ಅಕ್ರಮ ಹಣ ವರ್ಗಾವಣೆ ಕೇಸ್​​: ಇಂದು ದೆಹಲಿ ಹೈಕೋರ್ಟ್​​ನಲ್ಲಿ ಡಿಕೆಶಿ ತಾಯಿ ಮತ್ತು ಪತ್ನಿ ಅರ್ಜಿ ವಿಚಾರಣೆ

ಇದೇ ಸೋಮವಾರ(ಅ.21) ಡಿಕೆಶಿ ತಾಯಿ ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ನೇತೃತ್ವದ ಪೀಠ, ಇಬ್ಬರಿಗೂ ಹೊಸ ಸಮನ್ಸ್​ ನೀಡುವಂತೆ ಸೂಚಿಸಿತು.

news18-kannada
Updated:October 24, 2019, 9:18 AM IST
ಅಕ್ರಮ ಹಣ ವರ್ಗಾವಣೆ ಕೇಸ್​​: ಇಂದು ದೆಹಲಿ ಹೈಕೋರ್ಟ್​​ನಲ್ಲಿ ಡಿಕೆಶಿ ತಾಯಿ ಮತ್ತು ಪತ್ನಿ ಅರ್ಜಿ ವಿಚಾರಣೆ
ಡಿಕೆ ಶಿವಕುಮಾರ್​ ಮತ್ತವರ ತಾಯಿ ಗೌರಮ್ಮ
  • Share this:
ಬೆಂಗಳೂರು(ಅ.24): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಸಮನ್ಸ್​ ರದ್ದು ಕೋರಿ ಡಿಕೆಶಿ​​ ತಾಯಿ ಹಾಗೂ ಪತ್ನಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯೂ ಇಂದು ದೆಹಲಿ ಹೈಕೋರ್ಟ್​​ನಲ್ಲಿ ನಡೆಯಲಿದೆ. ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದ್ದು, ಮೊದಲಿಗೆ ಇಡಿ ಪರ ವಕೀಲರ ವಾದಕ್ಕೆ ಅವಕಾಶ ಮಾಡಿಕೊಡಲಿದೆ. ನಂತರ ಡಿಕೆಶಿ ತಾಯಿ ಮತ್ತು ಪತ್ನಿ ಪರ ವಕೀಲರ ಪ್ರತಿವಾದ ಆಲಿಸಲಿ ತೀರ್ಪು ನೀಡಲಿದೆ. 

ಇತ್ತೀಚೆಗೆ ಡಿಕೆಶಿ ತಾಯಿ ಮತ್ತು ಪತ್ನಿ ತಮಗೆ ಇಡಿ ಅಧಿಕಾರಿಗಳು ನೀಡಿರುವ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ತಾಯಿ ಪರವಾಗಿ ವಾದ ಮಂಡಿಸಿದ ವಕೀಲ ದಯಾನ್ ಕೃಷ್ಣನ್, ಗೌರಮ್ಮಗೆ 85 ವರ್ಷ. ಸಿಆರ್‌ಪಿಸಿ ಅನ್ವಯ 65 ವರ್ಷ ಮೇಲ್ಪಟ್ಟವರಿಗೆ ಪೊಲೀಸ್​​ ಠಾಣೆಗೆ ವಿಚಾರಣೆಗೆ ಬರಬೇಕೆಂದು ಸಮನ್ಸ್ ನೀಡುವಂತಿಲ್ಲ ಎಂದಿದ್ದರು. ಜತೆಗೆ ಅನಾರೋಗ್ಯದ ಕಾರಣ ಡಿಕೆಶಿ ತಾಯಿ ಮತ್ತು ಪತ್ನಿ ಇಬ್ಬರ ವಿಚಾರಣೆಯೂ ಬೆಂಗಳೂರಿನಲ್ಲೇ ನಡೆಸಬೇಕೆಂದು ಮನವಿ ಮಾಡಿದ್ದರು.

ಇದೇ ಸೋಮವಾರ(ಅ.21) ಡಿಕೆಶಿ ತಾಯಿ ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ನೇತೃತ್ವದ ಪೀಠ, ಇಬ್ಬರಿಗೂ ಹೊಸ ಸಮನ್ಸ್​ ನೀಡುವಂತೆ ಸೂಚಿಸಿತು. ಈ ವೇಳೆ ಇಡಿ ಪರವಾಗಿ ಹಾಜರಿದ್ದ ವಕೀಲರು ಕಾಂಗ್ರೆಸ್​​ ಟ್ರಬಲ್​​ ಶೂಟರ್​​ ಡಿ.ಕೆ ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ಹೊಸ ಸಮನ್ಸ್ ನೀಡಲಾಗುತ್ತದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಫಲಿತಾಂಶಕ್ಕೆ ಮುನ್ನವೇ ಗೆಲ್ಲುವ ವಿಶ್ವಾಸದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ; ಸಂಭ್ರಮಾಚರಣೆಗೆ ಸಜ್ಜು

ಈ ಹಿಂದೆ ಅ.16ರಂದು ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್, ಡಿಕೆಶಿ ತಾಯಿ ಹಾಗೂ ಪತ್ನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಉಷಾ ಅವರು ವಿಚಾರಣೆಗೆ ಹಾಜರಾಗಬೇಕಿಲ್ಲ. ಅಲ್ಲದೇ ಗೌರಮ್ಮಗೆ ನೀಡಿದ್ದ ಸಮನ್ಸ್ ಕೂಡ ಹಿಂಪಡೆಯಲಾಗಿದೆ. ಹೊಸದಾಗಿ ಸಮನ್ಸ್ ನೀಡುತ್ತೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು.

ಏನಿದು ಪ್ರಕರಣ?: ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ 2017ರ ಆಗಸ್ಟ್​ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
---------
First published: October 24, 2019, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading