ನವದೆಹಲಿ (ಜೂ. 21): ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಚರ್ಚೆ ಆಗುತ್ತಿರುವ 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂಬ ಬಗ್ಗೆ ಸೋಮವಾರ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, 'ಈಗ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಯಾರಾಗಬೇಕು ಎಂದು ತೀರ್ಮಾನ ಮಾಡುವವರು ದೆಹಲಿ ನಾಯಕರು. ಸಿಎಂ ಸ್ಥಾನದ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ನಮ್ಮ ಪಕ್ಷದವರಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕಾರ ಮಾಡುವಾಗ ಸ್ಪಷ್ಟವಾಗಿ ಹೇಳಿದ್ದೆ, ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಪಕ್ಷ ಪೂಜೆಗೆ ಮಾತ್ರ ಅವಕಾಶ ಎಂದು. ಆ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ' ಎಂದಿದ್ದಾರೆ. ಈ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಣಕ್ಕೆ ಡಿಕೆಶಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಡಿ.ಕೆ. ಶಿವಕುಮಾರ್ ಅವರು, ಇತ್ತೀಚೆಗೆ ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರಾದ ಜಮೀರ್ ಅಹಮದ್, ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್ ಮತ್ತಿತರರು 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂದು ಹೇಳುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. 'ಎಲ್ಲರೂ ಮೊದಲು ಮುಂಬರುವ ಜಿಪಂ, ತಾಪಂ ಮತ್ತು ಬಿಬಿಎಂಪಿ ಚುನಾವಣೆ ಗೆಲ್ಲಲಿ, ನಂತರ ವಿಧಾನಸಭೆ ಗೆಲ್ಲಲಿ ಆಮೇಲೆ ನೋಡೋಣ. ಮುಂದಿನ ಸಿಎಂ ಯಾರು ಎಂಬುದನ್ನು ದೆಹಲಿ ನಾಯಕರು ನಿರ್ಧರಿಸಲಿದ್ದಾರೆ ಎಂದರು. ಜೊತೆಗೆ ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ. ನಮ್ಮಲ್ಲಿ ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ಸಣ್ಣ-ಪುಟ್ಟ ವಿಚಾರಗಳನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನನ್ನ ಹೆಸರನ್ನು ಕೂಡ ಯಾರೂ ಹೇಳಬಾರದು ಎಂದರು.
ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ. ಹಾಗಾಗಿ ಈಗ ದೆಹಲಿಗೆ ಬಂದು ನಾಯಕರನ್ನು ಭೇಟಿ ಮಾಡಲು ಬಂದಿದ್ದೇನೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದೇನೆ. ಕೆಪಿಸಿಸಿ ಪುನರ್ರಚನೆ ಆಗಬೇಕಿದೆ. ಕೆಲವು ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಸಮಿತಿ ಗಾತ್ರ ಹೆಚ್ಚಿಸಬೇಕೆ, ಇಳಿಸಬೇಕೆ ಎಂದು ಎರಡು ಮೂರು ವರ್ಷಗಳಿಂದ ಚರ್ಚೆ ನಡೆದಿದೆ. ಈ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತನಾಡಲು ಬಂದಿದ್ದೇನೆ. ಮಂಗಳವಾರ ಬೆಳಗ್ಗೆ ರಣದೀಪ್ ಸುರ್ಜೆವಾಲ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದರು.
ಇದನ್ನು ಓದಿ: ಹೈಕೋರ್ಟ್ ನೋಟಿಸ್ ಸ್ವೀಕರಿಸದ ರಮೇಶ್ ಜಾರಕಿಹೊಳಿ; ರೋಸ್ಟರ್ ಅನ್ವಯ ವಿಚಾರಣೆಗೆ ಸಂತ್ರಸ್ತೆ ಪರ ವಕೀಲರ ಮನವಿ
ಮಧ್ಯಂತರ ಚುನಾವಣೆ ವಿಚಾರ ಬಿಜೆಪಿಗೆ ಬಿಟ್ಟ ವಿಚಾರ. ಒಂದು ವಿಚಾರ ಏನೆಂದರೆ ಬಿಜೆಪಿಯಿಂದ ಆಡಳಿತ ನಡೆಸಲು ಸಾಧ್ಯವಿಲ್ಲ ಅನ್ನೋದು ರುಜುವಾತಾಗಿದೆ. ಕೊರೋನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ಬೆಳಕಿಗೆ ತಂದಿದ್ದೆವು. ಈಗ ಬಿಜೆಪಿ ಶಾಸಕರುಗಳೇ ನಮಗಿಂತ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ಮಾತಿಗೆ ಪುಷ್ಠಿ ನೀಡುತ್ತಿದ್ದಾರೆ. ಸದ್ಯಕ್ಕೆ ನಾವು ಜಿಲ್ಲಾ ಪಂಚಾಯಿತಿ, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ