ಇಸ್ಕಾನ್​ನಲ್ಲಿ ದೀಪೋತ್ಸವದ ಸಂಭ್ರಮ; ಜ್ಯೋತಿ ಬೆಳಗಿಸುವ ಮೂಲಕ ದಾಮೋದರನ ಸ್ಮರಣೆ

ಇಸ್ಕಾನ್ ಬೆಂಗಳೂರು ದೇವಸ್ಥಾನದಲ್ಲಿ ಪ್ರತಿ ಸಂಜೆ 8ರ ಹೊತ್ತಿಗೆ ಇಡೀ ಮಂದಿರವು ದೀಪಗಳಿಂದ ಕಂಗೊಳಿಸುತ್ತಿರುತ್ತದೆ.

ದೀಪೋತ್ಸವ ಸಂಭ್ರಮ

ದೀಪೋತ್ಸವ ಸಂಭ್ರಮ

  • Share this:
ಬೆಂಗಳೂರು (ನ.13):  ದೀಪಾವಳಿಯ ಜೊತೆ ಶುರುವಾಗುವ ಕಾರ್ತಿಕ ಮಾಸದಲ್ಲಿ ದೀಪೋತ್ಸವದ ಸಂಭ್ರಮ.  ಕಾರ್ತಿಕ ಮಾಸದ ಉದ್ದಕ್ಕೂ ಪ್ರತಿ ದಿನ ದೀಪ ಬೆಳಗುವ ಪದ್ಧತಿ ಅನೇಕ ಕಡೆ ಇದೆ. ಇದೇ ಸಂದರ್ಭದಲ್ಲಿ ಅಯೋಧ್ಯೆ ಸೇರಿದಂತೆ ಹಲವೆಡೆ ದೀಪೋತ್ಸವ, ತೆಪ್ಪೋತ್ಸವಗಳೂ ಆಚರಿಸಲಾಗುತ್ತದೆ. ಇದೇ ಸಮಯದಲ್ಲಿ ನಗರದ  ಹರೇ ಕೃಷ್ಣ ಬೆಟ್ಟದ ಮೇಲಿರುವ ಇಸ್ಕಾನ್ ದೇವಾಲಯದಲ್ಲಿ ಕೂಡ ವಿಜೃಂಭಣೆಯಿಂದ ದೀಪೋತ್ಸವ ಆಚರಿಸಲಾಗುತ್ತದೆ. ಕೃಷ್ಣನ ಲೀಲಾವಳಿಗಳನ್ನು ಸ್ಮರಿಸುವ ಮೂಲಕ ದೀಪಗಳನ್ನು ಬೆಳಗಾಲಾಗುತ್ತದೆ. ತಿಂಗಳಿಡಿ ನಡೆಯುವ ಈ ದೀಪೋತ್ಸವವನ್ನು ನೋಡುವುದೇ ಒಂದು ಸೊಗಸು. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪಗಳ ಉತ್ಸವವಾದ “ದೀಪೋತ್ಸವ” ವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಕೊರೋನಾ ಸೋಂಕಿನ ಹಿನ್ನಲೆ , ಭಕ್ತರು, ಹಾಗೂ ಸಾರ್ವಜನಿಕರ ಸುರಕ್ಷತೆ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳಿಂದ ಸಂಭ್ರಮದಿಂದ ಈ ದೀಪೋತ್ಸವ ಆಚರಿಸಲಾಗುತ್ತಿದೆ.ಕಾರ್ತಿಕ ಮಾಸದಲ್ಲಿ ಶ್ರೀಕೃಷ್ಣನ ದಾಮೋದರ ಲೀಲೆಯನ್ನು ಸ್ಮರಿಸಲೆಂದೇ ಈ ಉತ್ಸವದ ಆಚರಣೆ. ಸಂಸ್ಕೃತದಲ್ಲಿ `ದಾಮ’ ಎಂದರೆ ಹಗ್ಗ ಮತ್ತು `ಉದರ’ ಎಂದರೆ ಹೊಟ್ಟೆ. ಬೆಣ್ಣೆ ಕಳ್ಳ ತುಂಟ ಬಾಲಕೃಷ್ಣನನ್ನು ಹಗ್ಗದಿಂದ ತಾಯಿ ಯಶೋದೆ ಕಟ್ಟಿಹಾಕಿದ ಕಾರಣ, ಶ್ರೀಕೃಷ್ಣನಿಗೆ ದಾಮೋದರ ಎಂಬ ಇನ್ನೊಂದು ನಾಮ.

ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಪ್ಪದ ದೀಪವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ವ್ರತವನ್ನು ಪಾಲಿಸುವವರಿಗೆ ನೂರಾರು ಜನ್ಮಗಳಲ್ಲಿ ಮಾಡಿದ ಪಾಪವೆಲ್ಲ ಕಳೆದು, ಸುಖ ಸಮೃದ್ಧಿಗಳು ದೊರಕುವವು ಎಂದು ಹೇಳಲಾಗಿದೆ.  ಇಸ್ಕಾನ್ ಬೆಂಗಳೂರು ದೇವಸ್ಥಾನದಲ್ಲಿ ಪ್ರತಿ ಸಂಜೆ 8ರ ಹೊತ್ತಿಗೆ ಇಡೀ ಮಂದಿರವು ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಶ್ರೀಕೃಷ್ಣನನ್ನು ಕೊಂಡಾಡುವ ದಾಮೋದರ ಅಷ್ಟಕವನ್ನು ಭಕ್ತರು ಹಾಡುತ್ತಿದ್ದಂತೆಯೇ ದೇವರಿಗೆ ವಿಶೇಷ ಆರತಿಯನ್ನು ಅರ್ಚಕರು ಅರ್ಪಿಸುವರು. ಅನಂತರ ನೆರೆದ ಭಕ್ತರೆಲ್ಲರೂ ಒಬ್ಬೊಬ್ಬರಾಗಿ, ಸಾಲಾಗಿ ಬಂದು ತುಪ್ಪದ ದೀಪವನ್ನು ದೇವರಿಗೆ ಅರ್ಪಿಸುವರು. ಅನಂತರ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು.

ಇದನ್ನು ಓದಿ: ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ ಇಲ್ಲಿದೆ ಅದ್ಭುತ ಫೋಟೋಗಳು

ಈ ಮಾಸದಲ್ಲಿ ಹಲವರು ದಾಮೋದರ ವ್ರತವನ್ನು ಆಚರಿಸು ಸಂಪ್ರದಾಯವಿದೆ. ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವ ಮೂಲಕ ಭಗವಾನ್​ ಕೃಷ್ಣನನ್ನು ಪೂಜಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಜಗೋದ್ಧೋದರಕನಿಗೆ ದೀಪ ಹಚ್ಚುವುದರಿಂದ ಸಮೃದ್ಧಿ, ಸೌಂದರ್ಯ, ಸಂಪತ್ತು ಸಿಗುತ್ತದೆ . ಅಷ್ಟೇ ಅಲ್ಲದೇ, ದೀಪ ಬೆಳಗುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.

ತಿಂಗಳಿಡಿ ಪ್ರತಿದಿನ ಸಾವಿರಾರು ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ದೀಪದ ಬೆಳಕು ಭಕ್ತಿಯ ಮನೋಭಾವವನ್ನು ಹೆಚ್ಚಿಸುತ್ತದೆ. ಬೆಟ್ಟದ ಮೇಲೆ ದೀಪಗಳಿಂದ ಕಂಗೊಳಿಸುವ ಈ ದೇವಾಲಯ ಎಲ್ಲರನ್ನು ಸೆಳೆಯುತ್ತದೆ.
Published by:Seema R
First published: