ವೀರಪ್ಪ ಮೊಯ್ಲಿ: ದಿಲ್ಲಿ ರಾಜಕಾರಣದ ಪ್ರಭಾವಿ ಕನ್ನಡಿಗರಲ್ಲಿ ಇವರು ಪ್ರಮುಖರು


Updated:August 6, 2018, 5:23 PM IST
ವೀರಪ್ಪ ಮೊಯ್ಲಿ: ದಿಲ್ಲಿ ರಾಜಕಾರಣದ ಪ್ರಭಾವಿ ಕನ್ನಡಿಗರಲ್ಲಿ ಇವರು ಪ್ರಮುಖರು
ವೀರಪ್ಪ ಮೊಯ್ಲಿ

Updated: August 6, 2018, 5:23 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ: ದೆಹಲಿ ರಾಜಕಾರಣದಲ್ಲಿ ಉತ್ತರ ಭಾರತೀಯರದ್ದೇ ದರ್ಬಾರು.‌ ದಕ್ಷಿಣದವರ ಪ್ರಭಾವ ಬಹಳ ಕಡಿಮೆ. ಕರ್ನಾಟಕದವರ ಪಾತ್ರ ಇನ್ನೂ ಕಡಿಮೆ. ಹಾಗಂತ ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ ಅಂತಾ ಅಲ್ಲ. ಸಿಕ್ಕ ಅವಕಾಶಗಳನ್ನ ನಮ್ಮ ರಾಜಕಾರಣಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ‌. ಪ್ರಭಾವಿಗಳಾಗಿ ಬೆಳೆದಿಲ್ಲ. ಇದಕ್ಕೆ ಅಪವಾದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವ ಡಾ| ಎಂ‌. ವೀರಪ್ಪ ಮೊಯ್ಲಿ.

ರಾಜಕಾರಣಿಯಾಗಿ ವೀರಪ್ಪ ಮೊಯ್ಲಿ ಎಲ್ಲರಿಗೂ ಚಿರಪರಿಚಿತ. ಕೆಲವರಿಗೆ ಸಾಹಿತಿಯಾಗಿಯೂ ಗೊತ್ತು. ಹಿಂದೆ ವಕೀಲರಾಗಿದ್ದರೆಂಬುದೂ ಕೆಲವರಿಗೆ ಗೊತ್ತು. ಇಂಟರೆಸ್ಟಿಂಗ್ ವಿಷಯ ಏನಂದ್ರೆ ತಮ್ಮ‌ ಇಷ್ಟದ ರಾಜಕಾರಣ, ನ್ಯಾಯಾಂಗ ಮತ್ತು ಸಾಹಿತ್ಯ ಕ್ಷೇತ್ರಗಳ ಮೇಲೆ ಸದಾ ಕಾಲ ಆಸಕ್ತಿ ಉಳಿಸಿಕೊಂಡವರು ಮೊಯ್ಲಿ. ಅದಕ್ಕೆ ಬೇಕಾದ ಅಧ್ಯಯನ, ತಯಾರಿ ಮಾಡುವವರು ಮೊಯ್ಲಿ.

ರಾಷ್ಟ್ರ ರಾಜಧಾನಿಯಲ್ಲೂ ಮೊಯ್ಲಿ ಪ್ರಭಾವ:

ವೀರಪ್ಪ ಮೊಯ್ಲಿ, ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯದ ಇತರೆ ರಾಜಕಾರಣಿಗಳಿಗಿಂತ ತುಂಬಾ ಭಿನ್ನ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರಂಥವರು ರಾಜಕೀಯವಾಗಿ ಬಹಳ ಪ್ರಭಾವಿಗಳಿರಬಹುದು. ಆದರೆ ವೀರಪ್ಪ ಮೊಯ್ಲಿ ಅವರದು ರಾಜಕಾರಣದಾಚೆಗೂ ಚಾಚಿಕೊಂಡಿರುವ ವ್ಯಕ್ತಿತ್ವ.‌ ಉದಾಹರಣೆಗೆ ದೆಹಲಿಯಲ್ಲಿ ಅವರಿಗೆ ರಾಜಕಾರಣದಲ್ಲಿ ಇರುವಷ್ಟೇ ಸ್ನೇಹಿತರು, ಆತ್ಮೀಯರು ನ್ಯಾಯಾಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಇದ್ದಾರೆ. ದೆಹಲಿಯ ಬುದ್ದಿಜೀವಿಗಳ ವಲಯದಲ್ಲಿ ಮೊಯ್ಲಿ ಅವರಿಗೂ ಒಂದು ಸ್ಥಾನ ಇದೆ‌.

ನ್ಯಾಯಾಂಗದ ನಿಪುಣನೆಂಬ ಹೆಗ್ಗಳಿಕೆ:
ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದವರು. ಇವರಂತೆ ಎಷ್ಟೋ‌ ಮಂದಿ ಕಾನೂನು ಸಚಿವರಾಗಿದ್ದಾರೆ. ಆದರೆ ವೀರಪ್ಪ ಮೊಯ್ಲಿ ಅವರಷ್ಟು ತೀವ್ರವಾಗಿ ಬೆರೆತವರಿಲ್ಲ. ಉದಾಹರಣೆಗೆ ಇವರದೇ ಪಕ್ಷದ ಕಪಿಲ್ ಸಿಬಾಲ್ ಕೂಡ ಕಾನೂನು ಸಚಿವರಾಗಿದ್ದರು. ಪಕ್ಷ ಅಧಿಕಾರದಲ್ಲಿದ್ದಾಗ ತಾವು ಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಪಕ್ಷ ಸೋತ ಬಳಿಕ ಮತ್ತೆ ವಕೀಲಿಕೆ ಮಾಡಿಕೊಂಡು ದುಡಿಯಲು‌ ಹೋಗಿಬಿಟ್ಟರು. ಪಕ್ಷದ ಕೆಲಸ ಅಥವಾ ನ್ಯಾಯಾಂಗದ ಕೆಲಸ ಅವರಿಗೆ ನಗಣ್ಯವಾಯಿತು. ಆದರೆ ವೀರಪ್ಪ ಮೊಯ್ಲಿ ಅಧಿಕಾರ ಇದ್ದಾಗ ನ್ಯಾಯಾಂಗ ವ್ಯವಸ್ಥೆಯ ಮೈಲಿಗಲ್ಲು ಎನ್ನಬಹುದಾದ ಕೊಲಿಜಿಯಂ ಪದ್ದತಿ ಜಾರಿಗೆ ತಂದರು. ಅಧಿಕಾರ ಇಲ್ಲದಿದ್ದಾಗ ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗೆ ಏನು ಮಾಡಬೇಕೆಂದು ಅಧ್ಯಯನ ಮಾಡಿದರು.
Loading...

ಇನ್ನೂ ಒಂದು ಮಾತಿದೆ. ವೀರಪ್ಪ ಮೊಯ್ಲಿ ತಮ್ಮ ಅಧಿಕಾರದ ಅವಧಿಯಲ್ಲಿದ್ದ ಮುಖ್ಯ ನ್ಯಾಯಮೂರ್ತಿಗಳು‌ ಮತ್ತು ನ್ಯಾಯಮೂರ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಬೇರೆ ಮಂತ್ರಿಗಳು ಅಧಿಕಾರಿಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಮೊಯ್ಲಿ ಒಬ್ಬ ಕಾನೂನು ಸಚಿವರಾಗಿ ತಾವೇ ಸೇತುವೆಯಾಗಿ ಕೆಲಸ ಮಾಡುತ್ತಿದ್ದರು. ಇಂಥ ಅನುಭವ ಮತ್ತು ಸೌಹಾರ್ದ ಸಂಬಂಧ ಇದ್ದ ಕಾರಣದಿಂದಲೇ ವೀರಪ್ಪ ಮೊಯ್ಲಿ 'ದಿ ವೀಲ್ ಆಫ್ ಜಸ್ಟೀಸ್' ಎಂಬ ಪುಸ್ತಕ ಬರೆಯಲು ಸಾಧ್ಯವಾಗಿರುವುದು. ಅಲ್ಲದೆ ಆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ಹಾಲಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಭಾಗವಹಿಸಿದ್ದು.

ಟೈಂ ಇಲ್ಲ ಎನ್ನುವುದು ಇವರ ಶಬ್ದಕೋಶದಲ್ಲೇ ಇಲ್ಲವಂತೆ:
ರಾಜಕಾರಣಿಯಾಗಿ, ಅದರಲ್ಲೂ ಜನಪ್ರತಿನಿಧಿಯಾಗಿ ಇವರಿಗೆ ಇಷ್ಟೊಂದು ಸಮಯ ಹೇಗೆ ಸಿಗುತ್ತೆ ಅಂತೀರಾ? ವೀರಪ್ಪ ಮೊಯ್ಲಿ ಅವರನ್ನ ಕೇಳಿದ್ರೆ 'ಬೇಕಾದಷ್ಟು ಸಮಯ ಇದೆ. ನಾವು ಸಮಯ ಮಾಡ್ಕೋಬೇಕಷ್ಟೇ. ಸಮಯ ಇಲ್ಲ ಎನ್ನುವುದು ನನ್ನ ಡಿಕ್ಷನರಿಲೇ ಇಲ್ಲ ಎನ್ನುತ್ತಾರೆ. ವೀರಪ್ಪ ಮೊಯ್ಲಿ ತುಂಬಾ ಓದುತ್ತಾರೆ. ಅದರಿಂದನೇ ಅವರಿಗೆ ಬರೆಯೋಕೆ ಸಾಧ್ಯ ಆಗುತ್ತೆ. ಈಗ 'ದೀ ವೀಲ್ ಆಫ್ ಜಸ್ಟೀಸ್' ಪುಸ್ತಕ ಬರೆದಿದ್ದಾರೆ. ಇದೊಂಥರಾ ವಕೀಲರೊಬ್ಬರ ವಗೈರೆಗಳಿದ್ದಂತೆ, ಕಾನೂನು ಸಚಿವರೊಬ್ಬರ ಕತೆಗಳು. ಅವರು ಕಾನೂನು ಸಚಿವರಾಗಿದ್ದಾಗ ಏನು ಮಾಡೋಕೆ ಹೊರಟಿದ್ರು? ಏನು ಮಾಡಿದ್ರು? ಏಕೆ ಮಾಡಿದ್ರು ಅಂತಾ ಹೇಳುವ ಪುಸ್ತಕ ಇದು.

ಕಾವೇರಿ ಕಾನೂನು ತಂಡ ಕಟ್ಟಿದ್ದು ಕೂಡ ವೀರಪ್ಪ ಮೊಯ್ಲಿಯವರೇ:
ವೀರಪ್ಪ ಮೊಯ್ಲಿ ಹಿಂದೆ ರಾಜ್ಯದಲ್ಲೂ ಕಾನೂನು ಸಚಿವರಾಗಿದ್ದರು.‌ ಅವರು ಕಾನೂನು ಸಚಿವರಾಗುವ ಮುನ್ನ ದೆಹಲಿಯಲ್ಲಿ ಕಾವೇರಿ ಜಲವಿವಾದಕ್ಕೆ ರಾಜ್ಯದ ಕಾನೂನು ತಂಡವೇ ಇರಲಿಲ್ಲ.‌ ಸುಪ್ರೀಂ ಕೋರ್ಟಿನಲ್ಲಿ ಕೇಸಿದ್ದಾಗ ರಾಶಿರಾಶಿ ದಾಖಲೆಗಳನ್ನು ತೆಗೆದುಕೊಂಡು ದೆಹಲಿಗೆ ಬರಬೇಕಿತ್ತು. ವೀರಪ್ಪ ಮೊಯ್ಲಿ ಇದಕ್ಕೆ ಕಾಯಕಲ್ಪ ನೀಡಿದರು. ದೆಹಲಿಯಲ್ಲೇ ಕಾವೇರಿ ಕಾನೂನು ತಂಡ ರಚಿಸಿದರು. ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಅವರಿಗೆ ತಂಡದ ನೇತೃತ್ವ ನೀಡಿದರು. ದೆಹಲಿಯಲ್ಲೇ ಕಚೇರಿ ತೆರೆದರು.

ಸಭೆಗಳಲ್ಲಿ ಸ್ಪಷ್ಟವಾಗಿ ವಿಷಯಮಂಡನೆ ಮಾಡುವ ವೀರಪ್ಪ ಮೊಯ್ಲಿ:
ಕಾವೇರಿ ಜಲವಿವಾದದ ಬಗ್ಗೆ ನಡೆಯುವ ಸಭೆಗಳಲ್ಲಿ ಬಹುತೇಕ ನಾಯಕರು ರಾಜಕಾರಣ ಬೆರಸಿ ಮಾತನಾಡುತ್ತಾರೆ. ಕೆಲವರು ರಾಜಕಾರಣ ಮಾತನಾಡುತ್ತಾರೆ. ಕೆಲವರಿಗೆ ವಿಷಯವೇ ಗೊತ್ತಿಲ್ಲದಿರುವುದರಿಂದ ಸಭೆಗೆ ಅರ್ಥ ಆಗದ ಹಾಗೆ ಏನೇನೋ ಮಾತನಾಡುತ್ತಾರೆ. ಆದರೆ ವೀರಪ್ಪ ಮೊಯ್ಲಿ ಅವರಿಗೆ ಸ್ವತಃ ವಕೀಲರಾಗಿ, ಕಾನೂನು ಸಚಿವರಾಗಿ, ಮುಖ್ಯಮಂತ್ರಿ ಆಗಿ ಅನುಭವ ಇರುವುದರಿಂದ ಸ್ಪಷ್ಟವಾಗಿ ಮಾತನಾಡುತ್ತಾರಂತೆ. ವಾಸ್ತವವಾಗಿ ಮಾತನಾಡುತ್ತಾರಂತೆ. ಹಿಂದೆ ಎಂ.ಬಿ. ಪಾಟೀಲ್ ಜಲ ಸಂಪನ್ಮೂಲ ಸಚಿವರಾಗಿದ್ದುಕೊಂಡು ಭಾವೋದ್ವೇಗವಾಗಿ ಮಾತನಾಡುತ್ತಿದ್ದಾಗ ತಮ್ಮ ಪಕ್ಷದವರೇ ಆಗಿದ್ದರೂ ಮೊಯ್ಲಿ, ಎಂ.ಬಿ. ಪಾಟೀಲ್ ಅವರನ್ನು ಗದರಿದರಂತೆ. ಪಕ್ಷದ ವೇದಿಕೆಯಲ್ಲೂ ವೀರಪ್ಪ ಮೊಯ್ಲಿ ಹೀಗೆ ಕಡ್ಡಿ ಮುರಿದಂತೆ ಮಾತನಾಡುತ್ತಾರೆ ಎಂಬ ಮಾತೂ ಇದೆ.

ರಾಹುಲ್ ಗಾಂಧಿ ಏಕೆ ಮೆಚ್ಚಿಕೊಳ್ಳುತ್ತಾರೆ ಗೊತ್ತಾ?
ಆಳವಾದ ಅಧ್ಯಯನ ಇರುವ ಕಾರಣಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ವೀರಪ್ಪ ಮೊಯ್ಲಿ ಅವರನ್ನು ಮೆಚ್ಚಿಕೊಳ್ಳುತ್ತಾರೆ. ಅದರಿಂದಾಗಿಯೇ ಕೇಂದ್ರದಲ್ಲಿ ಕಾನೂನಿನಂತಹ ಮಹತ್ವದ ಖಾತೆಯನ್ನು ವೀರಪ್ಪ ಮೊಯ್ಲಿ ಅವರಿಗೆ ನೀಡಲಾಗಿತ್ತು. ಅದರಲ್ಲೂ ಪಿ. ಚಿದಂಬರಂ, ಕಪಿಲ್ ಸಿಬಾಲ್, ಸಲ್ಮಾನ್ ಖುರ್ಷೀದ್, ಅಭಿಷೇಕ್ ಮನು ಸಿಂಘ್ವಿ, ಮನೀಷ್ ತಿವಾರಿಯವರಂತಹ ಲಾ ಸ್ಟಾಲ್ವರ್ಟ್​ಗಳು ಇದ್ದರೂ ವೀರಪ್ಪ ಮೊಯ್ಲಿ ಅವರಿಗೆ ನೀಡಲಾಗಿತ್ತು.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...