news18-kannada Updated:January 11, 2021, 8:56 AM IST
ಪ್ರಶಾಂತ್ ದೇಶಪಾಂಡೆ
ಕಾರವಾರ(ಜ.11): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂದಿನ ಚುನಾವಣೆ ಸ್ಪರ್ಧಿಸಲು ಪ್ರಶಾಂತ್ ದೇಶಪಾಂಡೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಈಗಾಗಲೇ ತಾಲೀಮು ಪ್ರಾರಂಭಿಸಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಸಚಿವ ಶಿವರಾಮ ಹೆಬ್ಬಾರ್ ಬಿಜೆಪಿ ಸೇರ್ಪಡೆಯಾದ ನಂತರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಕಣಕ್ಕೆ ಇಳಿದಿದ್ದರು. ಚುನಾವಣೆಯ ಸೋಲಿನ ನಂತರ ಭೀಮಣ್ಣ ತನ್ನ ಮೂಲ ಕ್ಷೇತ್ರ ಶಿರಸಿಯತ್ತ ಮುಖ ಮಾಡಿದ್ದರು.
ಇನ್ನು ಕಳೆದ ಉಪಚುನಾವಣೆಯಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನಲಾಗಿದ್ದರೂ, ಅಂತಿಮ ಹಂತದಲ್ಲಿ ಅವರು ಒಪ್ಪಿರಲಿಲ್ಲ. ಸದ್ಯ ಕ್ಷೇತ್ರದಲ್ಲಿ ಯಾರನ್ನೂ ಈವರೆಗೆ ಕಾಂಗ್ರೆಸ್ ಭವಿಷ್ಯದ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಲು ಪ್ರಶಾಂತ್ ಚಿಂತನೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮಾಡಿ ಪಕ್ಷ ಬಲವರ್ಧನೆಗೆ ಮುಂದಾಗಿದ್ದರು. ಇದಾದ ನಂತರ ಮುಂಡಗೋಡಿನಲ್ಲಿ ಪಕ್ಷದ ಬೆಂಬಲದಿಂದ ಆಯ್ಕೆಯಾದ ಪಂಚಾಯತಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.
ಬಿ.ಎಲ್. ಸಂತೋಷ್ ಹೆಸರಲ್ಲಿ 30 ಲಕ್ಷ ರೂ. ವಂಚನೆ; ಕಳ್ಳ ಸ್ವಾಮಿ ಯುವರಾಜ್ ವಿರುದ್ಧ ಮತ್ತೊಂದು ಕೇಸ್ ದಾಖಲು
ಕ್ಷೇತ್ರದಲ್ಲಿ ಓಡಾಟ ನಡೆಸಿ ಚುನಾವಣೆ ವೇಳೆಗೆ ಜನರ ಅಭಿಪ್ರಾಯ ಪಡೆದು ಉತ್ತಮ ಬೆಂಬಲ ಸಿಕ್ಕರೆ ಅಭ್ಯರ್ಥಿಯಾಗಲು ಪ್ರಶಾಂತ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಕ್ಷೇತ್ರದ ಮೇಲೆ ಪ್ರಶಾಂತ್ ತಂದೆ ಆರ್.ವಿ.ದೇಶಪಾಂಡೆಗೆ ತನ್ನದೇ ಆದ ಹಿಡಿತವಿದೆ. ಈ ಹಿಂದೆ ಕ್ಷೇತ್ರದ ಅರ್ಧ ಭಾಗದಷ್ಟು ತನ್ನ ಹಳಿಯಾಳ ಕ್ಷೇತ್ರಕ್ಕೆ ಬರುತ್ತಿದ್ದು, ಆರು ಬಾರಿ ಇದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿನ್ನಲೆಯಲ್ಲಿ ತನ್ನ ಹಳೆಯ ಪರಿಚಯ ಬಳಸಿಕೊಂಡು ಚುನಾವಣೆಯಲ್ಲಿ ಮಗನನ್ನ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಮೂಲಕ ರಾಜಕೀಯ ನೆಲೆಯೊಂದನ್ನ ಕೊಡಿಸುವ ಚಿಂತನೆ ದೇಶಪಾಂಡೆಯವರದ್ದಾಗಿದೆ ಎನ್ನಲಾಗಿದೆ.
ಕಳೆದ ಉಪಚುನಾವಣೆಯಲ್ಲಿ ಹೆಬ್ಬಾರ್ ವಿರುದ್ಧ ಸ್ಪರ್ಧಿಸಿದ್ದ ಭೀಮಣ್ಣ ಪರ ದೇಶಪಾಂಡೆ ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರ ನಡೆಸಿದ್ದರು. ಚುನಾವಣೆ ವೇಳೆಗೆ ತಾವು ಅಥವಾ ತಮ್ಮ ಮಗನನ್ನ ಅಭ್ಯರ್ಥಿಯಾಗಿ ಮಾಡಿದರೆ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಹಲವು ಮುಖಂಡರು ತಿಳಿಸಿದ್ದ ಹಿನ್ನಲೆಯಲ್ಲಿ ಪ್ರಶಾಂತ್ ಯಲ್ಲಾಪುರ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಚಿಂತನೆ ಸಹ ನಡೆದಿದೆ ಎನ್ನಲಾಗಿದೆ.
ಕಾರ್ಯಕರ್ತರಲ್ಲಿ ಹುರುಪು
ಯಲ್ಲಾಪುರ ಕ್ಷೇತ್ರದಲ್ಲಿ ಕಳೆದ ಉಪಚುನಾವಣೆಯಾದ ನಂತರ ನಾಯಕರಿಲ್ಲ ಎನ್ನುವ ಬೇಸರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರದ್ದಾಗಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಪಕ್ಷವನ್ನ ಮುನ್ನಡೆಸುವ ನಾಯಕರೇ ಇಲ್ಲದಂತಾಗಿರುವುದು ದುರಾದೃಷ್ಟಕರ ಎಂದು ಹಲವು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು.ಇದೀಗ ಕ್ಷೇತ್ರದ ಮೇಲೆ ಪ್ರಶಾಂತ್ ದೇಶಪಾಂಡೆ ಗಮನಹರಿಸಿರುವುದು ಕಾರ್ಯಕರ್ತರಲ್ಲಿ ಹುರುಪು ತಂದಿದೆ. ಕಾಂಗ್ರೆಸ್ ಬಲಿಷ್ಠವಾಗಿರುವ ಕ್ಷೇತ್ರದ ಮುಂಡಗೋಡ ಹಾಗೂ ಬನವಾಸಿಯಲ್ಲಿ ಜೊತೆ ಯಲ್ಲಾಪುರ ತಾಲೂಕಿನ ಕಿರುವತ್ತಿ ಭಾಗದಲ್ಲಿ ಪಕ್ಷವನ್ನ ಇನ್ನಷ್ಟು ಗಟ್ಟಿ ಮಾಡಿ, ಚುನಾವಣೆಗೆ ತಯಾರಾಗಲು ಕಾಂಗ್ರೆಸ್ ಸಹ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ದೊಡ್ಡ ನಾಯಕರೆಲ್ಲ ಪಕ್ಷವನ್ನು ಬಿಟ್ಟು ಹೋದ ನಂತರ ಕಾರ್ಯಕರ್ತರು ನನ್ನನ್ನು ಹಾಗೂ ನನ್ನ ತಂದೆಯನ್ನು ಕ್ಷೇತ್ರಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದರು. 2008ರವರೆಗೆ ತಂದೆ ಈ ಕ್ಷೇತ್ರದ ಶಾಸಕರಾಗಿದ್ದರಿಂದ ಜನರಿಗೆ ನಮ್ಮ ಮೇಲೆ ಈಗಲೂ ಪ್ರೀತಿ ಇದೆ. ಹೀಗಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹೊಣೆ ನನ್ನ ಹಾಗೂ ತಂದೆಯ ಮೇಲಿದೆ. ಚುನಾವಣಾ ಸಂದರ್ಭದಲ್ಲಿ ಯಾರು ಅಭ್ಯರ್ಥಿಯಾಗಲಿದ್ದಾರೆನ್ನುವುದನ್ನು ಪಕ್ಷವೇ ತೀರ್ಮಾನಿಸಲಿದೆ ಎಂದು ಪ್ರಶಾಂತ್ ದೇಶಪಾಂಡೆ ತಿಳಿಸಿದ್ದಾರೆ.
Published by:
Latha CG
First published:
January 11, 2021, 8:56 AM IST