ದಿಲ್ಲಿ ಪೋಸ್ಟ್ | ದೆಹಲಿಯಲ್ಲಿ ಮಿಂಚುತ್ತಿರುವ ಕನ್ನಡಿಗ ಶ್ರೀನಿವಾಸ್; ಅಧಿವೇಶನ ಬೇಡ ಎನ್ನುತ್ತಿದ್ದಾರೆ ಸಂಸದರು

ಕರ್ನಾಟಕದಿಂದ ದೆಹಲಿಗೆ ಬಂದು ದೆಹಲಿ ರಾಜಕಾರಣ ಅರಗಿಸಿಕೊಂಡ ಕನ್ನಡಿಗರ ಸಂಖ್ಯೆ ವಿರಳ. ಈ ನಡುವೆ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ದೆಹಲಿ ರಾಜಕಾರಣದಲ್ಲಿ ಚುರುಕಾಗಿದ್ದಾರೆ. ಕೊರೋನಾ ಕಾರಣಕ್ಕೆ ಸಂಸದರು ಸಂಸತ್ ಅಧಿವೇಶನವೇ ಬೇಡ ಎನ್ನುತ್ತಿದ್ದಾರೆ‌. ಈ ಬಗ್ಗೆ ನ್ಯೂಸ್ 18 ಕನ್ನಡದ ದೆಹಲಿ ಪ್ರತಿನಿಧಿ ಧರಣೀಶ್ ಬೂಕನಕೆರೆ ಈ‌ ವಾರದ ದಿಲ್ಲಿ ಪೋಸ್ಟ್ ಕಾಲಂನಲ್ಲಿ ಬರೆದಿದ್ದಾರೆ.

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ಹಿಂದೆ ಕಾಂಗ್ರೆಸ್-ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷದಲ್ಲಿ ಕರ್ನಾಟಕದ ಒಬ್ಬೊಬ್ಬರಾದರೂ ಪ್ರಧಾನ ಕಾರ್ಯದರ್ಶಿ ಇರುತ್ತಿದ್ದರು. ಬಿಜೆಪಿಯಲ್ಲಿ ಅನಂತಕುಮಾರ್ ಬಹಳ ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಕಾಂಗ್ರೆಸ್​ನಲ್ಲಂತೂ ನಿಜಲಿಂಗಪ್ಪ ಅವರಿಂದ ಹಿಡಿದು ಮೊನ್ನೆ ಮೊನ್ನೆ ರಾಜ್ಯ ರಾಜಕಾರಣಕ್ಕೆ ವಾಪಸ್ ಆದ ಬಿ.ಕೆ‌. ಹರಿಪ್ರಸಾದ್​ವರೆಗೆ ಘಟಾನುಘಟಿ ನಾಯಕರಿದ್ದರು. ಆಸ್ಕರ್ ಫರ್ನಾಂಡೀಸ್ ಹೇಳಿದರೆ ಹೈಕಮಾಂಡ್ ನಾಯಕರು ಯಾವುದೇ ಕೆಲಸಕ್ಕಾದರೂ ಕಣ್ಣು ಮುಚ್ಚಿ ಸಹಿ ಹಾಕುತ್ತಿದ್ದರು. ಅಷ್ಟರಮಟ್ಟಿಗೆ ಪ್ರಭಾವಶಾಲಿಗಳಾಗಿದ್ದರು. ಆದರೆ ಈಗ ರಾಜ್ಯದ ನಾಯಕರ ಪ್ರಭಾವ ದೆಹಲಿಯಲ್ಲಿ ಕ್ಷೀಣಿಸುತ್ತಿದೆ.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇದ್ದುದರಲ್ಲಿ ಪ್ರಭಾವಿ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಆಗುವ ಸಾಧ್ಯತೆ ಕೂಡ ಇರುವುದರಿಂದ ಅವರು ಇನ್ನಷ್ಟು ಪ್ರಭಾವಿ ಆಗುವ ಸಾಧ್ಯತೆಗಳೂ ಇವೆ. ಉಳಿದಂತೆ ಕಾಂಗ್ರೆಸ್ ಪಕ್ಷದಿಂದಾಗಲಿ, ಬಿಜೆಪಿ ವತಿಯಿಂದಾಗಲಿ ದೆಹಲಿಯಲ್ಲಿ ಬೀಡುಬಿಟ್ಟು ದೆಹಲಿ ರಾಜಕಾರಣವನ್ನು ಅರಗಿಸಿಕೊಂಡು ಕರಾಮತ್ತು ನಡೆಸುವ ಗಮ್ಮತ್ತು ಯಾರಲ್ಲೂ ಕಾಣಸಿಗುತ್ತಿಲ್ಲ.

ಈ ನಡುವೆ ಕರ್ನಾಟಕದಿಂದ ಬಂದು ದೆಹಲಿ ರಾಜಕಾರಣದಲ್ಲಿ ಮಿಂಚುತ್ತಿರುವವರೆಂದರೆ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್. ಅದರಲ್ಲೂ ಕೊರೋನಾ ಎಂಬ ಕಡುಕಷ್ಟದ ಸಂದರ್ಭದಲ್ಲಿ ಬರೋಬ್ಬರಿ ಎರಡೂವರೆ ತಿಂಗಳು ಹಸಿದವರಿಗೆ ಅನ್ನ ನೀಡಿದ್ದಾರೆ. ನೊಂದವರಿಗೆ ನೆರವು ನೀಡಿದ್ದಾರೆ. ದೆಹಲಿ ಮಾತ್ರವಲ್ಲದೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಓಡಾಡಿ ಎಲ್ಲೆಡೆ ಕೂಲಿ ಕಾರ್ಮಿಕರಿಗೆ, ವಲಸಿಗರಿಗೆ, ದಿಕ್ಕು ದೆಸೆ ಇಲ್ಲದವರಿಗೆ ಅನ್ನ, ಆಹಾರ ಸಾಮಗ್ರಿ ನೀಡಿ ಕಷ್ಟಕ್ಕಾಗಿದ್ದಾರೆ.

ರಾಹುಲ್ ಗಾಂಧಿ ಅವರೊಂದಿಗೆ ಶ್ರೀನಿವಾಸ


ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದಾಗಿನಿಂದಲೂ ಶ್ರೀನಿವಾಸ್ ಫುಲ್ ಆ್ಯಕ್ಟೀವ್. ಸದಾ ಕೇಂದ್ರ ಸರ್ಕಾರದ, ಪ್ರಧಾನಿ ನರೇಂದ್ರ ಮೋದಿಯ, ಬಿಜೆಪಿಯ ಜನವಿರೋಧಿ ಕೆಲಸಗಳ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಅದೂ ಭಿನ್ನ ಭಿನ್ನ ರೀತಿಯ ಪ್ರತಿಭಟನೆಗಳು. ಇದಕ್ಕಾಗಿ ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಕೇಸುಗಳನ್ನು ಹಾಕಿಸಿಕೊಂಡಿದ್ದಾರೆ. ದೆಹಲಿಯಲ್ಲಿ ದೆಹಲಿಯ ಕಾಂಗ್ರೆಸ್ ಘಟಕಕ್ಕಿಂತಲೂ ಹೆಚ್ಚು ಯುವ ಕಾಂಗ್ರೆಸ್ ಸಕ್ರಿಯವಾಗಿರುವಂತೆ ಮಾಡಿದ್ದಾರೆ. ದೇಶಾದ್ಯಂತ ಯುವ ಕಾಂಗ್ರೆಸ್ ಘಟಕದಲ್ಲಿ ಒಳ್ಳೆಯ ನೆಟ್ ವರ್ಕ್ ಮಾಡಿದ್ದಾರೆ. ಅದುರಿಂದಾಗಿ 'ಗುಡ್ ವರ್ಕರ್' ಎಂದೇ ಖ್ಯಾತರಾಗಿದ್ದ ಶ್ರೀನಿವಾಸ್, ಕೊರೋನಾ ಸಮಯದಲ್ಲಿ ಮಾಡಿದ ಕೆಲಸದಿಂದಾಗಿ ಕಾಂಗ್ರೆಸ್ ಹೈಕಮಾಂಡಿನ‌ ಪ್ರತಿಯೊಬ್ಬ ನಾಯಕರಿಗೂ ಪರಿಚಿತರಾಗಿದ್ದಾರೆ. ದೆಹಲಿಯ ಪ್ರತಿಯೊಬ್ಬ ಪತ್ರಕರ್ತರಿಗೂ ಗೊತ್ತಾಗಿದ್ದಾರೆ. ಶ್ರೀನಿವಾಸ್ ಬಗ್ಗೆ ಖುದ್ದು‌ ರಾಹುಲ್ ಗಾಂಧಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹೆಸರಿಡಿದು ಕರೆಯುವ ಮಟ್ಟಕ್ಕೆ ಗುರುತಿಸಿಕೊಂಡಿದ್ದಾರೆ. ಕೊರೋನಾ ಹಲವರಿಗೆ ಹಲವು ರೀತಿಯ ಪರಿಣಾಮ ಬೀರಿರಬಹುದು. ಆದರೆ ಶ್ರೀನಿವಾಸ್ ಅವರಿಗೆ ಮಾತ್ರ ದೆಹಲಿ ರಾಜಕಾರಣದಲ್ಲಿ ಭದ್ರ ನೆಲೆ ಒದಗಿಸಿಕೊಟ್ಟಿದೆ.

ರಾಷ್ಟ್ರ ರಾಜಕಾರಣಕ್ಕೆ ಬರುವವರು ಯಾರು?

ಕೊರೋನಾ ಕಷ್ಟ ಕರಗಿದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಗಳಲ್ಲಿ ಒಂದಿಷ್ಟು ಬದಲಾವಣೆ ಆಗಲಿದೆ. ಆಗ ರಾಜ್ಯದ ಕೆಲ ನಾಯಕರಿಗೆ ಅವರವರ ಪಕ್ಷದಲ್ಲಿ ಕೆಲ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಪ್ರಧಾನ ಕಾರ್ಯದರ್ಶಿಯಂತಹ ನಿರ್ಣಾಯಕ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದೇ ಕುತೂಹಲ. ಆದರೆ ಎರಡೂ ಪಕ್ಷಗಳಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾವ ಸೂಕ್ತ ಹೆಸರುಗಳು ಕೇಳಿಬರುತ್ತಿಲ್ಲ. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಕೆ.ಜೆ. ಜಾರ್ಜ್ ಹೆಸರು ಕೇಳಿಬರುತ್ತಿದೆ‌.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಪ್ರಿಯಾಂಕಾ ಗಾಂಧಿ ಬಂಗಲೆ ಬಿಡಿಸಿ ಬುಡಕ್ಕೆ ತಂದುಕೊಂಡ ಬಿಜೆಪಿ, ಕುತೂಹಲಕಾರಿ ಬಿಹಾರ ಚುನಾವಣೆ!

ಅಧಿವೇಶನ ಒಲ್ಲೆ ಎನ್ನುತ್ತಿರುವ ಸಂಸದರು

ಅಭಿವೃದ್ಧಿಗಾಗಿ ತನ್ನನ್ನು ಗೆಲ್ಲಿಸಿ ಎಂದು ಗೋಗರೆಯುವ ಘನ ಸಂಸದರಿಗೆ ಈಗ ಸಂಸತ್ ಅಧಿವೇಶನ ನಡೆಯುವುದು ಬೇಡವಾಗಿದೆ‌.‌ ಅಧಿವೇಶನ ನಡೆದರೆ ದೆಹಲಿಗೆ ಬರಬೇಕು. ಅದಕ್ಕಾಗಿ ವಿಮಾನ ಪ್ರಯಾಣ ಮಾಡಬೇಕು. ಅಧಿವೇಶನದಲ್ಲಿ ಭಾಗಿಯಾಗಬೇಕು. ಕೊರೋನಾ ಸಂದರ್ಭದಲ್ಲಿ ಇವೆಲ್ಲಾ ಏಕೆ ಬೇಕು? ಹೇಗೂ ಸದನದಲ್ಲಿ ಚರ್ಚೆ ಆಗಲ್ಲ. ಆಡಳಿತ ಪಕ್ಷದ ಸಂಸದರು ತುಟಿ ಹೊಲೆದುಕೊಂಡು ಕುಳಿತಿರಬೇಕು. ವಿರೋಧ ಪಕ್ಷದ ಸಂಸದರ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಆದುದರಿಂದ  ರಿಸ್ಕ್ ತೆಗೆದುಕೊಂಡು ಅಧಿವೇಶನ ನಡೆಸುವುದಾದರೂ ಏಕೆ? ಎಂದು ಪ್ರಶ್ನಿಸುತ್ತಾರೆ. ಇದು ರಾಜ್ಯದ ಅಥವಾ ಆಡಳಿತ ಪಕ್ಷದ ಸಂಸದರ ಅಭಿಪ್ರಾಯ ಅಥವಾ ಪ್ರಶ್ನೆಗಳಲ್ಲ‌.‌ ಹಲವು ಸಂಸದರು ಹೀಗೆ ಹೇಳುತ್ತಿದ್ದಾರೆ. ಆದರೆ ಯಾರಿಗೂ ಹೆಸರು ಬಹಿರಂಗಪಡಿಸುವ ಧೈರ್ಯ ಮತ್ತು ಉದ್ದೇಶ ಇಲ್ಲ.
Published by:HR Ramesh
First published: