• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಲಾಲ್​ ಬಹದ್ದೂರ್ ಶಾಸ್ತ್ರಿ ಸಾಗರ ಅಣೆಕಟ್ಟು

ಲಾಲ್​ ಬಹದ್ದೂರ್ ಶಾಸ್ತ್ರಿ ಸಾಗರ ಅಣೆಕಟ್ಟು

ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಹಮ್ಮಿಕೊಂಡು ಅಧಿಕಾರಕ್ಕೆ ಬಂದು ಯೋಜನೆ ಪೂರ್ಣಗೊಳಿಸಲು ಆಗಲಿಲ್ಲ.

  • Share this:

ಬಾಗಲಕೋಟೆ (ಜ.27): ಕೃಷ್ಣಾ ಮೇಲ್ದಂಡೆ ಯೋಜನೆ ದೇಶದ ಪ್ರಮುಖ ನೀರಾವರಿ ಯೋಜನೆಗಳಲ್ಲೊಂದಾಗಿದೆ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ಮಾತ್ರ ಪೂರ್ಣಗೊಳ್ಳುತ್ತಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ, ಆಳುವ ಸರ್ಕಾರಗಳಿಂದ ಸೂಕ್ತ ಹಣಕಾಸು ನೆರವು ಸಿಗುತ್ತಿಲ್ಲ.ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದ್ದು,ಯೋಜನೆ ಪೂರ್ಣಗೊಳಿಸಲು ಹಣಕಾಸು ಕೊರತೆ ಎದ್ದುಕಾಣುತ್ತಿದೆ. ಇದೀಗ ರಾಜ್ಯ ಬಿಜೆಪಿ ಸರ್ಕಾರ ಯುಕೆಪಿ ಯೋಜನೆ, ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.


ಈಗಾಗಲೇ ಯುಕೆಪಿ ಯೋಜನೆ ಹಂತ,1ಹಾಗೂ 2ಮುಗಿದಿದ್ದು, ಮೂರನೇ ಹಂತದ ಯೋಜನೆ ಭೂ ಸ್ವಾಧೀನ, ಪುನರ್ ನಿರ್ಮಾಣ ಪುನರ್ ವಸತಿ ಕಲ್ಪಿಸಬೇಕಿದೆ. 51 ಸಾವಿರ ಕೋಟಿ ರೂ. ಅನುದಾನ ಬೇಕಿರುವ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕೆನ್ನುವ ಕೂಗು ಇದೀಗ ರಾಜ್ಯ ಸರ್ಕಾರದಿಂದಲೇ ಕೇಳಿಬಂದಿದೆ.ಈಚೆಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗಲೂ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ  ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ಹಿನ್ನೀರಿನಿಂದಾಗಿ ಇದೀಗ ಯುಕೆಪಿ ಹಂತ-03 ಪೂರ್ಣಗೊಳ್ಳಬೇಕಿದೆ.


ಅಂದರೆ ಆಲಮಟ್ಟಿ ಜಲಾಶಯವನ್ನು 519.60 ಮೀಟರ್ ನಿಂದ 524.256 ಮೀಟರ್ ಗೆ ಹೆಚ್ಚಿಸಬೇಕು.ಇದಕ್ಕೆ ಮುಳುಗಡೆ ಜಮೀನು, ಕಾಲುವೆ ನಿರ್ಮಾಣ, ಮುಳುಗಡೆ ಆಗುವ 20 ಗ್ರಾಮಗಳಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ 51 ಸಾವಿರ ಕೋಟಿ ರೂ. ಬೇಕು ಎಂದು ಕಳೆದ ನಾಲ್ಕು ವರ್ಷಗಳ ಹಿಂದೆ ಸರ್ಕಾರ ಅಂದಾಜಿಸಲಾಗಿದೆ. ಯೋಜನೆ ವಿಳಂಬದಿಂದಾಗಿ ಅದರ ಅಂದಾಜು ವೆಚ್ಚ ಹೆಚ್ಚಾಗಲಿದೆ. ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಹಮ್ಮಿಕೊಂಡು ಅಧಿಕಾರಕ್ಕೆ ಬಂದು ಯೋಜನೆ ಪೂರ್ಣಗೊಳಿಸಲು ಆಗಲಿಲ್ಲ.


ಪ್ರತಿ ವರ್ಷ 10ಸಾವಿರ ಕೋಟಿ ಅನುದಾನ ಕೊಟ್ಟು ಐದು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ವಾಗ್ದಾನ ಮಾಡಿದ್ದರು. ಆದರೆ ಯೋಜನೆ ಪೂರ್ಣಗೊಳ್ಳಲೇ ಇಲ್ಲ. ಇನ್ನು ಆ ಬಳಿಕ  ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಇಷ್ಟು ಅನುದಾನ ರಾಜ್ಯ ಸರ್ಕಾರಕ್ಕೆ ಹೊರೆಯಾಗಲಿದೆ, ಇದನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಸ್ವತಃ ಕುಮಾರಸ್ವಾಮಿ ಬಾಗಲಕೋಟೆಗೆ ಬಂದ ವೇಳೆ  ಆಗ್ರಹಿಸಿದ್ದರು.


ಕಲಬುರ್ಗಿಯಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ ಅಭಿಯಾನ; ಪುಸ್ತಕ ಪ್ರೇಮಿಗಳಿಂದ ವ್ಯಾಪಕ ಬೆಂಬಲ


ಈಗಿನ ಬಿಎಸ್ ವೈ ಸರ್ಕಾರ ಪ್ರತಿ ವರ್ಷ ಹೆಚ್ಚಿನ ಅನುದಾನ ಒದಗಿಸಿ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದರೂ ನೆರೆ, ಕೊರೊನಾ ಎಂದು ಬಿಡಿಗಾಸು ಕೊಟ್ಟಿಲ್ಲ.ಕಳೆದ  ವರ್ಷದಲ್ಲಿ ಬಜೆಟ್ನಲ್ಲಿ ಯುಕೆಪಿ ಯೋಜನೆಗೆ ಸೂಕ್ತ ಅನುದಾನ ಸಿಕ್ಕಿಲ್ಲ. ಈ ವರ್ಷದ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಅನುದಾನ ಸಿಗುವ ಭರವಸೆಯೂ ಇಲ್ಲ.  ಹೀಗಾಗಿ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಕೇಂದ್ರದ ನೆರವು ಸಿಕ್ಕು ಯೋಜನೆ ಪೂರ್ಣಗೊಳಿಸಬಹುದು ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಂತೆ ಕಾಣುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಭೆ ಕರೆದ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.


ಇನ್ನು ರಾಜ್ಯ ಸರ್ಕಾರದಿಂದ ಒತ್ತಡ ಬರಬೇಕಿದೆ. ಬರುವ ಕೇಂದ್ರ ಬಜೆಟ್ ವೇಳೆ ಯೋಜನಾ ವ್ಯಾಪ್ತಿಯ ಬಾಗಲಕೋಟೆ, ರಾಯಚೂರು, ವಿಜಯಪುರ, ಬೆಳಗಾವಿ    ಸಂಸದರು  ಸಭೆ ನಡೆಸಿ ಕೇಂದ್ರದ ಗಮನಕ್ಕೆ ತರುವದಾಗಿ ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ ಹೇಳಿದ್ದಾರೆ. ಇನ್ನು ಡಿಸಿಎಂ ಗೋವಿಂದ ಕಾರಜೋಳ,ಯುಕೆಪಿ ಯೋಜನೆಯನ್ನು ರಾಜ್ಯ ಸರ್ಕಾರ ಮರೆತಿಲ್ಲ. ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದೆ.ಬರುವ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಸಿಗಲಿದೆ.ಈಚೆಗೆ ಬಾಗಲಕೋಟೆ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ವೇಳೆ ಯುಕೆಪಿ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿಸಲು ಮನವಿ ಮಾಡಲಾಗಿದೆ ಎಂದರು.


ಇನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗೆ ಕೇಂದ್ರ  ಬಜೆಟ್ ಹಿನ್ನೆಲೆಯಲ್ಲಿ ರಾಜ್ಯ ಹಣಕಾಸು ಸಚಿವರ ವಿಡಿಯೋ ಸಂವಾದದಲ್ಲಿ ರಾಜ್ಯದ ಪರವಾಗಿ ಪಾಲ್ಗೊಂಡಿದ್ದ ಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವರ ಎದುರು ಯುಕೆಪಿಯನ್ನು ರಾಷ್ಟ್ರೀಯ ಯೋಜನೆಯೆಂದು ರೂಪಿಸುವಂತೆ ಒತ್ತಾಯಿಸಿದ್ದಾರೆ.ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಈಗಾಗಲೇ 80 ರಷ್ಟು ಕೆಲಸ ಮುಕ್ತಾಯವಾಗಿದೆ. ಈ ಹಿಂದೆಯೇ 80 ರಷ್ಟು ಮುಳುಗಡೆ ಆಗಿರುವ ಗ್ರಾಮಗಳಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಗಿದೆ. 2.50 ಲಕ್ಷ ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ಪರಿಹಾರವನ್ನು ಕೊಡಲಾಗಿದೆ. ಸದ್ಯ ಮೂರನೇ ಹಂತಕ್ಕೆ 1.30 ಲಕ್ಷ ಎಕರೆ ಜಮೀನು ಸ್ವಾಧೀನಕ್ಕೆ ಪರಿಹಾರ ಕೊಡಬೇಕು. ಮುಳುಗಡೆ ಆಗುವ 20 ಗ್ರಾಮಗಳಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಲ್ಪಿಸಬೇಕು. ಹೀಗಾಗಿ ಯುಕೆಪಿ ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ.80 ರಷ್ಟು ಕೆಲಸವನ್ನು ಪೂರ್ಣಗೊಳಿಸಿದೆ.


ಉಳಿದಿರುವ 20 ರಷ್ಟು ಕಾಮಗಾರಿಗೆ ರಾಷ್ಟ್ರೀಯ ಯೋಜನೆ ಅಂತ ಘೋಷಿಸಿ ಎಂದು ಕೈಚಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕಿದೆ. ರಾಜ್ಯ ಸರ್ಕಾರದ್ದು ವಾರ್ಷಿಕ 10 ಸಾವಿರ ಕೋಟಿ ರೂ. ಬಜೆಟ್ ಇದ್ದಾಗ ನೀರಾವರಿಗೆ ಶೇ.10 ಅನುದಾನ ಕೊಡುತ್ತಿದ್ದರು. ಈಗ ಬಜೆಟ್ 2.50 ಲಕ್ಷ ಕೋಟಿ ರೂ. ಇದೆ. ಅದೇ ಶೇ. 10 ರಷ್ಟು ಅನುದಾನ ಮೀಸಲು ಇಟ್ಟರೆ ಎರಡು ವರ್ಷದಲ್ಲಿ ಯೋಜನೆಗೆ 50 ಸಾವಿರ ಕೋಟಿ ರೂ.ಒದಗಿಸಬಹುದು. ಹೆಚ್ಚೆಂದರೆ ಮೂರು ವರ್ಷದಲ್ಲಿ ಯೋಜನೆ ಮುಗಿಯುತ್ತದೆ. ಇದನ್ನು ಬಿಟ್ಟು ಸುಮ್ಮನೆ ಕಾಲಹರಣ ಮಾಡಲು, ಜನರಿಗೆ ಪ್ರಸ್ತಾವನೆ ಕೇಂದ್ರದ ಮುಂದಿದೆ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡುತ್ತಿದೆ. ರಾಜ್ಯ ಸರ್ಕಾರವಾದರೂ ಕೊಡಲಿ, ಕೇಂದ್ರದ ನೆರವು ಆದರೂ ಪಡೆಯಿರಿ. ಒಟ್ಟಾರೆ, ಎರಡ್ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆಗ್ರಹಿಸಿದ್ದಾರೆ.


ಒಟ್ಟಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ದಾಳವಾಗುತ್ತಿದೆ. ಈ ಯೋಜನೆ ಪೂರ್ಣಗೊಳಿಸುವ ಆಸೆ ತೋರಿಸಿ ಅಧಿಕಾರಕ್ಕೆ ಬರುವ ಸರ್ಕಾರಗಳು ಮುಂದೆ ಯೋಜನೆಯನ್ನೇ ಮರೆಯುತ್ತಿದ್ದಾರೆ.ಇದೀಗ ರಾಜ್ಯ ಬಿಜೆಪಿ ಸರ್ಕಾರ ಯುಕೆಪಿ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿಸಲು ಹೊರಟಿದೆ.ಆದರೆ ರಾಷ್ಟ್ರೀಯ ಯೋಜನೆಯಾದರೆ ಯುಕೆಪಿ ಯೋಜನೆ ಸಾಕಾರವಾಗುತ್ತಾ ಎನ್ನುವ ಪ್ರಶ್ನೆ ಸಂತ್ರಸ್ತರಿಗೆ ಕಾಡತೊಡಗಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು