ರಾಜ್ಯದಲ್ಲಿ ಮತ್ತೊಂದು ಹೊಸ‌ ಜಿಲ್ಲೆ‌ ರಚನೆಗೆ ಬೇಡಿಕೆ; ಕುಂದಗನ್ನಡ ಜಿಲ್ಲೆ ರಚನೆಗೆ ಕುಂದಾಪುರ ಭಾಷಿಗರ ಪಟ್ಟು

ತುಳುನಾಡಿನವರಿಗೆ ಹಾಗೂ ಕುಂದಗನ್ನಡಿಗರಿಗೆ ಇರುವ ಸಂಸ್ಕೃತಿ ಸಂಸ್ಕಾರ ಬೇರೆ. ಕುಂದಗನ್ನಡ ಭಾಷೆ ಮಾತನಾಡುವವರು ಭಟ್ಕಳ ದವರೆಗೂ ಕಾಣಬಹುದು. ‌  ಯಾವುದೇ ಸರ್ಕಾರಿ ಕೆಲಸ ಆಗಬೇಕಿದ್ದರೆ ಕುಂದಾಪುರ ಗ್ರಾಮೀಣ ಭಾಗದವರು 100ಕಿಲೋಮೀಟರ್ ದೂರ ಇರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಬೇಕು.  100ಕಿಲೊಮೀಟರ್ ದೂರ ಹೋಗಬೇಕು

ಕುಂದಾಪುರ

ಕುಂದಾಪುರ

  • Share this:
ಉಡುಪಿ(ಮಾ.10): ರಾಜ್ಯದಲ್ಲಿ 31 ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ರಚನೆ ಆದ ಬೆನ್ನಲ್ಲೇ ಇದೀಗ ಕುಂದಗನ್ನಡ ಜಿಲ್ಲೆ ರಚನೆ ಕೂಗು ಕೇಳಿ ಬಂದಿದೆ.  ಉಡುಪಿ ಜಿಲ್ಲೆಯಿಂದ ಕುಂದಾಪುರ ತಾಲೂಕನ್ನು ಬೇರ್ಪಡಿಸಿ ಹೊಸ ಜಿಲ್ಲೆಯನ್ನಾಗಿ‌ ರಚನೆ ಮಾಡಬೇಕು ಎನ್ನುವ ಆಗ್ರಹ ಕುಂದಗನ್ನಡಿಗರದ್ದು. ಹಾಗಾದ್ರೆ ಈ ಹೋರಾಟ‌ ಶುರುವಾಗಿದ್ದೇಗೆ, ಜಿಲ್ಲೆ ರಚನೆ ಹಿಂದಿರುವ ಬೇಡಿಕೆಗಳೇನು? ಮುಂದೆ ಓದಿ.

ಹೌದು, ಕುಂದಾಪುರ ತಾಲೂಕನ್ನು ಜಿಲ್ಲೆಯಾಗಿ ರಚನೆ‌ ಮಾಡಬೇಕೆನ್ನುವ ಆಗ್ರಹ ಇಂದು ನಿನ್ನೆಯದಲ್ಲ. 1997 ರಲ್ಲಿ ಮಖ್ಯಮಂತ್ರಿಯಾಗಿದ್ದ ಜೆ.ಎಚ್ ಪಟೇಲರ ಕಾಲದಿಂದಲೂ ಕುಂದಗನ್ನಡ ಆಗಬೇಕೆನ್ನುವ ಬೇಡಿಕೆಯಿತ್ತು. ಅಂದಿನ ಮುಖ್ಯ ಮಂತ್ರಿಗಳು ಕೂಡ ಎಲ್ಲಿ ಸಹಾಯಕ ಕಮಿಷನರ್ ಕಚೇರಿ ಇದೆಯೋ ಅದನ್ನೇ ಜಿಲ್ಲಾಕೇಂದ್ರವಾಗಿ ಮಾಡುವ ಭರವಸೆ ನೀಡಿದ್ರು. ಆದ್ರೆ ಕುಂದಾಪುರದಲ್ಲೇ ಜಿಲ್ಲಾಮಟ್ಟದ ಎಸಿ ಕಚೇರಿ, ಎಲ್ಲಾ‌ ಸರ್ಕಾರಿ ಕಚೇರಿ, ಪ್ರವಾಸಿ ತಾಣಗಳು ಸಾಕಷ್ಟಿದ್ದರೂ ಜಿಲ್ಲೆ ಭಾಗ್ಯ ಕೈತಪ್ಪಿ ಉಡುಪಿ ಪಾಲಾಯಿತು.‌

ಇನ್ನು ಜಿಲ್ಲೆಯ ಬೌಗೋಳಿಕ ಲಕ್ಷಣ‌ ನೋಡಿದ್ರೆ ಕುಂದಾಪುರ ತಾಲೂಕೇ ಅಗ್ರ ಸ್ಥಾನದಲ್ಲಿದೆ. ಜಿಲ್ಲೆಯ 153 ಗ್ರಾಮಗಳಲ್ಲಿ ಅತೀ ಹೆಚ್ಚು 65ಗ್ರಾಮಗಳನ್ನ ಹೊಂದುವ ಮೂಲಕ ಅತೀ ಹೆಚ್ಚು ವಿಸ್ತೀರ್ಣ ಹೊಂದಿರುವ ತಾಲೂಕಿದ್ದರೆ ಅದು ಕುಂದಾಪುರ ತಾಲೂಕು. ಹೀಗೆ ಎಲ್ಲಾ ಅರ್ಹತೆಗಳಿದ್ದರೂ ಕುಂದಾಪುರ ತಾಲೂಕನ್ನ ಕಡೆಗಣಿಸಲಾಗಿದೆ.‌ ಪ್ರತೀ ಚುನಾವಣೆಯಲ್ಲಿ ಬೈಂದೂರು ಹಾಗೂ ಕುಂದಾಪುರ ತಾಲೂಕಿನಿಂದ ಗೆದ್ದ ಶಾಸಕರಿಗೆ ಸಚಿವ ಸ್ಥಾನ ತಪ್ಪಿಹೋಗುತ್ತಿದೆ.‌

ಸುವರ್ಣ ನದಿ ಉತ್ತರ ಭಾಗದವರನ್ನ ಬಡಗಿನವರೆಂದು ನಿರ್ಲಕ್ಷ್ಯ ಮಾಡಲಾಗುತ್ತಿದೆ. ವಿಶಿಷ್ಟ ಭಾಷೆ ಸಂಸ್ಕೃತಿ‌ ಹೊಂದಿರುವ ತಾಲೂಕು ಕುಂದಾಪುರ. ಹೊಯ್ಕ ಬರ್ಕ ಹೀಗೆ ಶಾರ್ಟ್ ಅಥವಾ ಸೂಕ್ಷ್ಮವಾಗಿ  ಮಾತನಾಡುವ ನಮ್ಮ ಕುಂದಗನ್ನಡ‌ ಭಾಷೆ ಕುಮಾರವ್ಯಾಸ ಭಾರತದಲ್ಲೇ ಅನೇಕ ಶಬ್ದಗಳು ಅಡಕವಾಗಿರುವುದರಿಂದ ಕುಂದಗನ್ನಡಕ್ಕೆ ಪುರಾತನ ಹಿನ್ನಲೆಯಿದೆ ಅನ್ನೋದು ಕುಂದಾಪುರದ ಮಾಜಿ‌ ಶಾಸಕ ಅಪ್ಪಣ್ಣ ಹೆಗ್ಡೆಯವರ ವಾದ.

Ganesh: ವಿದೇಶದಲ್ಲಿ ಗಾಳಿಪಟದ ಹಬ್ಬದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​..!

ತುಳುನಾಡಿನವರಿಗೆ ಹಾಗೂ ಕುಂದಗನ್ನಡಿಗರಿಗೆ ಇರುವ ಸಂಸ್ಕೃತಿ ಸಂಸ್ಕಾರ ಬೇರೆ. ಕುಂದಗನ್ನಡ ಭಾಷೆ ಮಾತನಾಡುವವರು ಭಟ್ಕಳ ದವರೆಗೂ ಕಾಣಬಹುದು. ‌  ಯಾವುದೇ ಸರ್ಕಾರಿ ಕೆಲಸ ಆಗಬೇಕಿದ್ದರೆ ಕುಂದಾಪುರ ಗ್ರಾಮೀಣ ಭಾಗದವರು 100ಕಿಲೋಮೀಟರ್ ದೂರ ಇರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಬೇಕು.  100ಕಿಲೊಮೀಟರ್ ದೂರ ಹೋಗಬೇಕು. ಇನ್ನು ಕುಂದಾಪುರದಿಂದ 50ಕಿಲೋಮೀಟರ್ ದೂರವಿರುವ ಭಟ್ಕಳ ಕೂಡ ಎಲ್ಲಾ ರೀತಿಯಲ್ಲಿ ಕುಂದಾಪುರವನ್ನು ಅವಲಂಬಿಸಿಕೊಂಡಿದ್ದಾರೆ. ಭಟ್ಕಳದವರಿಗೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಲು 170ಕಿಲೋಮೀಟರ್ ದೂರ ತೆರಳಬೇಕು.

ಅಭಿವೃದ್ದಿಯಲ್ಲೂ ಕುಂದಾಪುರ ತಾಲೂಕು ಹಿಂದೆ ಬಿದ್ದಿದೆ. ಫ್ಲೈಓವರ್ ದಶಕಗಳೇ ಕಳೆದರೂ ಪೂರ್ಣಗೊಂಡಿಲ್ಲ. ಪ್ರವಾಸಿತಾಣಗಳ ಅಭಿವೃದ್ದಿ ಮರೀಚಿಕೆಯಾಗಿದೆ.‌ ಹೀಗಾಗಿ ಕುಂದಗನ್ನಡ‌ ಜಿಲ್ಲೆಯಾಗಬೇಕೆನ್ನುವ ಹೋರಾಟಕ್ಕೆ ಭಟ್ಕಳದವರು ಸೇರಿಕೊಂಡಿದ್ದಾರೆ. ‌ಕುಂದಗನ್ನಡ‌ ಮಾತನಾಡುವ ಸಮಾನಮನಸ್ಕರು ಒಟ್ಟಾಗಿ ಸಮಿತಿ ರಚನೆ ಮಾಡಿ ಜಿಲ್ಲೆ ರಚನೆಗೆ ಹೋರಾಟಕ್ಕೆ ತಯಾರಾಗಿದ್ದೇವೆ.‌ಸಂಬಂಧಪಟ್ಟ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಕುಂದಗನ್ನಡ‌ ಜಿಲ್ಲೆ ಬೇಡಿಕೆ ಇಟ್ಟಿದ್ದೇವೆ ಅಂತ ಹೋರಾಟ ಸಮಿತಿ‌ ಪ್ರಮುಖರು ನ್ಯೂಸ್18ಕನ್ನಡ ಕ್ಕೆ ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಮತ್ತೊಂದು ಹೊಸ‌ ಜಿಲ್ಲೆಯ ಬೇಡಿಕೆ ಸದ್ದು ಮಾಡುತ್ತಿದೆ.  ಮೌನವಾಗಿದ್ದ ಕುಂದಗನ್ನಡಿಗರು ಇದೀಗ ಜಿಲ್ಲೆ ರಚನೆಗೆ ಪಟ್ಟು ಹಿಡಿದು ಹೋರಾಟದ ಹಾದಿ ಹಿಡಿದಿದ್ದಾರೆ. ಸಚಿವ ಆನಂದ್ ಸಿಂಗ್ ಒತ್ತಾಸೆಗೆ ಮಣಿದ ಮುಖ್ಯಮಂತ್ರಿ‌ ಯಡಿಯೂರಪ್ಪನವರು ಕುಂದಗನ್ನಡಿಗರ ಒತ್ತಾಯಕ್ಕೆ ಮಣಿಯುತ್ತಾರಾ. ವಿಭಿನ್ನವಾಗಿ ಕನ್ನಡ ಮಾತನಾಡುವ ಕುಂದಗನ್ನಡಿಗರ ನಿರೀಕ್ಷೆ ಸಫಲವಾಗುತ್ತಾ ಎಂದು ಕಾದುನೋಡಬೇಕಿದೆ.
Published by:Latha CG
First published: