Delhi Post: ಮುಖ್ಯಮಂತ್ರಿ ಬೊಮ್ಮಾಯಿಗೆ 'ಪರಿವಾರದ' ಕಾಟ; ಸಿ.ಟಿ. ರವಿಗೆ ಶ್ಯಾನೆ ಸಿಟ್ಟು!

ಜನತಾ ಪರಿವಾರದವರು 'ಇವ ನಮ್ಮವ, ಇವ ನಮ್ಮವ' ಎಂದು ಪದೇ ಪದೇ ಹೇಳುತ್ತಿದ್ದಂತೆ ಸಂಘ ಪರಿವಾರದವರಿಗೆ 'ನಮ್ಮ ಕೈಗೆ ಬಂದ ಅಧಿಕಾರ ಎಂಬ ತುತ್ತು ಜನತಾ ಪರಿವಾರದ ಮೂಲದವನ ಬಾಯಿಗೆ ಬಿತ್ತಲ್ಲಾ...' ಎಂಬ ಉರಿ ಹೆಚ್ಚಾಗುತ್ತಲೇ ಇದೆ.

ಬಸವರಾಜ ಬೊಮ್ಮಾಯಿ-ಸಿ.ಟಿ.ರವಿ

ಬಸವರಾಜ ಬೊಮ್ಮಾಯಿ-ಸಿ.ಟಿ.ರವಿ

  • Share this:
ನವದೆಹಲಿ(ಆ.1) ಬಸವರಾಜ ಬೊಮ್ಮಾಯಿ ಅದೃಷ್ಟ ಖುಲಾಯಿಸಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಅವರಿಗೆ ಈ ಅಧಿಕಾರವನ್ನು ಎಂಜಾಯ್ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರವೇ ಹಾಗೆ... ಅದು ಸಿಗುತ್ತಿದ್ದಂತೆ ಕಂಡ ಕಂಡವರೆಲ್ಲಾ ಹತ್ತಿರದವರಾಗುತ್ತಾರೆ. ಹಾರ, ತುರಾಯಿ, ಅಭಿಮಾನ- ಸನ್ಮಾನಗಳ ಜಾತ್ರೆ ನಡೆಯುತ್ತದೆ. ಆರಂಭದ ಮಜವೇ ಬೇರೆ. ಆದರೆ ಬೊಮ್ಮಾಯಿಗೆ ಅದು ಸಾಧ್ಯವಾಗುತ್ತಿಲ್ಲ. ಕಾರಣ 'ಪರಿವಾರ'ಗಳ ಕಾಟ. ಅವರು ಹಿಂದೆ ಇದ್ದ ಜನತಾ ಪರಿವಾರದಿಂದ ಒಂದು ರೀತಿಯ ಕಾಟ. ಈಗ ಅವರು ಹತ್ತಿರವಾಗಲು ಹಪಹಪಿಸುತ್ತಿರುವ ಸಂಘ ಪರಿವಾರದಿಂದ ಮತ್ತೊಂದು ಕಾಟ.

ಬೊಮ್ಮಾಯಿ ಸಿಎಂ ಆಗಿದ್ದೇ ತಡ ಜನತಾ ಪರಿವಾರದವರಿಗೆ 'ಇವ ನಮ್ಮವ' ಎನಿಸಿಬಿಟ್ಟಿದೆ. ಬಿಜೆಪಿಯವರಿಗೆ ಮತ್ತು ಸಂಘ ಪರಿವಾರದವರಿಗೆ ಇದು ಉರಿ. ಬೊಮ್ಮಾಯಿ ಸಿಎಂ ಆದ ಕ್ಷಣದಲ್ಲಿ ಬಹುಶಃ ಸಂಘ ಪರಿಹಾರದವರಿಗೆ 'ಇವ ಹೊರಗಿನವ' ಎಂಬ ಭಾವನೆ ಅಷ್ಟಾಗಿ ಇರಲಿಲ್ಲವೇನೋ... ಆದರೆ ಜನತಾ ಪರಿವಾರದವರು 'ಇವ ನಮ್ಮವ, ಇವ ನಮ್ಮವ' ಎಂದು ಪದೇ ಪದೇ ಹೇಳುತ್ತಿದ್ದಂತೆ ಸಂಘ ಪರಿವಾರದವರಿಗೆ 'ನಮ್ಮ ಕೈಗೆ ಬಂದ ಅಧಿಕಾರ ಎಂಬ ತುತ್ತು ಜನತಾ ಪರಿವಾರದ ಮೂಲದವನ ಬಾಯಿಗೆ ಬಿತ್ತಲ್ಲಾ...' ಎಂಬ ಉರಿ ಹೆಚ್ಚಾಗುತ್ತಲೇ ಇದೆ. ಬಿಜೆಪಿಯಲ್ಲಿರುವ ಸಂಘ ಪರಿವಾರದ ಶಾಸಕರು, ಹಿರಿಯರು 'ಹೊರಗಿನಿಂದ ಬಂದ ಬಸಣ್ಣನ ಬದಲಿಗೆ ನಮ್ಮೊಳಗೇ ಬೇರೆ ಯಾರಾದರೂ ಆಗಬೇಕಿತ್ತು' ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ಸಾಧ್ಯತೆ; ಉಳಿದೆಡೆ ಹೇಗಿರಲಿದೆ ಇಂದಿನ ವಾತಾವರಣ?

ಬೊಮ್ಮಾಯಿಗೆ ಭಾರೀ ಬೇಸರ...

ಜನತಾ ಪರಿವಾರದವರು ಪದೇ ಪದೇ 'ಇವ ನಮ್ಮವ, ಇವ ನಮ್ಮವ' ಎಂದು ಹೇಳುತ್ತಿರುವುದು, ಇದರಿಂದ ಸಂಘ ಪರಿವಾರದವರ ಕಣ್ಣು ಕೆಂಪಾಗುತ್ತಿರುವುದು ಬೊಮ್ಮಾಯಿಗೆ ಭಾರೀ ಬೇಸರ ಉಂಟುಮಾಡಿದೆ. ಈ ಎರಡೂ ಪರಿವಾರದವರ ಕಾಟದಲ್ಲಿ ತಾನು ಪಡಿಪಾಟಲು ಪಡಬೇಕು ಎಂದು ತಡಬಡಿಸುತ್ತಿದ್ದಾರೆ. ಮೊದಲೇ ನೂರೆಂಟು ಸಮಸ್ಯೆಗಳಿದ್ದವು ಈಗ ಈ ಪರಿವಾರದವರ ಪ್ರಾರಬ್ಧ ಕಾಡುತ್ತಿದೆ ಎಂದು ಕಂಗಾಲಾಗಿದ್ದಾರೆ. ಇದೇ ಕಾರಣಕ್ಕೆ ಜನತಾ ಪರಿವಾರದವರ ಕ್ರೆಡಿಟ್ ಗೈನಿಂಗ್ ಬಗ್ಗೆ ದೆಹಲಿ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ಬಸಣ್ಣ ಗರಂ ಆದರು. ಇದಕ್ಕೂ ಮೊದಲು 'ಮೋಸ್ಟ್ ಅಂಡರಸ್ಟ್ಯಾಂಡಿಂಗ್ ಪ್ರೆಸ್ ಈಸ್ ಡೆಲ್ಲಿ ಪ್ರೆಸ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಸಣ್ಣನ‌ ಬಗ್ಗೆ ಸಿ.ಟಿ. ರವಿಗೆ ಶ್ಯಾನೆ ಕೋಪ!

ಸಿಎಂ ಆದ ಮೇಲೆ ಮೊದಲ ಬಾರಿಗೆ ಬೊಮ್ಮಾಯಿ ದೆಹಲಿಗೆ ಬಂದಿದ್ದ ವೇಳೆ ಸಿಎಂ ರೇಸಿನಲ್ಲಿದ್ದ ಸಿ.ಟಿ. ರವಿ ಮತ್ತು ಅರವಿಂದ ಬೆಲ್ಲದ್ ಕೂಡ ದೆಹಲಿಯಲ್ಲೇ ಇದ್ದರು. ಇವರಿಬ್ಬರ ಸಿಎಂ ಭೇಟಿ ಸುದ್ದಿ ಬ್ರೇಕ್ ಮಾಡಲು ಪತ್ರಕರ್ತರು ತುದಿಗಾಲಲ್ಲಿ ನಿಂತಿದ್ದರು. ಆದರೆ ಒಮ್ಮೆಯೂ ಸಿ.ಟಿ. ರವಿ ಸಿಎಂ ಭೇಟಿಯಾಗಲು ಪ್ರಯತ್ನಿಸಲಿಲ್ಲ. ಸದಾ ಪಕ್ಷದ ಶಿಸ್ತಿನ ಬಗ್ಗೆ ಪಾಠ ಮಾಡುವ ಸಿ.ಟಿ. ರವಿಗೆ ತಮ್ಮದೇ ಪಕ್ಷದ ಸಿಎಂ ಅನ್ನು ಸೌಜನ್ಯಕ್ಕಾದರೂ ಅಭಿನಂದಿಸಬೇಕು ಅಂತಾ ಅನ್ನಿಸಲೇ ಇಲ್ಲ. ರವಿ ಮಾತುಗಳಲ್ಲಾದರೂ ನೂತನ ಸಿಎಂ ಬಗ್ಗೆ ಅಭಿಮಾನದ ಹೊಳೆ ಹರಿಯಬಹುದು ಎಂದು ಕಾಯುತ್ತಿದ್ದ ಪತ್ರಕರ್ತರಿಗೆ ಸಿಕ್ಕಿದ್ದು ಗೂಡಾರ್ಥಗಳು ಮಾತ್ರ.

ಇದನ್ನೂ ಓದಿ:Gold Price Today: ಇಂದು ಚಿನ್ನದ ಬೆಲೆ ಏರಿಕೆಯಾಗಿಲ್ಲ; ಬಂಗಾರ ಖರೀದಿಸಲು ಇದೇ ಒಳ್ಳೆ ಸಮಯ..!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Latha CG
First published: