ವಿಧಾನ ಪರಿಷತ್ತಿಗೆ ನಾಮಕರಣ ಮಾಡಿರುವ ವಿಷಯದಲ್ಲಿ ಗೆದ್ದೂ ಸೋತಿದ್ದಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ತಮಗೆ ಬೇಕಾದ ಭಾರತಿಶೆಟ್ಟಿ, ಹೆಚ್. ವಿಶ್ವನಾಥ್ ಮತ್ತು ಸಿ.ಪಿ. ಯೋಗೇಶ್ವರ್ ಅವರನ್ನು ನಾಮಕರಣ ಮಾಡಿದ್ದು ಯಡಿಯೂರಪ್ಪ ಗೆಲುವು. ಇವರುಗಳನ್ನೇ ಮಾಡಬೇಕಾಗಿ ಬಂದಿದ್ದು ಅವರ ಸೋಲು. ಭಾರತಿಶೆಟ್ಟಿ ಮತ್ತು ಸಿ.ಪಿ. ಯೋಗೇಶ್ವರ್ ಅವರನ್ನು ನಾಮಕರಣ ಮಾಡಲು ಪುತ್ರ ವಿಜಯೇಂದ್ರ ಅವರಿಂದಲೇ ವಿರೋಧ ಇತ್ತು. ಆದರೂ ಎಂದೋ ಕೊಟ್ಟ ಮಾತುಗಳಿಗೆ ಕಟ್ಟುಬೀಳಬೇಕಾಯಿತು ಎನ್ನುತ್ತವೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರ ಜೊತೆಗೂ ಆಪ್ತವಾಗಿ ಇರುವವರೊಬ್ಬರು.
ವಿಶ್ವನಾಥ್ ಅವರಿಗಂತೂ ಬೇಡವೇ ಬೇಡ ಎಂದು ನಿರ್ಧರಿಸಿದ್ದರು. ಹೀಗೆ ನಿರ್ಧರಿಸಲು ವಿಶ್ವನಾಥ್ ಅವರ 'ವಾಕ್ಚಾತುರ್ಯ' ಮತ್ತು 'ಈಗಾಗಲೇ ಕುರುಬರು ಹೆಚ್ಚಾದರು' ಎಂಬ ಕಾರಣಗಳಿದ್ದವು. ಆದರೆ ಹಳ್ಳಿಹಕ್ಕಿ ಹಾಕಿದ ಒಂದೇ ಒಂದು ಗುಟುರಿಗೆ ಯಡಿಯೂರಪ್ಪ ಕಕ್ಕಾಬಿಕ್ಕಿಯಾಗಿಬಿಟ್ಟಿದ್ದರು. ಹಳ್ಳಿ ಹಾಕಿದ ಆ ಪವರ್ ಫುಲ್ ಗುಟುರು ಏನೆಂದರೆ 'ಬಾಂಬೆ ಡೇಸ್'!
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಟಿಕೆಟ್ ಕೊಡದಿದ್ದಾಗ ಬೇಸರಿಸಿಕೊಂಡಿದ್ದ ವಿಶ್ವನಾಥ್, ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ 'ತಾನು ಪುಸ್ತಕಗಳನ್ನು ಬರೆದಿದ್ದೇನೆ, ಸಾಹಿತಿಗಳ ಕೋಟಾದಡಿ ನಾಮ ನಿರ್ದೇಶನ ಮಾಡುತ್ತಾರೆ' ಎಂದಿದ್ದರು. ಅದಾದ ಬಳಿಕ ಸಾಹಿತಿಗಳ ಕೋಟಾದಡಿ ನಾಮ ನಿರ್ದೇಶನ ಮಾಡುವಂತೆ ಯಡಿಯೂರಪ್ಪ ಬಳಿಯೂ ಚರ್ಚಿಸಿದ್ದರು. ಆದರೆ ಯಡಿಯೂರಪ್ಪ ಅವರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆಗಲೇ ವಿಶ್ವನಾಥ್ ಅವರಿಗೆ 'ಇಷ್ಟು ಮಾತ್ರದ ಸಾಹಿತ್ಯ ಸೇವೆ ಸಾಲದು' ಎಂದು ಅನಿಸಿದ್ದು. ತಮ್ಮ ಮುಂದಿನ ಸಾಹಿತ್ಯ ಕೃತಿಯ ಬಗ್ಗೆ ಧ್ಯಾನಿಸಿದ್ದು. ಆ ಕೃತಿಗೆ 'ಬಾಂಬೆ ಡೇಸ್' ಎಂಬ ಹೆಸರು ಇಟ್ಟಿದ್ದು. ಇದೇ ಹಿನ್ನೆಲೆಯಲ್ಲಿ ಜರ್ಮನಿಯ ಚಾನ್ಸಲರ್ ಒಟ್ಟೊ ವಾನ್ ಬಿಸ್ಮಾರ್ಕ್ 'ಪಾಲಿಟಿಕ್ಸ್ ಈಸ್ ಆರ್ಟ್ ಆಫ್ ದಿ ಪಾಸಿಬಲ್' ಎಂದು ಹೇಳಿರಬೇಕು.
ಸಾಹಿತಿಗಳಿಗೂ ರಾಜ್ಯಪಾಲರಾಗುವ ಆಸೆ
ಸಾಹಿತಿಗಳು ರಾಜಕಾರಣಿಗಳಾಗುವುದು ತೀರಾ ಹೊಸ ವಿಷಯವೇನಲ್ಲ. ಇಷ್ಟು ದಿನ ವಿವಿಧ ಅಕಾಡೆಮಿ, ಪ್ರಾಧಿಕಾರ, ಹೆಚ್ಚೆಂದರೆ ವಿಧಾನ ಪರಿಷತ್ತು ಮತ್ತು ರಾಜ್ಯಸಭೆಯ ಕನಸು ಕಾಣುತ್ತಿದ್ದರು. ಅದಕ್ಕೆ ಪೂರಕವಾದ ಸಾಹಿತ್ಯ ಸೇವೆಯನ್ನೇ ಮಾಡುತ್ತಿದ್ದರು. ಆದರೀಗ ಕರ್ನಾಟಕದ ಇಬ್ಬರು ಸಾಹಿತಿಗಳು ರಾಜ್ಯಪಾಲರಾಗಬೇಕೆಂದು ಹಪಹಪಿಸುತ್ತಿದ್ದಾರೆ ಎಂಬ ಹಸಿಹಸಿ ಮಾಹಿತಿ ಸಿಕ್ಕಿದೆ.
ಇದನ್ನು ಓದಿ: ದಿಲ್ಲಿ ಪೋಸ್ಟ್ | ಅಪ್ಪನಂತೆ ಬಂಡೆದ್ದರೆ ಸಾಕೇ ಸಚಿನ್ ಪೈಲಟ್, ಅವರ ಚಾಣಾಕ್ಷತನವೂ ಬೇಕಲ್ಲವೇ?; ದೆಹಲಿಗೆ ಶಾ ಸೂಪರ್ ಸಿಎಂ
ಇಷ್ಟಕ್ಕೂ ಈ ಸಾಹಿತಿಗಳು ಏಕಾಏಕಿ ರಾಜ್ಯಪಾಲರಾಗಲು ಹೊರಟಿರುವುದೇಕೆ ಎಂದರೆ ಅವರಿಗೆ ಅಕಾಡೆಮಿ, ಪ್ರಾಧಿಕಾರ, ವಿಧಾನ ಪರಿಷತ್ತು ಮತ್ತು ರಾಜ್ಯಸಭೆಗಳೆಲ್ಲಾ ಈಗ 'ಚಿಲ್ಲರೆ' ಎನಿಸತೊಡಗಿವೆಯಂತೆ. ತಮ್ಮ 'ರಾತ್ರಿ ಕವಿಗೋಷ್ಠಿಗಳು', 'ವಿಚಾರ ಸಂಕಿರಣ'ಗಳೆಲ್ಲವನ್ನು ರಾಜಭವನದಲ್ಲಿ ನಡೆಸಿದರೆ ಹೇಗೆ ಎನಿಸುತ್ತಿದೆಯಂತೆ. ಅಂದ ಹಾಗೆ ರಾಜ್ಯಪಾಲರಾಗಲು ಒಬ್ಬರು ಮತ್ಯಾರಿಗೆ 'ಆಧುನಿಕ ಬಸವಣ್ಣ' ಎನ್ನುತ್ತಾರೋ, ಮತ್ತೊಬ್ಬರು ಬೇರೆ ಯಾವ ಸಾಹಿತಿಯ ಕಾಲಿಗೆ ಬೀಳುತ್ತಾರೋ ಕಾದುನೋಡಬೇಕು. ಇವರು ಹೀಗೆ ಇದ್ದಕ್ಕಿದ್ದಂತೆ ಇಂಥ ವರಸೆ ಶುರುಮಾಡಿಕೊಂಡಿರುವುದು ಜೊತೆಗಿರುವವರಿಗೇ ಆಶ್ಚರ್ಯಕರವಾಗಿದೆ. ಅಷ್ಟೇ ಅಲ್ಲ ತಮಾಷೆ ಮಾಡಿಕೊಳ್ಳಲು ಹೊಚ್ಚ ಹೊಸದಾದ ವಿಷಯವೊಂದು ಸಿಕ್ಕಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ