ರಾಜ್ಯದ ಬಿಜೆಪಿ ನಾಯಕರಿಗೆ ಅಮಿತ್ ಶಾ ಮತ್ತೆ ತಪರಾಕಿ; ಲೋಕಸಭೆ ಚುನಾವಣೆಗೆ ಈಗಿಂದಲೇ ಬಿಜೆಪಿ ಸಜ್ಜು


Updated:August 1, 2018, 7:34 PM IST
ರಾಜ್ಯದ ಬಿಜೆಪಿ ನಾಯಕರಿಗೆ ಅಮಿತ್ ಶಾ ಮತ್ತೆ ತಪರಾಕಿ; ಲೋಕಸಭೆ ಚುನಾವಣೆಗೆ ಈಗಿಂದಲೇ ಬಿಜೆಪಿ ಸಜ್ಜು
ಅಮಿತ್ ಶಾ

Updated: August 1, 2018, 7:34 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಾದರೂ ಸರಿಯಾಗಿ ಕೆಲಸ ಮಾಡಿ... ಹೀಗಂತ ರಾಜ್ಯ ಬಿಜೆಪಿ ನಾಯಕರಿಗೆ ಅವರ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಾಕೀತು ಮಾಡಿದ್ದಾರಂತೆ. ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ನಾಯಕರು ಸರಿಯಾಗಿ ಕೆಲಸ ಮಾಡಲಿಲ್ಲ. ಒಗ್ಗೂಡಿ ಕೆಲಸ ಮಾಡಲಿಲ್ಲ. ಉದಾಹರಣೆಗೆ ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದ ಯಡಿಯೂರಪ್ಪ ಅವರಿಗೆ ಇನ್ನೂ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡುವಂತೆ ಹೇಳಲಾಗಿತ್ತಂತೆ. ಅವರು ಮಾಡಲಿಲ್ಲವಂತೆ. ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್​ಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಇನ್ನೂ ಹೆಚ್ಚಿನ ಕ್ಷೇತ್ರ ಗೆಲ್ಲಲು ಸೂಚಿಸಲಾಗಿತ್ತಂತೆ. ಅವರು ಗುರಿ ಮುಟ್ಟಿಲ್ಲ. ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ಡಿ.ವಿ. ಸದಾನಂದಗೌಡರಿಗೆ ನಿರ್ದಿಷ್ಟ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಪ್ರಚಾರ ಮಾಡಲು ಸೂಚಿಸಲಾಗಿತ್ತಂತೆ. ಅವರುಗಳು ಅವರಿಗಿಷ್ಟ ಬಂದ ಕ್ಷೇತ್ರ ಆರಿಸಿಕೊಂಡು ಯಡವಟ್ಟು ಮಾಡಿದ್ದರಂತೆ. ಇವರೆಲ್ಲರ ಈ ನಡೆಯಿಂದ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎನ್ನುವಂತಾಗಿದೆ ಎಂಬುದು ಅಮಿತ್ ಶಾ ಅಭಿಪ್ರಾಯ. ಇದು ಲೋಕಸಭಾ ಚುನಾವಣೆಯಲ್ಲಿ ಮರುಕಳಿಸಬಾರದು. ಈಗಿನಿಂದಲೇ ಗೆದ್ದೇ ಗೆಲ್ಲುವ ಕ್ಷೇತ್ರಗಳು, ಗೆಲ್ಲಬಹುದಾದ ಕ್ಷೇತ್ರಗಳು, ಗೆಲುವು‌ ಸಾಧ್ಯವೇ ಇಲ್ಲದ ಕ್ಷೇತ್ರಗಳನ್ನು ಗುರುತಿಸಿ.‌ ಜೊತೆಗೆ ಹಾಲಿ‌ ಸಂಸದರನ್ನು ಸೇರಿದಂತೆ ಗೆದ್ದೆ ಗೆಲ್ಲುವವರು, ಗೆಲ್ಲಬಹುದಾದವರು, ಸೋಲುವವರು ಎಂಬುದಾಗಿ ಕೂಡ ನಿರ್ಧರಿಸಿ. ಗೆಲುವ ಸಾಧ್ಯ ಇರುವ ಕಡೆ ಅದಕ್ಕೆ ಬೇಕಾದ ಯೋಜನೆ ರೂಪಿಸಿ, ಸೋಲುವ‌ ಕಡೆ ಬೇರೆ ಅಭ್ಯರ್ಥಿಗಳನ್ನು ಹುಡುಕಿ ಎಂಬ ಕಟ್ಟಪ್ಪಣೆ ರವಾನೆಯಾಗಿದೆಯಂತೆ.

ರಾಜ್ಯದ ನಾಯಕರಿಗೆ ಗೆಲುವೊಂದೇ ಗುರಿ ಎಂದು ಒತ್ತಿ ಹೇಳಿರುವ ಅಮಿತ್ ಶಾ, ನಮ್ಮ‌ ಪಕ್ಷದಲ್ಲಿ ಗೆಲ್ಲುವವರಿದ್ದರೆ ಅವರಿಗೆ ಅವಕಾಶ ನೀಡಿ.‌ ಇಲ್ಲದಿದ್ದರೆ ಬೇರೆ ಪಕ್ಷಗಳಿಂದ ಕರೆತನ್ನಿ. ಇದಕ್ಕೆ ಹೈಕಮಾಂಡ್ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ಅಭಯ ನೀಡಿದ್ದಾರಂತೆ. ಖುದ್ದು ಅಮಿತ್ ಶಾ ಇಂಥದೊಂದು ಭರವಸೆ ನೀಡಿರುವುದರಿಂದಲೇ ಯಡಿಯೂರಪ್ಪ ಬೇರೆ ಪಕ್ಷದ ನಾಯಕರಿಗೆ ಬಿಡುವಿಲ್ಲದೆ ಫೋನಾಯಿಸುತ್ತಿರುವುದು ಎನ್ನುತ್ತಾರೆ ಅವರ ನಿಕಟವರ್ತಿಗಳೊಬ್ಬರು.

ಜೆಡಿಎಸ್ ರಾಜ್ಯಾಧ್ಯಕ್ಷರು ಬದಲಾಗ್ತಾರಾ?

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರೂ ಹೌದು. ಅವರಿಗೆ ಸರ್ಕಾರದ ಜವಾಬ್ದಾರಿ ನಿಭಾಯಿಸೋದ್ರಲ್ಲೇ ಹೈರಾಣವಾಗ್ತಿರೋದ್ರಿಂದ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡ್ತಾರೆ ಎನ್ನೋ ಸುದ್ದಿಗಳು ಬರುತ್ತಿದ್ದವು. ಆ ಸ್ಥಾನಕ್ಕೆ ಮಾಜಿ ಸಚಿವ ಎಚ್. ವಿಶ್ವನಾಥ್, ಬಿ.ಬಿ. ನಿಂಗಯ್ಯ, ಪಿ.ಜಿ. ಆರ್. ಸಿಂಧ್ಯ ಮತ್ತಿತರ ಹೆಸರುಗಳು ಕೂಡ ಕೇಳಿಬಂದಿದ್ವು. ಆದರೆ ದೇವೇಗೌಡರಿಗೆ ನಿರ್ಣಾಯಕವಾಗಿರುವ ಪಕ್ಷದ ಅಧ್ಯಕ್ಷ ಸ್ಥಾನವನ್ನು ತಮ್ಮ ಕುಟುಂಬದ ಹೊರತಾಗಿ ಬೇರೆಯವರಿಗೆ ಬಿಟ್ಟುಕೊಡಲು ಮನಸ್ಸಿಲ್ಲ. ಹಾಗಂತ ಕುಮಾರಸ್ವಾಮಿ ಬಿಟ್ಟು ಲೋಕೋಪಯೋಗಿ ಸಚಿವ ಎಚ್.ಡಿ.‌ ರೇವಣ್ಣ ಅವರಿಗೂ ನೀಡೋಕಾಗೊಲ್ಲ. ಅದರಿಂದ ಅಧ್ಯಕ್ಷಗಾದಿ ಬದಲಾವಣೆ ಅಸಾಧ್ಯ. ಹೆಚ್ಚು ಎಂದರೆ ಎರಡು ಕಾರ್ಯಾಧ್ಯಕ್ಷ ಹುದ್ದೆ ಕ್ರಿಯೇಟ್ ಮಾಡಿ ಕುಮಾರಸ್ವಾಮಿಗೆ ನಿಷ್ಠರಾಗಿರುವವರಿಗೆ ಒಂದು ಸ್ಥಾನ ದೇವೇಗೌಡ-ರೇವಣ್ಣ ನಿಷ್ಟರಿಗೆ ಇನ್ನೊಂದು ಸ್ಥಾನ ನೀಡಬಹುದು ಎನ್ನುತ್ತವೆ ಜೆಡಿಎಸ್ ಮೂಲಗಳು.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ