ಬೆಂಗಳೂರು(ನ.03): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಸಮನ್ಸ್ ರದ್ದು ಕೋರಿ ಡಿಕೆಶಿ ತಾಯಿ ಹಾಗೂ ಪತ್ನಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಾಳೆ ದೆಹಲಿ ಹೈಕೋರ್ಟ್ನಲ್ಲಿ ನಡೆಯಲಿದೆ. ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದ್ದು, ವಾದ-ಪ್ರತಿವಾದ ಆಲಿಸಲಿದೆ. ಈಗಾಗಲೇ ಹೈಕೋರ್ಟ್ ಮೂರು ಬಾರಿ ಅರ್ಜಿ ವಿಚಾರಣೆ ಮುಂದೂಡಿದೆ. ಇಂದು ಹೈಕೋರ್ಟ್ ಡಿಕೆಶಿ ತಾಯಿ ಮತ್ತು ಪತ್ನಿ ಅರ್ಜಿಯ ಸುಧೀರ್ಘ ವಿಚಾರಣೆ ನಡೆಸಲಿದ್ದು, ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಇತ್ತೀಚೆಗೆ ಡಿಕೆಶಿ ತಾಯಿ ಮತ್ತು ಪತ್ನಿ ತಮಗೆ ಇಡಿ ಅಧಿಕಾರಿಗಳು ನೀಡಿರುವ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ತಾಯಿ ಪರವಾಗಿ ವಾದ ಮಂಡಿಸಿದ ವಕೀಲ ದಯಾನ್ ಕೃಷ್ಣನ್, ಗೌರಮ್ಮಗೆ 85 ವರ್ಷ. ಸಿಆರ್ಪಿಸಿ ಅನ್ವಯ 65 ವರ್ಷ ಮೇಲ್ಪಟ್ಟವರಿಗೆ ಪೊಲೀಸ್ ಠಾಣೆಗೆ ವಿಚಾರಣೆಗೆ ಬರಬೇಕೆಂದು ಸಮನ್ಸ್ ನೀಡುವಂತಿಲ್ಲ ಎಂದಿದ್ದರು. ಜತೆಗೆ ಅನಾರೋಗ್ಯದ ಕಾರಣ ಡಿಕೆಶಿ ತಾಯಿ ಮತ್ತು ಪತ್ನಿ ಇಬ್ಬರ ವಿಚಾರಣೆಯೂ ಬೆಂಗಳೂರಿನಲ್ಲೇ ನಡೆಸಬೇಕೆಂದು ಮನವಿ ಮಾಡಿದ್ದರು.
ಕಳೆದ ಅ.21ರಂದು ಡಿಕೆಶಿ ತಾಯಿ ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ನೇತೃತ್ವದ ಪೀಠ, ಇಬ್ಬರಿಗೂ ಹೊಸ ಸಮನ್ಸ್ ನೀಡುವಂತೆ ಸೂಚಿಸಿತು. ಈ ವೇಳೆ ಇಡಿ ಪರವಾಗಿ ಹಾಜರಿದ್ದ ವಕೀಲರು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ಹೊಸ ಸಮನ್ಸ್ ನೀಡಲಾಗುತ್ತದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಬಿಎಸ್ವೈ ಆಡಿಯೋ ಪ್ರಕರಣ: ಸುಪ್ರೀಂಕೋರ್ಟ್ನಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಸಜ್ಜು: ಅನರ್ಹರ ಭವಿಷ್ಯಕ್ಕೆ ಆಪತ್ತು
ಈ ಹಿಂದೆ ಅ.16ರಂದು ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್, ಡಿಕೆಶಿ ತಾಯಿ ಹಾಗೂ ಪತ್ನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಉಷಾ ಅವರು ವಿಚಾರಣೆಗೆ ಹಾಜರಾಗಬೇಕಿಲ್ಲ. ಅಲ್ಲದೇ ಗೌರಮ್ಮಗೆ ನೀಡಿದ್ದ ಸಮನ್ಸ್ ಕೂಡ ಹಿಂಪಡೆಯಲಾಗಿದೆ. ಹೊಸದಾಗಿ ಸಮನ್ಸ್ ನೀಡುತ್ತೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು.
ಏನಿದು ಪ್ರಕರಣ?: ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ 2017ರ ಆಗಸ್ಟ್ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
--------------
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ