ಏರೋ ಇಂಡಿಯಾ ಬೆಂಗಳೂರಿನಿಂದ ಲಖನೌಗೆ, ಕರ್ನಾಟಕಕ್ಕೆ ಮಹಾಮೋಸ; ಏನ್ಮಾಡ್ತೀದ್ದೀರಾ ರಾಜ್ಯ ಬಿಜೆಪಿ ನಾಯಕರೆ?

news18
Updated:August 12, 2018, 1:04 PM IST
ಏರೋ ಇಂಡಿಯಾ ಬೆಂಗಳೂರಿನಿಂದ ಲಖನೌಗೆ, ಕರ್ನಾಟಕಕ್ಕೆ ಮಹಾಮೋಸ; ಏನ್ಮಾಡ್ತೀದ್ದೀರಾ ರಾಜ್ಯ ಬಿಜೆಪಿ ನಾಯಕರೆ?
news18
Updated: August 12, 2018, 1:04 PM IST
ನ್ಯೂಸ್​18 ಕನ್ನಡ

ನವದೆಹಲಿ (ಆ. 12): ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಲಖನೌಗೆ ವರ್ಗಾಯಿಸುತ್ತಿರುವುದನ್ನು ಕೇಂದ್ರ ರಕ್ಷಣಾ ಇಲಾಖೆ ಖಚಿತಪಡಿಸಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್​ ನಾಯಕರು ಬಿಜೆಪಿ ನಾಯಕರಿಗೆ ಕರ್ನಾಟಕದ ಬಗ್ಗೆ ಇರುವ ಅಭಿಮಾನ, ಬದ್ಧತೆಯನ್ನು ಪ್ರಶ್ನಿಸುತ್ತಿದ್ದಾರೆ.

ಏಷ್ಯಾದ ಅತಿದೊಡ್ಡ ವಾಯುಪ್ರದರ್ಶನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಆ ಪಟ್ಟವನ್ನು ಕಳೆದುಕೊಂಡಂತಾಗಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಏರ್​ ಶೋವನ್ನು ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲೇ ಆಯೋಜಿಸಲಾಗುತ್ತಿತ್ತು. ಹಾಗಾಗಿ, ಈ ಕುರಿತು ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್​ ಅವರ ಬಳಿ ಮಾತನಾಡಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಅವರಿಗೆ ಲಖನೌದಲ್ಲಿ ಏರೋ ಇಂಡಿಯಾ ನಡೆಸಲು ನಿರ್ಧರಿಸಿರುವ ಬಗ್ಗೆ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಲಖನೌಗೆ ವರ್ಗಾಯಿಸಲು ನಿರ್ಧರಿಸಿರುವ ಬಗ್ಗೆ ರಾಜ್ಯದ ಕಾಂಗ್ರೆಸ್​ ನಾಯಕರು ಕಿಡಿಕಾರಿದ್ದು, ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್​ ಮಾಡಿದ್ದು, ನಮ್ಮ ರಾಜ್ಯದಲ್ಲಿ ಏರ್​ಶೋಗೆ ಬೇಕಾದ ಎಲ್ಲ ರೀತಿಯ ಮೂಲಸೌಕರ್ಯಗಳಿದ್ದರೂ ಲಕ್ನೋಗೆ ಸ್ಥಳಾಂತರಿಸುತ್ತಿರುವುದು ಬೇಸರದ ಸಂಗತಿ. ಎಚ್​ಎಎಲ್​ನ ಅಡಿಯಲ್ಲಿ ರಫೆಲ್​ ಯೋಜನೆಯ ಜಾರಿಯ ಆಶ್ವಾಸನೆ ಕನ್ನಡಿಗರ ನೆನಪಾಗೇ ಉಳಿದಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ನಿರ್ಮಲಾ ಸೀತಾರಾಮನ್​ ಅವರು ನಮ್ಮ ನಾಡಿನ ಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ನಮ್ಮವರಿಗೆ ನಂಬಿಕೆದ್ರೋಹ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ನಂತರ ಪ್ರತಿಕ್ರಿಯಿಸಿರುವ ರಾಜ್ಯದ ಉಪಮುಖ್ಯಮಂತ್ರಿ ಪರಮೇಶ್ವರ್​, ಉತ್ತರಪ್ರದೇಶದ ಲಖನೌದಲ್ಲಿ ಏರೋ ಇಂಡಿಯಾ ಆಯೋಜನೆ ಮಾಡಲು ಉದ್ದೇಶಿಸಿರುವುದರ ಹಿಂದೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಲಾಬಿಯಿದೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸಚಿವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಮನವೊಲಿಸಲು ಪ್ರಯತ್ನಿಸಿದರೂ ಕೇಂದ್ರ ಸರ್ಕಾರ ಏರೋ ಇಂಡಿಯಾ ವಾಯುಪ್ರದರ್ಶನವನ್ನು ಲಖನೌಗೆ ವರ್ಗಾಯಿಸಲು ತೀರ್ಮಾನಿಸಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಕೂಡ ಏರ್​ ಶೋಗೆ ಬೇಕಾದ ಎಲ್ಲ ಸೌಲಭ್ಯವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವಾಗ ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ಮಾಡಬೇಕು. ಆದರೆ, ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಬಳಿ ಮನವಿ ಮಾಡಿಕೊಂಡರೂ ಸರ್ಕಾರ ಏರ್​ ಶೋ ಸ್ಥಳವನ್ನು ಬದಲಾಯಿಸಿದೆ ಎಂದು ರಾಜ್ಯ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಉತ್ತಮ ಕೆಲಸಗಳನ್ನು ಮುಂದುವರಿಸಿ!:

ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ ಟ್ವೀಟ್​ ಮಾಡಿದ್ದು, ಕರ್ನಾಟಕದಿಂದ ಸಂಸದೆಯಾಗಿ ಆಯ್ಕೆಯಾಗಿರುವ ನೀವು ನಮ್ಮ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೀರಿ. ಇದೀಗ ಏರ್​ ಶೋವನ್ನು ಬೆಂಗಳೂರಿನಿಂದ ಲಖನೌಗೆ ಶಿಫ್ಟ್​ ಮಾಡಿದ್ದೀರಿ. ಈ ರೀತಿಯ ಉತ್ತಮ ಕೆಲಸಗಳನ್ನು ಮುಂದುವರಿಸಿ ನಿರ್ಮಲಾ ಸೀತಾರಾಮನ್​ ಅವರೇ ಎಂದು ವ್ಯಂಗ್ಯವಾಡಿದ್ದಾರೆ.ಕೇಂದ್ರ ಸಚಿವರು ಸ್ಪಷ್ಟೀಕರಣ ನೀಡಲಿ:

ಈ ಬಗ್ಗೆ ಟ್ವೀಟ್​ ಮಾಡಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​, ಬೆಂಗಳೂರಿನಿಂದ ಲಖನೌಗೆ ಏರೋ ಇಂಡಿಯಾ ನಡೆಯುವ ಸ್ಥಳ ಬದಲಾವಣೆಯಾಗಿರುವುದು ದುರಾದೃಷ್ಟಕರ ಸಂಗತಿ. ಎನ್​ಡಿಎ ಸರ್ಕಾರದ ಅಡಿಯಲ್ಲಿ ನಾವು ಪ್ರಮುಖ ರಕ್ಷಣಾ ಯೋಜನೆಗಳನ್ನು ಮತ್ತು ಪ್ರಮುಖ ಕಾರ್ಯಕ್ರಮಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್​ ಅವರು ಸ್ಪಷ್ಟೀಕರಣ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ರಾಜೀವ್​ ಚಂದ್ರಶೇಖರ್​, ಬೇರೆ ರಾಜ್ಯಗಳಿಗೂ ಏರ್​ ಶೋ ಮಾಡಲು ಅವಕಾಶ ನೀಡಬೇಕು. ಇದರ ಬದಲಾಗಿ ಕೇಂದ್ರ ಸರ್ಕಾರ ಬೇರೆ ಯಾವುದಾದರೂ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲು ಅವಕಾಶ ನೀಡಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ. ಕಾಂಗ್ರೆಸ್​ ಸುಮ್ಮನೆ ಈ ವಿಷಯವನ್ನು ದೊಡ್ಡದಾಗಿ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾ?:

ಪ್ರಸ್ತುತ ಈ ವರ್ಷ ಅಕ್ಟೋಬರ್-ನವೆಂಬರ್​ ತಿಂಗಳಲ್ಲಿ ಲಖನೌದ ಬಕ್ಷಿ ಕಾ ತಾಲಾಬ್​ ಏರ್​ ಸ್ಟೇಷನ್​ನಲ್ಲಿ ಏರ್​ ಶೋ ಮಾಡಲು ಉದ್ದೇಶಿಸಲಾಗಿದೆ. ಸಾಮಾನ್ಯವಾಗಿ ಏರ್​ ಶೋದಲ್ಲಿ ಭಾಗವಹಿಸುವ ವೈಮಾನಿಕ ಕಂಪನಿಗಳು ಒಂದು ವರ್ಷದ ಮೊದಲೇ ತಯಾರಿ ಮಾಡಿಕೊಂಡಿರುತ್ತವೆ. ಆದರೀಗ ಇದ್ದಕ್ಕಿದ್ದಂತೆ ಸ್ಥಳ ಬದಲಾವಣೆ ಮಾಡಿರುವುದರಿಂದ ಕಂಪನಿಗಳು ಕೂಡ ಗೊಂದಲಕ್ಕೀಡಾಗಿವೆ. ಬದಲಾದ ಸ್ಥಳದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ವಿದೇಶಿ ವೈಮಾನಿಕ ಸಂಸ್ಥೆಗಳು ಸಿದ್ಧತೆ ನಡೆಸಿಕೊಳ್ಳುವುದು ಸಾಧ್ಯವೇ? ಇದೇ ಮೊದಲ ಬಾರಿಗೆ ಲಖನೌದಲ್ಲಿ ಜಾಗತಿಕ ಮಟ್ಟದ ಏರ್​ ಶೋ ನಡೆಯುತ್ತಿರುವುದರಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವೇ ಎಂಬ ಅನುಮಾನಗಳು ಮೂಡುತ್ತಿವೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...