ದಿಲ್ಲಿ ಪೋಸ್ಟ್ | ಡಿಕೆಶಿ ಸ್ಪೀಡ್ ನೋಡಿ ಸೋನಿಯಾಗೆ ಖುಷಿ, ಕೆ.ಸಿ. ವೇಣುಗೋಪಾಲ್​ಗೆ ಕಸಿವಿಸಿ

ನವದೆಹಲಿ ಕೇವಲ ರಾಷ್ಟ್ರ ನಾಯಕರ ಕೇಂದ್ರ ಸ್ಥಾನವಷ್ಟೇ ಅಲ್ಲ. ರಾಜ್ಯ ನಾಯಕರ ಚಲನವಲನಗಳು ಕೂಡ ಆರಂಭಗೊಳ್ಳುವುದು ಇದೇ ದೆಹಲಿಯಿಂದ. ಸರ್ಕಾರ ಮಟ್ಟದ ಕೆಲಸಗಳಿಂದ ಹಿಡಿದು ಹೈಕಮಾಂಡ್ ಕೃಪೆಗಾಗಿ ಎಲ್ಲ ನಾಯಕರು ದೆಹಲಿಗೆ ಬರುತ್ತಾರೆ. ಹೀಗೆ ಬಂದ ನಾಯಕರ ಮಾತುಕತೆ, ಸನ್ನಿವೇಶ ಎಲ್ಲವೂ ಸುದ್ದಿಯಾಗುವುದಿಲ್ಲ. ಸುದ್ದಿಯಾಗದ ಕುತೂಹಲಕಾರಿ, ಅಚ್ಚರಿಯ ಕೆಲವು ಸಂಗತಿಗಳು ದಿಲ್ಲಿ ಪೋಸ್ಟ್​ನಲ್ಲಿ ಪ್ರಕಟವಾಗಲಿದೆ.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

 • Share this:
  ಕಾಡಿ ಬೇಡಿ ಪಡೆದ ಕೆಪಿಸಿಸಿ ಅಧ್ಯಕ್ಷಗಾದಿಯನ್ನು ಅದ್ಧೂರಿಯಾಗಿ ಅಲಂಕರಿಸಬೇಕೆಂಬ ಡಿ.ಕೆ. ಶಿವಕುಮಾರ್ ಕನಸಿಗೆ ಅಡ್ಡ ಆಗಿದ್ದು ಕೊರೋನಾ. ಈಗ ಅದೇ ಕೊರೋನಾ ಡಿ.ಕೆ. ಶಿವಕುಮಾರ್ ಅವರನ್ನು ಹೈಕಮಾಂಡ್ ಎದುರು ಹೀರೋ ಆಗಿ ಬಿಂಬಿಸಿದೆ. ಇದೊಂಥರಾ ವಿಚಿತ್ರ ಪರಿಸ್ಥಿತಿ. ವಿಪಕ್ಷಗಳು ಸರ್ಕಾರಗಳಿಗೆ ಶರಣಾಗಿರುವ ಸಂದಿಗ್ಧ ಸ್ಥಿತಿ. ಆದರೆ ಡಿ.ಕೆ‌. ಶಿವಕುಮಾರ್ ಹಾಗಲ್ಲ. ಪರಿಸ್ಥಿತಿ ಹೇಗೇ ಇರಲಿ, ಒಂದು ಕೈ ನೋಡೇ ಬಿಡೋಣ ಎನ್ನುವವರು ಡಿಕೆಶಿ. ಅದೇ ರೀತಿ ಈಗಲೂ ಆ್ಯಕ್ಷನ್ ಮೂಡಿನಲ್ಲಿದ್ದಾರೆ. ಡಿಕೆಶಿಯ ಈ ಆ್ಯಕ್ಷನ್ ಮೂಡಿನಿಂದಾಗಿಯೇ ಈಗ ಹೈಕಮಾಂಡ್ ಮೆಚ್ಚಿ ಅಹುದಹುದು ಎಂದು ಹೇಳುತ್ತಿರುವುದು‌.‌ ಡಿಕೆಶಿ ತುಳಿದ ಆ 4 ಹೆಜ್ಜೆಗಳು ಅವರು ಹೈಕಮಾಂಡಿಗೆ ಹತ್ತಿರ ಆಗುವ ರೀತಿ ಮಾಡಿವೆಯಂತೆ.

  1) ಬೇರೆ ಪಿಸಿಸಿ ಅಧ್ಯಕ್ಷರಂತೆ ಪರಿಸ್ಥಿತಿಯನ್ನು ದೂರುತ್ತಾ ತಮ್ಮ ಕರ್ತವ್ಯ ಮರೆಯಲಿಲ್ಲ. ಕೊರೋನಾದಂತಹ ನಿರ್ಣಾಯಕ ಪರಿಸ್ಥಿತಿಯಲ್ಲೂ ಪುಟಿದೆದ್ದು ಕೆಲಸ ಮಾಡುತ್ತಿದ್ದಾರೆ. ಆಳುವ ಸರ್ಕಾರ ಅಂಕೆ ಮೀರಿದಾಗ ಅಂಕುಶ ಹಾಕಲು ಯತ್ನಿಸುತ್ತಿದ್ದಾರೆ.

  2) ಈ ಕಡುಕಷ್ಟ ಕಾಲದಲ್ಲಿ ಜನರ ಬಳಿ ಹೋಗಿದ್ದಾರೆ. ತರಕಾರಿ ಬೆಳೆಯುವವರ ಜಮೀನಿಗೆ ಹೋಗಿದ್ದಾರೆ. ತರಕಾರಿಯನ್ನು ತಾವೇ ಕೊಂಡುಕೊಳ್ಳುವ ಮೂಲಕ ಸರ್ಕಾರವೇ ಕೊಂಡುಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. 'ನೀವು ಬೆಳೆದ ತರಕಾರಿಗಳನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ ಮುಖ್ಯಮಂತ್ರಿ ‌ಮನೆಗೆ ಕಳಿಸಿ' ಎಂದು ಜನರನ್ನು ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡಿದ್ದಾರೆ.

  3) ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದ ರೈಲು-ಬಸ್ಸುಗಳನ್ನು ಕರ್ನಾಟಕದ ಬಿಜೆಪಿ ಸರ್ಕಾರ ಬಿಲ್ಡರ್ ಗಳ ಲಾಬಿಗೆ ಮಣಿದು ರದ್ದು ಪಡಿಸಿದ ಕ್ರಮವನ್ನು ಕ್ಷಣಮಾತ್ರದಲ್ಲಿ‌ ಗ್ರಹಿಸಿದ ಡಿಕೆಶಿ ಬೀದಿಗಿಳಿದರು. ಸೀದಾ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಗೆ ಹೋದ ಡಿಕೆಶಿ ಊರಿಗೋಗಲು ಪರದಾಡುತ್ತಿದ್ದವರ ಪಕ್ಕದಲ್ಲಿ ಕುಳಿತು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇವರೆಲ್ಲರನ್ನೂ ಕೂಡಲೇ ಊರಿಗೆ ಕಳಿಸುವ ವ್ಯವಸ್ಥೆ ಮಾಡಿ ಎಂದು ಬರೊಬ್ಬರಿ ಒಂದು ಕೋಟಿ‌ ರೂಪಾಯಿ ಚೆಕ್ ಕೊಡಲು ಮುಂದಾದರು. ಡಿಕೆಶಿ ಚೆಕ್ ಕೊಡಲು ಮುಂದಾಗಿದ್ದೇ ತಡ ತಡಬಡಾಯಿಸಿ ಹೋದ ಸರ್ಕಾರ ಎದ್ದು ಬಿದ್ದೆನೋ ಎಂದು ಬಸ್ಸು-ರೈಲುಗಳನ್ನು ಮರುವ್ಯವಸ್ಥೆ ಮಾಡಿತು. ಡಿಕೆಶಿಯ ಚೆಕ್, ಡಿಕೆಶಿ ಬಳಿಯೇ ಉಳಿಯಿತು. ಕೆಲಸವೂ ಆಯಿತು. ಮೊದಲೇ ಯೋಚಿಸಿ ಚೆಕ್ ತೆಗೆದುಕೊಂಡು ಹೋಗಿದ್ದು ಚಾಲಾಕಿತನವಲ್ಲದೆ ಮತ್ತೇನು?

  4) ಸರ್ಕಾರದ ದುಡ್ಡಿನಲ್ಲಿ ಬಡವರಿಗೆ ಹಂಚುವ ಪಡಿತರ ಧಾನ್ಯಗಳ ಮೇಲೆ ಬಿಜೆಪಿ ನಾಯಕರು ತಮ್ಮ ಫೋಟೋ ಹಾಕಿಕೊಂಡು ಫೋಜು ನೀಡುತ್ತಿದ್ದರು. ಗೋಡನ್ ಗಳ ಮೇಲೆ ದಾಳಿ ಮಾಡಿದ ಡಿಕೆ ಬ್ರದರ್ಸ್ ಬಿಜೆಪಿಯ ಬಣ್ಣವನ್ನು ಬಟಾ ಬಯಲು ಮಾಡಿ ಬಿಟ್ಟಿದ್ದರು.

  ಡಿಕೆಶಿಯ ಈ ಸ್ಪೀಡ್ ನೋಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಖುಷಿಯಾಗಿದ್ದಾರಂತೆ. ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ಈ ಕಷ್ಟ ಕಾಲದಲ್ಲಿ ನೀವು ಮಾತ್ರ ಜನತೆ ಜೊತೆ ಇರಬೇಕೆಂದು ಸೋನಿಯಾ ಗಾಂಧಿ ಪದೇ ಪದೇ ಹೇಳುತ್ತಿದ್ದರು. ಸೋನಿಯಾ ಅವರ ಸಲಹೆಯನ್ನು ಡಿಕೆಶಿ ಅಕ್ಷರಶಃ ಪಾಲಿಸಿದ್ದಾರಂತೆ.

  ಡಿಕೆಶಿಗೆ ಫುಲ್ ಮಾರ್ಕ್ಸ್!

  ಡಿಕೆಶಿಗೆ ಪಿಸಿಸಿ ನೊಗ ಹೊರಿಸಲು ಕಾಂಗ್ರೆಸ್ ಹೈಕಮಾಂಡ್ ಮೀನಾ ಮೇಷ ಎಣಿಸಿತ್ತು. ಅದು ಕೇವಲ ಡಿಕೆಶಿ ಮೇಲಿನ ಇಡಿ, ಐಟಿ ಕೇಸುಗಳ ಕಾರಣಕ್ಕಲ್ಲ. ಡಿಕೆಶಿಯ 'ಬುಲ್ಡೋಜರ್ ನೇಚರ್' ಕಾರಣಕ್ಕೆ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ. ಹಿರಿಯರು, ಇತರರು ಡಿಕೆಶಿಗೆ ಬೆಂಬಲ ನೀಡುವುದಿಲ್ಲ. ಪ್ರಯೋಗ ಫಲ ನೀಡುವುದಿಲ್ಲ ಎಂಬ ಕಾರಣಕ್ಕೆ. ಕಡೆಗೆ ಜ್ಯೋತಿರಾಧಿತ್ಯ ಸಿಂಧ್ಯ ಬೆಳವಣಿಗೆಯಿಂದ ಬೇಸ್ತು ಬಿದ್ದು ಡಿಕೆಶಿಗೆ ಜವಾಬ್ದಾರಿ ನೀಡಲಾಗಿತ್ತು.‌ ಆದರೀಗ ಹೈಕಮಾಂಡಿಗಿದ್ದ ಆತಂಕಗಳೆಲ್ಲವನ್ನೂ‌ ದೂರ ಮಾಡಿ, ಹೈಕಮಾಂಡ್ ಬಯಸಿದಂತೆಯೇ ನಡೆಯುತ್ತಿದ್ದಾರೆ ಡಿಕೆಶಿ ಎಂಬುದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರ ಶಹಬಾಸ್ ಗಿರಿ.

  ಕೆಸಿವಿಗೆ ಕಸಿವಿಸಿ

  ಮೊದಲಿಂದಲೂ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಎಣ್ಣೆ-ಸೀಗೆಕಾಯಿ. ಏಕೆಂದರೆ ವೇಣುಗೋಪಾಲ್, ಕರ್ನಾಟಕದಲ್ಲಿ ಡಿಕೆಶಿಗೆ ಥ್ರೆಟ್ ಆಗಿರುವ ಸಿದ್ದರಾಮಯ್ಯ ಪರ‌. ಡಿ.ಕೆ. ಶಿವಕುಮಾರ್, ಕೇರಳದಲ್ಲಿ ವೇಣುಗೋಪಾಲ್ ಗೆ ಥ್ರೆಟ್ ಆಗಿರುವ ರಮೇಶ್ ಚನ್ನಿತಾಳ್ ಪರ. ಇಲ್ಲಿ‌ನ ನಾಯಕತ್ವಕ್ಕೆ ಸಿದ್ದರಾಮಯ್ಯ-ಡಿಕೆಶಿ ನಡುವೆ ಇರುವ ಶೀತಲ ಸಮರದಂತೆ ಕೇರಳದಲ್ಲಿ ವೇಣುಗೋಪಾಲ್-ರಮೇಶ್ ಚನ್ನಿತಾಳ್ ನಡುವೆ ಇದೆ. 'ವೈರಿಯ ವೈರಿ ಸ್ನೇಹಿತ' ಎಂಬ ಸೂತ್ರ ಇವರ ವಿಷಯದಲ್ಲಿ ಬಹಳ ಚೆನ್ನಾಗಿ ಅನ್ವಯವಾಗಿದೆ. ಇದೇ ಕಾರಣಕ್ಕೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ವೇಣುಗೋಪಾಲ್ ಅಡ್ಡಗಾಲು ಹಾಕಿದ್ದರು. ಆದರೀಗ ಖುದ್ದು ಹೈಕಮಾಂಡೇ 'ಭಲೇ ಡಿಕೆಶಿ' ಎನ್ನುತ್ತಿರುವುದರಿಂದ ವೇಣುಗೋಪಾಲ್ ಕೂಡ ಡಿಕೆಶಿಗೆ ಜೈ ಎನ್ನುತ್ತಿದ್ದಾರೆ. ಡಿಕೆಶಿಗೆ ಕಾಲ್ ಮಾಡಿ 'ಯೂ ಆರ್ ಡೂಯಿಂಗ್ ವೆರಿ ಗುಡ್ ಜಾಬ್, ಕೀಪ್ ಇಟ್ ಅಪ್' ಎಂದಿದ್ದಾರಂತೆ.

  ಡಿಕೆಶಿ ಆ್ಯಂಡ್ ಡಿಜಿಟಲ್!

  ಕೊರೋನಾ ಕಷ್ಟ, ಲಾಕ್ಡೌನ್ ಲುಕ್ಸಾನು ಮತ್ತಿತರ ವಿಷಯಗಳಲ್ಲಿ ಬ್ಯುಸಿಯಾಗಿದ್ದ ಡಿಕೆಶಿ ಮೊನ್ನೆ ಮೊನ್ನೆ ಫ್ರೀ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ವಿಭಾಗದ ಸಭೆ ನಡೆಸಿದ್ದಾರೆ. ಸಭೆ ನಡೆದಿದ್ದು ಬೆಂಗಳೂರಿನಲ್ಲಾದರೂ ಇಂಚಿಂಚು ಮಾಹಿತಿ ಮಿಂಚಿನಂತೆ ದೆಹಲಿಗೆ ಪಂಚ್ ಆಗುವಂತೆ ನೋಡಿಕೊಂಡಿದ್ದಾರೆ. ಬಿಜೆಪಿಯ ಐಟಿ ಸೆಲ್ ಫ್ಯಾಕ್ಟರಿ ರೀತಿ ಕೆಲಸ ಮಾಡುತ್ತೆ. ಕೆಲವೊಮ್ಮೆ ಫೇಕ್ ಫ್ಯಾಕ್ಟರಿ ರೀತಿ ಕೂಡ. ಆದರೆ ಕಾಂಗ್ರೆಸ್ ನಲ್ಲಿ ಅಂತಾ ಕಸುಬುದಾರಿಕೆಯೂ ಇಲ್ಲ ಅಡ್ಡ ಕಸುಬುದಾರಿಕೆಯೂ ಇಲ್ಲ. ಇದೇ ಹಿನ್ನೆಲೆಯಲ್ಲಿ ಮಾತನಾಡಿದ ಡಿಕೆಶಿ ಬೂತ್ ಮಟ್ಟಕ್ಕಿಳಿದು ಕೆಲಸ ಮಾಡಿ, ನನಗೆ ಪ್ರತಿಬೂತ್ ನಲ್ಲೂ ಒಬ್ಬೊಬ್ಬ ಡಿಜಿಟಲ್ ಕಾಂಗ್ರೆಸ್ ಮನ್ ಬೇಕು. ಆ ಬೂತ್ ಮಟ್ಟದ ಡಿಜಿಟಲ್ ಕಾಂಗ್ರೆಸ್ ಮನ್ ನಿಂದ ಕೆಪಿಸಿಸಿವರೆಗೂ ಲಿಂಕ್ ಇರಬೇಕು ಎಂದು ಹೇಳಿದ್ದಾರಂತೆ.

  ಇದನ್ನು ಓದಿ: ದಿಲ್ಲಿ ಪೋಸ್ಟ್​ | ಜಿಜ್ಞಾಸೆಯಿಂದ ಕೂಡಿರುವ ಲಾಕ್​ಡೌನ್​ ಲಿಫ್ಟ್ ಎಂಬ ವಿಷಯ, ಬ್ರೇಕ್ ಕೆ ಬಾದ್ ಪ್ಯಾಕೇಜ್!

  ಮೊದಲಿಗೆ 'ನನ್ನ ಹೆಸರಿನಲ್ಲಿ ಮೂರು ಮೂರು ಟ್ವಿಟ್ಟರ್ ಅಕೌಂಟ್ ಏಕೆ? ಎಂದು ಸಾಮಾಜಿಕ ಜಾಲತಾಣದ ಗಂಧ ಗಾಳಿ ಗೊತ್ತಿಲ್ಲದವರಂತೆ ಮಾತನಾಡಿದ್ದರಂತೆ ಡಿಕೆಶಿ. ಅದು ಒಂದು ನಿಮ್ಮ ಪರ್ಸನಲ್, ಇನ್ನೊಂದು ಕೆಪಿಸಿಸಿ ಅಧ್ಯಕ್ಷರದು, ಮತ್ತೊಂದು ಕೆಪಿಸಿಸಿ ಕಚೇರಿಯ ಟ್ವಿಟ್ಟರ್ ಹ್ಯಾಂಡಲ್ ಎಂದು ಪಕ್ಕದಲ್ಲಿದ್ದವರು ಪಾಠ ಮಾಡಿದ್ದರಂತೆ. ಅಂಥ ಡಿಕೆಶಿ 'ಪ್ರತಿ ಬೂತ್ ನಲ್ಲೂ ನನಗೊಬ್ಬ ಡಿಜಿಟಲ್ ಕಾಂಗ್ರೆಸ್ ಮನ್ ಬೇಕು' ಎಂದಾಗ ಸಭೆಯಲ್ಲಿದ್ದವರು ಹೌಹಾರಿದರಂತೆ.

  ಪಕ್ಷ ಕಟ್ಟಿ ಅಥವಾ ಗಂಟುಮೂಟೆ ಕಟ್ಟಿ

  ಸಾಮಾಜಿಕ ಜಾಲತಾಣವಲ್ಲದೆ ಮಹಿಳಾ‌ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್​ಎಸ್​ಯುಐ ಮುಖಂಡರ ಸಭೆ ನಡೆಸಿರುವ ಡಿಕೆಶಿ 'ಬೂತ್ ಮಟ್ಟದಿಂದ ಪಕ್ಷ ಕಟ್ಟಿ, ಇಲ್ಲದಿದ್ದರೆ ಗಂಟುಮೂಟೆ ಕಟ್ಟಿ ಎಂದು ಎಚ್ಚರಿಸಿದ್ದಾರಂತೆ.
  Published by:HR Ramesh
  First published: