ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರ ದೆಸೆ: ಅವರು ಪಾತ್ರಧಾರಿಯಾ, ಸೂತ್ರಧಾರಿಯಾ?


Updated:August 6, 2018, 4:06 PM IST
ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರ ದೆಸೆ: ಅವರು ಪಾತ್ರಧಾರಿಯಾ, ಸೂತ್ರಧಾರಿಯಾ?
ಹೆಚ್.ಡಿ. ದೇವೇಗೌಡ

Updated: August 6, 2018, 4:06 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ: ಹಿಂದೆ ಆಕಸ್ಮಿಕವಾಗಿ ಪ್ರಧಾನಿಯಾಗಿದ್ದ ದೇವೇಗೌಡರ ಬಗ್ಗೆ ಈಗ ದೆಹಲಿ ವಲಯದಲ್ಲಿ ಎರಡು ರೀತಿಯ ಮಾತುಗಳು ಕೇಳಿಬರ್ತಿವೆ. ಒಂದು ಅವರೇ ಖುದ್ದಾಗಿ ಪ್ರಧಾನ ಮಂತ್ರಿ ಆಗಲು ಪ್ರಯತ್ನ ಮಾಡ್ತಾರೆ ಅಂತಾ. ಇದು ಪಾತ್ರಧಾರಿಯಾಗುವ ಪ್ರಯತ್ನವಾದರೆ ಎರಡನೇಯದು ಸೂತ್ರದಾರರಾಗುವುದು. ಬಿಜೆಪಿಯೇತರ ಪಕ್ಷಗಳನ್ನೆಲ್ಲಾ ಒಗ್ಗೂಡಿಸಿ ಯುಪಿಎ ಅಥವಾ ತೃತೀಯ ರಂಗದ ಸರ್ಕಾರ ತರುವ ಸಮ್ಮಿಶ್ರ ಸರ್ಕಾರದ ಶಿಲ್ಪಿಯಾಗುವುದು. ಈ ಬಗ್ಗೆ ಅವರಂತೂ ಗುಟ್ಟು ಬಿಟ್ಟುಕೊಡ್ತಿಲ್ಲ. ಎಂದಿನಂತೆ ನಿಗೂಢ ನಡೆ ಇಡ್ತಿದಾರೆ. ಇನ್ನು ರಾಜ್ಯದ ವಿಷಯಕ್ಕೆ ಬಂದರೆ ಪ್ರತ್ಯೇಕ ರಾಜ್ಯದ ಬಗ್ಗೆ ಅಷ್ಟೆಲ್ಲಾ ಚರ್ಚೆ ಆಗ್ತಿದ್ರೂ ದೇವೇಗೌಡರು ಮಾತ್ರ ದಿವ್ಯ ಮೌನ ವಹಿಸಿಬಿಟ್ಟಿದಾರೆ. ಹಾಗಿದ್ರೆ ಅವರ ಲೆಕ್ಕಾಚಾರ ಏನು? ಡೀಟೈಲ್ಸ್ ನೀವೇ ನೋಡಿ...

ಮತ್ತೆ ಗಟ್ಟಿಯಾದ ರಾಜಕೀಯದ ಜಗಜಟ್ಟಿ:
ಕರ್ನಾಟಕ ವಿಧಾನಸಭೆಯಲ್ಲಿ ಜೆಡಿಎಸ್ ಕೇವಲ 37 ಸೀಟು ಗೆದ್ದರೂ ಅನಾಯಾಸವಾಗಿ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಶಕ್ತಿ ಈಗ ಇಮ್ಮಡಿಯಾಗಿದೆ. ದೇವೇಗೌಡರು ಈಗ ಮೊದಲಿಗಿಂತಲೂ ಹೆಚ್ಚು ಆಕ್ಟೀವ್ ಆಗಿದಾರೆ. ಮುಖ್ಯಮಂತ್ರಿಯಾಗಿರುವ ಮಗ ಎಚ್.ಡಿ. ಕುಮಾರಸ್ವಾಮಿಗೆ ಸಲಹೆ-ಸೂಚನೆ ಕೊಡುವ ಜೊತೆಜೊತೆಗೆ ತಾವು ಕೂಡ ಹೊಸಹೊಸ ಕನಸು ಕಾಣತೊಡಗಿದಾರೆ. ಮಗನಿಗೆ ರಾಜ್ಯದ ಉಸಾಬರಿ ಕೊಟ್ಟು ಅವರು ರಾಷ್ಟ್ರ ರಾಜಕಾರಣಕ್ಕೆ ಅಣಿಯಾಗುತ್ತಿದ್ದಾರೆ. ದೆಹಲಿ ಭೇಟಿಗಳು ಹೆಚ್ಚಾಗುತ್ತಿವೆ. ದೆಹಲಿಯಲ್ಲಿ ಬೇರೆ ಬೇರೆ ಮುಖಂಡರ ಜೊತೆ ಭೇಟಿ ಆಗುವುದು ಹೆಚ್ಚಾಗುತ್ತಿದೆ‌.

ಮತ್ತೊಮ್ಮೆ ಅದೃಷ್ಟದ ನಿರೀಕ್ಷೆಯಲ್ಲಿ ದೇವೇಗೌಡರು:
ಹಿಂದೆ ಅದೃಷ್ಟ ಬಲದಿಂದ ಪ್ರಧಾನಮಂತ್ರಿಯಾಗಿದ್ದ ದೇವೇಗೌಡರು ಮತ್ತೆ ಅಂಥದೇ ಪರಿಸ್ಥಿತಿ ನಿರ್ಮಾಣವಾಗಬಹುದು, ನಿರ್ಮಾಣ ಆಗಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಯಾವ ಕಾರಣಕ್ಕೂ ತಮ್ಮ ಜೆಡಿಎಸ್ ಪಕ್ಷ ಐದಾರಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಗದ್ದುಗೆಯ ಆಸೆ ಚಿಗುರೊಡೆದಿದೆ. ತಮ್ಮ‌ ಪಕ್ಷಕ್ಕೆ ಕಡಿಮೆ ಸೀಟು ಸಿಗುವುದೇ ವರದಾನ ಎಂದುಕೊಂಡಿದ್ದಾರೆ. ಲೋಕಸಭೆಗೆ ಹೆಚ್ಚು ಸಂಸದರನ್ನು ಕಳುಹಿಸಿಕೊಡುವಂತಹ ಸಮಾರ್ಥ್ಯ ಇರುವ ಬಿಎಸ್​ಪಿ ನಾಯಕಿ ಮಾಯಾವತಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ನಂತರದ ಸ್ಥಾನದಲ್ಲಿ ಇರಬಹುದಾದ ಎನ್​ಸಿಪಿಯ ಶರದ್ ಪವಾರ್, ಟಿಡಿಪಿಯ ಚಂದ್ರಬಾಬು ನಾಯ್ಡು ದಶಕಗಳ ಕಾಲದಿಂದ ಪ್ರಧಾನಿಯಾಗುವ ಬಯಕೆ ಹೊಂದಿದ್ದಾರೆ.‌ ಅವರು ತಾವುಗಳು ಪ್ರಧಾನಿಯಾಗಲು ಪ್ರಯತ್ನಿಸುವರೇ ವಿನಃ ಸಮಾನ ಶಕ್ತಿ ಹೊಂದಿರುವ ಬೇರೊಬ್ಬರನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ.‌ ಹಾಗಾಗಿ ತಾನು ಸರ್ವ ಸಮ್ಮತದ ಆಯ್ಕೆ ಆಗಬಹುದು. ತಮ್ಮ ಬಳಿ ಸಂಖ್ಯಾಬಲ ಇಲ್ಲದಿರುವುದರಿಂದ ತಾವು ಅಪಾಯಕಾರಿಯಾಗುವುದಿಲ್ಲ ಎಂದುಕೊಂಡು ಎಲ್ಲರೂ ತಮ್ಮನ್ನೇ ಬೆಂಬಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಮುತ್ಸದಿ, ಮಾಜಿ ಪ್ರಧಾನಿ ಎನ್ನುವದೇ ಮಾನದಂಡ:
Loading...

ದೇವೇಗೌಡರ ಬಗ್ಗೆ 'ಮಾಜಿ ಪ್ರಧಾನಿಯಾಗಿದ್ದರೂ ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ' ಎಂಬ ಆರೋಪ, ಅಪವಾದಗಳಿವೆ. ಆದರೂ ಅವರೊಬ್ಬ ಮುತ್ಸದಿ ರಾಜಕಾರಣಿ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆ ಮುತ್ಸದಿತನ, ಈಗಾಗಲೇ ಪ್ರಧಾನಮಂತ್ರಿಯಾಗಿ ಕೆಲಸ ಮಾಡಿರುವ ಅನುಭವ ಹಾಗೂ ಎಲ್ಲಾ ನಾಯಕರೊಂದಿಗೆ ಹೊಂದಿರುವ ಉತ್ತಮ ಸಂಬಂಧವೇ ದೇವೇಗೌಡರು ಪ್ರಧಾನಿಯಾಗಲು ಅರ್ಹತೆಗಳಾಗಬಹುದು.

ಆಸೆಯ ಜೊತೆಗೆ ಅವಕಾಶ ಸಿಗದಿರಬಹುದೆಂಬ ಆತಂಕವೂ ಉಂಟು:
ಎಂಥದೇ ಪರಿಸ್ಥಿತಿಯಲ್ಲೂ ಹಿಂದೆ ಆದಷ್ಟು ಸುಲಭವಾಗಿ ಈ ಬಾರಿ ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಿಲ್ಲ. ಆಗ ಪ್ರಧಾನ‌ಮಂತ್ರಿ ಸ್ಥಾನಕ್ಕೆ ಹೆಸರು ಕೇಳಿ ಬರುತ್ತಿದ್ದ ನಾಯಕರು ಸ್ವತಃ ಪ್ರಧಾನಿ ಪಟ್ಟವನ್ನು ನಿರೀಕ್ಷೆ ಮಾಡಿದ್ದರು. ಅದಕ್ಕೆ ಅತ್ಯುತ್ತಮ ಉದಾಹರಣೆ ಆಗ ವಯಸ್ಸು, ಅನುಭವ, ಸಂಖ್ಯಾಬಲ ಎಲ್ಲದರಲ್ಲೂ ದೇವೇಗೌಡರಿಗಿಂತ ಹೆಚ್ಚು ಸೂಕ್ತರಾಗಿದ್ದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು. ಉಳಿದೆಲ್ಲಾ ನಾಯಕರು ಮನೆ ಬಾಗಿಲ ಬಳಿ‌ ಹೋಗಿ ಗೋಗರೆದರೂ ಪ್ರಧಾನಿ ಹುದ್ದೆಯನ್ನು ಅವರು ಒಪ್ಪಿಕೊಳ್ಳಲಿಲ್ಲ. ಆದರೆ ಈಗ ಪ್ರಧಾನ ಮಂತ್ರಿಯ ರೇಸ್​ನಲ್ಲಿರುವ ಮಾಯಾವತಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಬಾಬು ನಾಯ್ಡು ಮತ್ತಿತರರು ತಾವೇ ಆಗಬೇಕೆಂದು ಶತಪ್ರಯತ್ನ ಮಾಡುತ್ತಾರೆ. ಪರಿಸ್ಥಿತಿ ಹೀಗಿರುವುದರಿಂದ ದೇವೇಗೌಡರಿಗೆ ಹಿಂದೆ ಸಿಕ್ಕಷ್ಟು ಸುಲಭವಾಗಿ ಈ ಬಾರಿ ಅವಕಾಶ ಸಿಗುವುದಿಲ್ಲ ಎಂಬ ವಾಸ್ತವವೂ ಗೊತ್ತಿದೆ.

ಪಾತ್ರಧಾರಿಯಾಗಲು ಸಾಧ್ಯವಾಗದಿದ್ದರೆ ಸೂತ್ರಧಾರಿ!
ಒಂದೊಮ್ಮೆ ತಾವೇ ಪ್ರಧಾನಿ ಆಗುವ ಅವಕಾಶ ಸಿಗದೇ ಇದ್ದರೆ ದೇವೇಗೌಡರ ಆಟ ಬದಲಾಗುತ್ತದೆ. ಅದಕ್ಕೆ ಅವರು ಈಗಾಗಲೇ ಪ್ಲಾನ್ ಬಿ ಯೋಜನೆ ಹಾಕಿಕೊಂಡು, ಅದಕ್ಕಾಗಿ ತಾಲೀಮು ಶುರು ಮಾಡ್ಕೊಂಡಿದ್ದಾರೆ. ದೇವೇಗೌಡರು ದೇವರು, ದಿಂಡರು, ಅದೃಷ್ಟ, ಜ್ಯೋತಿಷ್ಯವನ್ನ ತುಂಬಾ ನಂಬ್ತಾರೆ. ನಿಜಕ್ಕೂ ಅವರ ಅದೃಷ್ಟ ಚೆನ್ನಾಗಿದೆ. ಇನ್ನೊಂದ್ಸಲ ಪ್ರಧಾನಿ ಆಗುವಷ್ಟು ಚೆನ್ನಾಗಿಲ್ಲದಿದ್ದರೂ ಪ್ರಧಾನಿಯನ್ನು ಆಯ್ಕೆ ಮಾಡುವಂತಹ ನಿರ್ಣಾಯಕ ಪಾತ್ರವಹಿಸುವಷ್ಟು ಚೆನ್ನಾಗಿದೆ. ಸದ್ಯಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯೇತರ ಪಕ್ಷಗಳನ್ನೆಲ್ಲಾ ಒಗ್ಗೂಡಿಸುವ, ತೃತೀಯ ರಂಗ ಅಥವಾ ಪರ್ಯಾಯ ರಂಗ ರಚಿಸುವ ಸಾಮರ್ಥ್ಯ ಮತ್ತು ಚಾಣಾಕ್ಷತನ ಈಗಿರುವ ನಾಯಕರಿಲ್ಲ. ದೇವೇಗೌಡರು ಮಾತ್ರ ಆ ಸಮ್ಮಿಶ್ರ ಸರ್ಕಾರ ಶಿಲ್ಪಿಯ ಪಾತ್ರವನ್ನು ನಿರ್ವಹಿಸಬಲ್ಲರು. ಹಿರಿತನ‌, ಅನುಭವ ಮತ್ತು ಸಂಪರ್ಕದಿಂದಾಗಿ ಎಲ್ಲರನ್ನೂ ಒಂದು ವೇದಿಕೆಗೆ ಅವರು ತರಬಲ್ಲರು.

ಯುಪಿಎ ಸರ್ಕಾರ ರಚನೆಯಲ್ಲೂ ನಿರ್ಣಾಯಕರಾಗಬಲ್ಲ ದೇವೇಗೌಡರು:
ಒಂದೊಮ್ಮೆ ಕಾಂಗ್ರೆಸ್ ನೂರಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಯುಪಿಎ ಸರ್ಕಾರ ರಚಿಸುವಂತಹ ಪರಿಸ್ಥಿತಿ ನಿರ್ಮಾಣವಾದರೆ ಆಗಲೂ ಯುಪಿಎ ಕಡೆಗೆ ಬೇರೆ ಪಕ್ಷಗಳನ್ನು ಮತ್ತು ನಾಯಕರನ್ನು ಸೆಳೆಯಲು ದೇವೇಗೌಡರು ಮುಂದಾಗಬಹುದು. ಈಗಾಗಲೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗಲು ತಮ್ಮ ಆಕ್ಷೇಪವಿಲ್ಲ' ಎಂದು ಹೇಳುವ ಮೂಲಕ ಏಕಕಾಲಕ್ಕೆ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಗಟ್ಟಿಮಾಡಿಕೊಂಡಿದ್ದಾರೆ. ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಬಾಗಿಲನ್ನು ತೆರೆದಿಟ್ಟುಕೊಂಡಿದ್ದಾರೆ.

ಇವಿಷ್ಟೇಯಲ್ಲ ದೇವೇಗೌಡರ ವರಸೆ. ಒಂದ್ಕಡೆ ತಾವೇ ಪ್ರಧಾನಿ ಆಗೋಕೆ ಅಥವಾ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡೋಕೆ ತಯಾರಾಗ್ತಿದಾರೆ. ಇನ್ನೊಂದ್ಕಡೆ ಎಂಥದೇ ಪರಿಸ್ಥಿತಿಯಲ್ಲೂ ರಾಜ್ಯದಲ್ಲಿ ಮಗನಿಗೆ ಸಿಕ್ಕಿರುವ ಅಧಿಕಾರ ಕೈತಪ್ಪದಂತೆ ಅದಕ್ಕೆ ಬೇಕಾದ ತಂತ್ರ ಎಣೆಯುತ್ತಿದ್ದಾರೆ. ಅದಕ್ಕಾಗಿ ನಾನಾ ರೀತಿಯ ಲೆಕ್ಕಾಚಾರ ಹಾಕ್ತಿದಾರೆ.

ಮಮತಾ ಬ್ಯಾನರ್ಜಿ ಭೇಟಿ ಬೇಡ ಎಂದಿದ್ದ ದೇವೇಗೌಡರು:
ಇದೇನಪ್ಪಾ ಇದ್ದಕ್ಕಿದ್ದಂತೆ ಮಮತಾ ಬ್ಯಾನರ್ಜಿ ವಿಷಯ ಅಂತಾ ಆಶ್ಚರ್ಯ ಆಗ್ತಿದೆಯಾ? ದೇವೇಗೌಡರ ವಿಷಯಗಳು ಹಾಗಿರ್ತವೆ, ಕೆಲವು ಸಂದರ್ಭದಲ್ಲಿ ಎಂಥಾ ರಾಜಕೀಯ ವಿಶ್ಲೇಷಕರಿಗೂ ಅರ್ಥ ಮಾಡ್ಕೊಳೋಕೆ ಸಾಧ್ಯವಾಗೊಲ್ಲ. ಮಮತಾ ಬ್ಯಾನರ್ಜಿ ವಿಷಯಕ್ಕೆ ಬರುವುದಾದರೆ ಎನ್​ಆರ್​ಸಿ ವಿಷಯದಲ್ಲಿ ವಿಪಕ್ಷಗಳ ನಾಯಕರನ್ನೆಲ್ಲಾ ಭೇಟಿ ಮಾಡ್ತಿದ್ದ ಅವರು ದೆಹಲಿಯಲ್ಲೇ ಇದ್ದ ದೇವೇಗೌಡರನ್ನು ಭೇಟಿಮಾಡಿದ್ರು. ದೇವೇಗೌಡರ ಲೆಕ್ಕಾಚಾರ 'ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ' ಎಂಬಂತಿತ್ತು. ಅಂದರೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ತಾನು ತೃತೀಯ ರಂಗ ಅಥವಾ ಪರ್ಯಾಯ ರಂಗ ರಚನೆಯ ಕೆಲಸದಲ್ಲಿ‌ ಈಗಾಗಲೇ ತೊಡಗಿಕೊಂಡಿದ್ದೇನೆ ಎನ್ನುವ ಸಂದೇಶ ರವಾನಿಸಬೇಕಾಗಿತ್ತು. ಆದರೆ ಎನ್​ಆರ್​ಸಿ ವಿಷಯಕ್ಕೆ ಬೆಂಬಲಿಸುವ ಉದ್ದೇಶ ಇರಲಿಲ್ಲ. ಏಕೆಂದರೆ ಎನ್​ಆರ್​ಸಿ ಬೆಂಬಲಿಸಿ ಪ್ರಧಾನಿ ಮೋದಿ ವಿರೋಧ ಕಟ್ಟಿಕೊಳ್ಳಲು ಅವರು ಸಿದ್ದರಿಲ್ಲ. ಪ್ರಧಾನಿ ಮೋದಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಓಟು ಹಾಕುವಾಗಲು ದೇವೇಗೌಡರು ಬಟನ್ ಒತ್ತುವ ಮೂಲಕ ಮತ ಹಾಕಲಿಲ್ಲ. ಬದಲಿಗೆ ಚೀಟಿಯಲ್ಲಿ ಮತ ಹಾಕಿದರು. ಬಟನ್ ಒತ್ತಿ ಮತ ಹಾಕಿದ್ದರೆ ಯಾರಿಗೆ ಮತ ಹಾಕಿದ್ದಾರೆ ಎಂಬ ಅಂಶ‌ ಗೊತ್ತಾಗುತ್ತದೆ‌. ಮೋದಿ‌ ಮತ್ತು ಬಿಜೆಪಿ ನಾಯಕರು ಬೇಸರ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೇ ದೇವೇಗೌಡರು ಚೀಟಿಯಲ್ಲಿ ಮತಹಾಕಿದ್ದರು. ದೇವೇಗೌಡರು ಮೋದಿ ಮತ್ತು ಬಿಜೆಪಿ ನಾಯಕರನ್ನು ವಿರೋಧ ಮಾಡದಿರುವುದಕ್ಕೆ ಬೇರೆಯೇ ಕಾರಣವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಸಂಘರ್ಷ ಉಂಟಾಗಿ ಸರ್ಕಾರ ಉರುಳುವ ಸಂದರ್ಭ ಬಂದರೆ ಬಿಜೆಪಿಯ ಬೆಂಬಲ ಪಡೆಯಬಹುದು. ಇನ್ನೊಂದು ಲೆಕ್ಕಾಚಾರ ಏನೆಂದರೆ, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಸರ್ಕಾರಕ್ಕೆ ಕಂಟಕ ಬರಬಹುದು.‌ ಬರದಹಾಗೆ ನೋಡಿಕೊಳ್ಳಲು ಈಗಿನಿಂದಲೇ ದೇವೇಗೌಡರು ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಅವರಿಗೆ ಎನ್​ಆರ್​ಸಿ ವಿಷಯಕ್ಕಾಗಿ ಮಮತಾ ಬ್ಯಾನರ್ಜಿ ಬಂದು ಭೇಟಿಯಾಗಿದ್ದೂ, ಅದೂ ಸೆಂಟ್ರಲ್ ಹಾಲಿನಲ್ಲಿ ಭೇಟಿಯಾಗದೇ ಕರ್ನಾಟಕ ಭವನದವರೆಗೂ ಬಂದು ಭೇಟಿಯಾಗಿದ್ದು ದೇವೇಗೌಡರಿಗೆ ಇಷ್ಟವಿರಲಿಲ್ಲವಂತೆ.

ರಾಜ್ಯ ರಾಜಕಾರಣದ ವಿಷಯದಲ್ಲಿ ದಿವ್ಯಮೌನ:
ಉತ್ತರ ಕರ್ನಾಟಕವನ್ನೇ ಬೇರೆ ರಾಜ್ಯ ಮಾಡಿಬಿಡಬೇಕು ಎಂಬ ವಿಷಯ ರಾಜ್ಯದಲ್ಲಿ ತುಂಬಾ ಚರ್ಚೆ ಆಗ್ತಿದೆ. ಬಿಜೆಪಿ ಈ ವಿಷಯವನ್ನು ಲೋಕಸಭಾ ಚುನಾವಣೆವರೆಗೂ ಜೀವಂತ ಇಟ್ಕೊಂಡು ರಾಜಕೀಯ ಬೇಳೆ ಬೇಯಿಸ್ಕೊಳೋಕೆ ಪ್ರಯತ್ನ ಮಾಡ್ತಿದೆ. ಕಾಂಗ್ರೆಸ್ ಏನು ಮಾಡಬೇಕು ಅಂತಾ ಗೊತ್ತಾಗದೆ ಪರಿತಪಿಸ್ತಿದೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ರಾಜ್ಯದ ಎಲ್ಲಾ ಹಿರಿಯ ರಾಜಕಾರಣಿಗಳು ಈ ಬಗ್ಗೆ ಮಾತನಾಡಿದಾರೆ. ಆದರೆ ದೇವೇಗೌಡರು ಮಾತ್ರ ಮೌನಕ್ಕೆ ಶರಣಾಗಿದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸಿ ಅದರ ಮೇಲೆ ಹಿಡಿತ ಸಾಧಿಸಬಹುದು ಅಂತಾ ಸುಮ್ಮನಿರಬಹುದು.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...