ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಭೇಟಿ

Delegation from Karnataka meet Anurag Thakur: ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡ ಭಾಷೆಯ ಪ್ರಭುತ್ವವುಳ್ಳ ಹಾಗೂ ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯವುಳ್ಳ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕನ್ನಡ ಭಾಷಾ ಬೆಳವಣಿಗೆಗೆ ಒತ್ತು ನೀಡುವ ಅಗತ್ಯತೆ ಇದೆ ಎಂದು ನಿಯೋಗ ಹೇಳಿದೆ.

ಅನುರಾಗ್ ಠಾಕೂರ್ ಭೇಟಿ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ

ಅನುರಾಗ್ ಠಾಕೂರ್ ಭೇಟಿ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ

  • Share this:
ನವದೆಹಲಿ, ಡಿ. 21: ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡ ಭಾಷೆಯ ಪ್ರಭುತ್ವವುಳ್ಳ ಹಾಗೂ ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯವುಳ್ಳ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕನ್ನಡ ಭಾಷಾ ಬೆಳವಣಿಗೆಗೆ ಒತ್ತು ನೀಡುವ ಅಗತ್ಯತೆ ಇದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಅನುರಾಗ ಸಿಂಗ್ ಠಾಕೂರ್ (Union Information and Broadcasting Minister Anurag Thakur) ಅವರನ್ನು ಭೇಟಿ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ (Kannada Development Board President TS Nagabharana) ಅವರ ನೇತೃತ್ವದ ನಿಯೋಗವು ತಿಳಿಸಿದೆ.

ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ರಾಜ್ಯದ ನಿಯೋಗವು ಈ ಕೆಳಕಂಡ ವಿಷಯಗಳ ಬಗ್ಗೆ ಮನವಿ ಸಲ್ಲಿಸಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರೇಡಿಯೋ, ದೂರದರ್ಶನ, ಸೆನ್ಸಾರ್ ಮಂಡಳಿ, ಕ್ಷೇತ್ರ ಪ್ರಚಾರ ಅಧಿಕಾರಿ ಹುದ್ದೆಗಳಿಗೆ ಸ್ಥಳೀಯ ಭಾಷೆ ಬಲ್ಲವರನ್ನು ನೇಮಕ ಮಾಡುವುದು. ರಾಜ್ಯದಲ್ಲಿರುವ ಚಲನಚಿತ್ರ ವಿಭಾಗ ವತಿಯಿಂದ ಸ್ಥಳೀಯ ಚರಿತ್ರೆ, ನಾಡು-ನುಡಿ, ಸಂಸ್ಕೃತಿಗೆ ಸಂಬಂಧಿಸಿದ ಯೋಜನೆಗಳನ್ನು ಆದ್ಯತೆ ಮೇಲೆ ಜಾರಿ ಮಾಡುವಂತೆ ನಿರ್ದೇಶನ ನೀಡುವುದು. ರಾಜ್ಯದ ಕಲಬುರಗಿ ನಗರದಲ್ಲಿರುವ ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮಗಳ (ವಿಶೇಷವಾಗಿ ಉತ್ತರ ಕರ್ನಾಟಕದ ಭಾಷೆ, ಸಂಸ್ಕೃತಿ, ಇತಿಹಾಸವನ್ನು ಅನುಲಕ್ಷಿಸಿ) ನಿರ್ಮಾಣ ಘಟಕ ಪುನರ್ ಸ್ಥಾಪನೆ ಮಾಡುವುದು. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರವಾಗಿ ಕರ್ನಾಟಕದಲ್ಲಿ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಗ್ರಾಫಿಕ್ಸ್ ಕೇಂದ್ರವನ್ನು (National Institute of Graphics) ಸ್ಥಾಪಿಸುವುದು ಅಗತ್ಯ ಎಂದು ಕೇಳಿಕೊಂಡಿದೆ.

ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧವೇಕೆ? ಈ ಕಾಯ್ದೆ ಜಾರಿಯಾದ್ರೆ ಮದುವೆಗೆ ತೊಂದರೆಯಾಗುತ್ತಾ?

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರ ಸ್ವಾಮ್ಯಕ್ಕೆ ಒಳಪಟ್ಟ ಎಲ್ಲಾ ಕಛೇರಿಗಳ ನೇಮಕಾತಿಗಳು ಹಾಗೂ ಯೋಜನೆಗಳ ಕುರಿತು ಸ್ಥಳೀಯ ರಾಜ್ಯ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ಜಾಹೀರಾತು ನೀಡುವಂತೆ (Advertisement in Kannada) ಸಂಬಂಧಪಟ್ಟವರಿಗೆ ನಿರ್ದೇಶನಕ್ಕಾಗಿ ಹಾಗೂ ಎಲ್ಲ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಸಮಾನವಾದ ಪ್ರಾಮುಖ್ಯತೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಒದಗಿಸಬೇಕು. ವಾರ್ತಾ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಪ್ರತಿಯೊಂದು ಪ್ರದೇಶಕ್ಕೆ ಸಮನಾದ ಪ್ರಾತಿನಿಧ್ಯ ಕೊಡುವುದರಿಂದ ಬಹುತ್ವ ಸಿದ್ಧಾಂತವನ್ನು ಪ್ರತಿಪಾದಿಸುವಲ್ಲಿ ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ ಎಂದು ನಿಯೋಗ ಕೇಂದ್ರ ಸಚಿವರಿಗೆ ತಿಳಿಸಿದೆ.

ದೇಶದ ಮೊದಲ ಬಾನುಲಿ ರೇಡಿಯೋ ಕೇಂದ್ರ ಸ್ಥಾಪನೆಯಾಗಿದ್ದು ರಾಜ್ಯದಲ್ಲಿ. ಆದರೆ ಆಕಾಶವಾಣಿಯಲ್ಲಿ ಕೇಂದ್ರೀಕೃತ ಚೌಕಟ್ಟು ಸೃಷ್ಟಿಸಿ, ಪ್ರಾದೇಶಿಕ ಕಾರ್ಯಕ್ರಮಗಳ ಪ್ರಸಾರಕ್ಕೆ ಕಡಿವಾಣ ಹಾಕುವ ಪ್ರಸಾರ ಭಾರತಿ ಕ್ರಮ ಸರಿಯಾದುದಲ್ಲ. ಜನಸಂಸ್ಕೃತಿ, ಪ್ರಾದೇಶಿಕ ಸೊಗಡಿನ ಉಳಿಕೆ ಹಾಗೂ ಸ್ಥಳೀಯ ಕಲಾವಿದರ ಹಿತದೃಷ್ಠಿಯಿಂದ ಪ್ರಸಾರ ಭಾರತಿಯ (Prasar Bharati) ಈ ನೀತಿಯನ್ನು ಹಿಂಪಡೆಯುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಮನವಿ ಮಾಡಿದೆ.

ಇದನ್ನೂ ಓದಿ: ರಾಜಕೀಯ ಯುದ್ಧ: DK ಶಿವಕುಮಾರ್ ಮುಂದಿನ ಟಾರ್ಗೆಟ್ ರಮೇಶ್ ಜಾರಕಿಹೊಳಿ ಸ್ವಕ್ಷೇತ್ರ ‘ಗೋಕಾಕ್’!?

ನಿಯೋಗದಲ್ಲಿ ಪ್ರೊ| ಮಲ್ಲೇಪುರಂ ಜಿ ವೆಂಕಟೇಶ್, ಸಿ. ಮಂಜುಳ, ಎಚ್. ಜಿ. ಶೋಭಾ, ಅಶ್ವಿನಿ ಶಂಕರ್ ಎನ್. ಎಸ್., ಡಾ. ಸಿ. ಎ.ಕಿಶೋರ್, ಸುರೇಶ್ ಬಡಿಗೇರ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾದಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಹಾಗೂ ನವದೆಹಲಿಯ ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತ ಎಚ್. ಪ್ರಸನ್ನ ಅವರು ಉಪಸ್ಥಿತರಿದ್ದರು.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: