Panchamasali Reservation: ರಾಜ್ಯ ಸರ್ಕಾರಕ್ಕೆ ಮತ್ತೆ ಲಿಂಗಾಯತ ಮೀಸಲಾತಿ ಬಿಸಿ; ನಾಳೆ ಸಿಎಂ ಮನೆಗೆ ಮುತ್ತಿಗೆಗೆ ನಿರ್ಧಾರ

ರಾಜ್ಯ ಸರ್ಕಾರಕ್ಕೆ ಮತ್ತೆ ಲಿಂಗಾಯತ ಮೀಸಲಾತಿ ಬಿಸಿ ತುಪ್ಪುವಾಗಿ ಮಾರ್ಪಟ್ಟಿದೆ. ಬೃಹತ್​ ಪ್ರತಿಭಟನೆ ಮೂಲಕ ಸಿಎಂ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದ್ದು, ಅಕ್ಟೋಬರ್ ನಲ್ಲಿ ವಿಧಾನಸೌಧ ಮುತ್ತಿಗೆಗೂ ತೀರ್ಮಾನಿಸಿದ್ದಾರೆ.

ನಾಳೆ ಬೃಹತ್​ ಪ್ರತಿಭಟನೆಗೆ ನಿರ್ಧಾರ

ನಾಳೆ ಬೃಹತ್​ ಪ್ರತಿಭಟನೆಗೆ ನಿರ್ಧಾರ

  • Share this:
ಹುಬ್ಬಳ್ಳಿ (ಸೆ.19): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತಿಗೆ ತಪ್ಪಿದ್ದು ಅವರ ನಿವಾಸದ ಎದುರು ನಾಳೆ ಪ್ರತಿಭಟನೆ ಮಾಡಲು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ  ನಿರ್ಧರಿಸಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, (Mruthyunjaya Swamiji) ಲಿಂಗಾಯಿತರು ಶೇ. 80 ರಷ್ಟು ಮತ ಹಾಕಿದ ಸರ್ಕಾರ ಅಧಿಕಾರದಲ್ಲಿದ. ಮತ ಹಾಕಿಸಿಕೊಂಡು ಬಿಜೆಪಿ ಸರ್ಕಾರ ಕೈಕೊಟ್ಟಿದೆ. 2 ಎ ಮೀಸಲಾತಿಗಾಗಿ  (2 A Reservation) ಕಳೆದ 2 ವರ್ಷಗಳಿಂದ ಬಹುದೊಡ್ಡ ಹೋರಾಟ ಮಾಡುತ್ತಿದ್ದೇವೆ. ಸಿಎಂ ಬೊಮ್ಮಾಯಿ 6 ತಿಂಗಳೊಳಗಾಗಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಈವರೆಗೂ ಕೊಟ್ಟ ಮಾತನ್ನ ಸರ್ಕಾರ (Government) ಉಳಿಸಿಕೊಂಡಿಲ್ಲ ಎಂದ್ರು. 

ಸರ್ಕಾರ ನಾಲ್ಕನೇ ಬಾರಿಗೆ ಕೊಟ್ಟ ಮಾತನ್ನ ತಪ್ಪಿದೆ. ಹಾಗಾಗಿ ನಾಳೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಿಎಂ ನಿವಾಸದ ಮುಂದೆ ಧರಣಿ ನಡೆಸಲಿದ್ದೇವೆ. ಶಿಗ್ಗಾವಿಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಶಿಗ್ಗಾವಿಯ ಚೆನ್ನಮ್ಮ ವೃತ್ತದಿಂದ ಬೆಳಿಗ್ಗೆ 9 ಗಂಟೆಗೆ ಜಾಥಾ ಮೂಲಕ ಸಿಎಂ ನಿವಾಸದ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ. ಕಳೆದ ಒಂದು ವರ್ಷದಿಂದ ಸಿಎಂ ಮಾತು ತಪ್ಪುವ ಕೆಲಸ ಮಾಡುತ್ತಿದ್ದಾರೆ. ಚಕ್ಕಡಿ, ಟ್ರ್ಯಾಕ್ಟರ್ ಗಳ ಮೂಲಕ ಬೃಹತ್ ಪ್ರತಿಭಟನಾ ಜಾಥಾ ನಡೆಸಲಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಮೀಸಲಾತಿ ಸಿಗದಿದ್ರೆ ಬೆಂಗಳೂರು ಚಲೋ! 

ನಾಳೆ ಧರಣಿಯ ನಂತರವೂ ಮೀಸಲಾತಿ ಸಿಗದೇ ಹೋದರೆ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಬೆಂಗಳೂರು ಚಲೋ ನಡೆಸಲಿದ್ದೇವೆ. 25 ಲಕ್ಷ ಸಮುದಾಯದ ಜನರ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ನಮ್ಮ ಸಮುದಾಯದ ಶೇ 80 ಪ್ರತಿಶತ ಮತಗಳಿಂದ ಈ ಸರ್ಕಾರ ರಚನೆಯಾಗಿದೆ. ಆದರೆ ಈ ಸರ್ಕಾರದಿಂದಲೇ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ.

ನಮ್ಮ ಸಮುದಾಯದ ಶಾಸಕರು ಸದನದ ಒಳಗಡೆ ಹೋರಾಟ ಮಾಡುತ್ತಾರೆ. ನಾವು ಹೊರಗಡೆ ಹೋರಾಟ ಮಾಡುತ್ತೇವೆ. ಹೋರಾಟದ ಮೂಲಕ ಮೀಸಲಾತಿ ಪಡೆದೇ ತೀರುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಯಾವುದೋ ಒಬ್ಬ ಮಹಾನ್ ವ್ಯಕ್ತಿಯ ಒತ್ತಡಕ್ಕೆ ಒಳಗಾಗಿದ್ದಾರೆ. ಮಹಾನ್ ವ್ಯಕ್ತಿಯ ಪ್ರಭಾವದಿಂದಾಗಿ ಮೀಸಲಾತಿ ನೀಡುವುದಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ. ಆ ಮಹಾನ್ ವ್ಯಕ್ತಿ ಯಾರೆಂಬುದನ್ನ ಶೀಘ್ರವೇ ತಿಳಿಸುತ್ತೇನೆ ಎಂದ್ರು.ಈ ಸರ್ಕಾರ ಮೀಸಲಾತಿ ಬಗ್ಗೆ ಒಂದು ಸ್ಪಷ್ಟತೆ ನೀಡಲಿ

ಮೀಸಲಾತಿ ಕೊಡದೇ ಇದ್ದಲ್ಲಿ ಈ ಬಾರಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗುತ್ತೇವೆ. ಸರ್ಕಾರ ಚಾಪೆ ಕೆಳಗೆ ನುಗ್ಗಿದ್ರೆ ನಾವು ರಂಗೋಲಿ ಕೆಳಗೆ ನುಗ್ಗಿ ಹೋರಾಟ ಮಾಡಿ ಮೀಸಲಾತಿ ಪಡೆಯುತ್ತೇವೆ. ಇದು ಯಾವುದೇ ಚುನಾವಣೆಗಾಗಿ ಹೋರಾಟವಲ್ಲ, ಸಮಾಜದ ಒಳಿತಿಗಾಗಿ ಹೋರಾಟ, ಮೀಸಲಾತಿ ಕೊಡದೇ ಹೋದಲ್ಲಿ ನಮ್ಮ ಮುಂದಿನ ನಿರ್ಧಾರವನ್ನ ಸ್ಪಷ್ಟಪಡಿಸುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ: Cabinet Meeting: ಪೌರಕಾರ್ಮಿಕರಿಗೆ ಗುಡ್​ ನ್ಯೂಸ್​; ಸರ್ಕಾರಿ ನೌಕರರೆಂದು ನೇಮಕಾತಿಗೆ ಸಂಪುಟ ಸೂಚನೆ

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧ

ಇದೇ ವೇಳೆ ಮಾತನಾಡಿದ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ‌ ಕಾಶಪ್ಪನವರ್, ನಮ್ಮ ಹೋರಾಟದ ಹಿನ್ನೆಲೆ ಸರ್ಕಾರ ಮೂರ್ನಾಲ್ಕು ಬಾರಿ ಭರವಸೆ ನೀಡಿದೆ. ಸರ್ಕಾರ ಕೇವಲ ಆಶ್ವಾಸನೆ ನೀಡುವ ಕೆಲಸವನ್ನೇ ಮಾಡುತ್ತಿದೆ. ಹೀಗಾಗಿ ನಾವು ಕೊನೆಯ ಹಂತದ ಹೋರಾಟಕ್ಕೆ ಮುಂದಾಗಿದ್ದೇವೆ. ಸರ್ಕಾರದ ಸುಳ್ಳು ಆಶ್ವಾಸನೆಗೆ ನಮ್ಮ ಸಮುದಾಯದ ಜನ ಬೇಸತ್ತು ಹೋಗಿದ್ದಾರೆ. ಇದು ನಮ್ಮ‌ಅಂತಿಮ ಹಂತದ ಹೋರಾಟ ಈ ಹೋರಾಟಕ್ಕೆ ಸರ್ಕಾರ ಮಣಿಯದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧ ಎಂದ್ರು.

ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ

25 ಲಕ್ಷ ಜನರನ್ನ ಸೇರಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಅಕ್ಟೋಬರ್ - ನವೆಂಬರ್ ನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ನಾವು ರಾಜಕೀಯ ಲಾಭಕ್ಕಾಗಿ ಮೀಸಲಾತಿ ಕೇಳುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಗಾಗಿ ಮೀಸಲಾತಿ ಕೇಳುತ್ತಿದ್ದೇವೆ. ಇದು ಪಕ್ಷಾತೀತ ಹೋರಾಟವಾಗಿದೆ, ಇದರಲ್ಲಿ ಯಾವುದೇ ಪಕ್ಷದ ಪ್ರಶ್ನೆಯೇ ಇಲ್ಲ. ಸಂದರ್ಭ ಬಂದರೆ ನಾವು ರಾಜಕೀಯವನ್ನೇ ತ್ಯಾಗ ಮಾಡುತ್ತೇವೆ ಸಮುದಾಯವನ್ನ ಬಿಡುವುದಿಲ್ಲ. ನಮ್ಮ ಜಿಲ್ಲೆಯ ಓರ್ವ ಸಚಿವರೇ ಈ ಮೀಸಲಾತಿಗೆ ಅಡ್ಡಿಪಡಿಸುತ್ತಿದ್ದಾರೆ.

ಇದನ್ನೂ ಓದಿ: Male Mahadeshwara Hills: ಮಹದೇಶ್ವರಬೆಟ್ಟದಲ್ಲಿ ಡಿಜಿಟಲ್ ಹುಂಡಿ; ಕ್ಯೂಆರ್ ಕೋಡ್ ಬಳಸಿ ಕಾಣಿಕೆ ಅರ್ಪಿಸಿ

ನಮ್ಮ ಸಮುದಾಯದ ಯಾವೊಬ್ಬ ಜನರೂ ಅವರ ಮನೆ ಕಡೆ ತಿರುಗಿ ನೋಡುತ್ತಿಲ್ಲ.  ಸದ್ಯ ಅವರ ಪರಿಸ್ಥಿತಿ ಏನಾಗಿದೆ ಅನ್ನೋದು ಅವರು ಅರಿತುಕೊಳ್ಳಲಿ. ಈ ಹಿಂದೆಯೂ ಅವರು ಇದೇ ರೀತಿ ಹೋರಾಟಕ್ಕೆ ಅಡ್ಡಪಡಿಸಿದ್ದರು. ಆದ್ರೆ ನಾವು ಅದ್ಯಾವುದಕ್ಕೂ ಬಗ್ಗಲಿಲ್ಲ. ಈ ಹಿಂದೆ ನಮ್ಮ ಸಮಾಜದವರು ಯಾರೆಲ್ಲ ಈ ರೀತಿ ವರ್ತನೆ ಮಾಡಿದ್ದಾರೆ ಅವರ ಪರಿಸ್ಥಿತಿ ಏನಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದರು.
Published by:ಪಾವನ ಎಚ್ ಎಸ್
First published: