ಹೈಕೋರ್ಟ್ ಆದೇಶವನ್ನೇ ಧಿಕ್ಕರಿಸಿ ಆದಿವಾಸಿಗಳ ಭೂಮಿ ನುಂಗಿದ ಭೂಪರು...!

ಕೊಡಗಿನ ಮೂಲ ನಿವಾಸಿಗಳಲ್ಲಿ ಜೇನು ಕುರುಬ ಮತ್ತು ಮಲೆಕುಡಿಯರು ಅನಾದಿ ಕಾಲದಿಂದಲೂ ಬದುಕುತ್ತಿದ್ದರೂ ಇಂದಿಗೂ ಸಾವಿರಾರು ಕುಟುಂಬಗಳಿಗೆ ಸ್ವಂತ ಸೂರಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಹಾಗೆ ಸರ್ಕಾರ ಕೊಟ್ಟರು ಅದನ್ನು ಜಿಲ್ಲಾಡಳಿತ ಮಾತ್ರ ದಕ್ಕಿಸುತ್ತಿಲ್ಲ

ಆದಿವಾಸಿ ಬುಡಕಟ್ಟು ಮಹಿಳೆಯರು

ಆದಿವಾಸಿ ಬುಡಕಟ್ಟು ಮಹಿಳೆಯರು

  • Share this:
ಕೊಡಗು (ಫೆ.13) : ಅವರು ಇಲ್ಲಿಯೇ ಹುಟ್ಟಿ ಬೆಳೆದ ಮೂಲನಿವಾಸಿ ಆದಿವಾಸಿ ಕುಟುಂಬಗಳು. ಅವರ ನಿರಂತರ ಹೋರಾಟದ ಫಲವಾಗಿ ನಾಲ್ಕುವರೆ ಎಕರೆ ಜಾಗವನ್ನು ಸರ್ಕಾರ ಅವರಿಗಾಗಿ ಮಂಜೂರು ಮಾಡಿತ್ತು. ಆದರೆ, ತನ್ನ  ಹಣಬಲದಿಂದ ಉಳ್ಳವರು ಒತ್ತುವರಿ ಮಾಡಿ ಅಲ್ಲಿದ್ದ ಆದಿವಾಸಿಗಳನ್ನೇ ಒಕ್ಕಲೆಬ್ಬಿಸಿದ್ದರು. ಆದರೆ, ಜಾಗವನ್ನು ತೆರವು ಮಾಡಿ ಆದಿವಾಸಿಗಳಿಗೆ ಬಿಡಿಸಿಕೊಡುವಂತೆ ಹೈಕೋರ್ಟ್ ಆದೇಶಿಸಿದ್ದರೂ, ಒತ್ತುವರಿಯಾಗಿದ್ದ ಜಾಗವನ್ನು ಜಿಲ್ಲಾಡಳಿತ ತೆರವು ಮಾಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಹತ್ತಾರು ಕುಟುಂಬಗಳು ನೆಮ್ಮದಿಯ ಸೂರುಕಟ್ಟಿಕೊಳ್ಳಲು ಪರದಾಡುತ್ತಿವೆ. 

ಕೊಡಗಿನ ಮೂಲ ನಿವಾಸಿಗಳಲ್ಲಿ ಜೇನು ಕುರುಬ ಮತ್ತು ಮಲೆಕುಡಿಯರು ಅನಾದಿ ಕಾಲದಿಂದಲೂ ಬದುಕುತ್ತಿದ್ದರೂ ಇಂದಿಗೂ ಸಾವಿರಾರು ಕುಟುಂಬಗಳಿಗೆ ಸ್ವಂತ ಸೂರಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಹಾಗೆ ಸರ್ಕಾರ ಕೊಟ್ಟರು ಅದನ್ನು ಜಿಲ್ಲಾಡಳಿತ ಮಾತ್ರ ದಕ್ಕಿಸುತ್ತಿಲ್ಲ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಬರಡಿ ಗ್ರಾಮದ ಸರ್ವೆ ನಂಬರ್ 87/1 ರಲ್ಲಿ ನಾಲ್ಕುವರೆ ಜಾಗವನ್ನು ಆ ಭಾಗದ ಆದಿವಾಸಿ ಬುಡಕಟ್ಟು ಜನರಿಗಾಗಿ ಸರ್ಕಾರ ಮೀಸಲಿಟ್ಟಿತ್ತು. ಅಲ್ಲಿ ಹಲವು ಕುಟುಂಬಗಳು ನೆಲೆ ನಿಂತಿದ್ದವು. 1985 ರಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಅಲ್ಲಿನ ನಿವಾಸಿಗಳ ಮೇಲೆ ದೌರ್ಜನ್ಯವೆಸಗಿ ಓಡಿಸಿದ್ದರಂತೆ. ಬಳಿಕ ನಿರಂತರ ಹೋರಾಟದ ಫಲವಾಗಿ ಸರ್ವೆ ನಂಬರ್ 87/ ಪಿ 1 ರಲ್ಲಿ 30 ಕುಟುಂಬಗಳಿಗೆ 2007 ರಲ್ಲಿ ಹಕ್ಕುಪತ್ರ ನೀಡಿ ಕುಟುಂಬಗಳಿಗೆ ತಲಾ 2 ಸೆಂಟ್ ಜಾಗ ನೀಡಿದೆ.

ಇದನ್ನೂ ಓದಿ : ಪಾಕ್ ಹೆಸರು ಹೇಳದಿದ್ದರೆ ಮೋದಿಗೆ ತಿಂದ ಅನ್ನ ಕರಗುವುದಿಲ್ಲ: ಕಲಬುರ್ಗಿಯಲ್ಲಿ ಬೃಂದಾ ಕಾರಟ್ ಟೀಕೆ

ಆದರೆ, ಅದೇ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಎರಡು ಕಡೆಗಳಲ್ಲಿ ಅರ್ಧ ಸೆಂಟ್ ಜಾಗ ಬಳಸಿಕೊಂಡಿರುವುದರಿಂದ ಇದೀಗ ಈ ಕುಟುಂಬಗಳು ಕೇವಲ ಒಂದುವರೆ ಸೆಂಟ್ ಜಾಗದಲ್ಲಿ ಹೀನಾಯ ಬದುಕು ಕಳೆಯುವಂತಾಗಿದೆ. ಐಟಿಡಿಪಿ ಇಲಾಖೆಯಿಂದಾಗಲಿ, ಪಂಚಾಯಿತಿಯಿಂದಾಗಲಿ ಕನಿಷ್ಠ ಸೌಲಭ್ಯಗಳನ್ನು ಕೊಟ್ಟಿಲ್ಲ. ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿಕೊಂಡು ಗುಡಿಸಲು ನಿರ್ಮಿಸಿಕೊಂಡಿರುವ ಕುಟುಂಬಗಳಿಗೆ ಮಳೆಗಾಲದಲ್ಲಿ ನರಕ ಯಾತನೆ ಆಗಿದೆ ಅಂತ ಬರಡಿ ನಿವಾಸಿ ಕಾವೇರಿ, ಲಕ್ಷ್ಮಿ ಅವರ ಅಳಲನ್ನು ತೋಡಿಕೊಂಡಿದ್ದಾರೆ.

ಈ ಜಾಗ ಆದಿವಾಸಿ ಕುಟುಂಬಗಳಿಗೆ ಸೇರಿದ್ದು ಎಂದು ಹೈಕೋರ್ಟ್​​ನಿಂದಲೂ 2001 ಸಂದರ್ಭದಲ್ಲೇ ತೀರ್ಪು ಬಂದಿದ್ದರೂ ಜಿಲ್ಲಾಡಳಿತ ಮಾತ್ರ ಕ್ಯಾರೆ ಎಂದಿಲ್ಲ. ನಾಲ್ಕೂವರೆ ಎಕರೆ ಜಾಗದಲ್ಲಿ ಕೇವಲ ಮುಕ್ಕಾಲು ಎಕರೆ ಜಾಗವನ್ನು ಬಿಡಿಸಿಕೊಟ್ಟಿರುವ ಜಿಲ್ಲಾಡಳಿತ ಉಳಿದ ಭೂಮಿಯನ್ನು ಮತ್ತದೇ ಖಾಸಗಿ ವ್ಯಕ್ತಿಗಳು ಅನುಭವಿಸಲು ಬಿಟ್ಟಿದೆ. ಬಿಡಿಸಿರುವ ಮುಕ್ಕಾಲು ಎಕರೆ ಜಾಗದಲ್ಲಿ 30 ಕುಟುಂಬಗಳು ಬದುಕುತ್ತಿದ್ದು, ಪಡಬಾರದ ಕಷ್ಟ ಅನುಭವಿಸುತ್ತಿವೆ. ಹೀಗಾಗಿ ಅಧಿಕಾರಿಗಳು ಇನ್ನಾದರೂ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ಬಡ ಆದಿವಾಸಿ ಕುಟುಂಬಗಳಿಗೆ ನೀಡಬೇಕು ಎನ್ನುವುದು ಆದಿವಾಸಿ ವಸತಿ ಹೋರಾಟ ಸಮಿತಿ ಮುಖಂಡ ಭರತ್ ಅವರ ಆಗ್ರಹವಾಗಿದೆ.

ಇದನ್ನೂ ಓದಿ :  ದಿಡ್ಡಳ್ಳಿ ಹೋರಾಟದ ಮಾದರಿಯಲ್ಲಿ ಸೂರಿಗಾಗಿ ಅಹೋರಾತ್ರಿ ಧರಣಿ ಆರಂಭಿಸಿರುವ ಕೊಡಗಿನ ಬುಡಕಟ್ಟು ಜನರು

ಒಟ್ಟಿನಲ್ಲಿ ಆದಿವಾಸಿಗಳಿಗೆ ಧಕ್ಕಬೇಕಾಗಿರುವ ಜಾಗವನ್ನು ಉಳ್ಳವರಿಂದ ತೆರವು ಮಾಡಿಕೊಡುವಂತೆ ಹೈಕೋರ್ಟ್ ಆದೇಶಿಸಿದ್ದರೂ, ಜಿಲ್ಲಾಡಳಿತ ಮಾತ್ರ ನ್ಯಾಯಾಲಯದ ಆದೇಶಕ್ಕೂ ಕ್ಯಾರೆ ಎನ್ನದಿರೋದು ಮಾತ್ರ ವಿಪರ್ಯಾಸ.

ವಿಶೇಷ ವರದಿ: ರವಿ.ಎಸ್ ಹಳ್ಳಿ 
First published: