HOME » NEWS » State » DELHI POST KHARGHE KNEW IN ADVANCE NO ONE KNEW ABOUT MOILY RH

ದಿಲ್ಲಿ ಪೋಸ್ಟ್ | ಖರ್ಗೆಗೆ ಮೊದಲೇ ಗೊತ್ತಿತ್ತು, ಮೊಯ್ಲಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ, ರಾಜೀವಗೌಡ ಅಂದುಕೊಂಡಂತಲ್ಲ

ರಾಜ್ಯಸಭಾ ಚುನಾವಣೆಗೆ ಹುರಿಯಾಳಾಗಲು ರಾಜ್ಯ ಕಾಂಗ್ರೆಸಿನಿಂದ ಘಟಾನುಘಟಿಗಳು ಪ್ರಯತ್ನಿಸಿದರು.‌ ತೆರೆಯ ಹಿಂದೆ ನಡೆದ, ಹೊರ ಜಗತ್ತಿಗೆ ಗೊತ್ತಾಗದ ಒಂದಿಷ್ಟು ಕುತೂಹಲಕಾರಿ ಸಂಗತಿಗಳು ನ್ಯೂಸ್ 18 ದೆಹಲಿ ಪ್ರತಿನಿಧಿ ಧರಣೀಶ್ ಬೂಕನಕೆರೆ ಅವರ ಈ ವಾರದ ದಿಲ್ಲಿ ಪೋಸ್ಟ್ ಕಾಲಂನಲ್ಲಿ...

news18-kannada
Updated:June 6, 2020, 8:45 AM IST
ದಿಲ್ಲಿ ಪೋಸ್ಟ್ | ಖರ್ಗೆಗೆ ಮೊದಲೇ ಗೊತ್ತಿತ್ತು, ಮೊಯ್ಲಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ, ರಾಜೀವಗೌಡ ಅಂದುಕೊಂಡಂತಲ್ಲ
ದಿಲ್ಲಿ ಪೋಸ್ಟ್
  • Share this:
ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭಾ ಸ್ಥಾನ ಸಿಗುವುದು‌ ಕಷ್ಟವಂತೆ, ರಾಹುಲ್ ಗಾಂಧಿ ವಿರೋಧ ಮಾಡುತ್ತಿದ್ದಾರಂತೆ. ಯುವ ನಾಯಕನನ್ನು ಹುಡುಕುತ್ತಿದ್ದಾರಂತೆ ಎಂಬ ಅಂತೆ-ಕಂತೆಗಳು ಕಳೆದ ವಾರ ರಾಜ್ಯದಲ್ಲಿ ಚರ್ಚೆ ಆಗಿದ್ದೇ ಆಗಿದ್ದು. ಆದರೆ ತಮಗೆ ರಾಜ್ಯಸಭಾ ಟಿಕೆಟ್ ಸಿಕ್ಕೇ ಸಿಗುತ್ತೆ ಅಂತಾ ಖರ್ಗೆ ಅವರಿಗೆ ಚೆನ್ನಾಗಿ‌ ಗೊತ್ತಿತ್ತು. ಏಕೆಂದರೆ ಈ ಬಗ್ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಭರವಸೆ ನೀಡಿದ್ದರು. ಈಗಲೂ ಎಐಸಿಸಿಯಿಂದ ಅಧಿಕೃತವಾಗಿ ಹೆಸರು ಪ್ರಕಟವಾಗುವ ಕೆಲವೇ ಹೊತ್ತಿಗೂ ಮುನ್ನ ರಾಹುಲ್ ಗಾಂಧಿ ಅವರೇ ಕರೆ ಮಾಡಿ ವಿಷಯ ತಿಳಿಸಿದರಲ್ಲದೆ ಖರ್ಗೆ ಅವರನ್ನು ಅಭಿನಂದಿಸಿದ್ದಾರೆ. ನಿಮ್ಮಂತಹ ಅನುಭವಿಗಳು ಬೇಕು ಎಂದಿದ್ದಾರೆ.

ಹಾಗೆ ನೋಡಿದರೆ ಮಹಾರಾಷ್ಟ್ರದಿಂದಲೇ ಖರ್ಗೆ ಅವರನ್ನು ಕಳಿಸಲು ಅಲ್ಲಿನ‌ ಸಿಎಂ ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ನಾಯಕರು ಉತ್ಸಾಹ ತೋರಿದ್ದರು.‌ ಸರ್ಕಾರ ಬರಲು ಕಾರಣರಾದ ಖರ್ಗೆ ಅವರ ಋಣ ಸಂದಾಯ ಮಾಡಲು ಯೋಚಿಸಿದ್ದರು. ಸೋನಿಯಾ ಮತ್ತು ರಾಹುಲ್ ಗಾಂಧಿ ಬಳಿಯೂ ಪ್ರಸ್ತಾಪಿಸಿದ್ದರು. ಆದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಹೇಳಿದರೂ ಖರ್ಗೆ‌ ಬೇರೆ ರಾಜ್ಯದಿಂದ ರಾಜ್ಯಸಭೆ ಪ್ರವೇಶಿಸುವುದಿಲ್ಲ ಎಂದು ಹೈಕಮಾಂಡ್ ಮಾತನ್ನು ನಯವಾಗಿ ನಿರಾಕರಿಸಿದ್ದರು. ಆಗಲೇ 'ಕರ್ನಾಟಕದಿಂದಲೇ ಕಳುಹಿಸಿಕೊಡಲಾಗುವುದು' ಎಂಬ ಭರವಸೆ ಸಿಕ್ಕಿತ್ತು.

ಕಾಂಗ್ರೆಸ್ ಪಾಲಿನ ಆಪತ್ಬಾಂಧವ ಖರ್ಗೆ

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನ ಗಳಿಸಿ ಹೀನಾಯ ಸ್ಥಿತಿಯಲ್ಲಿದ್ದಾಗ ಅಧಿಕೃತವಲ್ಲದ ಪ್ರತಿಪಕ್ಷದ ನಾಯಕನಾಗಿ ಸಂಸತ್ತಿನಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸಿದವರು ಮಲ್ಲಿಕಾರ್ಜುನ ಖರ್ಗೆ‌. ಈಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸ್ಥಾನ‌ಗಳು ಕ್ಷೀಣಿಸುತ್ತಿವೆ. 2015ರ ಫೆಬ್ರವರಿ 15ರಲ್ಲಿ ರಾಜ್ಯಸಭೆಗೆ ಪ್ರವೇಶ ಪಡೆದ ಹಾಲಿ ವಿಪಕ್ಷ ನಾಯಕ ಗುಲಾಂ ನಭಿ ಆಜಾದ್ ಕೂಡ 2021ರ ಫೆಬ್ರವರಿ 15ರಂದು ನಿವೃತ್ತರಾಗುತ್ತಿದ್ದಾರೆ. ಅಷ್ಟರೊಳಗೆ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ರಾಜ್ಯಸಭಾ ಚುನಾವಣೆಗಳು ನಡೆಸಲು ಮೋದಿ-ಅಮಿತ್ ಶಾ ಸಿದ್ದರಿಲ್ಲ. ಬೇರೆ ರಾಜ್ಯಗಳಿಂದಲೂ ಬರುವ ಅವಕಾಶ ಇಲ್ಲ.‌ ಹಾಗಾಗಿ ಗುಲಾಂ ನಭಿ‌ ಆಜಾದ್ ತಕ್ಷಣವೇ ಮತ್ತೆ ರಾಜ್ಯಸಭೆಗೆ ಬರುವುದು ಅನುಮಾನ. ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ವಿಪಕ್ಷ ನಾಯಕ ಇಲ್ಲದಂತಾಗುತ್ತದೆ. ಡಾ. ಮನಮೋಹನ್ ಸಿಂಗ್ ಅವರಿಂದ ಹಿಡಿದು ಪಿ. ಚಿದಂಬರಂ, ಅಹಮದ್ ಪಟೇಲ್, ಆನಂದಶರ್ಮಾ ಅವರಂತಹ ಘಟಾನುಘಟಿ ನಾಯಕರಿದ್ದಾರೆ. ಆದರೆ ಯಾರೊಬ್ಬರಲ್ಲೂ ಪ್ರತಿಪಕ್ಷದ ನಾಯಕನಾಗುವ ಗುಣಲಕ್ಷಣಗಳು ಗೋಚರಿಸುತ್ತಿಲ್ಲ.‌ ಇದರಿಂದಾಗಿ ಖರ್ಗೆ ಅವರಲ್ಲಿ ಕಾಂಗ್ರೆಸ್ ಆಪತ್ಬಾಂಧವನನ್ನು ನಿರೀಕ್ಷಿಸುತ್ತಿದೆ.

ಸೈಲೆಂಟ್ ಆಪರೇಟರ್ ಮೊಯ್ಲಿ

ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಂಸದ ಮುದ್ದಹನುಮೇಗೌಡರ ನಡುವೆ ಮಾತ್ರ ತೀವ್ರ ಸ್ಪರ್ಧೆ ಎಂಬ ಮಾತುಗಳು ಕೇಳಿಬಂದಿದ್ದವು. ಹಾಲಿ ಸದಸ್ಯ ಬಿ.ಕೆ.‌ ಹರಿಪ್ರಸಾದ್ ಮತ್ತು ಪ್ರೊ. ರಾಜೀವಗೌಡ ಹೆಸರುಗಳು ಸಹಜವಾಗಿ ಕೇಳಿಬಂದಿದ್ದವು. ಆದರೆ ಒಳಗೊಳಗೆ ಲಾಭಿ ಮಾಡಿದ್ದವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ. ವೀರಪ್ಪ ಮೊಯ್ಲಿ ಕಾಂಗ್ರೆಸ್ ಹೈಕಮಾಂಡಿನಲ್ಲಿ‌ ಭಾರೀ ಪ್ರಭಾವ ಇರುವ ರಾಜ್ಯದ ಕೆಲವೇ ಕೆಲವರಲ್ಲಿ ಒಬ್ಬರು. ಬಹುತೇಕರು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಇಬ್ಬರಲ್ಲಿ ಒಬ್ಬರ ಬಳಗದಲ್ಲಿ ಮಾತ್ರ ಪ್ರಭಾವಿಗಳು. ಮೊಯ್ಲಿ ಅವರಿಗೆ ಮಾತ್ರ '10 ಜನಪಥ್' ಹಾಗೂ '12 ತುಘಲಕ್ ಲೇನ್' ಎರಡೂ ಚಿರಪರಿಚಿತ; ಎಲ್ಲೂ ಸಲ್ಲುವರು. ನೇರಾನೇರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಬಲ್ಲವರು. ಅಧಿಕಾರ ಇಲ್ಲದೆ ಚಡಪಡಿಸುತ್ತಿರುವ ಅವರು ಕೂಡ ರಾಜ್ಯಸಭಾ ಸ್ಥಾನ ಪಡೆಯಲು ಭಾರೀ ಒತ್ತಡ ಹೇರಿದ್ದರು. ಆದರೆ ಖರ್ಗೆ ಅವರಿಗೆ ನೀಡಿದ್ದ ವಾಗ್ದಾನ ಉಳಿಸಿಕೊಳ್ಳಲು ಹೈಕಮಾಂಡ್ ಈ ಸಲ ಮೊಯ್ಲಿ ಮಾತಿಗೆ ಸೊಪ್ಪು ಹಾಕಿಲ್ಲ ಎನ್ನುತ್ತವೆ ಎಐಸಿಸಿ ಮೂಲಗಳು.

ಸರ್ಪೈಸ್ ಕ್ಯಾಂಡಿಡೇಟ್ ಪ್ರೊ. ರಾಜೀವಗೌಡಕಳೆದ ಬಾರಿ ಪ್ರೊ. ರಾಜೀವಗೌಡ ಸರ್ಪೈಸ್ ಕ್ಯಾಂಡಿಡೇಟ್ ಆಗಿದ್ದರು. ಅದರಿಂದಾಗಿ ರಾಜೀವಗೌಡ, ರಾಹುಲ್ ಗಾಂಧಿ ಬಳಗದಲ್ಲಿ ಭಾರೀ ಪ್ರಭಾವಿ ಎಂಬ ಮಾತಿದೆ. ಆದರೆ 'ಎಸ್.ಎಂ.‌ ಕೃಷ್ಣ ಅವರಿಗೆ ಟಿಕೆಟ್ ತಪ್ಪಿಸಲು ರಾಜೀವಗೌಡ ಅವರಿಗೆ ಟಿಕೆಟ್ ಕೊಡಲಾಯಿತೋ ಅಥವಾ ರಾಜೀವಗೌಡಗೆ ಟಿಕೆಟ್ ಕೊಡುವುದಕ್ಕಾಗಿಯೇ ಎಸ್.ಎಂ. ಕೃಷ್ಣಗೆ ಟಿಕೆಟ್ ತಪ್ಪಿಸಲಾಯಿತೋ?' ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡರೆ ರಾಜೀವಗೌಡ ಸಾಮರ್ಥ್ಯ, ಪ್ರಭಾವ ಏನು‌ ಎಂಬುದು ಅರ್ಥವಾಗಲಿದೆ. ಆಗ ಎಸ್.ಎಂ. ಕೃಷ್ಣ ಅವರಿಗೆ ಟಿಕೆಟ್ ತಪ್ಪಿಸಲು ಹೈಕಮಾಂಡ್ ತೀರ್ಮಾನಿಸಿತ್ತು. ಆ ಟಿಕೆಟ್ ಯಾರಿಗೆ ಕೊಡಬೇಕು ಎಂಬುದಷ್ಟೇ ಬಾಕಿ‌ ಉಳಿದಿತ್ತು. ಆಗ ರಾಜ್ಯದಲ್ಲಿ ಓಡಾಡುತ್ತಿದ್ದ ಹೆಸರುಗಳ ಬಗ್ಗೆ ಹೈಕಮಾಂಡಿಗೆ ಸಮಾಧಾನ ಇರಲಿಲ್ಲ. ಸೂಕ್ತ ವ್ಯಕ್ತಿ ಹುಡುಕುವ ಕೆಲಸವನ್ನು ಹೈಕಮಾಂಡ್ ಆಂಧ್ರದ ಪಲ್ಲಂರಾಜು ಅವರಿಗೆ ನೀಡಿತ್ತು. ಪಲ್ಲಂರಾಜು ಕೃಪೆಯಿಂದ ರಾಜೀವಗೌಡರು ರಾಜ್ಯಸಭಾ ಸದಸ್ಯರಾದರು ಎಂಬುದು ಬಹುತೇಕರಿಗೆ ಗೊತ್ತಿಲ್ಲದ ವಿಷಯ.

ಹರಿಪ್ರಸಾದ್ ಯುಗಾಂತ್ಯ

ಬಿ.ಕೆ. ಹರಿಪ್ರಸಾದ್ ಯುವ ಕಾಂಗ್ರೆಸ್ ಕಾರ್ಯಕರ್ತ ಆಗಿದ್ದಾಗಲೇ ದೆಹಲಿಗೆ ಬಂದವರು. ಹಲವು ವರ್ಷಗಳ ಕಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದವರು. ಪ್ರಭಾವಿಯಾಗಿದ್ದವರು.‌ ಹಲವು ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ಆಗಿದ್ದವರು. ರಾಜ್ಯದಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರು ಕೂಡ ಮಲ್ಲಿಕಾರ್ಜುನ ಖರ್ಗೆ ಅವರ ಒಂದೇ ಹೆಸರು ಹೇಳದಿದ್ದರೆ ಬಹುಶಃ ಬಿ.ಕೆ. ಹರಿಪ್ರಸಾದ್ ಈ ಸಲವೂ ಮುಂಚೂಣಿಯಲ್ಲಿರುತ್ತಿದ್ದರು. ನೇರವಂತಿಕೆಯಿಂದಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿರೋಧ ಕಟ್ಟಿಕೊಂಡಿದ್ದಕ್ಕಾಗಿ ಅವರು ರಾಜ್ಯಸಭಾ ಸ್ಥಾನ ಕಳೆದುಕೊಳ್ಳಬೇಕಾಗಿದೆ. ಈ ಮುಖಾಂತರ ಹರಿಪ್ರಸಾದ್ ರಾಜಕೀಯ ಪ್ರಯಾಣ ಕೂಡ ಮಸುಕಾಗತೊಡಗಿದೆ.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಕೊರೋನಾ ಕಷ್ಟದ ನಡುವೆಯೂ ಬಿಜೆಪಿ ರಾಜಕೀಯ, ಮತ್ತೆ ಫಾರ್ಮ್​ಗೆ ಬಂದ ಮಮತಾ
Youtube Video
First published: June 6, 2020, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories