ನಮ್ಮ ರಾಜ್ಯದ ಆನೆಗಳಿಗೆ (Karnataka Elephants) ಬೇರೆ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದೆ. ನಮ್ಮಲ್ಲಿನ ಆನೆಗಳು ಚೆನ್ನಾಗಿ ಪಳಗಿರುತ್ತವೆ ಹಾಗೂ ಆಜ್ಞೆಗಳನ್ನು ಅನುಸರಿಸಲು ಉತ್ತಮವಾಗಿ ತರಬೇತಿ ಪಡೆದಿವೆ ಎಂಬ ಕಾರಣಕ್ಕೆ ಈ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿಗೆ ಬೇರೆ ರಾಜ್ಯಗಳಿಗೆ ನಮ್ಮಲ್ಲಿಯ ಆನೆಗಳನ್ನು ಕಳುಹಿಸಿರುವ ಮೂರು ನಿದರ್ಶನಗಳೇ ಇದಕ್ಕೆ ಸಾಕ್ಷಿಯಾಗಿದೆ.
ನಮ್ಮ ರಾಜ್ಯದಿಂದ ಇದುವರೆಗೆ 57 ಆನೆಗಳನ್ನು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಾಖಂಡ, ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಕಳುಹಿಸಲಾಗಿದೆ. ನಮ್ಮಲ್ಲಿ ಶಿಬಿರದ ಆನೆಗಳೇನೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಆದ್ರೆ ಇವು ಚೆನ್ನಾಗಿ ಪಳಗಿರುತ್ತವೆ ಅನ್ನೋ ಕಾರಣಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಉ.ಪ್ರ ಹಾಗೂ ಮ.ಪ್ರಕ್ಕೆ ಆನೆಗಳ ಕಳುಹಿಸಿರುವ 3 ನಿದರ್ಶನ
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಆನೆಗಳನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಕ್ಕೆ ಕಳುಹಿಸಿರುವ ಮೂರು ಉದಾಹರಣೆಗಳಿವೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಉಪಕ್ರಮವಾದ ಪ್ರಾಜೆಕ್ಟ್ ಎಲಿಫೆಂಟ್ನ ಅಧಿಕಾರಿಯೊಬ್ಬರು, “ಕರ್ನಾಟಕ ಆನೆಗಳು ಅತ್ಯುತ್ತಮ ತರಬೇತಿ ಪಡೆದಿವೆ ಎಂದರೆ ತಪ್ಪಾಗುವುದಿಲ್ಲ.
ಆನೆಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅನುಮತಿಯಿಲ್ಲದಿದ್ದರೂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ಯಾಂಪ್ ಆನೆಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಇಲ್ಲಿನ ಹೆಚ್ಚಿನ ಮಾವುತರು ಬುಡಕಟ್ಟು ಜನಾಂಗದವರು
ನಮ್ಮಲ್ಲಿ ಆನೆಗಳು ತನ್ನ ಮಾವುತನೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತವೆ. ರಾಜ್ಯದ ಮಾವುತರು ಹೆಚ್ಚಾಗಿ ಬುಡಕಟ್ಟು ಜನಾಂಗದವರಾಗಿದ್ದಾರೆ. ಅವರಲ್ಲಿ ಪ್ರಮುಖವಾಗಿ ಜೆನ್ನು ಕುರುಬರು, ಕಾಡು ಕುರುಬರು ಮತ್ತು ಬಂಗಾಳಿ ಮುಸ್ಲಿಮರಾಗಿದ್ದಾರೆ. ಅವರು ರಾಜ್ಯದ ಕಾಡುಗಳಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದಾರೆ. ಹೀಗಾಗಿ ಆನೆಗಳನ್ನು ಪಳಗಿಸುವ ಕಲೆ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.
ಕರ್ನಾಟಕದ ಏಳು ಆನೆ ಶಿಬಿರಗಳು
ಸಕ್ರೆಬೈಲು, ದುಬಾರೆ, ಕೆ ಗುಡಿ, ಪನ್ಸೋಲಿ, ಮತ್ತಿಗುಡ್, ರಾಂಪುರ ಮತ್ತು ಬಳ್ಳೆ ಇವು ನಮ್ಮ ರಾಜ್ಯದ ಪ್ರಮುಖ 7 ಆನೆ ಶಿಬಿರಗಳಾಗಿವೆ. “ಪ್ರತಿ ಶಿಬಿರವು 30 ಕ್ಕಿಂತ ಹೆಚ್ಚು ಸಂಖ್ಯೆಯನ್ನು ಹೊಂದಿರುವಂತಿಲ್ಲ. ಆದರೆ ಎಲ್ಲಾ ಶಿಬಿರಗಳಲ್ಲೂ ಈ ಸಂಖ್ಯೆ ಹೆಚ್ಚೇ ಇದೆ" ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಇನ್ನು "ಶಿಬಿರಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಲು ಮತ್ತೊಂದು ಕಾರಣವೆಂದರೆ ಮಾನವ ಮತ್ತು ಆನೆಗಳ ಸಂಘರ್ಷ ಹೆಚ್ಚಾಗುತ್ತಿರುವುದು. ವಯಸ್ಸಾದ, ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಗಾಯಗೊಂಡ ಆನೆಗಳನ್ನು ಶಿಬಿರಗಳಿಗೆ ಕರೆತರಬೇಕಾಗುತ್ತದೆ.
ಒಮ್ಮೆ ಬಂದ ನಂತರ ಅವುಗಳನ್ನು ಸುಮ್ಮನೆ ಇಡಲಾಗುವುದಿಲ್ಲ, ಅಥವಾ ದೂರ ಕಳುಹಿಸಲಾಗುವುದಿಲ್ಲ. ಅವುಗಳನ್ನು ಇತರ ಆನೆಗಳ ಶಿಬಿರದಲ್ಲೇ ಇರಿಸಬೇಕಾಗುತ್ತದೆ. ಅದು ವಿಫಲವಾದರೆ ಅವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತವೆ. ಅವು ಕ್ರಮೇಣ ಇತರ ಆನೆಗಳನ್ನು ನೋಡಿ ತರಬೇತಿ ಪಡೆಯಲಾರಂಭಿಸುತ್ತವೆ" ಎಂಬುದಾಗಿ ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಇತರ ರಾಜ್ಯಗಳಿಗೆ ಆನೆಗಳನ್ನು ಕಳುಹಿಸುವ ಕ್ರಮವನ್ನು ಅನೇಕ ಕಾರ್ಯಕರ್ತರು ಮತ್ತು ಪ್ರಾಣಿ ಸಂರಕ್ಷಣಾಕಾರರು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ, ಈ ಪದ್ಧತಿ ಹೊಸದಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇದು 2015-16 ರಲ್ಲಿ ಪ್ರಾರಂಭವಾಯಿತು. ಆನೆಗಳನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತದೆ.
ಅಲ್ಲಿ ಈ ಆನೆಗಳನ್ನು ಹುಲಿ - ಚಿರತೆಗಳಂತಹ ಇತರ ಕಾಡು ಪ್ರಾಣಿಗಳನ್ನು ಸೆರೆಹಿಡಿಯುವುದು, ಗಸ್ತು ತಿರುಗುವುದು, ಮರದ ದಿಮ್ಮಿಗಳನ್ನು ಒಯ್ಯುವುದು ಮತ್ತು ಸೆರೆಹಿಡಿದ ಇತರ ಆನೆಗಳಿಗೆ ತರಬೇತಿ ನೀಡುವ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ನಮ್ಮ ಶಿಬಿರದ ಆನೆಗಳು ಬೇಕು ಎಂಬ ಬಗ್ಗೆ ಇತರ ರಾಜ್ಯಗಳಿಂದ ಸಾಕಷ್ಟು ಅರ್ಜಿಗಳು ಬರುತ್ತಿವೆ. ಅನೇಕ ಸಂದರ್ಭಗಳಲ್ಲಿ, ಅಭಿಮನ್ಯುವಿನಂತಹ ಆಕ್ರಮಣಕಾರಿ, ಧೈರ್ಯಶಾಲಿ ಆನೆಗಳಿಗೆ ಬೇಡಿಕೆಯಿದೆ.
ಆದರೆ ನಾವು ಅದರ ಬದಲಿಗೆ ಹೆಚ್ಚಾಗಿ ಹೆಣ್ಣು ಆನೆ ಅಥವಾ ಮರಿಗಳಿಗೆ ಸಲಹೆ ನೀಡುತ್ತೇವೆ. ಇನ್ನು, ಹೆಚ್ಚಿನ ಆನೆಗಳಿಗೆ ಸ್ಥಳಾವಕಾಶ ಕಲ್ಪಿಸಲು ಬೋಧಿಪಡಗ (ಚಾಮರಾಜನಗರ), ಹಾರಂಗಿ (ಕುಶಾಲನಗರ) ಮತ್ತು ಭೀಮನಕಟ್ಟೆ (ಮಡಿಕೇರಿ)ಗಳಲ್ಲಿ ಹೊಸ ಶಿಬಿರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ