ದಿಲ್ಲಿ ಪೋಸ್ಟ್ | ಸಿಎಂ ಬದಲಾವಣೆ ನಿಶ್ಚಿತ, ಯಾವಾಗ? ಯಾರು? ಅಂತಾ ಗೊತ್ತಿಲ್ಲ: ಸರ್ಪ್ರೈಸ್ ಕ್ಯಾಂಡಿಡೆಟ್ ಆಗುವ ಸಾಧ್ಯತೆ

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ನ್ಯೂಸ್ 18 ಕನ್ನಡದ ದೆಹಲಿ‌ ಪ್ರತಿನಿಧಿ‌ ಧರಣೀಶ್ ಬೂಕನಕೆರೆ ಈ ವಾರದ ತಮ್ಮ 'ದಿಲ್ಲಿ‌ ಪೋಸ್ಟ್' ಕಾಲಂನಲ್ಲಿ ಬರೆದಿದ್ದಾರೆ.

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ರೈತ ನಾಯಕ ಎನಿಸಿಕೊಂಡು ಮುಖ್ಯಮಂತ್ರಿ ಗಾದಿ ಏರಿದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ದುರಂತ ನಾಯಕನಾಗುವ, ಮುಖ್ಯಮಂತ್ರಿ ಪದವಿ ಕಳೆದುಕೊಳ್ಳುವ‌ ಕಾಲ ಸನ್ನಿಹಿತವಾಗುತ್ತಿದೆ ಎನ್ನುತ್ತವೆ ಬಿಜೆಪಿಯ ಉನ್ನತ ಮೂಲಗಳು. ಆದರೆ ಈ ಮಾಹಿತಿ ನೀಡಿದವರ ಬಳಿಯೂ ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗುತ್ತಾರೆ? ಮತ್ತು ಅದು ಯಾವಾಗ ಘಟಿಸುತ್ತದೆ ಎಂಬ ಮಾಹಿತಿ ಇಲ್ಲ. ಅಷ್ಟೇ ಏಕೆ? ಮುಖ್ಯಮಂತ್ರಿ ಕುರ್ಚಿಯ ಕನಸು ಕಾಣುತ್ತಿರುವ, ಅದಕ್ಕಾಗಿ ವೇದಿಕೆ ಸಿದ್ದಪಡಿಸುತ್ತಿರುವ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಮತ್ತಿತರರಿಗೂ ಗೊತ್ತಿರುವ ಸಾಧ್ಯತೆಗಳಿಲ್ಲ.
ಅಸಂತೋಷಕ್ಕೆ ಒಳಗಾದವರು 'ಹೊಸ ಪಲ್ಲಕ್ಕಿ ಸಿದ್ದಪಡಿಸಿ' ಎಂಬ ಸೂಚನೆಯನ್ನು ಮಾತ್ರ ಕೊಟ್ಟಿದ್ದಾರೆ.‌ ಆದರೆ ಎಲ್ಲರೂ ತಾವೇ ಪಲ್ಲಕ್ಕಿ ಅಲಂಕರಿಸಬಹುದು ಎಂದುಕೊಂಡು ಬಹಳ ಹುರುಪಿನಿಂದ ಕೆಲಸ ಆರಂಭಿಸಿದ್ದಾರೆ. ಇದರ ಭಾಗವಾಗಿಯೇ ಪ್ರಹ್ಲಾದ್ ಜೋಷಿ ಇದ್ದಕ್ಕಿದ್ದಂತೆ ಸಭೆ ನಡೆಸಿರುವುದು ಮತ್ತು ಡಿಸಿಎಂ ಲಕ್ಷ್ಮಣ ಸವದಿ ದಿಢೀರನೆ ದೆಹಲಿ ದಂಡಯಾತ್ರೆ ಹಮ್ಮಿಕೊಂಡಿದ್ದು. ಸದ್ಯ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರ ಮಾಹಿತಿ ಸಂಗ್ರಹ ನಡೆಯುತ್ತಿದೆ. ಮಂತ್ರಿ ಸ್ಥಾನ‌ ಸಿಗಲಿಲ್ಲ ಎಂಬುದಕ್ಕೆ ಮಾತ್ರವಲ್ಲ, ಮತ್ತಿತರ ಕಾರಣಗಳಿಗೆ ಅತೃಪ್ತಿಗೊಂಡ ಶಾಸಕರನ್ನೂ ಪತ್ತೆ ಹಚ್ಚಿ, ಅವರೊಂದಿಗೆ ಉಭಯ ಕುಶಲೋಪಹರಿ ನಡೆಸಿ ನಂತರ ತಮ್ಮ ಪಾಳೆಯದತ್ತ ಸೆಳೆಯುವ ಕೈಂಕರ್ಯವೂ ಶುರುವಾಗಿದೆ.

ಕರ್ನಾಟಕದಲ್ಲೂ ಸರ್ಪ್ರೈಸ್ ಕ್ಯಾಂಡಿಡೆಟ್ಟೇ ಗಟ್ಟಿ

ಒಂದೊಮ್ಮೆ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೆಯಾದರೆ ಸದ್ಯ ರೇಸ್ ನಲ್ಲಿ‌ ಇರುವ ಯಾರಿಗೂ ಅವಕಾಶ ಸಿಗುವುದು‌ ಗ್ಯಾರಂಟಿ ಇಲ್ಲ.  ಜೆ.ಪಿ. ನಡ್ಡ ಅಥವಾ ಬಿ.ಎಲ್.‌ ಸಂತೋಷ್ ಏನೇ ಹೇಳಿದರೂ ಯಡಿಯೂರಪ್ಪ ಅವರನ್ನು ‌ಕೆಳಗಿಳಿಸುವ ಮತ್ತು‌ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ತಂದು ಕೂರಿಸಬೇಕೆಂಬ ಅಂತಿಮವಾಗಿ ನಿರ್ಧಾರ ಮಾಡುವವರು ಅಮಿತ್ ಶಾ. ಅಮಿತ್ ಶಾ ಗೊತ್ತಲ್ವಾ; ಅಚ್ಚರಿಯ ಅಭ್ಯರ್ಥಿ ನೀಡುವುದರಲ್ಲಿ ಅವರು ನಿಷ್ಣಾತರು. ಹಾಗಾಗಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದು ಸರ್ಪ್ರೈಸ್ ಆಗಬಹುದು.

ಸಂಪುಟ ವಿಸ್ತರಣೆಯೋ? ಸಮಸ್ಯೆಗಳ ವಿಸ್ತರಣೆಯೋ?

ಬದಲಾವಣೆಯ ಭಯ ಯಡಿಯೂರಪ್ಪ ಅವರನ್ನೂ ಬಲವಾಗಿ ಕಾಡುತ್ತಿದೆ.‌ ಆದರವರು ತಾವೇ ಸೃಷ್ಟಿಸಿಕೊಂಡಿರುವ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ತಮ್ಮನ್ನು ನಂಬಿ ಮಂತ್ರಿ ಸ್ಥಾನ ಬಿಟ್ಟು ಬಂದ ಆರ್. ಶಂಕರ್, ಎಂಟಿಬಿ ನಾಗರಾಜ್ ಗೆ ಮಂತ್ರಿ ಸ್ಥಾನ ಕೊಡಬೇಕಿದೆ. ಅದೇ ರೀತಿ ಬಹಳ ಸಲ ಭರವಸೆ ಕೊಟ್ಟಿರುವ ಕಾರಣಕ್ಕೆ ಉಮೇಶ್ ಕತ್ತಿಯನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬೇಕಿದೆ. ಇವರಲ್ಲದೆ ಬೇರೆಯವರಿಗೂ ಕೊಡಲೊರಟರೆ ಯಾರಿಗೆ ಕೊಡಬೇಕೆಂಬ ಗೊಂದಲ. ಯಾರಿಗಾದರೂ ಕೊಡಲು ನಿಶ್ಚಯಿಸಿದರೆ ಇನ್ಯಾರನ್ನು ಕೈಬಿಡಬೇಕು ಎಂಬ ಇನ್ನೊಂದು ಗೊಂದಲ. ಇದೇ ಕಾರಣಕ್ಕೆ ಸಂಪುಟ ಪುನರ್ ರಚನೆ ಬದಲು ಸಂಪುಟ ವಿಸ್ತರಣೆ ಮಾಡಿದರೆ ಹೇಗೆ ಎಂಬ ಮತ್ತೊಂದು ಗೊಂದಲ.  ವಿಸ್ತರಣೆಯನ್ನಷ್ಟೇ ಮಾಡಿ ವಿರಮಿಸಿದರೆ ಸೆಟೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುವುದೆಂಬ ಮಗದೊಂದು ಗೊಂದಲ. ಹೀಗೆ ಗೊಂದಲಗಳ ಸುಳಿಯಲ್ಲಿ ಸಿಲುಕಿರುವ ಯಡಿಯೂರಪ್ಪ ಎಷ್ಟು ನಾಜೂಕಾಗಿ ಸಂಪುಟ ಸರ್ಜರಿ ಮಾಡುತ್ತಾರೆ ಎನ್ನುವುದರ ಮೇಲೆ ಅವರು ಇನ್ನು ಎಷ್ಟು ದಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರೆಯುತ್ತಾರೆ ಎಂಬುದು ನಿರ್ಧಾರವಾಗಲಿದೆ.

ಬಿಜೆಪಿಯಲ್ಲೂ ಮೂಲ V/S ವಲಸಿಗ ಯುದ್ಧ ಶುರು

ನಾಯಕತ್ವ ಬದಲಾವಣೆಯ ಭಾಗವಾಗಿ ಈಗಾಗಲೇ ಹೈಕಮಾಂಡಿಗೆ ಯಡಿಯೂರಪ್ಪ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಅದು ಬಹುತೇಕ ಗೊತ್ತಿರುವ ವಿಷಯ, 'ಯಡಿಯೂರಪ್ಪ ಅವರಿಗೆ ವಯಸ್ಸಾಯಿತು, ಅವರ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಅತಿಯಾಯಿತು' ಅಂತಾ. ಆದರೆ ಇತ್ತೀಚೆಗೆ ಅಡಿಷನಲ್ ಚಾರ್ಜ್ ಶೀಟ್ ಗಳು ಸಲ್ಲಿಕೆಯಾಗುತ್ತಿವೆಯಂತೆ. ಅದೇನೆಂದರೆ 'ಸರ್ಕಾರದಲ್ಲಿ ವಲಸಿಗರ ಪ್ರಭಾವವೇ ಹೆಚ್ಚು' ಎಂದು. ಅಲ್ಲಿಗೆ ಇಷ್ಟು ದಿನ‌ ಕಾಂಗ್ರೆಸಿನಲ್ಲಿ ಕೇಳಿಬರುತ್ತಿದ್ದ ಮೂಲ ಮತ್ತು ವಲಸಿಗ ಎಂಬ ವರಸೆ ಈಗ ಬಿಜೆಪಿಯಲ್ಲೂ‌ ಮೊಳಗಲು ಆರಂಭವಾದಂತೆ.

ಈ ಬಗ್ಗೆ ಭಾರೀ ಆಕ್ಷೇಪ‌ ವ್ಯಕ್ತಪಡಿಸುವ 'ಮೂಲ ಬಿಜೆಪಿಗರು', ಬೇರೆ ಪಕ್ಷಗಳಿಂದ ಶಾಸಕರು ಬಂದಿದ್ದರಿಂದಲೇ ಬಿಜೆಪಿಗೆ ಅಧಿಕಾರ ಸಿಕ್ಕಿತು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ 'ನಮ್ಮ ಸರ್ಕಾರದಲ್ಲಿ ಅವರದೇ ಪಾರುಪತ್ಯ' ಎಂದು ಮೂಗು ಮುರಿಯುತ್ತಾರೆ. ಮೂಲ ಬಿಜೆಪಿಯವರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್. ಅಶೋಕ್, ಸಿ.ಟಿ. ರವಿ, ಶ್ರೀನಿವಾಸ ಪೂಜಾರಿ ಹೆಸರಿಗೆ ಮಾತ್ರ ಮಂತ್ರಿಗಳು. ಅವರಿಗೆ ಕವಡೆ ಕಾಸಿನ‌ ಕಿಮ್ಮತ್ತಿಲ್ಲ. ಸಿಎಂಗೆ ಹತ್ತಿರವಾಗಿರುವವರೆಲ್ಲಾ 'ಹೊರಗಿನವರೇ' ಎಂದು ದುಃಖ ತೋಡಿಕೊಳ್ಳುತ್ತಾರೆ. ಕಡೆಗೆ 'ಮೂಲ ಬಿಜೆಪಿಯವರ ರಕ್ಷಣೆಗಾಗಿ ನಾಯಕತ್ವ ಬದಲಾಗಬೇಕು' ಎಂಬ ಮನದಾಸೆಯನ್ನು ಬಿಚ್ಚಿಡುತ್ತಾರೆ.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಹಳ್ಳಿಹಕ್ಕಿ ಗುಟುರಿಗೆ ನಡುಗಿದ ಯಡಿಯೂರಪ್ಪ, ಸಾಹಿತಿಗಳಿಗೂ ರಾಜ್ಯಪಾಲರಾಗುವ ಆಸೆ!

ಭವಿಷ್ಯ ನುಡಿದಿದ್ದ ಸಿದ್ದರಾಮಯ್ಯ

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನದ ಬಳಿಕ ದೆಹಲಿಗೆ ಬಂದಿದ್ದ ಸಿದ್ದರಾಮಯ್ಯ ದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಕರ್ತರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು.‌ ಆಗ ಪ್ರವಾಹ ಪರಿಸ್ಥಿತಿಯಲ್ಲೂ ಸಂಪುಟ ರಚಿಸಲಾಗದೆ, ಖಾತೆ ಹಂಚಲಾಗದೆ ಯಡಿಯೂರಪ್ಪ ಪಡಿಪಾಟಿಲು ಪಡುತ್ತಿದ್ದ ಸಮಯ. ಈ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, 'ನೋಡಿ, ಯಡಿಯೂರಪ್ಪ ಅಥವಾ ಬಿಜೆಪಿ ಅಧಿಕಾರದ ಅವಧಿ ಮುಗಿಸಬಹುದು, ಆದರೆ ಯಾವ ರೀತಿಯಿಂದಲೂ ಅವರಿಂದ ಒಳ್ಳೆಯ ಸರ್ಕಾರ ಕೊಡಲು ಸಾಧ್ಯ ಆಗುವುದಿಲ್ಲ' ಎಂದು ಭವಿಷ್ಯ ನುಡಿದಿದ್ದರು.‌ ಕೊರೋನಾ ಸಂದರ್ಭದಲ್ಲಿ ಕೇಳಿಬರುತ್ತಿರುವ ಭ್ರಷ್ಟಾಚಾರ, ಮಂತ್ರಿಗಳ ನಡುವಿನ ಶೀತಲ ಸಮರ ಮತ್ತೀಗ ನಾಯಕತ್ವ ಬದಲಾವಣೆ ಎಂಬ ಬೆಳವಣಿಗೆಗಳು ಸಿದ್ದರಾಮಯ್ಯ ನುಡಿದಿದ್ದ ಭವಿಷ್ಯವನ್ನು ನಿಜವಾಗಿಸುವಂತೆ ಕಾಣತೊಡಗಿವೆ.
Published by:HR Ramesh
First published: