ದಿಲ್ಲಿ ಪೋಸ್ಟ್ | ಮುಂದಿನ ವಾರ ಸಿಎಂ ಯಡಿಯೂರಪ್ಪಗೆ ಮತ್ತೊಂದು ಶಾಕ್; 'ಕೈ' ಕೊಟ್ಟವರ ಜೊತೆಗೇ ಡಿಕೆಶಿ ಕುಚುಕು!

ರಾಜ್ಯಸಭಾ ಟಿಕೆಟ್ ನೀಡುವ ವಿಷಯದಲ್ಲಿ ಯಡಿಯೂರಪ್ಪಗೆ ತೀವ್ರ ಮುಖಭಂಗವಾಗಿತ್ತು. ಅದು ಮತ್ತೂ ಮುಂದುವರೆಯುವ ಸಾಧ್ಯತೆಗಳಿವೆ.‌ ಡಿ.ಕೆ. ಶಿವಕುಮಾರ್ ಹೊಸ ವರಸೆ ಶುರುಮಾಡಿಕೊಂಡಿದ್ದಾರೆ. ಈ‌ ಬಗ್ಗೆ ಕುತೂಹಲಕಾರಿ ಮಾಹಿತಿಗಳಿವೆ ನ್ಯೂಸ್ 18 ಕನ್ನಡದ ದೆಹಲಿ ಪ್ರತಿನಿಧಿ ಧರಣೀಶ್ ಬೂಕನಕೆರೆ ಅವರ ಈ ವಾರದ ದಿಲ್ಲಿ ಪೋಸ್ಟ್ ಕಾಲಂನಲ್ಲಿ...

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ಮುಂದಿನ ವಾರ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ಶಾಕ್ ಕಾದಿದೆ. ಈಗಾಗಲೇ ರಾಜ್ಯಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಸಿ ಮುಟ್ಟಿಸಲಾಗಿದೆ. ಮುಂದೆ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲೂ ಮುಖಭಂಗ ಮಾಡಲಾಗುತ್ತದೆ ಎನ್ನುತ್ತವೆ ಬಿಜೆಪಿ ಹೈಕಮಾಂಡ್ ಮೂಲಗಳು. ಈ ವಾಸನೆ ಯಡಿಯೂರಪ್ಪ ಮೂಗಿಗೂ ಬಡಿದಂತಿದೆ. ಅದಕ್ಕಾಗಿ ಅವರು ತಮ್ಮ ಸರ್ಕಾರ ಬರಲು ಕಾರಣಕರ್ತರಾದ ಎಚ್.‌ ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಗೆ ಟಿಕೆಟ್ ಕೊಡಿಸಿದರೆ ಸಾಕು, ಉಳಿದದ್ದು ಏನಾದರೂ ಆಗಲಿ ಎಂಬ ನಿಲುವಿಗೆ ಬಂದಿದ್ದಾರಂತೆ.

ಆದರೆ ಯಡಿಯೂರಪ್ಪ ಅಂದುಕೊಂಡಿರುವಂತೆ ಟಿಕೆಟ್ ಕೊಡಿಸುವುದು ಅಷ್ಟು ಸುಲಭವಾಗಿಲ್ಲ. ಏಕೆಂದರೆ ಪುತ್ರ ವ್ಯಾಮೋಹಕ್ಕೆ ಸಿಲುಕಿ ಯಡಿಯೂರಪ್ಪ ಮಾಡುತ್ತಿರುವ ತಪ್ಪುಗಳು ದೆಹಲಿ ನಾಯಕರ ಕಣ್ಣನ್ನು ಕೆಂಪಗಾಗಿಸಿವೆ. ಯಡಿಯೂರಪ್ಪ ಸರ್ಕಾರದಲ್ಲಿ, ಕೊರೋನಾ ಸಂದರ್ಭದಲ್ಲಿ ಸುರೇಶ್ ಕುಮಾರ್ ಬಿಟ್ಟರೆ ಸದ್ದು ಮಾಡುತ್ತಿರುವವರೆಲ್ಲಾ ಹೊರಗಿನಿಂದ ಬಂದವರೇ. ಮೂಲ ಬಿಜೆಪಿಗರಾದ ಈಶ್ವರಪ್ಪ, ಅಶೋಕ್, ಸಿ.ಟಿ. ರವಿ, ಶ್ರೀನಿವಾಸ್ ಪೂಜಾರಿ ಮತ್ತಿತರರು ಅಕ್ಷರಶಃ ಮೂಲೆಗುಂಪಾಗಿದ್ದಾರೆ. ಇದರಿಂದ ಯಡಿಯೂರಪ್ಪ ಬಗ್ಗೆ ವ್ಯಾಪಕವಾದ 'ಅಸಂತೋಷ' ಸೃಷ್ಟಿಯಾಗಿದೆ. ಅದೇ ಕಾರಣಕ್ಕೆ ಅವಕಾಶ ಸಿಕ್ಕಾಗಲೆಲ್ಲಾ 'ಯಡಿಯೂರಪ್ಪ ಅವರಿಗಿಂತ ಬಿಜೆಪಿಯೇ ದೊಡ್ಡದು' ಎಂಬ ಸಂದೇಶ ಸಾರುವ ಕೆಲಸ ನಡೆಯುತ್ತಿದೆ. ರಾಜ್ಯಸಭಾ ಚುನಾವಣೆ ವಿಷಯದಲ್ಲಿ ಆಗಿದ್ದು ಇದೇ. ಮತ್ತೀಗ ವಿಧಾನ ಪರಿಷತ್ ಚುನಾವಣೆ ವೇಳೆ ಆಗುವುದೂ ಇದೇ ಎನ್ನಲಾಗುತ್ತಿದೆ.
ಈ ಬಾರಿ ಯಡಿಯೂರಪ್ಪಗೆ ಪೂರ್ಣ ಪ್ರಮಾಣದಲ್ಲಿ ಅವಮಾನ ಮಾಡಿದರೆ ಅದರಿಂದ ದುಷ್ಪರಿಣಾಮ ಉಂಟಾಗಬಹುದು ಎಂಬ ಭಯ ಕೂಡ ಇದೆಯಂತೆ. ಆದ್ದರಿಂದ 'ಯಡಿಯೂರಪ್ಪ ಹೇಳಿದಂತೆ ಕೊಟ್ಟಹಾಗೆ, ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಿದ ಹಾಗೆ' ಮಾಡುವ ಸಂಭವ ಕಾಣಿಸುತ್ತಿವೆ. ಅಂದರೆ ಯಡಿಯೂರಪ್ಪ ಹೇಳುವ ನಾಲ್ವರಲ್ಲಿ ಪೈಕಿ ಇಬ್ಬರನ್ನು ಕೈಬಿಡುವ ಸಾಧ್ಯತೆ ಇದೆ. ಅದು ವಿಶ್ವನಾಥ್ ಮತ್ತು ಸಿ.ಪಿ. ಯೋಗೇಶ್ವರ್ ಆಗಬಹುದು. ಏಕೆಂದರೆ ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಮಂತ್ರಿಗಿರಿ ಬಿಟ್ಟು ಬಿಜೆಪಿಗೆ ಬಂದಿದ್ದರು. ಜೊತೆಗೆ ಪಕ್ಷ ಹೇಳಿದಂತೆ ಕೇಳಿದ್ದಾರೆ. ವಿಶ್ವನಾಥ್ ಪಕ್ಷ ಬೇಡ ಎಂದಿದ್ದರೂ ಚುನಾವಣೆಗೆ ನಿಂತು ಸೋತರು. ಸಿ.ಪಿ. ಯೋಗೇಶ್ವರ್ ಸರ್ಕಾರ ಬರುವ ಮುನ್ನವೇ ಚುನಾವಣೆಯಲ್ಲಿ ಸೋತಿದ್ದರೆಂಬ ಮಜಬೂತಾದ ಕಾರಣ ಇದೆ.

ಎಕ್ಸ್​ಪೆರಿಯಾದಾಗ ಎಕ್ಸ್​ಟೆಂಡ್!

ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಿಕ್ಕಟ್ಟು ತಾರಕಕ್ಕೇರಿದ್ದಾಗ ಎಚ್.‌ ವಿಶ್ವನಾಥ್ ಅವರನ್ನು ಪತ್ರಕರ್ತರೊಬ್ಬರು 'ಕ್ಯಾಬಿನೆಟ್ ಎಕ್ಸ್ ಪೆನ್ಷನ್ ಯಾವಾಗ? ಎಂದು ಕೇಳಿದ್ದಾರೆ. ಅಷ್ಟೊತ್ತಿಗಾಗಲೇ ಬಿಜೆಪಿಗೆ ಬಂದು ಸಾಕುಸಾಕಾಗಿ ಹೋಗಿದ್ದ ವಿಶ್ವನಾಥ್, 'ಯಾರಾದ್ರೂ ಎಕ್ಸ್​ಪೆರಿಯಾದಾಗ ಎಕ್ಸ್​ಪೆನ್ಷನ್' ಎಂದು ಉತ್ತರ ನೀಡಿದ್ದಾರೆ. ಈಗಂತೂ ಅವರು ವಿಧಾನ ಪರಿಷತ್ ಸದಸ್ಯರಾಗುವುದು, ಅದಾದ ಮೇಲೆ‌ ಮಂತ್ರಿ ಆಗುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಬಿಜೆಪಿಯನ್ನು ಗುತ್ತಿಗೆ ತೆಗೆದುಕೊಂಡಂತೆ ಸೀಟಿ ಊದುವ ರಾಜ್ಯದ ನಾಯಕರೊಬ್ಬರು.

ಎಲ್ಲರೊಂದಿಗೂ ಕಿರಿಕಿರಿ ಮಾಡಿಕೊಂಡಿದ್ದ ಕೋರೆ

ದುಡ್ಡಿನ ಕುಳ, ಭಾರೀ ಪ್ರಭಾವಿ ಪ್ರಭಾಕರ ಕೋರೆಯವರಿಗೆ ಮಾತ್ರ ಟಿಕೆಟ್ ಕೊಡಬೇಡಿ ಎಂದು ಬೆಳಗಾವಿ ಜಿಲ್ಲೆಯ ಎಲ್ಲಾ ನಾಯಕರು ಒತ್ತಡ ಹೇರಿದ್ದಾರಂತೆ‌. ನಿಪ್ಪಾಣಿ‌ ಷುಗರ್ಸ್ ನಿಂದ ಹಿಡಿದು ಪ್ರತಿಯೊಂದಕ್ಕೂ ಪ್ರಭಾಕರ್ ಕೋರೆ ಹಸ್ತಕ್ಷೇಪ ಮಾಡಿದ್ದರು. ಹಂತಹಂತವಾಗಿ ಶತ್ರುಗಳ ಪಡೆ ದೊಡ್ಡದಾಯಿತು. ಇದನ್ನೇ ನೆಪ ಮಾಡಿಕೊಂಡು ಯಡಿಯೂರಪ್ಪ, ರಮೇಶ್ ಕತ್ತಿಯ ಪರ ಬ್ಯಾಟ್ ಮಾಡಿದ್ದರು. ಆದರೆ ಮೊದಲು ಯಡಿಯೂರಪ್ಪನವರ ಪರಮಾಪ್ತರಾಗಿದ್ದರು ಎನ್ನುವ ಕಾರಣಕ್ಕೆ ಸಂತೋಷ್ ಕೂಡ ಕೈಕೊಟ್ಟರು. ಮಹಾರಾಷ್ಟ್ರ ರಾಜಕಾರಣಿಗಳೊಂದಿಗೂ ಉತ್ತಮ ಸಂಬಂಧ ಹೊಂದಿರುವ ಕೋರೆ, ಆ ಕಡೆಯಿಂದಲೂ ಪ್ರಯತ್ನಪಟ್ಟಿದ್ದರು. ಆದರೆ ನಿತಿನ್ ಗಡ್ಕರಿ ಅವರಿಂದ ಹಿಡಿದು ಅವರದೇ ಏನೂ ನಡೆಯದೇ ಇರುವಾಗ ಪ್ರಭಾಕರ್ ಕೋರೆಗೆ ಅವರಾದರೂ ಹೇಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಸಾಧ್ಯವಿತ್ತು?

ಇದನ್ನು ಓದಿ: ದಿಲ್ಲಿ ಪೋಸ್ಟ್ | ಖರ್ಗೆಗೆ ಮೊದಲೇ ಗೊತ್ತಿತ್ತು, ಮೊಯ್ಲಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ, ರಾಜೀವಗೌಡ ಅಂದುಕೊಂಡಂತಲ್ಲ

ಕೈ ಕೊಟ್ಟಿದ್ದವರ ಜೊತೆಗೇ ಡಿಕೆಶಿ ಕುಚುಕು‌ ಕುಚುಕು

ಯಡಿಯೂರಪ್ಪ ಸರ್ಕಾರ ದಿನದಿಂದ ದಿನಕ್ಕೆ ಕೆಟ್ಟ ಹೆಸರು ಗಳಿಸುತ್ತಿರುವುದರಿಂದ, ಎಚ್.ಡಿ. ಕುಮಾರಸ್ವಾಮಿ ಮೊದಲಿನಷ್ಟು ಉತ್ಸಾಹ ಉಳಿಸಿಕೊಂಡಿಲ್ಲದಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾರೀ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಸಲ ನನ್ನದೇ ಸರದಿ ಎಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಹೋಗಿರುವವರನ್ನೆಲ್ಲಾ ಮತ್ತೆ ಪಕ್ಷಕ್ಕೆ ಕರೆತರಬೇಕೆಂದು ನಿರ್ಧರಿಸಿದ್ದಾರೆ. ಅದಕ್ಕಾಗಿ ಸಮಿತಿಯನ್ನೂ ರಚಿಸಿದ್ದಾರೆ. ಅಷ್ಟೇಯಲ್ಲದೆ ತಾವೇ ಖುದ್ದಾಗಿ ಒಬ್ಬೊಬ್ಬರನ್ನೇ ಸಂಪರ್ಕ ಮಾಡಲು ಶುರು ಹಚ್ಚಿಕೊಂಡಿದ್ದಾರಂತೆ‌. ಅದರಲ್ಲೂ ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡು‌ ಪಕ್ಷ ಬಿಟ್ಟವರು ಡಿಕೆಶಿಗೆ ಮೊದಲ‌ ಆದ್ಯತೆಯಂತೆ. ಎಚ್. ವಿಶ್ವನಾಥ್, ರೊಷನ್ ಬೇಗ್ ಮತ್ತಿತರರಿಗೆ ಈಗಾಗಲೇ ಕರೆ ಹೋಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಅವರ ಸಮೀಪ ವರ್ತಿಗಳು.
First published: