ ಮಹದೇವಿ ತಳವಾರ

ಬೀದಿನಾಯಿಗಳಿಗೆ ಹಾಲು ಒದಗಿಸುತ್ತಿರುವ ಯುವತಿ ಮಹದೇವಿ ತಳವಾರ

  • Share this:
ವಿಜಯಪುರ(ಏ. 30): ಈ ಬಸವ ನಾಡಿನ ಮಣ್ಣಿನ ಗುಣವೇ ಅಂಥದ್ದು. ತನಗೆ ಇಲ್ಲದಿದ್ದರೂ ಪರವಾಗಿಲ್ಲ ಪರೋಪಕಾರ ಎಂಬುದು ಇಲ್ಲಿನ ಜನರಲ್ಲಿ ರೂಢಿಗತವಾಗಿದೆ. ಇಲ್ಲಿ ಉಳ್ಳವರು ದೊಡ್ಡ ಪ್ರಮಾಣದಲ್ಲಿ ದಾನ, ಧರ್ಮ ಮಾಡಿದರೆ, ಬಡವರೂ ಕೂಡ ತಾವೇನೂ ಕಮ್ಮಿ ಇಲ್ಲ ಎಂದು ಕೈಲಾದಷ್ಟು ಸಹಾಯ ಮಾಡುತ್ತಿರುತ್ತಾರೆ. ಆದರೆ, ಈ ಸುದ್ದಿಯಲ್ಲಿರುವ ವಿಷಯ ಅದೆಲ್ಲಕ್ಕಿಂತ ತೀರ ಭಿನ್ನ ಮತ್ತು ಇತರರಿಗೂ ಮಾದರಿಯಾಗುವಂತಿದೆ. 

ಆಕೆ ಸುಮಾರು 25 ವರ್ಷದ ಯುವತಿ.  ಅಪ್ಪ, ಅಮ್ಮ ಯಾರೂ ಇಲ್ಲದ ಅನಾಥೆ.  ಮೇಲಾಗಿ ಅಂಗವಿಕಲೆ. ಸರಕಾರದಿಂದ ಅಂಗವಿಕಲರ ವೇತನ ಹೊರತುಪಡಿಸಿದರೆ ಈಕೆಗೆ ಬೇರೆ ಉದ್ಯೋಗವಿಲ್ಲ. ಇರಲು ಸೂರಿಲ್ಲ. ನಡೆಯಲೂ ಆಗುವುದಿಲ್ಲ. ಆದರೂ, ಈಕೆಯ ಮಾತೃ ಹೃದಯ ಮಾತ್ರ ಎಂಥವರನ್ನೂ ಮಂತ್ರಮುಗ್ದರನ್ನಾಗಿಸುತ್ತೆ. ಈಕೆ ವಾಸಿಸುವುದು ಬಸವನಾಡು ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ.  ಗ್ರಾಮದ ದೇವಸ್ಥಾನ, ಇತರ ಸರಕಾರಿ ಕಟ್ಟಡಗಳ ಬಳಿ ವಾಸಿಸುತ್ತಾಳೆ. ಸರಕಾರದಿಂದ ಬರುವ ಅಂಗವಿಕಲರ ವೇತನ ಒಂದೆಡೆಯಾದರೆ, ಅವರಿವರಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾಳೆ. ಆದರೆ, ಈಕೆ ಮಾಡುತ್ತಿರುವ ಕಾಯಕ ಮಾತ್ರ ಎಲ್ಲರೂ ಶ್ಲಾಘಿಸುವಂತಿದೆ.

ಇದನ್ನೂ ಓದಿ: ಚಾರ್ಟ್ ಆಫ್ ಡಿಮಾಂಡ್ ಸಲ್ಲಿಕೆಗೆ ವಿಪಕ್ಷ ನಿರ್ಧಾರ; ಕಾರ್ಯಗತಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಸಾರವಾಡ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಹಾಲಿನ ಅಂಗಡಿಗೆ ಹೋಗುವ ಈಕೆ ಎರಡು ಬಾರಿ ಹಾಲು ಖರೀದಿಸುತ್ತಾಳೆ. ಆ ಹಾಲನ್ನು ತೆಗೆದುಕೊಂಡು ಸಾವರಿಸಿಕೊಂಡು ಬಸ್ ನಿಲ್ದಾಣದ ಬದಿಯಲ್ಲಿರುವ ಯಾರಿಗೂ ಕಾಣಿಸದ ಜಾಗಕ್ಕೆ ತೆರಳುತ್ತಾಳೆ. ಅಲ್ಲಿ ಈಕೆಗಾಗಿ ಕೆಲವು ಜೀವಗಳು ಕಾಯುತ್ತಿರುತ್ತವೆ. ಈಕೆ ಬರುವುದಷ್ಟೇ ತಡ ಅವುಗಳು ತಾಯಿಯ ಕಡೆ ಓಡೋಡಿ ಬಂದಂತೆ ಈಕೆಯ ಕಡೆಗೆ ಬರುತ್ತವೆ. ತನ್ನ ಬಳಿ ಇರುವ ಪ್ಲಾಸ್ಟಿಕ್ ಡಬ್ಬಿಯಲ್ಲಿ ತಾನು ತಂದಿರುವ ಹಾಲಿನ ಪಾಕೆಟನ್ನು ಹರಿದು ಹಾಕುತ್ತಾಳೆ. ಆಗ ಹಸಿವಿನಿಂದಿರುವ ಜೀವಗಳು ಬಂದು ಆ ಹಾಲನ್ನು ಸೇವಿಸುತ್ತವೆ.

ತನಗೊಂದು ಸ್ವಂತ ಸೂರಿಲ್ಲದಿದ್ದರೂ, ತನ್ನಂತೆ ವಾರಸುದಾರರಿಲ್ಲದ ಬೀದಿಬದಿಯ ನಾಯಿ ಮರಿಗಳಿಗೆ ಹಾಲುಣಿಸುವ ಮೂಲಕ ಮಾತೃ ಹೃದಯಿಯಾಗಿದ್ದಾಳೆ.  ಪ್ರತಿ ನಿತ್ಯ ತಪ್ಪದೇ ಈ ರೀತಿಯಲ್ಲಿ ಈ ಯುವತಿ ಕಳೆದ ಆರೇಳು ವರ್ಷಗಳಿಂದ ಬೀದಿ ಬದಿಯ ನಾಯಿ ಮರಿಗಳಿಗೆ ಹಾಲು ಹಾಕುತ್ತಿದ್ದಾಳೆ. ತನ್ನ ಬಳಿಗೆ ಬರುವವರಿಗೆ ಈಕೆ ಹೇಳುವ ಮಾತು ಎಂಥವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ. ನೀವ್ಯಾರು ಈ ಕಡೆ ಬರಬ್ಯಾಡ್ರಿ. ಈ ನಾಯಿ ಮರಿಗಳಿಗೆ ನೆದರು ಆಗ್ತದ. ಅಂದರೆ ಈ ನಾಯಿ ಮರಿಗಳಿಗೆ ದೃಷ್ಟಿ ತಾಗುತ್ತದೆ ಎಂದು ಮಹಾದೇವಿ ತಳವಾರ ಹೇಳುವ ಮಾತು ಮಾತ್ರ ಈಕೆ ನಿಯತ್ತಿಗೆ ಹೆಸರಾಗಿರುವ ನಾಯಿಗಳ ಬಗ್ಗೆ ಹೊಂದಿರುವ ಪ್ರೀತಿಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ಯುವತಿಯ ಎಲೆ ಮರೆಯ ಕಾಯಿಯ ಸೇವೆಗೊಂದು ಹ್ಯಾಟ್ಸಾಫ್ ಹೇಳಲೇಬೇಕು.

ವರದಿ: ಮಹೇಶ ವಿ. ಶಟಗಾರ

First published: